ಶ್ವಾಸಕೋಶದ ಕ್ಯಾನ್ಸರ್: ಆರಂಭದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಇತ್ತೀಚಿನ ದಿನಗಳಲ್ಲಿ 40 ರಿಂದ 60ರ ಪ್ರಾಯದ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದೆ.

zahir | news18
Updated:November 12, 2018, 3:30 PM IST
ಶ್ವಾಸಕೋಶದ ಕ್ಯಾನ್ಸರ್: ಆರಂಭದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಇತ್ತೀಚಿನ ದಿನಗಳಲ್ಲಿ 40 ರಿಂದ 60ರ ಪ್ರಾಯದ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದೆ.
  • Advertorial
  • Last Updated: November 12, 2018, 3:30 PM IST
  • Share this:
-ನ್ಯೂಸ್ 18 ಕನ್ನಡ

ವಿಶ್ವದ ಮಾರಣಾಂತಿಕ ಖಾಯಿಲೆಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್​ ಕೂಡ ಒಂದು. ಎಲ್ಲ ಪ್ರಾಯದವರಲ್ಲೂ ಈ ರೋಗ ಇಂದು  ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ಆರೋಗ್ಯದ ಸಮಸ್ಯೆಯಂತೆ ಪ್ರಾರಂಭವಾಗುವ ಈ ರೋಗದ ಬಗ್ಗೆ ಹೆಚ್ಚಿನ ಕಾಳಜಿವಹಿಸಿದರೆ ಖಾಯಿಲೆಯಿಂದ ಪಾರಾಗಬಹುದು ಎನ್ನುತ್ತಾರೆ ವೈದ್ಯರು.

ಅತಿ ಹೆಚ್ಚು ಸಾವಿಗೆ ಕಾರಣವಾಗುವ ಮೊದಲ ಐದು ಕ್ಯಾನ್ಸರ್​ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೂಡ ಸ್ಥಾನ ಪಡೆದಿದ್ದು, 20ನೇ ಶತಮಾನದಲ್ಲಿ ಅತಿ ವಿರಳ ಎಂಬಂತಿದ್ದ ಈ ಕ್ಯಾನ್ಸರ್ ಅತಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.  2012 ರ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಸುಮಾರು 1.8 ಮಿಲಿಯನ್ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಿದೆ.

ಈ ಮಾರಣಾಂತಿಕ ಖಾಯಿಲೆಗೆ ಅನೇಕ ಕಾರಣಗಳಿದ್ದರೂ, ಧೂಮಪಾನ ಮಾಡುವವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಧೂಮಪಾನ ಮಾಡದಿರುವವರಿಗೆ ಹೋಲಿಸಿದರೆ, ಧೂಮಪಾನ ಮಾಡುವವರಲ್ಲಿ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಶೇ. 25-35 ಪಟ್ಟು ಹೆಚ್ಚಾಗಿರುತ್ತದೆ ಎಂಬುದು ವೈದ್ಯಲೋಕದ ಅಭಿಪ್ರಾಯ.

ಭಾರತದಲ್ಲೂ ಶ್ವಾಸಕೋಶದ ಕ್ಯಾನ್ಸರ್​ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಆಂತರಿಕ ಮತ್ತು ಬಾಹ್ಯ ವಾಯುಮಾಲಿನ್ಯ ಕೂಡ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ದೇಶದಲ್ಲಿ ಶೇ.30 ರಿಂದ 40 ರಷ್ಟು ಈ ಶ್ವಾಸಕೋಶ ರೋಗಿಗಳ ಏರಿಕೆಯಾಗಿದ್ದು, ಇದಕ್ಕೆ ಧೂಮಪಾನ, ಮದ್ಯಪಾನ ಮತ್ತು ಜೀವನಶೈಲಿ ಕಾರಣವಾಗಿದೆ. ಅಲ್ಲದೆ ದೆಹಲಿ ಮತ್ತು ಪ್ರಮುಖ ನಗರಗಳಲ್ಲಿ ಕಂಡು ಬರುತ್ತಿರುವ ವಾಯುಮಾಲಿನ್ಯದಿಂದ ಶ್ವಾಸಕೋಶ ಕ್ಯಾನ್ಸರ್ ಉಲ್ಭಣಗೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಟಾಟಾ ಮೆಮೊರಿಯಲ್ ಹಾಸ್ಪಿಟಲ್​ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶೇ.52.1 ರಷ್ಟು ಮಂದಿ ಧೂಮಪಾನಿಗಳಾಗಿರಲಿಲ್ಲ. ಇದೇ ರೀತಿ ಸಿಂಗಪೂರದಲ್ಲಿ ಶೇ.32.5 ಧೂಮಪಾನ ಮಾಡದೇ ಕ್ಯಾನ್ಸರ್​​ ಸಮಸ್ಯೆಗೆ ಒಳಪಟ್ಟಿದ್ದಾರೆ. ಹಾಗೆಯೇ ಧೂಮಪಾನಿಗಳಲ್ಲದ ಕ್ಯಾನ್ಸರ್ ಪೀಡಿತ ಪುರುಷರ ಪ್ರಮಾಣ ಶೇ.41.8ರಷ್ಟಿದ್ದರೆ, ಇಲ್ಲಿ ಮಹಿಳೆಯ ಪ್ರಮಾಣ ಶೇ.88ರಷ್ಟು ಆಗಿತ್ತು. ಇದರಿಂದ ಶ್ವಾಸಕೋಶದ ಕ್ಯಾನ್ಸರ್​ಗೆ ಅನುವಂಶಿಕ ಧಾತು(ಜೆನೆಟಿಕ್) ಮತ್ತು ಪಾರಿಸಾರಿಕಗಳು ಕಾರಣವಾಗುತ್ತದೆ ಎಂಬ ಅಂಶ ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಶ್ವಾಸಕೋಶ ಕ್ಯಾನ್ಸರ್​ನಲ್ಲಿ ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಮತ್ತು ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಕ್ಯಾನ್ಸರ್‌‌ ಬಗೆಯ ಅನುಸಾರ ಚಿಕಿತ್ಸೆಯು ಬದಲಾಗುತ್ತದೆ. ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಗೆ (ನಾನ್‌-ಸ್ಮಾಲ್‌ ಸೆಲ್‌ ಲಂಗ್‌ ಕಾರ್ಸಿನೋಮ-NSCLC) ಶಸ್ತ್ರಚಿಕಿತ್ಸೆ ಮೂಲಕ ಕೆಲವೊಮ್ಮೆ ಪರಿಹಾರ ಕಾಣಬಹುದು. ಹಾಗೆಯೇ ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು (ಸ್ಮಾಲ್‌-ಸೆಲ್‌ ಲಂಗ್‌ ಕಾರ್ಸಿನೋಮ-SCLC) ಸಾಮಾನ್ಯವಾಗಿ ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಸ್ಪಂದಿಸುತ್ತದೆ.ಶ್ವಾಸಕೋಶ ಕ್ಯಾನ್ಸರ್​ನ ಆರಂಭಿಕ ಲಕ್ಷಣ
ಕೆಮ್ಮು: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಮ್ಮು ಒಂದು ವಾರಕ್ಕಿಂತ ಹೆಚ್ಚು ಸಮಯವಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿ. ಅತಿಯಾದ ಶೀತ ಕೂಡ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು.

ಆರೋಗ್ಯದ ಸಮಸ್ಯೆ: ಆಗಾಗ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಕೂಡ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಾಗಿರಬಹುದು.ಅದರಲ್ಲೂ ನಿಯಮಿತವಾಗಿ ಧೂಮಪಾನ ಮಾಡುತ್ತಿರುವವರು ಇಂತಹ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.

ಉಸಿರಾಟದ ಸಮಸ್ಯೆ: ವಿವಿಧ ಕಾರಣಗಳಿಂದ ಉಸಿರಾಟ ಉಂಟಾಗುತ್ತದೆ. ಆದರೆ ಧೂಮಪಾನದಿಂದ ಶುರುವಾಗುವ ಉಸಿರಾಟದ ಸಮಸ್ಯೆ ಅಥವಾ ಒಮ್ಮೊಮ್ಮೆ ಮಾತ್ರ ಕಾಣಿಸಿಕೊಳ್ಳುವ ವಿಪರೀತ ಉಸಿರಾಟದ ತೊಂದರೆ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಹಂತವಾಗಿರುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ಅಂಗಾಂಗಗಳ ಬೇನೆ: ಶ್ವಾಸಕೋಶದ ಕ್ಯಾನ್ಸರ್​ ಆರಂಭಿಕ ಲಕ್ಷಣಗಳಲ್ಲಿ ದೇಹದ ಕೆಲವೊಂದು ಭಾಗಗಳು ನೋಯುತ್ತಿರುತ್ತದೆ. ಎದೆಭಾಗ, ಭುಜಗಳು, ಬೆನ್ನು ಮತ್ತು ಕೈಗಳು ಸೇರಿದಂತೆ ದೇಹದ ವಿವಿಧ ಅಂಗಾಂಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯಾಗಿ ನರಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಕೂಡ ಉಸಿರಾಟದ ಸಮಸ್ಯೆ ಉಂಟಾಗಬಹುದು.

ನ್ಯುಮೋನಿಯ ಮತ್ತು ಬ್ರಾಂಕೈಟಿಸ್: ಧೂಮಪಾನಿಗಳಲ್ಲಿ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಸಮಸ್ಯೆಗಳು ಪತ್ತೆಯಾದರೆ ಅದು ಕೂಡ ಶ್ವಾಸಕೋಶ ಕ್ಯಾನ್ಸರ್​ನ ಆರಂಭಿಕ ಲಕ್ಷಣವಾಗಿರುವ ಸಾಧ್ಯತೆಯಿರುತ್ತದೆ. ಉತ್ತಮ ಚಿಕಿತ್ಸೆ ಪಡೆದರೂ ಈ ಸಮಸ್ಯೆ ಮರುಕಳಿಸುತ್ತಿದ್ದರೆ ಶ್ವಾಸಕೋಶದ ಸಮಸ್ಯೆಗೆ ನೀವು ತುತ್ತಾಗಿರುತ್ತೀರಿ. ಹೀಗಾಗಿ ಆರಂಭದಲ್ಲೇ ಒಳ್ಳೆಯ ಚಿಕಿತ್ಸೆ ಮೂಲಕ ಶ್ವಾಸಕೋಶ ಸಮಸ್ಯೆಯನ್ನು ಹೋಗಲಾಡಿಸಬೇಕಾಗುತ್ತದೆ.

ಧ್ವನಿ ಬದಲಾವಣೆ: ಉಸಿರಾಟದ ತೊಂದರೆ ಅಥವಾ ಶೀತದಿಂದ ನಿಮ್ಮ ಧ್ವನಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದರೆ ಅದು ಕೂಡ ಕ್ಯಾನ್ಸರ್​ನ ಆರಂಭಿಕ ಲಕ್ಷಣವಾಗಿರಬಹುದು. ದೇಹದಲ್ಲಿನ ನರಗಳ ಮೇಲೆ ಶ್ವಾಸಕೋಶ ಕ್ಯಾನ್ಸರ್​ ಪ್ರಭಾವ ಬೀರಿದಾಗ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಿರಂತರ ಸ್ವರದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಉಬ್ಬಸ: ನಿದ್ದೆಯ ವೇಳೆಯಲ್ಲಿ ಸೀಟಿ ಹೊಡೆಯುವಂತೆ ಉಸಿರಾಡುವುದು ಕೂಡ ಶ್ವಾಸಕೋಶ ಕ್ಯಾನ್ಸರ್​ನ ಲಕ್ಷಣವಾಗಿರಬಹುದು. ಇದನ್ನು ನಿದ್ರೆಯ ಸಮಸ್ಯೆಯೆಂದು ನಿರ್ಲಕ್ಷ್ಯವಹಿಸದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ನಿಯಂತ್ರಣ ಹೇಗೆ?
ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಂಡರೆ ಮೊದಲ ಹಂತದಿಂದಲೇ ಚಿಕಿತ್ಸೆ ಪಡೆಯುವ ಮೂಲಕ ರೋಗದಿಂದ ಮುಕ್ತಿ ಹೊಂದಬಹುದು. ಆದರೆ ನಾಲ್ಕನೇ ಹಂತವನ್ನು ದಾಟಿದ ಬಳಿಕ ಕ್ಯಾನ್ಸರ್ ಪೀಡಿತರನ್ನು ಬದುಕಿಸುವುದು ತುಸುಕಷ್ಟ ಎನ್ನಲಾಗುತ್ತದೆ.

ಈ ಅಪಾಯಕಾರಿ ರೋಗದ ಸಂಭವನೀಯ ಕಾರಣಗಳಾದ ತಂಬಾಕು ಸೇವನೆ, ಧೂಮಪಾನ, ಅಧಿಕ ಕೊಬ್ಬಿನಾಂಶ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ವ್ಯಾಯಾಮದ ಕೊರತೆ, ಮದ್ಯಪಾನ, ವಾಯು ಮಾಲಿನ್ಯ ಇವುಗಳಿಂದ ದೂರವಿದ್ದಷ್ಟು ಶ್ವಾಸಕೋಶ ಕ್ಯಾನ್ಸರ್​ನ್ನು ತಡೆಗಟ್ಟಬಹುದು.

ಅಲ್ಲದೆ ವೈದ್ಯಕೀಯ ಸೌಕರ್ಯಗಳ ಬಳಕೆ ಹಾಗು ಪ್ರಾಥಮಿಕ ಚಿಕಿತ್ಸೆಯಿಂದಲೇ ನಿರ್ಮೂಲನಾ ಕ್ರಮ ಕೈಗೊಳ್ಳಬೇಕಾಗಿದೆ. ಕೆಲವು ಜನರಿಗೆ ಪ್ರಾರಂಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ರೋಗ ಉಲ್ಭಣಗೊಳ್ಳುತ್ತದೆ. ಹೀಗಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಸೂಕ್ತ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡುವುದು ಉತ್ತಮ.

ವೈದ್ಯಲೋಕದ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಶ್ವಾಸಕೋಶದ ಶಸ್ತ್ರ ಚಿಕಿತ್ಸೆಯ ಮೂಲಕ ಕ್ಯಾನ್ಸರ್​ ರೋಗಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಈ ರೋಗದ ಹಂತಗಳಿಗೆ ಅನುಗುಣವಾಗಿ ರೆಡಿಯೇಷನ್ ಥೆರೆಪಿ, ಚೆಮೊಥೆರಮಿ, ರೇಡಿಯೊಸರ್ಜರಿ ಮತ್ತು ಇಮ್ಯುನೊಥೆರಪಿ ಎಂಬ ಚಿಕಿತ್ಸಾ ವಿಧಾನಗಳಿವೆ.

ಅಂದಹಾಗೆ ಶ್ವಾಸಕೋಶದ ಕ್ಯಾನ್ಸರ್​ಗೆ ಯಾವುದೇ ವಯೋಮಿತಿಯಿಲ್ಲ. ಈ ರೋಗವು ಪುಟ್ಟ ಮಗುವಿನಿಂದ ಹಿಡಿದು ಹಿರಿಯರಲ್ಲೂ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ 40 ರಿಂದ 60ರ ಪ್ರಾಯದ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದೆ. ಇದರ ಹೊರತಾಗಿ 19 ರಿಂದ 40ರ ಹರೆಯದವರಲ್ಲಿ ಈ ರೋಗ ಲಕ್ಷಣಗಳು ವಿಪರೀತವಾಗಿ ಕಂಡು ಬರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
First published:November 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ