ಗೂಗಲ್​ ಮ್ಯಾಪ್​ನಲ್ಲಿ ದಾರಿ ಹುಡುಕುವಾಗ ಗಂಡನಿಗೆ ಕಂಡದ್ದು ಇನ್ನೊಬ್ಬನ ಜತೆಗಿನ ಹೆಂಡತಿಯ ಸರಸ..!

news18-kannada
Updated:January 14, 2020, 7:22 PM IST
ಗೂಗಲ್​ ಮ್ಯಾಪ್​ನಲ್ಲಿ ದಾರಿ ಹುಡುಕುವಾಗ ಗಂಡನಿಗೆ ಕಂಡದ್ದು ಇನ್ನೊಬ್ಬನ ಜತೆಗಿನ ಹೆಂಡತಿಯ ಸರಸ..!
  • Share this:
ಡಿಜಿಟಲ್​ ಯುಗದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಪ್ರತಿಯೊಬ್ಬರೂ ಸ್ಮಾರ್ಟ್​ಫೋನ್ ಬಳಸುವವರೇ,  ಕೇವಲ ಒಂದು ಟಚ್​ ಮೂಲಕ ಏನು ಬೇಕಾದರೂ ಮೊಬೈಲ್​ನಿಂದ ಪಡೆಯಬಹುದು. ಅಂತಹ ಅನುಕೂಲಗಳು ಡಿಜಿಟಲ್ ಯುಗದಲ್ಲಿದೆ. ಇದರ ನಡುವೆಯು ಎಷ್ಟೋ ಸಂಬಂಧ ಹದಗೆಡಲು ಇದೇ ಮೊಬೈಲ್​ಗಳು ಕಾರಣ  ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.  ಮೊಬೈಲ್ ವಿಡಿಯೋ ಮತ್ತು ಫೋಟೋಗಳಿಂದ ಸಂಬಂಧಗಳೇ ಮುರಿದು ಬಿದ್ದ ಅನೇಕ ನಿರ್ದಶನಗಳಿವೆ. ಇಲ್ಲಿ ನಾವು ಹೇಳ ಹೊರಟಿರುವುದು ಕೂಡ ಇಂತಹದೊಂದು ಕಥೆ. ಆದರೆ ಇದು ನೀವು ಹಿಂದೆಂದೂ ಕೇಳಿರದ , ಹೀಗೂ ನಡೆಯುತ್ತಾ? ಎಂದು ಆಶ್ಚರ್ಯ ಪಡಬಹುದಾದ ನೈಜ ಕಥೆ.

ಆತನ ಹೆಸರು ಮ್ಯಾಕ್. ಕೆಲ ದಿನಗಳ ಹಿಂದೆ ದೂರದ ಊರಿಗೆ ಪ್ರವಾಸಕ್ಕೆ ತೆರಳಿದ್ದನು. ಪ್ರವಾಸದಿಂದ ಹಿಂತಿರುಗುತ್ತಿದ್ದ ವೇಳೆ ಮ್ಯಾಕ್​ಗೆ ತನ್ನ ಪ್ರಯಾಣವನ್ನು ಅವಿಸ್ಮರಣೀಯವಾಗಿಸಲು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ. ಅಲ್ಲದೆ ಇದನ್ನು ಆಯಾ ಪ್ರದೇಶಗಳ ಹೆಸರಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದನು. ಪ್ರಯಾಣದುದ್ದಕ್ಕೂ ಪ್ರೀತಿಯ ಹೆಂಡತಿಯೊಂದಿಗೆ ಫೋನಿನಲ್ಲಿ ತನ್ನ ಪ್ರವಾಸನುಭವಗಳನ್ನು ಹಂಚಿಕೊಳ್ಳುತ್ತಾ ಸಂಚಾರ ಮುಂದುವರೆಸಿದ್ದನು.

ಫೋನ್​ ಮಾಡಿದಾಗೆಲ್ಲಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಮ್ಯಾಕ್ ಪತ್ನಿ ಶಾಯನಾ ತಿಳಿಸುತ್ತಿದ್ದಳು. ಇದರಿಂದಾಗಿ ಸಾಧ್ಯವಾದಷ್ಟು ಬೇಗ ಮನೆ ಸೇರಬೇಕೆಂಬ ತವಕ ಕೂಡ ಮ್ಯಾಕ್​ನಲ್ಲಿತ್ತು. ಆದಷ್ಟು ಬೇಗ ಮನೆ ಸೇರಿ ತನ್ನ ಮುದ್ದಿನ ಪತ್ನಿಗೆ ಸರ್ಪ್ರೈಸ್ ನೀಡಲು ನಿರ್ಧರಿಸಿದ. ಇದಕ್ಕಾಗಿ ಗೂಗಲ್ ಮ್ಯಾಪ್​ ಮೊರೆ ಹೋದನು. ​ ಮ್ಯಾಪ್​ನಲ್ಲಿ ಅತ್ಯಂತ ಶಾರ್ಟ್​ ಕಟ್ ರಸ್ತೆ  ಹುಡುಕಾಡುವಾಗ  ಊರಿನ ಪ್ರಮುಖ ಸೇತುವೆ ಕಾಣಿಸಿದೆ. ಕುತೂಹಲದಿಂದ ಮತ್ತಷ್ಟು ಝೂಮ್ ನೋಡಿದನು. ಅರೆರೆ ಕೆಲ  ಪರಿಚಿತರ ಮುಖಗಳು ಅಲ್ಲಿ ಗೋಚರಿಸಿದೆ.

ಇದರಿಂದ ಕುತೂಹಲಗೊಂಡಿದ್ದ ಮ್ಯಾಕ್ ಇನ್ನಷ್ಟು ಝೂಮ್ ಮಾಡಿದ  ತನ್ನ ನಗರದ ಬೀದಿಗಳನ್ನು ವೀಕ್ಷಿಸಿದ್ದಾನೆ. ಹಾಗೆಯೇ ಸುಮ್ಮನೆ  ಮನೆಯ ಪ್ರದೇಶವನ್ನು ಝೂಮ್ ಮಾಡಿ ನೋಡಿದಾಗ ಹತ್ತಿರದಲ್ಲೇ ಇರುವ ಪಾರ್ಕ್​ನಲ್ಲಿ ಯುವತಿಯೊಬ್ಬಳು ಕುಳಿತಿರುವುದು ಕಾಣುತ್ತದೆ. ಆ ಯುವತಿ ಧರಿಸಿದ ಉಡುಪುಗಳನ್ನು ಈ ಹಿಂದೆ ಎಲ್ಲೋ ನೋಡಿದ ಸಂದೇಹದ ಮೇಲೆ ಗೂಗಲ್​ ಮ್ಯಾಪ್​ನ್ನು ಮತ್ತಷ್ಟು ಝೂಮ್ ಮಾಡಿದ್ದಾನೆ. ಈ ವೇಳೆ ಇಬ್ಬರು ಪ್ರಣಯ ಜೋಡಿಗಳು ರೋಮ್ಯಾನ್ಸ್​ನಲ್ಲಿ ತಲ್ಲೀನರಾಗಿರುವುದು ಕಾಣಿಸಿದೆ. ತಮ್ಮ ಏರಿಯಾದಲ್ಲಿರುವ ಈ ಹೊಸ ಜೋಡಿ ಯಾರೆಂಬ ಕುತೂಹಲ ಮ್ಯಾಕ್​ನಲ್ಲಿ ಮೂಡಿದೆ.

ಕುತೂಹಲಕ್ಕೊಂದು ಬ್ರೇಕ್​ 

ಈ ನಡುವೆ ರಸ್ತೆ ಬದಲಾಯಿತೇ ಎಂಬ ಸಂಶಯ ಮ್ಯಾಕ್​ಗೆ ಕಾಡಿದೆ. ಕಾರು ನಿಲ್ಲಿಸಿ ಮತ್ತೆ ಗೂಗಲ್​ ಮ್ಯಾಪ್​ನಲ್ಲಿ ದಾರಿಯ ಹುಡುಕಾಟ ಶುರು ಮಾಡಿದ್ದಾನೆ. ಸರಿಯಾದ ದಿಕ್ಕಿನಲ್ಲೇ ಇರುವುದನ್ನು ಖಚಿತ ಪಡಿಸಿಕೊಂಡ ನಂತರ ಪ್ರಯಾಣ ಮುಂದುವರೆಸಿದ. ಇದೇ ವೇಳೆ ಆಗಲೂ ಕೂಡ ಕೆಲ ನಿಮಿಷಗಳ ಹಿಂದೆ ನೋಡಿದ ಈ ಜೋಡಿಗಳಾರೆಂಬ ಕುತೂಹಲ ಮಾತ್ರ ತಣಿದಿರಲಿಲ್ಲ. ಹೀಗಾಗಿ ಮತ್ತೆ ತನ್ನೂರಿನ ಪಾರ್ಕ್​ನ್ನು ಗೂಗಲ್​ ಮ್ಯಾಪ್​ನಲ್ಲಿ ಸರ್ಚ್​ ಮಾಡಿದ್ದಾರೆ. ಈ ಬಾರಿ ನೆಟ್​ವರ್ಕ್​ ಕೂಡ ಉತ್ತಮವಾಗಿದ್ದರಿಂದ ಮ್ಯಾಕ್ ಸೀದಾ ಝೂಮ್ ಮಾಡಿದ್ದಾರೆ. ಅಕ್ಕ ಪಕ್ಕ ತಿರುಗಿ ನೋಡುತ್ತಾ ಹರಟುತ್ತಿದ್ದ ಯುವತಿಯನ್ನು ನೋಡುತ್ತಿದ್ದಂತೆ ಮ್ಯಾಕ್ ಒಂದೇ ರಭಸಕ್ಕೆ ಬ್ರೇಕ್ ಹಾಕಿದ. ಅಲ್ಲೆ ಎದುರಿನಿಂದ ಬರುತ್ತಿದ್ದ ಕಾರು ಚಾಲಕ ಮ್ಯಾಕ್​ಗೆ ಬೈದು ಮುಂದಕ್ಕೆ ಸಾಗಿದನು. ಆದರೆ ಇದ್ಯಾವುದೂ ​ ಕೇಳುವ ಪರಿಸ್ಥಿತಿಯಲ್ಲಿ ಮ್ಯಾಕ್ ಇರಲಿಲ್ಲ.  ಮ್ಯಾಕ್ ವಿಚಲಿತಗೊಂಡಿದ್ದ. ಕಾರಿನಿಂದ ಇಳಿದು ಒಂದೆರೆಡು ಸಿಗರೇಟ್ ಸರಸರನೇ ಎಳೆದು ಬಿಸಾಡಿದ. ತಾನು ನೋಡಿದ ಯುವತಿ ನಿಜವಾಗಲೂ ಅವಳೇ ಹೌದಾ? ಇಲ್ಲ ಬೇರೆಯವರಾ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ಆ ಚಿತ್ರವನ್ನು  ಸ್ಕ್ರೀನ್ ಶಾಟ್ ತೆಗೆದು ಸೇವ್ ಮಾಡಿಕೊಂಡನು. ಮತ್ತೆ ಕಾರು ಏರಿದ ಮ್ಯಾಕ್ ಕೆಲವೊತ್ತು ಚಿಂತಿತನಾಗಿಯೇ ಕುಳಿತುಕೊಂಡಿದ್ದ.

ಹೌದು, ಪಾರ್ಕ್​ನಲ್ಲಿ ಮ್ಯಾಕ್ ಪತ್ನಿ ಶಾಯನ ಬೇರೊಬ್ಬನೊಂದಿಗೆ ಚಕ್ಕಂದವಾಡುತ್ತಿರುವ ಚಿತ್ರ ಕಾಣಿಸಿದೆ. ಇದನ್ನು ನೋಡಿದ ಮ್ಯಾಕ್ ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಂಡಿದ್ದನು. ಹೇಗೊ ಸುಧಾರಿಸಿ ನರಕ ಯಾತನೆಯೊಂದಿಗೆ ಮ್ಯಾಕ್ ಕಾರು ಸ್ಟಾರ್ಟ್ ಮಾಡಿದ.  ವೇಗದ ಮಿತಿಯನ್ನು ಮೀರಿ ಗಾಡಿ ಓಡಿಸುತ್ತಿದ್ದ. ಅಂದುಕೊಂಡಿದ್ದಕ್ಕಿಂತ ಬೇಗನೇ ಮ್ಯಾಕ್ ಮನೆಗೆ ತಲುಪಿದ. ಅಲ್ಲೇ ಮನೆಯೊಳಗಿದ್ದ ಹೆಂಡತಿಯನ್ನು ನೇರವಾಗಿ ಯಾರವನು ಎಂದು ಪ್ರಶ್ನಿಸಿದ್ದಾನೆ. ಆದರೆ ಶಾಯನ ಏನೂ ಅರ್ಥವಾಗದಂತೆ ನಿಂತಿದ್ದಳು. ಮತ್ತೆ ಮತ್ತೆ ಗದರಿದಾಗ  ಇಬ್ಬರ ನಡುವೆ ವಾಗ್ವಾದ ನಡೆಯಿತು. ಹೆಂಡತಿ ಬಾಯಿ ಬಿಡದಿದ್ದಾಗ  ಗೂಗಲ್ ಮ್ಯಾಪ್​ನಲ್ಲಿ ನೋಡಿದ ಚಿತ್ರವನ್ನು ಶಾಯನಗೆ ತೋರಿಸಿದನು. ಒಮ್ಮೆಲೇ ಶಾಯನ ತಬ್ಬಿಬ್ಬಾದಳು. ಇನ್ನು ಸತ್ಯವನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದರಿತ ಅವಳು ತನಗೆ ಬೇರೆಯವನ ಜೊತೆಗೆ ಸಂಬಂಧವಿರುವ ಕಹಿ ಸತ್ಯವನ್ನು ಒಪ್ಪಿಕೊಂಡಳು.  ಮ್ಯಾಕ್​ಗೆ ಆಕಾಶವೇ ತನ್ನ ಮೈಮೇಲೆ ಬಿದ್ದಂತಹ ಅನುಭವ. ಇಷ್ಟು ದಿನ ತನ್ನನ್ನು ವಂಚಿಸಿದ ಹೆಂಡತಿಯನ್ನು ಏನು ಮಾಡಬೇಕೆಂದು ತಿಳಿಯದೇ ಕುಸಿದು ಬಿದ್ದನು. ಅಲ್ಲೇ ಕೂತು  ಸಂಕಟ ಕೋಪವನ್ನೆಲ್ಲಾ ಸೇರಿಸಿ ಜೋರಾಗಿ ಅಳಲು ಆರಂಭಿಸಿದ.ನಿಧಾನಕ್ಕೆ ಶಾಯನ ಮಾತು ಮುಂದೆವರೆಸಿದಳು...
ನನ್ನನ್ನು ಕ್ಷಮಿಸಿ ಬಿಡು ಮ್ಯಾಕ್.. ನನಗೂ ಸ್ಯಾಮ್​ಗೂ ಮೊದಲೇ ಗೆಳೆತನವಿತ್ತು. ಆದರೆ ಅದೆಲ್ಲವನ್ನು ನಾನು ನಿನ್ನಿಂದ ಮುಚ್ಚಿಟ್ಟಿದ್ದೆ. ಆದರೆ ಅದುವೇ ಪ್ರೀತಿಯ ರೂಪಕ್ಕೆ ತಿರುಗುತ್ತದೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ನೀವೂ ಕೂಡ ಹೆಚ್ಚಾಗಿ ಮನೆಯಲ್ಲಿರುತ್ತಿರಲಿಲ್ಲ. ನನಗೂ ಏಕಾಂಗಿತನ ಕಾಡುತ್ತಿತ್ತು. ಆದರೆ ನಿಮಗೆ ಮೋಸ ಮಾಡಬೇಕೆಂದು ಯಾವತ್ತೂ ಬಯಸಿರಲಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿಯಿತ್ತು ಎಂಬುದು ನಿಜ. ಆದರೆ ಯಾವುದೇ ರೀತಿಯ ದೈಹಿಕ ಸಂಬಂಧ ಇರಲಿಲ್ಲ. ದಯವಿಟ್ಟು ಕ್ಷಮಿಸಿಬಿಡು ಎಂದು ಶಾಯನ ಪರಿ ಪರಿಯಾಗಿ ಬೇಡಿಕೊಂಡಳು. ಆದರೆ ಅದಾಗಲೇ ಖಿನ್ನತೆಗೆ ಒಳಗಾಗಿದ್ದ ಮ್ಯಾಕ್ ಇದ್ಯಾವುದನ್ನು ಕೇಳಿಸಿಕೊಳ್ಳುವ ಪ್ರಮೇಯದಲ್ಲಿರಲಿಲ್ಲ.

ಅಂದು ರಾತ್ರಿ ಶಾಯನ ಜೊತೆ ಏನೂ ಮಾತನಾಡದೇ  ಪ್ರತ್ಯೇಕ ಕೊಠಡಿಯಲ್ಲಿ ಮಲಗಿಕೊಂಡ. ರಾತ್ರಿಯೆಲ್ಲಾ ನಿದ್ರೆ ಬಿಟ್ಟು ಮುಂದಿನ ಜೀವನದ ಬಗ್ಗೆ ಯೋಚಿಸಿದ. ಕೊನೆಗೂ ಒಂದು ನಿರ್ಧಾರಕ್ಕೆ ಬಂದ ಮ್ಯಾಕ್ ಬೆಳಿಗ್ಗೆ ಶಾಯನಳೊಂದಿಗೆ ವಿಚ್ಛೇದನದ ಕುರಿತು ಮಾತನಾಡಿದನು. ಆದರೆ ಮ್ಯಾಕ್​ನಂತಹ ಗಂಡನನ್ನು ಕಳೆದುಕೊಳ್ಳಲು ಆಗಲೂ ಕೂಡ ಶಾಯನ ತಯಾರಿರಲಿಲ್ಲ. ತಾನು ಮಾಡಿರುವುದು ತಪ್ಪು ಎಂಬುದನ್ನು ಒಪ್ಪಿಕೊಂಡರೂ ಶಾಯನಳನ್ನು ಕ್ಷಮಿಸಲು  ಸುತಾರಂ ಮ್ಯಾಕ್​ ತಯಾರಿರಲಿಲ್ಲ. ಕೊನೆಗೆ ಮ್ಯಾಕ್​ನ ನಿರ್ಧಾರದಂತೆ ಇಬ್ಬರೂ ಡೈವೋರ್ಸ್​ ಪಡೆದುಕೊಂಡರು.

ಇದನ್ನೂ ಓದಿ: ಸಂಚಾರಿ ನಿಯಮ: ವಾಹನ ಓಡಿಸುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ

ತನ್ನ ಜೀವನದಲ್ಲಿ ಆಧುನಿಕ ತಂತ್ರಜ್ಞಾನ ಹೇಗೆ ಟರ್ನಿಂಗ್ ಪಾಯಿಂಟ್ ಆಯಿತು ಎಂಬುದನ್ನು ಗೂಗಲ್ ಮ್ಯಾಪ್ ಫೋಟೊಗಳ ಮೂಲಕ ಮ್ಯಾಕ್ ಸಾಮಾಜಿಕ ತಾಣದಲ್ಲಿ ತನ್ನ ಕಥೆಯನ್ನು ಹೇಳಿಕೊಂಡ. ಈ ಪೋಸ್ಟ್ ವಿಶ್ವದೆಲ್ಲೆಡೆ ವೈರಲ್ ಆಗುತ್ತಿದ್ದಂತೆ ತಂತ್ರಜ್ಞಾನದ ಬೆಳವಣಿಗೆ ಕುರಿತು ಯೋಚಿಸಿ ಮ್ಯಾಕ್ ನಿಟ್ಟುಸಿರು ಬಿಟ್ಟನು. ಡಿಜಿಟಲ್​ ಯುಗದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಕಥೆ ಸಾಕ್ಷಿಯಾಗಿ ಉಳಿಯಿತು.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading