Memory Prosthesis: ಮೆದುಳು ಹಾನಿಗೊಳಗಾದವರಿಗೆ ದಾರಿದೀಪವಾಗಲಿದೆ ಈ ಸ್ಮರಣ ಶಸ್ತ್ರಚಿಕಿತ್ಸೆ

ಸ್ಮರಣ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅದರಲ್ಲೂ ವಿಶೇಷವಾಗಿ ಅತಿ ಕಳಪೆ ಮಟ್ಟದ ಸ್ಮರಣಶಕ್ತಿ ಹೊಂದಿರುವ ಜನರಿಗೆ ಮೆಮೊರಿ ಪ್ರಾಸ್ಥೆಸಿಸ್ ಅತಿ ಉಪಯುಕ್ತವಾಗಿದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.  ಈ ನಿಟ್ಟಿನಲ್ಲಿ ಮುಂದೆ ಅಭಿವೃದ್ಧಿಪಡಿಸಬಹುದಾದ ಇನ್ನೂ ಸುಧಾರಿತ ಅಂಶಗಳು ಮೆದುಳು ಹಾನಿಯಿಂದ ಬಳಲುವವರು ಹಾಗೂ ಅಲ್ಝೈಮರ್ ಕಾಯಿಲೆಯಿಂದ ಪೀಡಿತರಾದವರಿಗೆ ಅತಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದೂ ಸಹ ಸಂಶೋಧಕರು ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೆಮೊರಿ ಪ್ರಾಸ್ಥೆಸಿಸ್ (Memory Prosthesis) ಎಂಬುದು ಮೆದುಳಿನೊಂದಿಗೆ ನಡೆಸಲಾಗುವ ಒಂದು ಶಸ್ತ್ರ ಚಿಕಿತ್ಸಾ (Surgery) ವಿಧಾನವಾಗಿದೆ. ಇದರಲ್ಲಿ ಎಲೆಕ್ಟ್ರೋಡ್ ಒಂದನ್ನು ಮೆದುಳಿನಾಳದಲ್ಲಿ ಹೊಕ್ಕಿಸಲಾಗುತ್ತದೆ. ಇದೀಗ ಈ ವಿಧಾನವು ಸ್ಮರಣ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅದರಲ್ಲೂ ವಿಶೇಷವಾಗಿ ಅತಿ ಕಳಪೆ ಮಟ್ಟದ ಸ್ಮರಣಶಕ್ತಿ (memory) ಹೊಂದಿರುವ ಜನರಿಗೆ ಅತಿ ಉಪಯುಕ್ತವಾಗಿದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.  ಈ ನಿಟ್ಟಿನಲ್ಲಿ ಮುಂದೆ ಅಭಿವೃದ್ಧಿಪಡಿಸಬಹುದಾದ ಇನ್ನೂ ಸುಧಾರಿತ ಅಂಶಗಳು ಮೆದುಳು ಹಾನಿಯಿಂದ ಬಳಲುವವರು ಹಾಗೂ ಅಲ್ಝೈಮರ್ (Alzheimer) ಕಾಯಿಲೆಯಿಂದ (disease) ಪೀಡಿತರಾದವರಿಗೆ ಅತಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದೂ ಸಹ ಸಂಶೋಧಕರು ತಿಳಿಸಿದ್ದಾರೆ.

ಸದ್ಯ ಈ ಸಂಶೋಧನೆಯಲ್ಲಿ ತೊಡಗದಿರುವ ಆದರೂ ಈ ಬಗ್ಗೆ ಧನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಯುಕೆಯ ಬರ್ಮಿಂಘ್ಯಾಮ್ ವಿವಿಯ ನರವಿಜ್ಞಾನಿಯಾದ ಕಿಮ್ ಶಪಿರೊ ಹೇಳುತ್ತಾರೆ, "ಇದು ನಾವು ಭವಿಷ್ಯದಲ್ಲಿ ಸ್ಮರಣಶಕ್ತಿಯನ್ನು ಮತ್ತೆ ಪುನರ್ಸ್ಥಾಪಿಸುವುದು ಹೇಗೆಂಬುದರ ಅಣುಕು ಪ್ರದರ್ಶನವಾಗಿದೆ" ಎಂದು.

ನಮ್ಮ ಮೆದುಳಿನಲ್ಲಿ ಸಮುದ್ರಕುದುರೆಯಂತೆ ಆಕಾರ ಹೊಂದಿರುವ ಪ್ರದೇಶವೊಂದಿದ್ದು ಅದನ್ನು ಹಿಪ್ಪೋಕ್ಯಾಂಪಸ್ ಎಂದು ಕರೆಯಲಾಗುತ್ತದೆ. ಸದ್ಯ ಈ ವಿಧಾನವು ಆ ಪ್ರದೇಶದಲ್ಲಿ ನಡೆಯುವ ಗತಿವಿಧಿಗಳನ್ನು ಅನುಕರಿಸುವ ಮೂಲಕ ಕೆಲಸ ಮಾಡುತ್ತದೆ. ನಮ್ಮ ಮೆದುಳಿನ ರಚನೆ ಹೇಗಿದೆ ಎಂದರೆ ಕೇವಲ ಅಲ್ಪಾವಧಿಯ ಸ್ಮರಣೆಗಳನ್ನು ಮಾತ್ರ ಹಿಡಿದಿಟ್ಟುಕೊಳ್ಳುವುದಲ್ಲದೆ ಅವು ದೀರ್ಘಕಾಲದವರೆಗೂ ಸ್ಮರಣೆ ಇರುವಂತೆ ಬೇರೆ ಪ್ರದೇಶಗಳಿಗೂ ವರ್ಗಾಯಿಸಲು ಅನುಕೂಲಕರವಾಗಿದೆ.

ಇದನ್ನೂ ಓದಿ: Piles Remedy: ಪೈಲ್ಸ್​ ಸಮಸ್ಯೆಯಿಂದ ಹೈರಾಣಾಗಿದ್ರೆ ಚಿಂತೆ ಬಿಡಿ, ನಾವ್ ಹೇಳೋ ಈ ಮದ್ದು ಟ್ರೈ ಮಾಡಿ

ಅನುಕರಿಸುವಂತಹ ಸ್ಮರಣೆ
ದಕ್ಷಿಣ ಕ್ಯಾಲಿಫೋರ್ನಿಯಾದ ಥೊಯೋಡೋರ್ ಬರ್ಗರ್ ಮತು ಡಾಂಗ್ ಸಾಂಗ್ ಹಾಗೂ ಅವರ ಸಹವರ್ತಿಗಳು ಕಳೆದ ಹತ್ತು ವರ್ಷಗಳಿಂದ ಅನುಕರಿಸುವ ಸ್ಮರಣೆಯ ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರು ಮೂಲತಃ ಮೆದುಳಿನಲ್ಲಿ ಸ್ಮರಣೆಯಾಗಿ ಉಳಿದುಕೊಳ್ಳುವಂತಹ ಅಂಶಗಳು ರೂಪಿಸುವ ಕೋಡ್ ಸಂಕೇತಗಳನ್ನು ಮೆದುಳಿನ ಎಲೆಕ್ಟ್ರೋಡ್ ಗಳನ್ನು ಬಳಸಿ ಅನುಕರಿಸುವುದು ಹಾಗೂ ಅದನ್ನು ಪ್ರಯೋಗಾತ್ಮಕವಾಗಿ ಅನುಷ್ಠಾನಗೊಳಿಸಿ ಆ ಬಗ್ಗೆ ಫಲಿತಾಂಶಗಳನ್ನು ವಿಶ್ಲೇಷಿಸುವುದರ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅವರ ತಂಡವು ಈಗಾಗಲೇ ಕೆಲವು ಪ್ರಾಣಿಗಳ ಮೇಲೆ ಈ ರೀತಿಯ ಪರೀಕ್ಷೆಗಳನ್ನು ಮಾಡಿರುವುದಲ್ಲದೆ ಕೆಲವು ಸ್ವಯಂ ಇಚ್ಛೆಯಿಂದ ಈ ಪರೀಕ್ಷೆಯಲ್ಲಿ ಭಾಗವಹಿಸಿದ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿರುವ ಜನರ ಮೇಲೆಯೂ ಈ ಪರೀಕ್ಷೆಗಳನ್ನು ನಡೆಸಿದ್ದಾರೆ, ಏಕೆಂದರೆ ಈ ಜನರಲ್ಲಿ ಮುಂಚಿತವಾಗಿಯೇ ಎಲೆಕ್ಟ್ರೋಡ್ ಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಇದರಿಂದ ಸಂಶೋಧಕರಿಗೆ ಅಧ್ಯಯನ ಮಾಡಲು ಹೆಚ್ಚಿನ ನೆರವು ಸಿಕ್ಕಂತಾಗುತ್ತದೆ.

24 ಜನರ ಮೇಲೆ ನಡೆಯಿತು ಈ ಅಧ್ಯಯನ 
ಇದು ಎಷ್ಟು ನಿಖರವಾಗಿ ಕೆಲಸ ಮಾಡಬಹುದೆಂದು ಪತ್ತೆ ಹಚ್ಚಲು ಉತ್ತರ ಕರೋಲಿನಾದ ವೇಕ್ ಫಾರೆಸ್ಟ್ ವೈದ್ಯಕೀಯ ವಿವಿಯ ರಾಬ್ ಹ್ಯಾಂಪ್ಸನ್ ಅವರು ಈಗಾಗಲೇ ಮೂರ್ಛೆ ರೋಗದಿಂದ ಬಳಲುತ್ತಿದ್ದು ಮೆದುಳಿನಲ್ಲಿ ಎಲೆಕ್ಟ್ರೋಡ್ ಗಳನ್ನು ಹೊಂದಿದ್ದ 24 ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಕೆಲವರು ಮೆದುಳು ಹಾನಿಯಿಂದಲೂ ಬಳಲುತ್ತಿದ್ದರು.

ಈ ಪರೀಕ್ಷೆಯಲ್ಲಿ ಮೊದಲ ಆವೃತ್ತಿಯನ್ನು ಮೆಮೊರಿ ಡಿಕೋಡಿಂಗ್ ಮಾಡೆಲ್ ಎಂದು ಕರೆಯಲಾಗಿದ್ದು ಅದು ಪರೀಕ್ಷೆಗೊಳಗಾದವರು ತಮ್ಮ ಮೆದುಳಿನಲ್ಲಿ ನಮೂದಿಸಿಕೊಳ್ಳುವ ಮೊದಲ ಸ್ಮರಣೆಗಳಿಗನುಸಾರವಾದ ಗತಿವಿಧಿಗಳನ್ನು ಅನುಕರಿಸುತ್ತದೆ ಅಥವಾ ಮಿಮಿಕ್ ಮಾಡುತ್ತದೆ. ಈ ಮಾಡೆಲ್ ಪ್ರತಿ ಗತಿವಿಧಿಗಳ ಸರಾಸರಿ ವಿನ್ಯಾಸವನ್ನು ತೆಗೆದುಕೊಂಡು ಅದನ್ನು ಎಲೆಕ್ಟ್ರಿಕಲ್ ಪ್ರಚೋದಿಸುವಿಕೆಯ ಮೂಲಕ ಹೊರಚೆಲ್ಲುತ್ತದೆ.

ಇದನ್ನೂ ಓದಿ:  Cancer: ಯುವಜನರಲ್ಲಿಯೇ ಹೆಚ್ಚುತ್ತಿದ್ಯಂತೆ ಮಹಾಮಾರಿ ಕ್ಯಾನ್ಸರ್‌! ಹಾಗಿದ್ರೆ ಇದಕ್ಕೆ ಕಾರಣವೇನು?

ಇನ್ನು, ಇದರಲ್ಲಿ ಎರಡನೇ ಆವೃತ್ತಿಯನ್ನು ಮಲ್ಟಿ ಇನ್ಪುಟ್ ಮಲ್ಟಿ ಔಟ್ಪುಟ್ ಎಂದು ಕರೆಯಲಾಗಿದೆ. ಇದು ಹಿಪ್ಪೋಕ್ಯಾಂಪಸ್ ಭಾಗವು ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಅತಿ ಹತ್ತಿರದಿಂದ ಅನುಕರಿಸುತ್ತದೆ. ಆರೋಗ್ಯಕರ ಹಿಪ್ಪೋಕ್ಯಾಂಪಸ್ ಪ್ರದೇಶವಿದ್ದಾಗ ಸ್ಮರಣೆಗಳು ಮೆದುಳಿನ ಇತರೆ ಪ್ರದೇಶಗಳಿಗೆ ಹೋಗುವ ಮುಂಚೆ ಒಂದು ಪದರದಿಂದ ಇನ್ನೊಂದು ಪದರಕ್ಕೆ ಸುಲಲಿತವಾಗಿ ಹರಿಯುತ್ತವೆ.

ವಿಶಿಷ್ಟ ಅಥವಾ ಅನನ್ಯ ಮೆದುಳುಗಳು
ಈ ಬಗ್ಗೆ ಇನ್ನಷ್ಟು ಸ್ಪಷ್ಟವಾಗಿ ತಿಳಿಯಲು ಹ್ಯಾಂಪ್ಸನ್ ಹಾಗೂ ಅವರ ತಂಡದವರು ಇದರಲ್ಲಿ ಭಾಗವಹಿಸಿದ್ದ ಸ್ವಯಂಸೇವಕರಿಗೆ ಸ್ಮರಣೆ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಪರದೆಯ ಮೇಲೆ ಒಂದು ಚಿತ್ರವನ್ನು ತೋರಿಸಲಾಯಿತು. ಕೆಲ ಸಮಯದ ನಂತರ ಅವರಿಗೆ ಇತರೆ ವಿಭಾಗಗಳೋಂದಿಗೆ ಮತ್ತದೇ ಚಿತ್ರವನ್ನು ತೋರಿಸಲಾಯಿತು. ಈಗ ಅವರು ತಮಗೆ ಈ ಮೊದಲು ತೋರಿಸಿದ್ದ ಚಿತ್ರ ಯಾವುದೆಂದು ಕಂಡುಹಿಡಿಯಬೇಕಿತ್ತು.

ಪ್ರತಿಯೊಬ್ಬರು 100-150 ಪರೀಕ್ಷೆಗಳನ್ನು 15-90 ನಿಮಿಷಗಳ ಅಂತರದಲ್ಲಿ ಪೂರ್ಣಗೊಳಿಸಿದರು. ಪ್ರತಿ ಹಂತದಲ್ಲಿ ಅವರಿಗೆ ತಮಗೆ ಪರಿಚಯವಿರಬಹುದಾದ ಚಿತ್ರ ಯಾವುದೆಂದು ಗುರುತಿಸಲು ಹೇಳಲಾಗಿತ್ತು ಹಾಗೂ ಇದು ದೀರ್ಘಾವಧಿಯ ಸ್ಮರಣಶಕ್ತಿಗೆ ಸಂಬಂಧಿಸಿದಂತೆ ವಿನ್ಯಾಸಗೊಳಿಸಲಾದ ಪರೀಕ್ಷೆಯಾಗಿತ್ತು.

ಈ ಬಗ್ಗೆ ನಡೆಯುತ್ತಿದೆ ಇನ್ನಷ್ಟು ಸಂಶೋಧನೆಗಳು
ಪ್ರತಿಯೊಬ್ಬ ಸ್ವಯಂ ಸೇವಕರು ಎರಡು ಪರೀಕ್ಷೆಗಳನ್ನು ಎದುರಿಸಿದರು ಹಾಗೂ ಪ್ರತಿಯೊಬ್ಬರ ಹಿಪ್ಪೋಕ್ಯಾಂಪಸ್ ನಲ್ಲಿ ನಮೂದಾದ ದಾಖಲೆಗಳು ಅನನ್ಯವಾಗಿದ್ದವು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಹ್ಯಾಂಪ್ಸನ್ ಅವರು. ಒಟ್ಟಿನಲ್ಲಿ ಈ ತಂಡಕ್ಕೆ ಗೊತ್ತಾದ ವಿಷಯವೆಂದರೆ ಮೆಮೊರಿ ಪ್ರಾಸ್ಥೆಸಿಸ್ ಸ್ಮರಣೆಯನ್ನು ಸುಧಾರಿಸುತ್ತದೆ ಎಂಬಂಶ. ಹ್ಯಾಂಪ್ಸನ್ ಅವರ ಪ್ರಕಾರ, ಈ ಸುಧಾರಣೆ ಏನಿಲ್ಲವೆಂದರೂ 11% ರಿಂದ 54%ರವರೆಗೂ ವೃದ್ಧಿಯಾಗಿರುವುದು ಆಶಾದಾಯಕ ಸಂಗತಿಯಾಗಿದೆ.

ಈ ನಿಟ್ಟಿನಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ಹಾಗೂ ಸಂಭಾವ್ಯ ಅಡ್ಡಪರಿಣಾಮಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ಪರಿಶೀಲನೆ ಹಾಗೂ ಇದರ ಪರಿಣಾಮಕಾರಿ ಬಳಕೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದ್ದು ಮುಂದೊಂದು ದಿನ ಇದರಿಂದ ಖಂಡಿತವಾಗಿಯೂ ನೆರವು ಸಿಗಬಹುದೆಂಬ ಆಶಾಭಾವನೆ ಸಂಶೋಧಕರ ತಂಡದ್ದಾಗಿದೆ.

ಇದನ್ನೂ ಓದಿ:  Digestion Problem: ದೇಹದಲ್ಲಿ ಚಯಾಪಚಯ ಕ್ರಿಯೆ ಏರುಪೇರಾದರೆ ಯಾವ ಸಮಸ್ಯೆಗಳು ಕಾಡುತ್ತವೆ?

ಒಟ್ಟಿನಲ್ಲಿ, ಈ ಅಧ್ಯಯನದಿಂದ ಮೆದುಳು ಹಾನಿಗೊಳಗಾದವರು ಅಥವಾ ಸಮಸ್ಯೆಗಳನ್ನೆದುರಿಸುತ್ತಿರುವವರಿಗೆ ಭವಿಷ್ಯದಲ್ಲಿ ಅತಿ ಹೆಚ್ಚು ಉಪಯುಕ್ತವಾಗುವಂತಹ ಚಿಕಿತ್ಸಾ ವಿಧಾನಗಳು ದೊರೆಯಬಹುದೆಂಬ ಭರವಸೆ ವ್ಯಕ್ತವಾಗಿದೆ.
Published by:Ashwini Prabhu
First published: