ಭಯೋತ್ಪಾದನಾ ಕೇಂದ್ರದಿಂದ ಕೋಕ್​ ಸ್ಟುಡಿಯೋ ತನಕ : ಕಾಶ್ಮೀರಿ ಗಾಯಕನ ಅಸಲಿ ಕಹಾನಿ

news18
Updated:July 15, 2018, 6:41 PM IST
ಭಯೋತ್ಪಾದನಾ ಕೇಂದ್ರದಿಂದ ಕೋಕ್​ ಸ್ಟುಡಿಯೋ ತನಕ : ಕಾಶ್ಮೀರಿ ಗಾಯಕನ ಅಸಲಿ ಕಹಾನಿ
news18
Updated: July 15, 2018, 6:41 PM IST
-ನ್ಯೂಸ್ 18 ಕನ್ನಡ

ಸಂಗೀತಕ್ಕೆ ಮನ ಪರಿವರ್ತಿಸುವ ಶಕ್ತಿಯಿದೆ ಎನ್ನಲಾಗುತ್ತದೆ. ಕಾಶ್ಮೀರದ ಅಲ್ತಾಫ್ ಮಿರ್​ ಅವರ ಕಥೆಯನ್ನು ಕೇಳಿದರೆ ಈ ಮಾತು ಅಕ್ಷರಶಃ ನಿಜ ಎಂದು ಅನಿಸಿಬಿಡುತ್ತದೆ. ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರ ಸದಾ ಸುದ್ದಿಯಾಗುವುದು ಆಘಾತಕಾರಿ ವಿಷಯಗಳಿಂದಲೇ. ಹಾಗೆಯೇ 90ರ ದಶಕದಲ್ಲಿ ದಕ್ಷಿಣ ಕಾಶ್ಮೀರದ ಅಲ್ತಾಫ್ ಮಿರ್ ಕೂಡ ಕೆಲ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಭಯೋತ್ಪಾದನೆಯ ದಾರಿ ಹಿಡಿದಿದ್ದರು.

ಅಲ್ತಾಫ್​ ಮಿರ್ ಭಾರತದ ಗಡಿದಾಟಿ ಪಾಕಿಸ್ತಾನಕ್ಕೆ ಭಯೋತ್ಪಾದನಾ ತರಬೇತಿಗೆ ತೆರಳಿದ್ದರು. ಆದರೆ ಅದೇಕೊ ಅವರಿಗೆ ದ್ವೇಷದ ಮಾರ್ಗ ಸರಿ ಅನಿಸಿರಲಿಲ್ಲ. ಒಂದೇ ವರ್ಷದಲ್ಲಿ ಭಾರತಕ್ಕೆ ಮರಳಿದ್ದ ಅಲ್ತಾಫ್ ಇಂದು ಶಾಂತಿ, ಪ್ರೀತಿ ಮತ್ತು ದೇಶಭಕ್ತಿಯ ಗೀತೆಗಳಿಂದ ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಅವರು ಹಾಡಿರುವ ಹಾಡುಗಳು ಇಂದು YouTubeನಲ್ಲಿ ಟ್ರೆಂಡಿಂಗ್​ನಲ್ಲಿ ಕಾಣಿಸುತ್ತಿದೆ. ಮನಸ್ಸನ್ನು ಮುದಗೊಳಿಸುವ ಅವರ ವಿಶೇಷ ಧ್ವನಿಯನ್ನು ಲಕ್ಷಾಂತರ ಮಂದಿ ಆಲಿಸುತ್ತಿದ್ದಾರೆ. ಅಲ್ತಾಫ್ ಅವರ ಜಾನಪದ ಗೀತೆಗಳಿಗೆ ಪ್ರಸಿದ್ದ ಸಂಗೀತ ಕಾರ್ಯಕ್ರಮ ಕೋಕ್ ಸ್ಟುಡಿಯೋ ವೇದಿಕೆ ಒದಗಿಸಿದೆ.ಭಯೋತ್ಪಾದನಾ ಕೇಂದ್ರದಿಂದ ಕೋಕ್​ ಸ್ಟುಡಿಯೋ ತನಕ

ನಾನು ಮೊದಲು ಕರಕುಶಲ ಕಾರ್ಮಿಕನಾಗಿದ್ದೆ. ದಿನ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ನಾನು, ಸಂಜೆ ಬಳಿಕ ಹೊಲಿಗೆ ಹಾಕುವ ಕೆಲಸದಲ್ಲಿ ನಿರತನಾಗಿರುತ್ತಿದ್ದೆ. ಆದರೆ ಅದೊಂದು ದಿನ ಸ್ನೇಹಿತರೊಂದಿಗೆ ಭಾರತದ ಗಡಿಯನ್ನು ದಾಟಿದ್ದೆವು. ಅವರೊಂದಿಗೆ ನಾನು ಏನು ಮಾಡಲು ಹೋಗುತ್ತಿದ್ದೇನೆ ಎಂಬ ಅರಿವು ಕೂಡ ನನಗಿರಲಿಲ್ಲ. ಆದರೆ ಕೆಲ ದಿನಗಳ ಬಳಿಕ ದೇಶ ವಿರೋಧಿ ತರಬೇತಿ ಕೇಂದ್ರದಿಂದ ಹಿಂತಿರುಗಿದೆ. ಏಕೆಂದರೆ ಯಾರನ್ನೂ ದ್ವೇಷಿಸುವ ಸ್ವಭಾವ ನನ್ನಲ್ಲಿರಲಿಲ್ಲ. ಸಂಗೀತವು ಎಲ್ಲರನ್ನೂ ಪ್ರೀತಿಸುವಂತೆ ಮಾಡಿತ್ತು.
Loading...

ಭಾರತಕ್ಕೆ ಹಿಂತಿರುಗುವಾಗಲು ಅಲ್ತಾಫ್ ಅವರನ್ನು ನೋಡಿ ಯಾವ ಸೇನಾಧಿಕಾರಿಗಳಿಗೂ ಉಗ್ರಗಾಮಿ ಎಂದೆನಿಸಿರಲಿಲ್ಲ. ತಮ್ಮ ಹಾಡಿನ ಮೂಲಕ ಮೋಡಿ ಮಾಡುತ್ತಿದ್ದ ಅಲ್ತಾಫ್​ ಅವರನ್ನು ಆ ಸಮಯದಲ್ಲೂ ಸಂಗೀತವೇ ಕೈ ಹಿಡಿಯಿತು. ಕಾಶ್ಮೀರಕ್ಕೆ ಹಿಂತಿರುಗಿದ ಬಳಿಕ ಸಣ್ಣಪುಟ್ಟ ಕೆಲಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತನ್ನೊಂದಿಗೆ ಗಡಿದಾಟಿ ಹೋಗಿದ್ದ ಗೆಳೆಯನೊಬ್ಬ ಮದುವೆಯಾಗಲು ತೀರ್ಮಾನಿಸಿದ್ದನು. ಈ ಮದುವೆಗೆ ಹೋಗಿದ್ದ ನಾನು ಹಾಡೊಂದನ್ನು ಹಾಡಲು ನಿರ್ಧರಿಸಿದೆ. ಸಾವಿರಾರು ಜನರು ಸೇರಿದ್ದ ಸಮಾರಂಭದಲ್ಲಿ ನನ್ನ ಧ್ವನಿಯು ಎಲ್ಲರನ್ನೂ ಆಕರ್ಷಿಸಿತು ಎಂದು ಅಲ್ತಾಫ್ ಮಿರ್​ ನೆನಪಿಸಿಕೊಳ್ಳುತ್ತಾರೆ.

ಅಲ್ಲಿಂದ ಭರಪೂರ ಪ್ರಶಂಸೆಗಳಿಸಿದ್ದ ಅಲ್ತಾಫ್ ಸುಫಿಯಾನ ಮಹಫಿಲೋ ಕಾರ್ಯಕ್ರಮ ನೀಡಲು ಪ್ರಾರಂಭಿಸಿದ್ದರು. ಡೋಲುಗಳನ್ನು ಬಡಿಯುತ್ತಾ ಹಾಡೆಳುತ್ತಿದ್ದ ಅಲ್ತಾಫ್ ಅವರ ಗೀತೆಗಳು ಜನರನ್ನು ಮೋಡಿ ಮಾಡಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ರಾಶಿಮ್ ಸಾಹೇಬ್ ಎಂಬವರಿಂದ ಸಂಗೀತ ಕಲಿತ ಇವರು ಮುಂದೆ ಗಾಯನವನ್ನೇ ಉಸಿರಾಗಿಸಿಕೊಂಡರು.

ಲಾಲಿಹಾಡು

ಭಯೋತ್ಪಾದನೆಯ ಹಾದಿ ಹಿಡಿದು ಊರು ಬಿಟ್ಟಿದ್ದ ಅಲ್ತಾಫ್ ಮಿರ್​ ಬದುಕಿಲ್ಲ ಎಂದೇ ಕುಟುಂಬದವರು ನಂಬಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಎಲ್ಲವನ್ನು ತೊರೆದು ಮಗ ಹಿಂತಿರುಗಿದ್ದಾನೆ. ದೇಶದ್ರೋಹಿ ಚಟುವಟಿಕೆಗಳಿಂದ ದೂರ ಉಳಿದು ದೇಶ ಪ್ರೇಮದ ಗೀತೆ ಹಾಡಲು ಪ್ರಾರಂಭಿಸಿದ್ದಾನೆ. ರೆಡಿಯೋದಲ್ಲಿ  ಮಗನ ಗೀತೆಯನ್ನು ಕೇಳಿದ ಅಮ್ಮ ಅಲ್ತಾಫ್ ಮಿರ್​ ಅವರನ್ನು ಗುರುತು ಹಿಡಿದಿದ್ದಾರೆ. 28 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ಅಲ್ತಾಫ್ ಇಂದು ದೇಶಭಕ್ತಿ ಗೀತೆಗಳಿಂದ ಅಮ್ಮನ ಮಡಿಲು ಸೇರುವಂತಾಗಿದೆ.

ಭಯೋತ್ಪಾದಕ ಎಂಬ ಪಟ್ಟದಿಂದ ದೇಶಭಕ್ತಿ ಗಾಯಕ ಎಂದು ಜನರು ಅಲ್ತಾಫ್ ಅವರನ್ನು ಗುರುತಿಸುತ್ತಿದ್ದಾರೆ. ಇದೆಲ್ಲವೂ ಹೇಗೆ ಆಯಿತು ಎಂಬುದು ನನಗೆ ತಿಳಿದಿಲ್ಲ. ಎಲ್ಲವೂ ಅಲ್ಲಾಹನ ಇಚ್ಛೆ ಎಂದು ದೇವರಿಗೆ ಧನ್ಯವಾದ ತಿಳಿಸುತ್ತಾ ಭಾವುಕರಾಗುತ್ತಾರೆ ಅಲ್ತಾಫ್ ತಾಯಿ ಜನಾ ಬೇಗಮ್.

ಕಾಶ್ಮೀರ ಕಣಿವೆಯಲ್ಲಿ ಅಲ್ತಾಫ್ ಹಾಡು

ಅಂದು ಗೆಳೆಯನ ಮದುವೆಯಲ್ಲಿ ಮುಜಫರಾಬಾದ್​​ ರೇಡಿಯೋ ಸಿಬ್ಬಂದಿ ಕೂಡ ಭಾಗವಹಿಸಿದ್ದರು. ಅಲ್ತಾಫ್ ಅವರ ಹಾಡಿಗೆ ತಲೆದೂಗಿದ ಅವರು ರೇಡಿಯೋ ಸ್ಟೇಶನ್​ಗೆ ಬರುವಂತೆ ಸೂಚಿಸಿದ್ದರು. ರೇಡಿಯೋ ಸ್ಟೇಶನ್​ ನಿರ್ದೇಶಕರನ್ನು ಭೇಟಿಯಾದ ಮಿರ್​ ಅವರ ಧ್ವನಿಯನ್ನು ಪರೀಕ್ಷಿಸಲಾಯಿತು. ಕೆಲ ನಿಮಿಷಗಳಲ್ಲೇ ಐದು ಹಾಡುಗಳನ್ನು ಹಾಡುವಂತೆ ಸೂಚಿಸಿದ್ದರು. ಅಂದಿನಿಂದ ನನ್ನ ಹಾಡು ಕಾಶ್ಮೀರ ಕಣಿವೆಗಳಲ್ಲಿ ಪ್ರತಿಧ್ವನಿಸಲು ಪ್ರಾರಂಭಿಸಿತು ಎಂದು ನೆನಪಿಸಿಕೊಳ್ಳುತ್ತಾರೆ ಅಲ್ತಾಫ್ ಮಿರ್.

ಇದಾದ ಬಳಿಕ ಪ್ರತಿವಾರ ರೇಡಿಯೊದಲ್ಲಿ ಐದು ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದೆ. ಇದರಲ್ಲಿ ಕಾಶ್ಮೀರಿ ಹಾಡುಗಳನ್ನೆ ಹೆಚ್ಚಾಗಿ ಹಾಡುತ್ತಿದ್ದೆ. ಇದೀಗ ಸಂಗೀತ ಕಛೇರಿಗಳಲ್ಲಿ ಹಾಡಲು ಅವಕಾಶ ಸಿಗುತ್ತಿದೆ. 2004ರಲ್ಲಿ ಮುಜಫರಾಬಾದ್​​ನಲ್ಲಿ ಮೊದಲ ಟಿವಿ ಚಾನೆಲ್​ ಪ್ರಾರಂಭವಾದಾಗ ಅಲ್ಲಿ ಕೂಡ ನಾನು ಕಾರ್ಯಕ್ರಮ ನೀಡಿದ್ದೆ ಎಂದು ಅಲ್ತಾಫ್ ಮಿರ್ ಸಂತೋಷ ವ್ಯಕ್ತಪಡಿಸುತ್ತಾರೆ.

ಮಿರ್ ಸಾಬ್ ಮತ್ತು ಕೋಕ್ ಸ್ಟುಡಿಯೋ

ಕೋಕ್ ಸ್ಟುಡಿಯೋ ಕಾರ್ಯಕ್ರಮದ ಆಯೋಜಕರು ಹೊಸ ಪ್ರತಿಭೆಗಳ ಹುಡುಕಾಟದಲ್ಲಿತ್ತು. ಈ ವೇಳೆ ಕಾಶ್ಮೀರದ ಅಲ್ತಾಫ್ ಮಿರ್ ಹೆಸರನ್ನು ಮಹಿಳೆಯೊಬ್ಬರು ಸೂಚಿಸಿದ್ದರು. ಏಪ್ರಿಲ್​ನಲ್ಲಿ ಕೋಕ್ ಸ್ಟುಡಿಯೋ ನಿರ್ಮಾಪಕರು ಮಿರ್ ಸಾಬ್​ರನ್ನು ಭೇಟಿಯಾದರು. ಅಲ್ಲದೆ ಅವರ ಹಾಡಿನ ಶೈಲಿ ಮತ್ತು ಪ್ರತಿಭೆಗೆ ಪ್ರಭಾವಿತರಾದರು. ಕೋಕ್​ ಸ್ಟುಡಿಯೋಸ್ ಜೊತೆ ಮಿರ್ ಅವರು ಒಪ್ಪಂದ ಕುದುರಿಸಿದ್ದಾರೆ. ಆ ಮೂಲಕ ಅವರು ಹಾಡಿರುವ ಹಾಡುಗಳು ಇಂದು ಯೂಟ್ಯೂಬ್​ನಲ್ಲಿ ಲಕ್ಷಗಟ್ಟಲೇ ಜನರು ವೀಕ್ಷಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಯಾವುದೋ ಉಗ್ರಗಾಮಿಗಳ ಕ್ಯಾಂಪ್​ನಲ್ಲಿ ಕಳೆಯಬೇಕಿದ್ದ ಅಲ್ತಾಫ್ ಅವರನ್ನು ತಾವು ನಂಬಿರುವ ಸಂಗೀತವೇ ಇಂದು ಕೈ ಹಿಡಿದಿದೆ. ದ್ವೇಷದ ಹೊರತಾಗಿ ಸಂಗೀತದಿಂದ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 6ನೇ ತರಗತಿವರೆಗೆ ಓದಿರುವ ಅಲ್ತಾಫ್ ಮಿರ್ ಅವರ ಹಾಡನ್ನು ಇಂದು ದೇಶ ವಿದೇಶದಲ್ಲಿ ಆಲಿಸುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಕವಿತೆ ಮತ್ತು ಘಜಲ್​ಗಳನ್ನು ಕಂಠಪಾಠ ಮಾಡಿಕೊಂಡಿರುವ ಅಲ್ತಾಫ್ ಮಿರ್ ಇಂದು ದಾರಿ ತಪ್ಪುತ್ತಿರುವ ಕಾಶ್ಮೀರಿ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...