ಮನೆಯಲ್ಲೇ ತಯಾರಿಸಬಹುದಾದ ಆರೋಗ್ಯಕರ ತಿನಿಸುಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಸಂಜೆ ಅಥವಾ ದಿನದ ಕೆಲವೊಂದು ವೇಳೆಗಳಲ್ಲಿ ಏನಾದರೂ ರುಚಿಕರ ತಿನಿಸನ್ನು ತಿನ್ನಬೇಕೆಂಬ ಆಸೆಯಾಗುತ್ತದೆ. ಅಂತಹ ಸಂದರ್ಭದಲ್ಲಿ , ಬಹಳಷ್ಟು ಮಂದಿ ಸಂಸ್ಕರಿಸಿದ ಪ್ಯಾಕೆಟ್ ತಿಂಡಿಗಳನ್ನು ಅಥವಾ ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ತಿನ್ನುತ್ತಾರೆ. ನಾವು ಯಾವ ರೀತಿಯ ತಿಂಡಿ ತಿನಿಸುಗಳನ್ನು ಸೇವಿಸುತ್ತೇವೆ ಎಂಬುವುದರ ಬಗ್ಗೆ ಸದಾ ಎಚ್ಚರ ಇರಬೇಕು. ಇಲ್ಲವಾದಲ್ಲಿ ತೂಕ ಏರಿಕೆ, ಬೊಜ್ಜು ಮತ್ತು ಇತರ ಸಮಸ್ಯೆಗಳು ತಲೆದೋರಬಹುದು. ಹಾಗಾಗಿ ನಾವು ಯಾವ ತಿನಿಸನ್ನು ಮೆಲ್ಲುತ್ತಿದ್ದೇವೆ ಎಂಬುದರ ಕುರಿತು ಗಮನ ಹರಿಸುವುದು ಮತ್ತು ಆರೋಗ್ಯಕರ ತಿನಿಸುಗಳು ಯಾವುವು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯ. ಆರೋಗ್ಯಕರ ತಿನಿಸುಗಳ ಗುಣಲಕ್ಷಣಗಳು ಈ ಕೆಳಗಿನಂತಿವೆ.
• ತಿನಿಸಿನಲ್ಲಿ ಕಡಿಮೆ ಕ್ಯಾಲೋರಿ ಇರಬೇಕು ಮತ್ತು ತೂಕ ಹೆಚ್ಚಿಸುವಂತಿರಬಾರದು.
• ತಿನಿಸಿನಲ್ಲಿ ಅತೀ ಪ್ರಮಾಣದ ಸಕ್ಕರೆ ಅಥವಾ ಉಪ್ಪು ಇರಬಾರದು.
• ತಿನಿಸನ್ನು ತಯಾರಿಸುವುದು ಸುಲಭವಾಗಿರಬೇಕು ಮತ್ತು ಅದು ಪೌಷ್ಟಿಕಾಂಶಯುಕ್ತ ಆಗಿರಬೇಕು.
• ತಿನಿಸು ಕರಿದದ್ದಾಗಿರಬಾರದು,ಅತ್ಯಧಿಕ ಸಂಸ್ಕರಿತವಾಗಿರಬಾರದು ಅಥವಾ ಕೃತಕ ಫ್ಲೇವರ್ಗಳು ಅಥವಾ ಪ್ರಿಸರ್ವೆಟಿವ್ಗಳನ್ನು ಹೊಂದಿರಬಾರದು.
• ತಿನಿಸು ಹಾಗೂ ಅದರಿಂದ ಪಡೆದ ತೃಪ್ತಿಯ ಪ್ರಮಾಣದಲ್ಲಿ ಸಮತೋಲನ ಇರಬೇಕು.
ನೀವು ಯಾವುದೇ ಚಿಂತೆಯಿಲ್ಲದೆ ಚಪ್ಪರಿಸಬಹುದಾದ ಕೆಲವು ಭಾರತೀಯ ತಿನಿಸುಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ:
ಹುರಿದ ಕಡಲೆ: ಸಸ್ಯಜನ್ಯ ಪ್ರೊಟೀನ್ ಮೂಲವಾಗಿರುವ ಕಡಲೆ, ಬೇಳೆಗಳು ಪೌಷ್ಟಿಕಾಂಶದ ಖಜಾನೆಗಳಾಗಿರುತ್ತವೆ. ಹುರಿಗಡಲೆ ಭಾರತದಲ್ಲಿ ಜನಪ್ರಿಯ ತಿನಿಸು. ಅದನ್ನು ಸುಲಭವಾಗಿ ತಯಾರಿಸಬಹುದು ಮತ್ತು ಅದು ನಿಮಗೆ ತೃಪ್ತಿಯನ್ನು ಕೂಡ ನೀಡುತ್ತದೆ. ಆರೋಗ್ಯಕ್ಕೂ ಉತ್ತಮ. ಕಡಲೆಯನ್ನು, ಉಪ್ಪು ಸೇರಿಸಿ ಹುರಿದು ಅಥವಾ ಅದಕ್ಕೆ ಕರಿ ಮೆಣಸು, ಚಾಟ್ ಮಸಾಲ ಮತ್ತು ಇತರ ಒಣ ಮಸಾಲೆಗಳನ್ನು ಕೂಡ ಸೇರಿಸಿ ತಿನ್ನಬಹುದು.
ಮಂಡಕ್ಕಿ: ಅಕ್ಕಿ ಕಾಳುಗಳನ್ನು ಅಧಿಕ ಒತ್ತಡದಲ್ಲಿ ಬಿಸಿ ಮಾಡಿ ಮಂಡಕ್ಕಿಯನ್ನು ತಯಾರಿಸಲಾಗುತ್ತದೆ.ಮಂಡಕ್ಕಿಯಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ, ಫೈಬರ್ ಮತ್ತು ಪ್ರೊಟೀನ್ ಅಥಿಕ ಪ್ರಮಾಣದಲ್ಲಿ ಇರುತ್ತದೆ. ಇದು ತಿನ್ನಲು ಬಲು ರುಚಿ. ಮಂಡಕ್ಕಿಗೆ ನಿಮ್ಮಿಷ್ಟದ ಸಾಮಾಗ್ರಿಗಳನ್ನು ಹಾಕಿ ತಿನಿಸನ್ನು ತಯಾರಿಸಬಹುದು. ಉದಾಹರಣೆಗೆ , ಈರುಳ್ಳಿ,ಟೊಮ್ಯಾಟೋ,ಹಸಿ ಮೆಣಸಿನ ಕಾಯಿ ಮತ್ತು ನಿಂಬೆ ಹಣ್ಣು.
ಮಿಶ್ರ ಚಾಟ್: ಭಾರತೀಯರಿಗೆ ಮಸಾಲೆಯುಕ್ತ ಆಹಾರ ಎಂದರೆ ಬಹಳ ಪ್ರೀತಿ ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಚಾಟ್ ಕೂಡ ಮಸಾಲೆ ತಿನಿಸುಗಳ ಪಟ್ಟಿಗೆ ಸೇರುತ್ತದೆ. ಸಾಮಾನ್ಯವಾಗಿ ಚಾಟ್ಗಳನ್ನು ಇಷ್ಟಪಡದವರ ಸಂಖ್ಯೆ ಕಡಿಮೆ ಇರುತ್ತದೆ. ನಾವು ಮನೆಯಲ್ಲಿಯೇ ಆರೋಗ್ಯಕರ ಚಾಟ್ ಮಾಡಿಕೊಳ್ಳಬಹುದು. ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಕೊತ್ತಂಬರಿ ಇತ್ಯಾದಿಗಳನ್ನು ಹಾಕಿ ತಯಾರಿಸಿದ ಫೈಬರ್ ಯುಕ್ತ ಚಾಟ್ಗೆ ನಿಮ್ಮಿಷ್ಟದ ಮಸಾಲೆ ಮತ್ತು ಮನೆಯಲ್ಲೇ ಮಾಡಿದ ಚಟ್ನಿಯ ಜೊತೆ ಸೇವಿಸಬಹುದು.
ಮಸಾಲೆ ಜೋಳ: ಇದನ್ನು ಸುಲಭವಾಗಿ ತಯಾರಿಸಬಹುದು ಮತ್ತು ಅದು ಆರೋಗ್ಯಕ್ಕೆ ಒಳ್ಳೆಯದು ಕೂಡ. ಮೆಕ್ಕೆಜೋಳದಲ್ಲಿ ಆ್ಯಂಟಿಆಕ್ಸಿಡೆಂಟ್ಗಳು, ವಿಟಮಿನ್ ಸಿ ಮತ್ತು ಇತರ ಪೌಷ್ಟಿಕಾಂಶಗಳು ಇರುತ್ತವೆ. ಈ ತಿನಿಸನ್ನು ತಯಾರಿಸಬೇಕು ಎಂದರೆ, ಜೋಳವನ್ನು ಬೇಯಿಸಿ ಅದಕ್ಕೆ ನಿಮಗಿಷ್ಟವಾದ ಮಸಾಲೆಗಳನ್ನು ಸೇರಿಸಬೇಕು. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸವಿಯಬಹುದು.
ಹುರಿದ ಶೇಂಗಾ: ಸಸ್ಯಜನ್ಯ ಪ್ರೋಟೀನ್ನ ಮೂಲವಾಗಿರುವ, ವಿಟಮಿನ್ಗಳು ಮತ್ತು ಮಿನರಲ್ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುವ ಹುರಿದ ಶೇಂಗಾ ಆರೋಗ್ಯಕರ ತಿನಿಸು. ಆರೋಗ್ಯಕರ ಕೊಬ್ಬನ್ನು ಹೊಂದಿರುವ ಶೇಂಗಾ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಶೇಂಗಾವನ್ನು ಹುರಿದು,ನಿಮಗಿಷ್ಟದ ಮಸಾಲೆ ಸೇರಿಸಿ ಸವಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ