ಮಳೆಗಾಲ ಆರಂಭವಾಯಿತು. ವಾತಾವರಣದಲ್ಲಿನ ಬದಲಾವಣೆಗೆ ತಕ್ಕಂತೆ , ನಮ್ಮ ಚರ್ಮ ಮತ್ತು ಕೂದಲಿನ ಆರೈಕೆಯು ಅಗತ್ಯ. ಮಳೆಗಾಲದಲ್ಲಿ ನಮ್ಮ ಚರ್ಮ ಮತ್ತು ಕೂದಲಿನ ಆರೈಕೆ ಮಾಡುವುದು ಹೇಗೆ? ಇಲ್ಲಿದೆ ಕೆಲವೊಂದು ಸಲಹೆಗಳು.
ಕೇಶ ಉತ್ಪನ್ನಗಳಿಂದ ದೂರವಿರಿ
ವಿವಿಧ ಕೇಶವಿನ್ಯಾಸಗಳನ್ನು ಮಾಡುವ ಹವ್ಯಾಸವಿದ್ದರೆ, ಅದಕ್ಕೆ ಮಳೆಗಾಲದಲ್ಲಿ ವಿಶ್ರಾಂತಿ ಕೊಡಿ. ನಿಮ್ಮ ಕೂದಲಿಗೆ ಭಾರವಾಗದಂತಹ ಹಗುರ ಸೀರಮ್ ಬಳಸಿ. ಆ್ಯಂಟಿ ಫಿಜ್ ಉತ್ಪನ್ನಗಳು ಮತ್ತು ತೇವಾಂಶ ನಿಯಂತ್ರಕ ಸ್ಪ್ರೇಗಳನ್ನು ನಿಮ್ಮದಾಗಿಸಿಕೊಳ್ಳಿ. “ ನಿಮ್ಮ ಕೂದಲಿನ ಸಹಜ ಪ್ರಕೃತಿಗೆ ಹೊಂದಿಕೊಳ್ಳುವಂತಹ ಕೇಶ ವಿನ್ಯಾಸ ಮಾಡಿಕೊಳ್ಳಿ. ಹಣೆದ ಜಡೆ, ಬನ್, ಫಿಶ್ ಟೇಲ್, ಫ್ರೆಂಚ್ ಜಡೆ ಅಥವಾ ಮೇಲೆತ್ತಿ ಹಾಕಿಕೊಳ್ಳುವ ಗಂಟು ಈ ದಿನಗಳಿಗೆ ಸೂಕ್ತ. ಯಾವುದಾದರೂ ಉತ್ಪನ್ನವನ್ನು ಬಳಸಲೇ ಬೇಕಿದ್ದರೆ, ಸೀ ಸಾಲ್ಟ್ ಟೆಕ್ಸ್ಚರ್ ಉಳ್ಳ ಸ್ಪ್ರೇ ಬಳಸಿ, ಅದು ನಿಮಗೆ ಬೀಚಿ ಲುಕ್ ಕೊಡುತ್ತದೆ” ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ಕ್ಲಿಂಟ್ ಫೆರ್ನಾಂಡೀಸ್.
ಪಾದಗಳ ಕಾಳಜಿ ವಹಿಸಿ
ನಿಮ್ಮ ಪಾದಗಳು ಗಡುಸಾಗಿದ್ದರೆ, ಕಾಫಿ, ಸಮುದ್ರದ ಉಪ್ಪು ಮತ್ತು ಜೋಳದ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿದ ಮಿಶ್ರಣದಿಂದ ಸ್ಕ್ರಬ್ ಮಾಡಿ. ಬಾದಾಮಿ ಎಣ್ಣೆಯನ್ನು ಸೇರಿಸಿದ ಸ್ಕ್ರಬ್ ಕೂಡ ಬಳಸಬಹುದು. “ ಮಳೆಗಾಲದಲ್ಲಿ ಉಗುರು ಮತ್ತು ಕಾಲ್ಬೆರಳುಗಳಲ್ಲಿ ಶಿಲೀಂಧ್ರ ಸೋಂಕು ಸಾಮಾನ್ಯ. ಅಂತಹ ಸಮಸ್ಯೆಗಳಿಂದ ದೂರವಿರಲು, ನಿಮ್ಮ ಪಾದಗಳನ್ನು ಸದಾ ಸ್ವಚ್ಛವಾಗಿಡಿ ಹಾಗೂ ತೇವವಾಗಿರದಂತೆ ನೋಡಿಕೊಳ್ಳಿ. ಪ್ರತಿ ಸಾರಿ ಹೊರಗಿನಿಂದ ಮನೆಯೊಳಗೆ ಬಂದಾಗ ಕಾಲುಗಳನ್ನು ತೊಳೆದುಕೊಳ್ಳಿ. ತುಂಬಾ ಸಮಯದವರೆಗೆ ಒದ್ದೆ ಶೂಗಳನ್ನು ಹಾಕಿಕೊಳ್ಳಬೇಡಿ” ಎಂದು ಸಲಹೆ ನೀಡುತ್ತಾರೆ ಡಾ. ಅಕ್ಷಯ ಬಾತ್ರಾ. ತಿಂಗಳಿಗೆ ಎರಡು ಬಾರಿ ಪೆಡಿಕ್ಯೂರ್ ಅಥವಾ ಮೆನಿಕ್ಯೂರ್ ಮಾಡಿಕೊಳ್ಳುವುದು ಅತ್ಯಂತ ಅಗತ್ಯ.
ಕ್ಲೆನ್ಸಿಂಗ್ ಮತ್ತು ಮಾಯಿಶ್ಚರೈಸಿಂಗ್
ತೇವಾಂಶದ ವಾತಾವರಣ ನಮ್ಮ ಚರ್ಮವನ್ನು ಒಣ ಅಥವಾ ಜಿಡ್ಡಾಗಿಸಬಹುದು. “ನಿಮ್ಮ ಚರ್ಮದಲ್ಲಿನ ಬೆವರು, ಕಲ್ಮಶ ಮತ್ತು ನಿರ್ಜೀವ ಚರ್ಮವನ್ನು ಹೋಗಲಾಡಿಸಲು ದಿನಕ್ಕೆರಡು ಬಾರಿ ಕ್ಲೆನ್ಸಿಂಗ್ ಮಾಡಿ. ನಿಮ್ಮದು ಒಣ ಚರ್ಮವಾಗಿದ್ದರೆ ಕ್ರೀಮ್ ಬೇಸ್ ಕ್ಲೆನ್ಸರನ್ನು ಬಳಸಿ. ಎಣ್ಣೆ ಚರ್ಮದವರು, ಸೋಪ್ ರಹಿತ ಜೆಲ್ ಕ್ಲೆನ್ಸರ್ ಬಳಸಬಹುದು. ಅದು ಪಿಚ್ ಬ್ಯಾಲನ್ಸನ್ನು ಸಮತೋಲನದಲ್ಲಿ ಇಟ್ಟುಕೊಂಡು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ತಾಜಾ ನೋಟದಿಂದ ಕಂಗೊಳಿಸಲು ಕ್ಲೆನ್ಸಿಂಗ್ ಮಾಡುವುದನ್ನು ಮರೆಯದಿರಿ” ಎನ್ನುತ್ತಾರೆ ಮಾರೀ ಲಾಮೊಟ್ಟೆ.
ಕಣ್ಣಿನ ಸೌಂದರ್ಯ
ಕಣ್ಣುಗಳಿಗೆ ಅತಿಯಾಗಿ ಐಶ್ಯಾಡೋ ಬಳಸಬೇಡಿ. ಐಶ್ಯಾಡೋದಿಂದ ಸ್ಮೋಕಿ ಲುಕ್ ಮಾಡಿಕೊಳ್ಳುವ ಬದಲು, ವಾಟರ್ ಪ್ರೂಫ್ ಐ ಲೈನರ್, ಕೋಲ್ ಪೆನ್ಸಿಲ್ ಅಥವಾ ಫೆಲ್ಟ್ ಪೆನ್ ಲೈನರ್‌ಗಳಿಂದ ಕಣ್ಣಿನ ಅಲಂಕಾರ ಮಾಡಿಕೊಳ್ಳಿ. ಮಳೆಗಾಲದಲ್ಲಿ ವಾಟರ್ ಪ್ರೂಫ್ ಮಸ್ಕರಾ ಇಟ್ಟುಕೊಳ್ಳುವುದನ್ನು ಮರೆಯದಿರಿ.
ಮೇಕಪ್ ಮಂತ್ರ
ಪ್ರೈಮರ್ ಬಳಸಿ, ಸ್ಮಿಯರ್ ಪ್ರೂಫ್ ಬೇಸ್ ಮಾಡಿಕೊಳ್ಳಿ. ಗಾಢ ಫೌಂಡೇಶನ್ ಬಳಸುವ ಬದಲು, ಬಿಬಿ, ಸಿಸಿ ಕ್ರೀಂ ಅಥವಾ ಎಸ್‍ಪಿಎಫ್ ಯುಕ್ತ ಟಿಂಟೆಡ್ ಮಾಯಿಶ್ಚರೈಸರ್ ಬಳಸಿ. ಕಾಂಪ್ಯಾಕ್ಟ್ ಅಥವಾ ಅರೆ ಪಾರದರ್ಶಕ ಪೌಡರ್ ಬಳಸಿ.
ಸೂರ್ಯನ ಕಿರಣಗಳಿಂದ ರಕ್ಷಣೆ
ಆಕಾಶ ಮೋಡಗಳಿಂದ ಮುಚ್ಚಿಕೊಂಡಿದ್ದರು, 80% ಸೂರ್ಯನ ಅತಿ ನೇರಳೆ ಕಿರಣಗಳು ಮೋಡಗಳ ಮೂಲಕ ಹಾದು ನಮ್ಮನ್ನು ತಲುಪುತ್ತವೆ. “ ವಾಟರ್ ರೆಸಿಸ್ಟೆಂಟ್ , ಎಸ್‍ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಆಯಿಲ್ ಫ್ರೀ ಬ್ರಾಡ್ ಸ್ಪೆಕ್ಟ್ರಮ್ ಸನ್‍ಸ್ಕ್ರೀನ್ ಬಳಸುವುದು ಉತ್ತಮ. ಮನೆಯಿಂದ ಹೊರಗೆ ಹೋಗುವ 20 ನಿಮಿಷ ಮೊದಲು ಅದನ್ನು ಹಚ್ಚಿಕೊಳ್ಳಿ” ಎಂದು ಸಲಹೆ ನೀಡುತ್ತಾರೆ ಚರ್ಮ ತಜ್ಞ ಡಾ. ಅರುಣ್ ಕತ್ಯಾಲ್.
ಉಜ್ವಲ ಬಣ್ಣಗಳನ್ನು ಬಳಸಿ
“ ಈ ಸಮಯದಲ್ಲಿ ಉಜ್ವಲ ಬಣ್ಣದ ತುಟಿ ಬಣ್ಣ ಅಥವಾ ಐ ಲೈನರ್‍ಗಳನ್ನು ಬಳಸಿ. ಪೌಡರ್ ಐ ಶ್ಯಾಡೋ ಬದಲು, ಕ್ರೀಂ ಐ ಶ್ಯಾಡೋ ಬಳಸಿ. ಆ್ಯಕ್ವಾ ಬಣ್ಣಗಳು, ಬ್ರೈಟ್ ಪಿಂಕ್ ಮತ್ತು ಹಸಿರು ಬಣ್ಣಗಳು ಉತ್ತಮ. ಗ್ಲೋಸ್ ಬಳಸಬೇಡಿ, ಅದು ಒದ್ದೆಯಾದಾಗ ಅಂಟಾಗುತ್ತದೆ ಮತ್ತು ಹರಡಿಕೊಳ್ಳುತ್ತದೆ.” ಎನ್ನುತ್ತಾರೆ ಹಿರಿಯ ಮೇಕಪ್ ಆರ್ಟಿಸ್ಟ್ ಸೋನಿಕ್ ಸರ್ವತೆ.
ಪ್ಯಾಕ್ ಹಾಕಿಕೊಳ್ಳಿ
ಅಡುಗೆ ಮನೆಯ ತಾಜಾ ಪದಾರ್ಥಗಳನ್ನು ಬಳಸಿಕೊಂಡು ಮುಖ ಮತ್ತು ಕೂದಲಿಗೆ ಮಾಸ್ಕ್/ ಪ್ಯಾಕ್ ಮಾಡಿಕೊಳ್ಳಿ. ಕಡಲೆ ಹಿಟ್ಟು, ಜೇನು ತುಪ್ಪ ಮತ್ತು ಹಾಲಿನ ಮಿಶ್ರಣದಿಂದ ಮುಖಕ್ಕೆ ಮಾಸ್ಕ್ ಮಾಡಿ, ಅವಕಾಡೋ, ಆಲಿವ್ ಎಣ್ಣೆ ಮತ್ತು ಬಾಳೆಹಣ್ಣು ಬಳಸಿ ಕೂದಲಿನ ಪ್ಯಾಕ್ ತಯಾರಿಸಿ. ನಿಮ್ಮ ಚರ್ಮದ ಗುಣಕ್ಕೆ ಅನುಗುಣವಾಗಿ, ಓಟ್‍ಮೀಲ್, ಮೊಸರು, ರೋಸ್, ನೀರು ಮತ್ತು ಕಿತ್ತಳೆ ಸಿಪ್ಪೆಯಿಂದ ಪ್ಯಾಕ್ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ