Terrace Gardening: ತಾರಸಿ ಮೇಲೆ ಥರಾವರಿ ತರಕಾರಿ-ಹಣ್ಣು ಬೆಳೆಯೋಕೆ ಸರಳ ಐಡಿಯಾಗಳು ಇಲ್ಲಿವೆ ನೋಡಿ

Terrace Gardening: ದೈಹಿಕ ಆರೋಗ್ಯದ ಜೊತೆಗೆ ತೋಟಗಾರಿಕೆಯಿಂದ ಮಾನಸಿಕ ಹಾಗೂ ಭಾವನಾತ್ಮಕ ಪ್ರಯೋಜನವನ್ನು ನಾನು ಪಡೆದುಕೊಂಡಿದ್ದೇನೆ ಎಂಬುದಾಗಿ ಮಾಧವಿಯವರು ತಿಳಿಸುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
2020 ಹಾಗೂ 2021 ಎಲ್ಲರ ಜೀವನದಲ್ಲಿ ಸಂಕಷ್ಟಗಳನ್ನು (Dire straits) ತಂದೊಡ್ಡಿದ ಸಮಯ ಎಂದೇ ಪ್ರತೀತವಾಗಿದೆ. ಕೋವಿಡ್ ಎಂಬ ಸಾಂಕ್ರಾಮಿಕದಿಂದ (Epidemic) ಹೆಚ್ಚಿನವರು ಪಡಬಾರದ ಯಾತನೆ, ಬವಣೆಗಳನ್ನು ಅನುಭವಿಸಬೇಕಾಯಿತು. ನಂಬಿಕೊಂಡಿದ್ದ ಉದ್ಯೋಗ, ಕೂಡಿಟ್ಟಿದ್ದ ಹಣ ನಷ್ಟವಾಗಿ ಮುಂದೇನು ಎಂಬ ಕರಾಳತೆಯನ್ನೇ ಬಿಚ್ಚಿಟ್ಟಿತ್ತು. ಜೀವನದ ಸವಾಲುಗಳನ್ನು (Challenges ) ಎದುರಿಸಲಾಗುವುದಿಲ್ಲವೆಂದು ಹೆದರಿ ಅದೆಷ್ಟೋ ಜನರು ಮರಣದ (Door of death)ಬಾಗಿಲು ತಟ್ಟಿದರು. ಒಟ್ಟಾರೆ ಈ ಸಮಯ ಪ್ರತಿಯೊಬ್ಬರಿಗೂ ಜೀವನ ಪಾಠವನ್ನು ( Lesson)ಕಲಿಸಿಕೊಟ್ಟಿದೆ.

ಇಂತಹ ಸಂದರ್ಭದಲ್ಲಿ ಅದೆಷ್ಟೋ ಜನರು ಸ್ವ ಉದ್ಯೋಗ ಹುಡುಕಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡರು. ಆರೋಗ್ಯದ ಕಡೆಗೆ ಜನರು ಹೆಚ್ಚು ಹೆಚ್ಚು ಗಮನ ಹರಿಸಿದಂತೆ ಕೆಲವೊಂದಷ್ಟು ಜನ ಕೃಷಿಯತ್ತ ವಾಲಿದರು. ಅದರಲ್ಲೂ ಹೆಣ್ಣು ಮಕ್ಕಳು ಟೆರೇಸ್ ಗಾರ್ಡನ್‌ನತ್ತ ಒಲವು ತೋರಿದರು ಹಾಗೂ ಮಲ್ಲಿಗೆ ಕೃಷಿ, ತರಕಾರಿ, ಹಣ್ಣು ಹಂಪಲು ಹೀಗೆ ಬೇರೆ ಬೇರೆ ಕೃಷಿಯತ್ತ ಮನಸ್ಸು ಮಾಡಿ ದುಡಿಯುವ ಮಾರ್ಗ ಕಂಡುಕೊಂಡಿದ್ದಾರೆ.

ಟೆರೇಸ್ ಗಾರ್ಡನಿಂಗ್‌ಗೆ ಉತ್ತಮ ಮಾರ್ಗದರ್ಶನ:
ಟೆರೇಸ್ ಗಾರ್ಡನಿಂಗ್ ಮಾಡುವ ಸಮಯದಲ್ಲಿ ಕೆಲವೊಂದು ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಬೇರೆ ಬೇರೆ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ತರಕಾರಿ, ಹಣ್ಣು ಹಂಪಲು ಹಾಗೂ ಹೂವುಗಳ ಕೃಷಿ ಮಾಡಬೇಕಾಗುತ್ತದೆ. ಆಂಧ್ರ ಪ್ರದೇಶದಲ್ಲಿರುವ ಹೆಚ್ಚಿನ ಗಾರ್ಡನಿಂಗ್ ಪ್ರತಿಭೆಗಳಿಗೆ ಉತ್ತಮ ಮಾರ್ಗದರ್ಶಿಯಾಗಿ ಸಹಾಯ ಮಾಡುವವರು ಮಾಧವಿ ಗುಟ್ಟಿಕೊಂಡ. ಇವರು ಗಿಡಗಳ ಆರೈಕೆಯಲ್ಲಿ ತಾಯಿ ಎಂದೇ ಹೆಸರುವಾಸಿಯಾಗಿದ್ದಾರೆ. ಗಿಡಗಳನ್ನು ಸ್ವಂತ ಮಕ್ಕಳಂತೆ ಪೋಷಿಸುತ್ತಾರೆ ಹಾಗೂ ಆರೈಕೆ ಮಾಡುತ್ತಾರೆ.

ಇದನ್ನೂ ಓದಿ: Bangalore: ಟೆರೇಸ್‌ ಮೇಲೆ 1,700 ಮರಗಳನ್ನು ಬೆಳೆಸಿದ ಬೆಂಗಳೂರಿನ ಟೆಕ್ಕಿ!; ಬೇಸಿಗೆಯಲ್ಲೂ ಈ ಮನೆ ಕೂಲ್ ಕೂಲ್

ಸಾವಯವ ಕೃಷಿಯತ್ತ ಒಲವು:
ದಶಕದ ಹಿಂದೆ ಮಾಧವಿಯವರು ತಮ್ಮ ಟೆರೇಸ್‌ನಲ್ಲಿ ಹೂವಿನ ಜೀಜಗಳನ್ನು ಬಿತ್ತಿ ಗಾರ್ಡನಿಂಗ್‌ನತ್ತ ಒಲವು ತೋರಿದರು. ಇದೀಗ 1,800 ಚದರ ಅಡಿ ವಿಸ್ತೀರ್ಣದ ಉದ್ಯಾನವನ್ನು ಇನ್ನಷ್ಟು ವಿಸ್ತರಿಸಿಕೊಂಡು ಪೋಷಿಸುತ್ತಿರುವ ಮಾಧವಿಯವರು ಸಾವಯವ ಉತ್ಪನ್ನಗಳ ಪೋಷಣೆ ಹಾಗೂ 2021ರ ಟೆರೇಸ್ ಗಾರ್ಡನಿಂಗ್ ವಿಭಾಗದಲ್ಲಿ ರೈತ ನೇಸ್ತಮ್ ಪ್ರಶಸ್ತಿ ಗೆದ್ದಿದ್ದಾರೆ. ಇವರ ಸಾಧನೆ ಸುಲಭದ್ದಾಗಿರಲಿಲ್ಲ. ಗಾರ್ಡನಿಂಗ್ ಕುರಿತು ತರಬೇತಿ ಸಲಹೆಗಳನ್ನು ನೀಡುವ ಮಾಧವಿಯರು ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ವಿಶೇಷ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಇವರು ನೀಡಿದ ಮಾರ್ಗದರ್ಶನದಲ್ಲಿ ಅದೆಷ್ಟೋ ಮಂದಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ತೋಟಗಾರಿಕೆಯಲ್ಲಿ ಶಾಂತಿ ಕಂಡುಕೊಂಡ ಮಾಧವಿ:
ವಿಶಾಖಪಟ್ಟಣದ 43ರ ಹರೆಯದ ಮಾಧವಿ ಗುಟ್ಟಿಕೊಂಡ ಸುದ್ದಿಮಾಧ್ಯಮದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತೋಟಗಾರಿಕೆಯಲ್ಲಿ ಶಾಂತಿ ಹಾಗೂ ಸಮಾಧಾನ ಕಂಡುಕೊಂಡಿರುವ ಮಾಧವಿಯವರು, ಮೊದಲಿಗೆ ಗುಲಾಬಿ, ದಾಸವಾಳ, ಸುಗಂಧ ಭರಿತ ಹೂವುಗಳು, ಋತುಮಾನದ ಕೆಲವೊಂದು ಹಣ್ಣುಗಳನ್ನು ಬೆಳೆಯುವ ಮೂಲಕ ತೋಟಗಾರಿಕೆಗೆ ಚಾಲನೆ ನೀಡಿದರು. ಆದರೆ ತಮ್ಮ ಮನೆಯ ಟೆರೇಸ್‌ನಲ್ಲಿ ಇವರು ತೋಟಗಾರಿಕೆ ಆರಂಭಿಸಿದಾಗ ಸಂಪೂರ್ಣ ಸಾವಯವ ತೋಟಗಾರಿಕೆಗೆ ಮಾಧವಿಯರು ಬದಲಾಯಿಸಿಕೊಂಡರು ಹಾಗೂ ತರಕಾರಿ ಕೃಷಿ ಆರಂಭಿಸಿದರು.

ಟೆರೇಸ್‌ನಿಂದ ದೊರೆಯುತ್ತದೆ ಸ್ವಾದಿಷ್ಟ ತರಕಾರಿ:
ತಮ್ಮ ಟೆರೇಸ್ ಕೃಷಿಯಿಂದ ದೊರೆತಿರುವ ತರಕಾರಿಗಳು ಎಷ್ಟು ಸ್ವಾದಿಷ್ಟವಾಗಿದೆ ಎಂದರೆ ನಾನು ಇದುವರೆಗೆ ಇಂತಹ ತರಕಾರಿಗಳನ್ನು ತಿಂದಿಲ್ಲ ಎಂಬುದು ಮಾಧವಿಯವರ ಅಭಿಪ್ರಾಯವಾಗಿದೆ. ಟೊಮ್ಯಾಟೋ, ಮೂಲಂಗಿ, ಬದನೆ, ಕ್ಯಾರೆಟ್, ಸಿಹಿ ಗೆಣಸು, ವಿವಿಧ ಬಗೆಯ ಬೀನ್ಸ್, ಎಲೆಕೋಸು, ಹೂಕೋಸು, ಲೆಟ್ಯೂಸ್, ಎಲ್ಲಾ ಬಗೆಯ ಸೋರೆಕಾಯಿ, ಔಷಧೀಯ ಸಸ್ಯಗಳನ್ನು ಮಾಧವಿ ಬೆಳೆಯುತ್ತಾರೆ. ಇದಲ್ಲದೆ ಅಣಬೆ, ಅರಶಿನ ಸಸ್ಯಗಳು, ಪೇರಳೆ, ಡ್ರ್ಯಾಗನ್ ಹಣ್ಣು, ಪಪ್ಪಾಯಿ, ಮಲ್ಬೆರಿ, ಚೆರಿ, ಸಿಹಿ ಲಿಂಬೆ, ಲಿಂಬೆ, ಬಾಳೆಹಣ್ಣು, ಕಬ್ಬು ಇತ್ಯಾದಿಗಳನ್ನು ತಮ್ಮ ಟೆರೇಸ್‌ನಲ್ಲಿ ಬೆಳೆಯುತ್ತಾರೆ.

ಮಾನಸಿಕ ಹಾಗೂ ಭಾವನಾತ್ಮಕ ಪ್ರಯೋಜನ:
ಕಾಲೋಚಿತವಾಗಿ ಹಾಗೂ ವಿಲಕ್ಷಣ ಪ್ರಭೇದಗಳ ಕುರಿತು ಪ್ರಯೋಗಗಳನ್ನು ನಡೆಸುವ ಮಾಧವಿಯವರು ತಮ್ಮೆಲ್ಲಾ ಪ್ರಯತ್ನಗಳಲ್ಲಿ ಸೋತರೂ ಸಾಧಿಸುವುದನ್ನು ಮರೆಯಲಿಲ್ಲ ಎಂದು ತಿಳಿಸುತ್ತಾರೆ. ದೈಹಿಕ ಆರೋಗ್ಯದ ಜೊತೆಗೆ ತೋಟಗಾರಿಕೆಯಿಂದ ಮಾನಸಿಕ ಹಾಗೂ ಭಾವನಾತ್ಮಕ ಪ್ರಯೋಜನವನ್ನು ನಾನು ಪಡೆದುಕೊಂಡಿದ್ದೇನೆ ಎಂಬುದಾಗಿ ಮಾಧವಿಯರು ತಿಳಿಸುತ್ತಾರೆ. ಇಂದ್ರಿಯಗಳನ್ನು ಶಮನಗೊಳಿಸಲು ಹಾಗೂ ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರಲು ತೋಟಗಾರಿಕೆಯು ಸಹಾಯ ಮಾಡುತ್ತದೆ ಎಂಬುದು ಮಾಧವಿಯವರ ಅಭಿಪ್ರಾಯವಾಗಿದೆ.

ತೋಟಗಾರಿಕೆಯಿಂದ ಕುಟುಂಬದ ಆಹಾರ ಪೂರೈಕೆ:
ಅವರ ತೋಟದಿಂದ ಬರುವ ಇಳುವರಿಯು ವರ್ಷವಿಡೀ ಕುಟುಂಬದ ಆಹಾರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳುವ ಮಾಧವಿ, ಸಾಂಕ್ರಾಮಿಕದ ಸಮಯದಲ್ಲಾಗಿರಬಹುದು ಅದೇ ರೀತಿ ವಿಪರೀತ ಬೆಲೆಯ ಸಮಯದಲ್ಲಿ ಕೂಡ ನಮ್ಮ ಕುಟುಂಬಕ್ಕೆ ಕೊಯ್ಲು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಯೂಟ್ಯೂಬ್ ಚಾನಲ್ ಆರಂಭ:
ಮಕ್ಕಳು ನೀಡಿದ ಸಲಹೆ ಅನುಸರಿಸಿ, 2018ರಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿದ ಮಾಧವಿ, 4,83,000 ಚಂದಾದಾರರನ್ನು ಹೊಂದಿದ್ದಾರೆ. ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ 45,000 ಫಾಲೋವರ್ಸ್ ಹಾಗೂ ಫೇಸ್‌ಬುಕ್‌ನಲ್ಲಿ 2,18,000 ಫಾಲೋವರ್ಸ್‌ಗಳನ್ನು ಇವರು ಗಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Home Garden: ಕನಸಿನ ಮನೆಯಲ್ಲಿ ಹ್ಯಾಂಗಿಂಗ್ ಗಿಡ ಬೆಳೆಸಲು ಈ ಟ್ರಿಕ್ಸ್ ಫಾಲೋ ಮಾಡಿ

ಗಾರ್ಡನಿಂಗ್ ಕುರಿತಾದ ಯಾವುದೇ ಸಂದೇಹಗಳನ್ನು ನಿವಾರಿಸುವ ಮಾಧವಿ, ಕಾಮೆಂಟ್ ವಿಭಾಗದಲ್ಲಿ ಬರುವ ಪ್ರತಿಯೊಂದು ಕಾಮೆಂಟ್‌ಗೂ ಉತ್ತರ ನೀಡುತ್ತಾರೆ ಹಾಗೂ ಸಂದೇಹಗಳನ್ನು ನಿವಾರಿಸುತ್ತಾರೆ. ಸಮರ್ಥನೀಯ ಜೀವನಶೈಲಿಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಪ್ರತೀ ವಾರ ಇವರು ವೈವಿಧ್ಯಮಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಮಾಧವಿ, ರೈತು ನೇಸ್ತಮ್ ಪ್ರಶಸ್ತಿಗೆ ಭಾಜನರಾದ ನಂತರ ಕಷ್ಟಗಳ ನಡುವೆಯೂ ಇನ್ನಷ್ಟು ಸಾಧನೆ ಮಾಡಲು ನನಗೆ ಪ್ರೇರಣೆ ನೀಡಿತು ಎಂಬುದಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಹಾನ್ ಸಾಧನೆ ಮಾಡಿದ ರೈತರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಪೂರ್ಣ ಸಮಯ ರೈತಳಾಗಬೇಕೆಂಬ ನನ್ನ ಆಸೆಯ ಗುರಿಯನ್ನು ಪೂರ್ಣವಾಗಿಸಿದ ಕ್ಷಣ ಎಂದು ತಿಳಿಸಿದ್ದಾರೆ.
Published by:vanithasanjevani vanithasanjevani
First published: