ಪ್ರತಿ ಮನೆಗಳಲ್ಲಿ ಅಡುಗೆ ಮನೆ ಸ್ನೇಹಿ ಹಾಗೂ ಮನೆಯವರ ಸ್ನೇಹಿತ ರೆಫ್ರಿಜರೇಟರ್ ಅಥವಾ ಫ್ರಿಡ್ಜ್. ಬೇಸಿಗೆ ಕಾಲದಲ್ಲಿ ಆಪ್ತ ಸ್ನೇಹಿತನಾಗಿ ಬಿಡುತ್ತದೆ. ಇದನ್ನು ತಂಗಳು ಪೆಟ್ಟಿಗೆ ಎಂದು ಜನರು ಛೇಡಿಸಲು ಹೇಳುವುದುಂಟು. ಬೇಸಿಗೆಯಲ್ಲಿ ಆಹಾರ ಪದಾರ್ಥಗಳು ಬಿಸಿಲ ಬೇಗೆಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆಹಾರದ ಸುರಕ್ಷತೆಯ ದೃಷ್ಟಿಯಿಂದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದು ಆಹಾರ ಕೆಡದಂತೆ ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
ಆದರೆ ಪ್ರತಿ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದು ಸಮಂಜಸವಲ್ಲ. ಏಕೆಂದರೆ ಆಹಾರದ ರುಚಿ ಹದಗೆಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಬ್ಯಾಕ್ಟೀರಿಯಾಗಳು ಹೊರಸೂಸಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು ಉಂಟು. ಇದಕ್ಕೆ ಹಣ್ಣುಗಳು ಮತ್ತು ತರಕಾರಿಗಳು ಹೊರತಲ್ಲ. ಹಣ್ಣುಗಳು, ತರಕಾರಿಗಳಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ ತುಂಬಾ ದಿನಗಳವರೆಗೆ ಸಂಗ್ರಹಿಸಿಡಲು ಬರುವುದಿಲ್ಲ. ಹಾಗಾಗಿ ಇದಕ್ಕೂ ಫ್ರಿಡ್ಜ್ ಬೇಕೇ ಬೇಕು.
ಮುಖ್ಯವಾಗಿ ಮಾವಿನಹಣ್ಣು, ಮಸ್ಕ್‌ಮೆಲನ್ ಹಾಗೂ ಕಲ್ಲಂಗಡಿ ಹಣ್ಣುಗಳು ಬೇಸಿಗೆಯ ಹಣ್ಣುಗಳು ಎಂದೇ ಪ್ರಸಿದ್ಧಿ ಪಡೆದಿದೆ. ಇವುಗಳನ್ನು ನೇರವಾಗಿ ಕತ್ತರಿಸದೇ ಫ್ರಿಡ್ಜ್‌ನ ಇಡುವ ರೂಢಿಯನ್ನು ಜನರು ಬೆಳೆಸಿಕೊಂಡಿರುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ಇದು ಹಣ್ಣುಗಳ ರುಚಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿವಿದೆಯಾ? ಖಂಡಿತಾ ಹೌದು ಇದು ರುಚಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‍ನಲ್ಲಿ ಕತ್ತರಿಸದೇ ಇಡಲೇಬಾರದು. ಅಕಸ್ಮಾತ್ ಕತ್ತರಿಸದೇ ಇಟ್ಟರೆ ಇದರ ಬಣ್ಣ ಮತ್ತು ರುಚಿ ಹದಗೆಡುತ್ತದೆ. ಜೊತೆಗೆ ಕತ್ತರಿಸದೇ ಇಟ್ಟಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಾಗುವ ಸಾಧ್ಯತೆಯೂ ಕೂಡ ಇರುತ್ತದೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಕತ್ತರಿಸಿ ಇಟ್ಟರೆ ಒಳ್ಳೆಯದು.
ಕತ್ತರಿಸಿದ ಹಣ್ಣುಗಳನ್ನು ತೆರೆದಿಡಬೇಡಿ
ಇನ್ನು ಹಣ್ಣುಗಳ ರಾಜ ಮಾವಿನಹಣ್ಣು ಹಾಗೂ ದೇಹವನ್ನು ಸದಾ ತಂಪಾಗಿರಿಸಲು ಸಹಾಯ ಮಾಡುವ ಮಸ್ಕ್‍ಮೆಲನ್ ಹಣ್ಣನ್ನು ಕೂಡ ಕತ್ತರಿಸದೇ ಇಡಬಾರದು. ಅಕಸ್ಮಾತ್ ನೀವು ಈ ಹಣ್ಣುಗಳನ್ನು ತಂದರೆ ಅವುಗಳನ್ನು ಮೊದಲು ಸ್ವಲ್ಪ ಸಮಯ ತಣ್ಣನೆ ನೀರಿನಲ್ಲಿ ನೆನೆಸಿಡಿ. ನಂತರ ನೀರಿನಿಂದ ತೆಗೆದು ಕೊಠಡಿಯ ಉಷ್ಣತೆಯಲ್ಲಿ ಇರಿಸಿ. ನಂತರ ಅದನ್ನು ಕತ್ತರಿಸಿ ಫ್ರಿಡ್ಜ್‍ನಲ್ಲಿ ತಂಪಾಗಲು ಬಿಡಿ. ಮುಖ್ಯವಾಗಿ ಹಣ್ಣುಗಳು ಯಾವುದೇ ಇರಲಿ ಫ್ರಿಡ್ಜ್‍ನಲ್ಲಿ ಇಡುವ ವೇಳೆ ಕತ್ತರಿಸಿದ ಹಣ್ಣುಗಳ ಮೇಲೆ ಏನಾದರೂ ಮುಚ್ಚಿಡಲು ಮರೆಯಬೇಡಿ. ಯಾಕೆಂದರೆ ಫ್ರಿಡ್ಜ್‍ನಲ್ಲಿ ಯಾವುದೇ ಪದಾರ್ಥಗಳನ್ನು ಮುಚ್ಚದೇ ಇಡುವುದು ಒಳಿತಲ್ಲ.
ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ
ಮುಖ್ಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ಒಟ್ಟಿಗೆ ಇರಿಸುವುದು ಒಳ್ಳೆಯ ಅಭ್ಯಾಸವಲ್ಲ. ಯಾವಾಗಲೂ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ. ಏಕೆಂದರೆ ಹಣ್ಣು ಮತ್ತು ತರಕಾರಿಗಳಲ್ಲಿ ಭಿನ್ನ ರೀತಿಯ ಗ್ಯಾಸ್‍ಗಳು ಬಿಡುಗಡೆಯಾಗುತ್ತದೆ ಹಾಗೂ ಸಂಗ್ರಹವಾಗಿರುತ್ತದೆ. ಇದು ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿಯೇ ಇರಿಸಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ