ಭಯೋತ್ಪಾದನಾ ಕೇಂದ್ರದಿಂದ ಪ್ರಸಿದ್ಧ ಸಂಗೀತ ವೇದಿಕೆ ತನಕ : ಇದು ಕಾಶ್ಮೀರಿ ಗಾಯಕನ ಅಸಲಿ ಕಹಾನಿ

ಡೋಲುಗಳನ್ನು ಬಡಿಯುತ್ತಾ ಹಾಡೆಳುತ್ತಿದ್ದ ಅಲ್ತಾಫ್ ಅವರ ಗೀತೆಗಳು ಜನರನ್ನು ಮೋಡಿ ಮಾಡಿತು.  ದೇಶ ವಿದೇಶಗಳ ಜನರು ಅವರ ವಿಶೇಷ ಧ್ವನಿಗೆ ತಲೆದೂಗಿದರು. ಒಂದೇ ರಾತ್ರಿಯಲ್ಲಿ ಅಲ್ತಾಫ್ ಮಿರ್ ಎಂಬ ಕಣಿವೆ ರಾಜ್ಯದ ಸಂಗೀತಗಾರ ವಿಶ್ವ ಪ್ರಸಿದ್ಧಿ ಪಡೆದರು.

zahir | news18
Updated:June 1, 2019, 5:45 PM IST
ಭಯೋತ್ಪಾದನಾ ಕೇಂದ್ರದಿಂದ ಪ್ರಸಿದ್ಧ ಸಂಗೀತ ವೇದಿಕೆ ತನಕ : ಇದು ಕಾಶ್ಮೀರಿ ಗಾಯಕನ ಅಸಲಿ ಕಹಾನಿ
ಮಿರ್ ಸಾಬ್ ಮತ್ತು ತಂಡ
  • News18
  • Last Updated: June 1, 2019, 5:45 PM IST
  • Share this:
ಸಂಗೀತಕ್ಕೆ ಮನ ಪರಿವರ್ತಿಸುವ ಶಕ್ತಿಯಿದೆ ಎನ್ನಲಾಗುತ್ತದೆ. ಕಾಶ್ಮೀರದ ಅಲ್ತಾಫ್ ಮಿರ್​ ಅವರ ಕಥೆಯನ್ನು ಕೇಳಿದರೆ ಈ ಮಾತು ಅಕ್ಷರಶಃ ನಿಜ ಎಂದನಿಸಿಬಿಡಬಹುದು. ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರ ಸದಾ ಸುದ್ದಿಯಾಗುವುದು ಆಘಾತಕಾರಿ ವಿಷಯಗಳಿಂದಲೇ. ಹಾಗೆಯೇ 90ರ ದಶಕದಲ್ಲಿ ದಕ್ಷಿಣ ಕಾಶ್ಮೀರದ ಅಲ್ತಾಫ್ ಮಿರ್ ಕೂಡ ಕೆಲ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಭಯೋತ್ಪಾದನೆಯ ದಾರಿ ಹಿಡಿದಿದ್ದರು.

ಅಲ್ತಾಫ್​ ಮಿರ್ ಭಾರತದ ಗಡಿದಾಟಿ ಪಾಕಿಸ್ತಾನಕ್ಕೆ ಭಯೋತ್ಪಾದನಾ ತರಬೇತಿಗೆ ತೆರಳಿದ್ದರು. ಆದರೆ ಅದೇಕೊ ಅವರಿಗೆ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಸರಿ ಅನಿಸಿರಲಿಲ್ಲ. ಹೀಗಾಗಿಯೇ ಉಗ್ರಗಾಮಿಗಳ ಕೂಪದಿಂದ ಅಲ್ತಾಫ್ ಹೊರ ಬಂದಿದ್ದರು. ಯಾರನ್ನೂ ದ್ವೇಷಿಸದೇ ಏನಾದರೊಂದು ಕೆಲಸ ಮಾಡಿ ಬದುಕಬೇಕೆಂಬ ತೀರ್ಮಾನ ಮಾಡಿದ್ದರು.

ಭಯೋತ್ಪಾನಾ ಕೇಂದ್ರದಿಂದ  ಮರಳಿದ ಅಲ್ತಾಫ್ ಇಂದು ಶಾಂತಿ, ಪ್ರೀತಿ ಮತ್ತು ದೇಶಭಕ್ತಿಯ ಗೀತೆಗಳಿಂದ ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಹಾಡಿರುವ ಹಾಡುಗಳು ಇಂದು ಯೂಟ್ಯೂಬ್​​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮನಸ್ಸನ್ನು ಮುದಗೊಳಿಸುವ ಅವರ ವಿಶೇಷ ಧ್ವನಿಯು ಲಕ್ಷಾಂತರ ಮಂದಿಯನ್ನು ಸಂಗೀತ ಲೋಕದಲ್ಲಿ ತೇಲಿಸುತ್ತಿದೆ. ದಿನ ಕಳೆದಂತೆ ಜನಪ್ರಿಯತೆ ಪಡೆಯುತ್ತಿದ್ದ ಅಲ್ತಾಫ್ ಅವರ ಜಾನಪದ ಗೀತೆಗಳಿಗೆ ಪ್ರಸಿದ್ದ ಸಂಗೀತ ಕಾರ್ಯಕ್ರಮ ಕೋಕ್ ಸ್ಟುಡಿಯೋ ಸಹ ವೇದಿಕೆ ಒದಗಿಸಿದೆ.

ಭಯೋತ್ಪಾದನಾ ಕೇಂದ್ರದಿಂದ ಕೋಕ್​ ಸ್ಟುಡಿಯೋ ತನಕ:
ನಾನು ಮೊದಲು ಕರಕುಶಲ ಕಾರ್ಮಿಕನಾಗಿದ್ದೆ. ಆ ಬಳಿಕ ಬೆಳಿಗ್ಗೆ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸಕ್ಕೆ ಸೇರಿದೆ. ಆದರೆ ಜೀವನ ನಡೆಸಲು ಈ ಸಂಬಳ ಸಾಕಾಗುತ್ತಿರಲಿಲ್ಲ. ಹಾಗಾಗಿ ಸಂಜೆಯ ನಂತರ ಹೊಲಿಗೆ ಹಾಕುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆದರೆ ಅದೊಂದು ದಿನ ಸ್ನೇಹಿತರೊಂದಿಗೆ ಭಾರತದ ಗಡಿಯನ್ನು ದಾಟಿದ್ದೆವು. ಅವರೊಂದಿಗೆ ನಾನು ಏನು ಮಾಡಲು ಹೋಗುತ್ತಿದ್ದೇನೆ ಎಂಬುದರ ಅರಿವು ಕೂಡ ನನಗಿರಲಿಲ್ಲ. ಆ ಬಳಿಕವಷ್ಟೇ ನನಗೆ ತಿಳಿದಿದ್ದು, ನಾನು ದೇಶದ್ರೋಹಿ ಕೆಲಸಕ್ಕೆ ಮುಂದಾಗಿದ್ದೀನಿ ಎಂದು. ಒಂದಷ್ಟು ದಿನ ನಾನು ಭಯೋತ್ಪಾದಕರ ಜೊತೆಗಿದ್ದೆ. ಆದರೆ ಅಲ್ಲಿರಲು ನನ್ನ ಮನಸ್ಸು ಮಾತ್ರ ಒಪ್ಪುತ್ತಿರಲಿಲ್ಲ. ದೇಶ ದ್ರೋಹಿ ಆಗಬೇಕೆಂದು ನಾನು ಯಾವತ್ತೂ ಬಯಸಿರಲಿಲ್ಲ. ಹೀಗಾಗಿ ಹೇಗೊ ಮಾಡಿ ನಾವೊಂದಷ್ಟು ಮಂದಿ ಭಯೋತ್ಪಾದನಾ ತರಬೇತಿ ಕೇಂದ್ರದಿಂದ ಹಿಂತಿರುಗಿದೆವು.

ಯಾರನ್ನೂ ದ್ವೇಷಿಸುವ ಸ್ವಭಾವ ನನ್ನಲ್ಲಿರಲಿಲ್ಲ. ನನ್ನಲ್ಲಿನ ಸಂಗೀತವು ಎಲ್ಲರನ್ನೂ ಪ್ರೀತಿಸುವಂತೆ ಮಾಡಿತ್ತು. ನನ್ನನ್ನು ನೋಡಿದ  ಸೇನಾಧಿಕಾರಿಗಳಿಗೂ ನಾನು ಉಗ್ರಗಾಮಿ ಎಂದು ಅನಿಸಿರಲಿಲ್ಲ. ಎಲ್ಲವೂ ದೇವರ ಇಚ್ಛೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ಅಲ್ತಾಫ್ ಮಿರ್ ಸಾಬ್.

ಭಯೋತ್ಪಾದನಾ ಕೇಂದ್ರದಿಂದ ಮರಳಿದ ಬಳಿಕ ನಾನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದೆ. ಅಲ್ಲೂ ಕೂಡ  ನನ್ನ ಕೈ ಹಿಡಿದದ್ದು  ಸಂಗೀತ. ಊರಿಗೆ ಹಿಂತಿರುಗಿದ ಬಳಿಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಇದೇ ಸಮಯದಲ್ಲಿ ತನ್ನೊಂದಿಗೆ ಗಡಿದಾಟಿ ಹೋಗಿದ್ದ ಮತ್ತೊಬ್ಬ ಗೆಳೆಯನ ಮದುವೆ ನಿಶ್ಚಯಿಸಿದ್ದರು. ಈ ಮದುವೆಗೆ ಹೋಗಿದ್ದ ನಾನು ಹಾಡೊಂದನ್ನು ಹಾಡಲು ನಿರ್ಧರಿಸಿದೆ. ಸಾವಿರಾರು ಜನರು ಸೇರಿದ್ದ ಸಮಾರಂಭದಲ್ಲಿ ನನ್ನ ಧ್ವನಿಯು ಎಲ್ಲರನ್ನೂ ಆಕರ್ಷಿಸಿತು. ಅಲ್ಲಿಂದ ಭರಪೂರ ಪ್ರಶಂಸೆಗಳು ಹರಿದು ಬಂದವು.ಆ ಮದುವೆಯಲ್ಲಿ ಮುಜಫರಾಬಾದ್​​ ರೇಡಿಯೋ ಸಿಬ್ಬಂದಿ ಕೂಡ ಭಾಗವಹಿಸಿದ್ದರು. ನನ್ನ ಹಾಡಿಗೆ ತಲೆದೂಗಿದ ಅವರು ರೇಡಿಯೋ ಸ್ಟೇಶನ್​ಗೆ ಬರುವಂತೆ ಸೂಚಿಸಿದ್ದರು. ರೇಡಿಯೋ ಸ್ಟೇಶನ್​ ನಿರ್ದೇಶಕರನ್ನು ಭೇಟಿಯಾದೆ. ಮೊದಲು ಅವರು ನನ್ನ ಧ್ವನಿಯನ್ನು ಪರೀಕ್ಷಿಸಿದರು. ಕೆಲ ನಿಮಿಷಗಳಲ್ಲೇ ಐದು ಹಾಡುಗಳನ್ನು ಹಾಡುವಂತೆ ಸೂಚಿಸಿದರು. ಆ ಬಳಿಕ ರೆಡಿಯೋದಲ್ಲಿ ಅಲ್ತಾಫ್ ಸುಫಿಯಾನ ಮಹಫಿಲೋ ಕಾರ್ಯಕ್ರಮ ಆರಂಭಿಸಲಾಯಿತು. ಅಂದಿನಿಂದ ನನ್ನ ಹಾಡು ಕಾಶ್ಮೀರ ಕಣಿವೆಗಳಲ್ಲಿ ಪ್ರತಿಧ್ವನಿಸಲು ಪ್ರಾರಂಭಿಸಿತು ಎಂದು ನೆನಪಿಸಿಕೊಂಡರು ಅಲ್ತಾಫ್ ಮಿರ್.

ಲಾಲಿಹಾಡು:
ಭಯೋತ್ಪಾದನೆಯ ಹಾದಿ ಹಿಡಿದು ಊರು ಬಿಟ್ಟಿದ್ದ ಅಲ್ತಾಫ್ ಮಿರ್​ ಬದುಕಿಲ್ಲ ಎಂದೇ ಕುಟುಂಬದವರು ನಂಬಿದ್ದರು. ಆದರೆ ವರ್ಷಗಳ ಬಳಿಕ ಹಿಂತಿರುಗಿದ ಅಲ್ತಾಫ್ ತಿರುಗಿ ಮನೆಯ ಕಡೆ ಮುಖ ಮಾಡಿರಲಿಲ್ಲ. ಅದೊಂದು ದಿನ ರೆಡಿಯೋದಲ್ಲಿ ಹಾಡುವುದನ್ನು ಅಲ್ತಾಫ್ ಮಿರ್​ ಅವರ ಅಮ್ಮ ಕೇಳಿಸಿಕೊಂಡಿದ್ದಾರೆ. ಇದು ಮಗನ ವಾಯ್ಸ್ ಎಂಬುದು ಹೆತ್ತಕರುಳಿಗೆ ಬಡಿದಿದೆ. ಪ್ರತಿದಿನ ರೆಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡನ್ನು ಗುರುತಿಸಿದ ಮನೆಯವರು ಅಲ್ತಾಫ್​ರನ್ನು ಮರಳಿ ಹೆತ್ತಮ್ಮನ ಮಡಿಲಿಗೆ ಸೇರಿಸಿದರು.

ಇಂದು ನನ್ನ ಮಗನನ್ನು ಭಯೋತ್ಪಾದಕ ಎನ್ನದೇ, ದೇಶಭಕ್ತಿ ಗಾಯಕ ಎಂದು ಜನರು ಗುರುತಿಸುತ್ತಿದ್ದಾರೆ. ಇದೆಲ್ಲವೂ ಹೇಗೆ ಆಯಿತು ಎಂಬುದು ನನಗೆ ತಿಳಿದಿಲ್ಲ. ಎಲ್ಲವೂ ಅಲ್ಲಾಹನ ಇಚ್ಛೆ ಎಂದು ದೇವರಿಗೆ ಧನ್ಯವಾದ ತಿಳಿಸುತ್ತಾ ಭಾವುಕರಾದರು ಅಲ್ತಾಫ್ ತಾಯಿ ಜನಾ ಬೇಗಮ್.ಮಿರ್ ಸಾಬ್ ಮತ್ತು ಕೋಕ್ ಸ್ಟುಡಿಯೋ:
ಕೋಕ್ ಸ್ಟುಡಿಯೋ ಕಾರ್ಯಕ್ರಮದ ಆಯೋಜಕರು ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದರು. ಇದೇ ವೇಳೆ ಕಾಶ್ಮೀರದ ಅಲ್ತಾಫ್ ಮಿರ್ ಹೆಸರನ್ನು ಮಹಿಳೆಯೊಬ್ಬರು ಸೂಚಿಸಿದ್ದರು. ಕೋಕ್ ಸ್ಟುಡಿಯೋ ನಿರ್ಮಾಪಕರು ಮಿರ್ ಸಾಬ್​ರನ್ನು ಭೇಟಿಯಾಗಿ ಅವರ ಹಾಡುಗಳನ್ನು ಕೇಳಿಸಿಕೊಂಡರು. ಮಿರ್ ಸಾಬ್​ ಅವರ ಹಾಡಿನ ಶೈಲಿ ಮತ್ತು ಪ್ರತಿಭೆಗೆ ಕೋಕ್ ಸ್ಟುಡಿಯೋ ನಿರ್ಮಾಪಕರು ಪ್ರಭಾವಿತರಾದರು. ಅಷ್ಟೇ ಅಲ್ಲದೆ ಮಿರ್ ಅವರೊಂದಿಗೆ ಪಾಕ್ ಕೋಕ್​ ಸ್ಟುಡಿಯೋಸ್ ಒಪ್ಪಂದವನ್ನೂ ಕುದುರಿಸಿತು. ಅವರ ಹಾಡುಗಳನ್ನು ಚಿತ್ರೀಕರಿಸಲಾಯಿತು.

ಡೋಲುಗಳನ್ನು ಬಡಿಯುತ್ತಾ ಹಾಡೆಳುತ್ತಿದ್ದ ಅಲ್ತಾಫ್ ಅವರ ಕಾಶ್ಮೀರಿ ಗೀತೆಗಳು ಜನರನ್ನು ಮೋಡಿ ಮಾಡಿತು.  ದೇಶ ವಿದೇಶಗಳ ಜನರು ಅವರ ವಿಶೇಷ ಧ್ವನಿಗೆ ತಲೆದೂಗಿದರು. ಒಂದೇ ರಾತ್ರಿಯಲ್ಲಿ ಅಲ್ತಾಫ್ ಮಿರ್ ಎಂಬ ಕಣಿವೆ ರಾಜ್ಯದ ಸಂಗೀತಗಾರ ವಿಶ್ವ ಪ್ರಸಿದ್ಧಿ ಪಡೆದರು. ಇಂದು ಅಲ್ತಾಫ್ ಮಿರ್ ಅವರ ಹಾಡನ್ನೇ ಕೇಳುವ ಒಂದಷ್ಟು ಅಭಿಮಾನಿಗಳಿದ್ದಾರೆ. ಅವರ ಕಛೇರಿ ಕೇಳಲು ಸಮಯ ಹೊಂದಿಸುವ ಒಂದಷ್ಟು ಜನರಿದ್ದಾರೆ.

ಯಾವುದೋ ಉಗ್ರಗಾಮಿಗಳ ಕ್ಯಾಂಪ್​ನಲ್ಲಿ ಕಳೆಯಬೇಕಿದ್ದ ಅಲ್ತಾಫ್ ಅವರನ್ನು ತಾವು ನಂಬಿದ್ದ ಸಂಗೀತವೇ ಇಂದು ಕೈ ಹಿಡಿದಿದೆ ಎಂದರೆ ತಪ್ಪಾಗಲಾರದು. ದ್ವೇಷವಲ್ಲ, ಎಲ್ಲದಕ್ಕೂ ಪ್ರೀತಿಯೇ ಮದ್ದು ವಿಶ್ವದಾದ್ಯಂತ ಸಂಗೀತವನ್ನು ಪಸರಿಸುತ್ತಿದ್ದಾರೆ. ಕೇವಲ 6ನೇ ತರಗತಿವರೆಗೆ ಓದಿರುವ ಮಿರ್ ಸಾಬ್ ಅವರ ಹಾಡು ಇಂದು ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. 2 ಸಾವಿರಕ್ಕೂ ಹೆಚ್ಚು ಕವಿತೆ ಮತ್ತು ಘಜಲ್​ಗಳನ್ನು ಕಂಠಪಾಠ ಮಾಡಿಕೊಂಡಿರುವ ಅಲ್ತಾಫ್ ಮಿರ್ ಇಂದು ದಾರಿ ತಪ್ಪುತ್ತಿರುವ ಕಾಶ್ಮೀರಿ ಯುವಕರಿಗೆ ನಿಜವಾಗಲೂ ಮಾದರಿಯಾಗಿ ನಿಂತಿದ್ದಾರೆ.

  • ಜಾಹಿರ್ ಯೂಸುಫ್

First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ