ಮೊಟ್ಟೆ ಸಾರು (Egg Curry) ತಿಂದಿದ್ದೀರಾ? ಅದರಲ್ಲೂ ಕರಾವಳಿ (Coast) ಭಾಗದ ಮೊಟ್ಟೆ ಸಾರು ಸವಿದಿದ್ದೀರಾ?. ನಾನಾ ಭಾಗಗಳಲ್ಲಿ ವಿಭಿನ್ನ ಮಸಾಲೆಯಿಂದ ಮೊಟ್ಟೆ ಸಾರು ತಯಾರಿಸುತ್ತಾರೆ. ಅದರಲ್ಲೂ ಮೊಟ್ಟೆಯನ್ನ ಬೇಯಿಸಿ (Boiled) ಆ ಬಳಿಕ ಸಾರು ಮಾಡುವವರೇ ಜಾಸ್ತಿ. ಆದರೆ ನೇರವಾಗಿ ಮಸಾಲೆಗೆ ಮೊಟ್ಟೆಯನ್ನು ಹಾಕಿ ಸಾರು ಮಾಡಿ ಸವಿದಾಗ ಅದರ ಟೇಸ್ಟ್ (Taste) ಬೇರೆಯೇ ಇರುತ್ತದೆ. ಮಂಗಳೂರು (Mangalore) ಮತ್ತು ದಕ್ಷಿಣ ಕನ್ನಡ (Dakshina Kannada) ಕೆಲವೆಡೆ ಈ ರೀತಿಯಾಗಿ ಮೊಟ್ಟೆ ಸಾರು ಮಾಡುತ್ತಾರೆ. ಕುಚ್ಚಲು ಅಕ್ಕಿಯ (Boiled Rice) ಜೊತೆಗೆ ಈ ರೀತಿಯಾಗಿ ಮೊಟ್ಟೆ ಸಾರು ಸವಿದರೆ ಬಾಯಲ್ಲಿ ಬರುವ ಉದ್ಗಾರ ಬೇರೆಯೇ ಇರುತ್ತದೆ.
ಮೊಟ್ಟೆಯಿಂದ ನಾನಾ ರೀತಿಯ ಆಹಾರ ಅಥವಾ ಸಾಂಬರ್ ತಯಾರಿಸುತ್ತಾರೆ. ಇನ್ನು ಹಲವೆಡೆ ಮೊಟ್ಟೆಯನ್ನು ನೀರಿನಲ್ಲಿ ಬೇಯಿಸಿ ಆ ಬಳಿಕ ಮಸಾಲೆಯಲ್ಲಿ ಕುದಿಸಿ ಸಾಂಬರು ತಯಾರಿಸುತ್ತಾರೆ. ಆದರೆ ಮೊಟ್ಟೆಯನ್ನು ಕುದಿಯುವ ಮಸಾಲೆಗೆ ಒಯ್ಯುವ ಮೂಲಕ ಸಾಂಬರ್ ಮಾಡಿ ನೋಡಿ. ಇದೊಂದು ಹೊಸ ರೆಸಿಪಿಯಾಗಿದೆ. ಆದರೆ ಕರಾವಳಿ ಭಾಗದ ಜನರಿಗೆ ಇದು ಹಳೆಯದೇ. ಸದ್ಯ ನಗರ ಪ್ರದೇಶದಲ್ಲಿ ಈ ರೀತಿಯಾಗಿ ಸಾಂಬರ್ ಮಾಡುತ್ತಾರೆ. ಒಂದು ಸಮಯದ ಅಭಾವದಿಂದಲೂ ಈ ರೀತಿ ಮಾಡಿದರೆ, ಟೇಸ್ಟಿಯಾಗಿ ಬೇಗನೆ ಸಾಂಬರ್ ಮಾಡಲು ಈ ರೀತಿ ಸಾಧ್ಯ ಎಂಬುದು ಎರಡನೆಯ ಕಾರಣವಾಗಿದೆ.
ಅಂದಹಾಗೆಯೇ ಮೊಟ್ಟೆ ಒಡೆದು ಸಾರು ಮಾಡೋದು ಹೇಗೆ? ಮಸಾಲೆ ಮಾಡುವುದು ಹೇಗೆ? ಏನೆಲ್ಲಾ ಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ
ಮೊಟ್ಟೆ ಒಡೆದು ಸಾರು ಮಾಡಲು ಬೇಕಾಗುವ ಸಾಮಗ್ರಿಗಳು-
5 ಮೊಟ್ಟೆ, ಮೆಣಸು, ಕೊತ್ತಂಬರಿ, ಸಾಸಿವೆ, ಜೀರಿಗೆ, ಮೆಂತ್ಯೆ, ಬೆಳ್ಳುಳ್ಳಿ, ಈರುಳ್ಳಿ, ಅರಶಿಣ ಪುಡಿ,ಹುಣಸೆಹಣ್ಣು, ತೆಂಗಿನ ತುರಿ.
ಮಾಡುವ ವಿಧಾನ
ಒಂದು ಬಾಣಲೆ ತೆಗೆದುಕೊಂಡು ಹದ ಬಿಸಿಯಾಗುತ್ತಿದಂತೆಯೇ ಅದಕ್ಕೆ ಎಣ್ಣೆ ಹಾಕಿ. ನಂತರೆ ಒಣ ಮೆಣಸು, ಜೊತೆಗೆ ಕೊತಂಬರಿ, ಜೀರಿಗೆ, ಸಾಸಿವೆ, ಮೆಂತ್ಯೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ಇದಾದ ಬಳಿಕ ಬಾಣಲೆಯಲ್ಲಿ ಹುರಿದ ವಸ್ತುಗಳನ್ನು ತಣ್ಣಗಾಗಿದೆಯಾ ನೋಡಿ. ತಣ್ಣಗಾದ ಮೇಲೆ
ಹುರಿದ ಮಸಾಲೆ, ಅರಶಿಣ, ಹುಣಸೆಹಣ್ಣು, ತೆಂಗಿನ ತುರಿ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿರಿ.
ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಸೇರಿಸಿ. ಉಪ್ಪು ರುಚಿಗೆ ತಕ್ಕಷ್ಟು ಹಾಕಲು ಮರೆಯದಿರಿ. ಏಕೆಂದರೆ ಮಸಾಲೆಯ ಕೊನೆಯಲ್ಲಿ ಉಪ್ಪು ಸೇರಿಸಲು ಮತ್ತು ಮಸಾಲೆ ಮಾಡುವಾಗ ಉಪ್ಪು ಸೇರಿಸೋದಕ್ಕೆ ವ್ಯತ್ಯಾಸವಿದೆ. ಅದರಲ್ಲೂ ಮಸಾಲೆಯ ರುಚಿಯಲ್ಲಿ ವ್ಯಾತ್ಯಾಸ ಕಾಣಬಹುದಾಗಿದೆ.
ಇಷ್ಟೇಲ್ಲಾ ಮಾಡಿದ ಬಳಿಕ ಈರುಳ್ಳಿ, ಟೊಮೋಟೊ ಹಾಕಿ ಕುದಿಯಲು ಬಿಡಿ. ಚೆನ್ನಾಗಿ ಕುದಿದ ನಂತರ ಮೊಟ್ಟೆ ಒಡೆದು ಹಾಕಿ. 5 ನಿಮಿಷ ಹಾಗೆ ಬೇಯಲು ಬಿಡಿ. ಇಷ್ಟು ಮಾಡಿದರೆ ರುಚಿಕರವಾದ ಮೊಟ್ಟೆ ಸಾರು ಸವಿಯಲು ಸಿದ್ದ.
ಅಂದಹಾಗೆಯೇ ಒಂದು ಬಾರಿ ಈ ರೀತಿಯಾಗಿ ಅಡುವೆ ಮಾಡಲು ಪ್ರಯತ್ನಿಸಿ. ಮೊಟ್ಟೆ ಬೇಯಿಸಿ ನಂತರ ಮಸಾಲೆ ತಯಾರಿಸಿ ಮಾಡುವ ಅಡುಗೆಗೂ ಮತ್ತು ಮೊಟ್ಟೆ ಒಡೆದು ನಂತರ ಸಾಂಬರ್ ತಯಾರಿಸುವುದಕ್ಕೂ ಅಜಗಜಾಂತರ ವ್ಯತ್ಯಸವಿದೆ. ಅದರಲ್ಲೂ ಟೇಸ್ಟ್ ಕೂಡ ಭಿನ್ನವಾಗಿರುತ್ತದೆ.
ಈ ರೀತಿಯಾಗಿ ಮೊಟ್ಟೆ ಸಾರು ಮಾಡಲು ಮಣ್ಣಿನ ಮಡಕೆ ಬಳಸಿದರೆ ಅದರ ಟೇಸ್ಟ್ ಇನ್ನೂ ಚೆನ್ನಾಗಿರುತ್ತದೆ. ಮಾತ್ರವಲ್ಲದೆ ಈ ರೀತಿಯಾಗಿ ದಿನ ಕಳೆದಂತೆಯೇ ಮೊಟ್ಟೆ ಸಾರಿನ ರುಚಿ ಬದಲಾಗುತ್ತಾ ಹೋಗುತ್ತದೆ. ನಾಟಿ ಕೋಳಿ ಮೊಟ್ಟೆಯನ್ನು ಹಾಕಿ ಪ್ರಯತ್ನಿಸಿ ನೋಡಿ
ವರದಿ: ಸುಮನ ಕುಮಾರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ