ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದೇ (Health) ಎಲ್ಲಕ್ಕಿಂತಲೂ ಮಹತ್ತರವಾದ ಸಂಪತ್ತಾಗಿದೆ. ಕಂಡು ಕೇಳರಿಯದ ಸಾಂಕ್ರಾಮಿಕ ರೋಗಗಳು (Corona Virus), ಜೀವನ ಶೈಲಿಯಲ್ಲಿರುವ ಒತ್ತಡ, ಹೃದ್ರೋಗ (Heart Disease) ಹೀಗೆ ಒಂದರ ಮೇಲೊಂದರಂತೆ ಕಾಯಿಲೆಗಳು ದಾಳಿ ಮಾಡುತ್ತಲೇ ಇವೆ. ಹೊಸ ಹೊಸ ಔಷಧಗಳು ಈ ಕಾಯಿಲೆಗಳಿಗೆ ಪರಿಹಾರವನ್ನು ನೀಡುತ್ತವೆಯಾದರೂ ಈ ಕಾಯಿಲೆಗಳಿಂದ ಬಳಲುವವರು ಮಾತ್ರ ಮಾನಸಿಕವಾಗಿ (Mentally) ಹಾಗೂ ದೈಹಿಕವಾಗಿ (Physically) ಬಳಲುತ್ತಾರೆ ಎಂಬುದಂತೂ ನಿಜ. ಇದೀಗ ಹೃದಯಾಘಾತ ಹಾಗೂ ಸ್ಟೆಂಟಿಂಗ್ಗೆ (ರಕ್ತನಾಳ, ಕಾಲುವೆ ಅಥವಾ ನಾಳದೊಳಗೆ ತಾತ್ಕಾಲಿಕವಾಗಿ ಇರಿಸಲಾಗಿರುವ ಕೊಳವೆಯಾಕಾರದ ಸಾಧನ) ಅಳವಡಿಸಿಕೊಂಡಿರುವ ರೋಗಿಗಳಿಗಾಗಿ ಮಹತ್ವದ ಸೂಚನೆಯನ್ನು ವೈದ್ಯರು ನೀಡಿದ್ದಾರೆ.
ಕೊಲೆಸ್ಟ್ರಾಲ್ ಮಾತ್ರೆ ತ್ಯಜಿಸಬಾರದು ಏಕೆ?
ಹೆಚ್ಚಾಗಿ ಈ ಕಾಯಿಲೆಯಿಂದ ಗುಣ ಹೊಂದಿದವರು ಇನ್ನು ಮುಂದೆ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಔಷಧಿಯನ್ನು ಸೇವಿಸಬೇಕಾಗಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಈ ಔಷಧಗಳನ್ನು ಬಿಟ್ಟುಬಿಡುವುದು, ಸೇವಿಸದೇ ಇರುವುದು ಇನ್ನಷ್ಟು ಅಪಾಯಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಾಯ ಕಟ್ಟಿಟ್ಟ ಬುತ್ತಿ ವೈದ್ಯರ ಎಚ್ಚರಿಕೆ
ತಮ್ಮ ಸಮಸ್ಯೆಗೆ ಪರಿಹಾರ ದೊರಕಿದೆ ಹಾಗೂ ಇನ್ನು ಮುಂದೆ ಹೃದ್ರೋಗ ಸಂಬಂಧಿತ ಔಷಧಿಗಳನ್ನು ಸೇವಿಸಬೇಕಾಗಿಲ್ಲ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಆದರೆ ಜನರು ಹೀಗೆ ಮಾಡುವ ಮೂಲಕ ತಮ್ಮನ್ನು ಅತಿದೊಡ್ಡ ವಿಪತ್ತಿಗೆ ಒಡ್ಡಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿಗಳೇನು?
JAMA ಕಾರ್ಡಿಯಾಲಜಿಯಲ್ಲಿನ ಅಧ್ಯಯನವೊಂದನ್ನು ತಜ್ಞರು ಹಂಚಿಕೊಂಡಿದ್ದು, ಸುಮಾರು 66 ರ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾದ 60,000 ಜನರು ಹೃದಯಾಘಾತದ ನಂತರ ಕೊಲೆಸ್ಟ್ರಾಲ್ ಸಂಬಂಧಿತ ಔಷಧಗಳ ಸೇವನೆಯನ್ನು ನಿಲ್ಲಿಸಿದ್ದಾರೆ ಎಂಬುದಾಗಿ ವರದಿ ಮಾಡಿದ್ದಾರೆ.
ಕೆಲವರು ಈ ಔಷಧಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ ಇನ್ನು ಕೆಲವರು ಪೂರ್ತಿಯಾಗಿ ಔಷಧ ಸೇವನೆಯನ್ನೇ ನಿಲ್ಲಿಸಿಬಿಟ್ಟಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ತಮಗೆ ನೀಡಿರುವ ಚಿಕಿತ್ಸೆಯೇ ಸಾಕಾಗುತ್ತದೆ ಎಂಬುದನ್ನು ತಮ್ಮಷ್ಟಕ್ಕೆ ನಿರ್ಧರಿಸಿ ಈ ಹಿರಿಯ ನಾಗರಿಕರು ಔಷಧ ಸೇವನೆಯನ್ನು ನಿಲ್ಲಿಸಿದ್ದಾರೆ. ಔಷಧವನ್ನು ಬಿಡುವ ಮುನ್ನ ವೈದ್ಯರ ಸಮಾಲೋಚನೆಯನ್ನು ನಡೆಸಿಲ್ಲ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.
ಜೀವನ ಪರ್ಯಂತ ಔಷಧ ಸೇವನೆ ಕಡ್ಡಾಯ
ತಜ್ಞರು ಹೇಳುವಂತೆ ಒಬ್ಬ ವ್ಯಕ್ತಿ ಹೃದಯಾಘಾತ ಹಾಗೂ ಸ್ಟ್ರೋಕ್ಗೆ ಒಳಗಾದ ನಂತರ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಔಷಧಿ ಅಥವಾ ಕೊಬ್ಬು, ರಕ್ತದಲ್ಲಿನ ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುವ ಔಷಧಗಳ ಸೇವನೆಯನ್ನು ಜೀವನ ಪರ್ಯಂತ ಮುಂದುವರಿಸಬೇಕು ಎಂದು ತಿಳಿಸಿದ್ದಾರೆ. ಇದರಿಂದ ಮುಂದೊದಗಲಿರುವ ಅಪಾಯವನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಈ ಔಷಧಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿರುವ ವೈದ್ಯರು ಕೊಲೆಸ್ಟ್ರಾಲ್ ಉಂಟುಮಾಡುವ ವಸ್ತುವನ್ನು ನಿರ್ಬಂಧಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಜೊತೆಗೆ ರಕ್ತನಾಳಗಳ ಗೋಡೆಗಳ ಮೇಲೆ ಸಂಗ್ರಹವಾಗುವ ಕೊಬ್ಬನ್ನು ತಡೆಹಿಡಿಯುತ್ತವೆ ಇದರಿಂದ ರಕ್ತಹೆಪ್ಪುಗಟ್ಟುವುದಿಲ್ಲ ಎಂದು ತಿಳಿಸಿದ್ದಾರೆ.
ರಕ್ತದ ಹೆಪ್ಪುಗಟ್ಟುವಿಕೆ ರಕ್ತನಾಳದ ಎಲ್ಲಿ ಬೇಕಾದರೂ ಸಂಭವಿಸಬಹುದು.
ರಕ್ತದ ಹೆಪ್ಪುಗಟ್ಟುವಿಕೆ ಹೃದಯದಲ್ಲಿಯೇ ಉಂಟಾಗಬೇಕೆಂದೇನಿಲ್ಲ ಎಂದು ತಿಳಿಸಿರುವ ವೈದ್ಯರು, ಹೃದಯ ರಕ್ತನಾಳ ವ್ಯವಸ್ಥೆಯ ಯಾವುದೇ ಅಪಧಮನಿಯಲ್ಲಿ ಸಂಭವಿಸಬಹುದು ಎಂದು ಹೇಳಿದ್ದಾರೆ.
ಇದರಿಂದ ಮೆದುಳಿನಲ್ಲಿ ಸ್ಟ್ರೋಕ್ ಉಂಟಾಗಿ ಇದು ವ್ಯಾಪಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಮೂತ್ರಪಿಂಡದ ಅಪಧಮನಿಗಳಲ್ಲಿನ ಅಡಚಣೆಗಳು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Heart Attack Symptoms: ಹೃದಯಾಘಾತಕ್ಕೂ ಮುನ್ನ ಈ ಲಕ್ಷಣಗಳು ಕಂಡು ಬರುತ್ತವೆ, ನಿರ್ಲಕ್ಷಿಸಬೇಡಿ
ಕೊಬ್ಬಿನ ಸಂಗ್ರಹವು ಅಪಧಮನಿಗಳಿಗೆ ತಡೆಯನ್ನುಂಟು ಮಾಡುವುದರಿಂದ ತಾಜಾ ರಕ್ತ ದೇಹದ ಕೆಳಗಿನ ಅಂಗಗಳು ಹಾಗೂ ಅಂಗಾಂಶಗಳನ್ನು ತಲುಪುವುದಿಲ್ಲ ಫಲಿತಾಂಶವಾಗಿ ಕಾಲ್ಬೆರಳು ಹಾಗೂ ಪಾದಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಇದರಿಂದ ಸಂಪೂರ್ಣ ಕಾಲುಗಳನ್ನು ಹಾಗೂ ಬೆರಳುಗಳನ್ನೇ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದಿದ್ದಾರೆ.
ಔಷಧಗಳ ಸೇವನೆಯನ್ನು ಏಕೆ ನಿಲ್ಲಿಸಬಾರದು?
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಗಳು ಹಾಗೂ ಕೊಬ್ಬಿನ ಔಷಧಗಳನ್ನು, ಹೃದಯಾಘಾತಕ್ಕೆ ಒಳಗಾದವರು ಜೀವಿತಾವಧಿಯವರೆಗೂ ತೆಗೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿಮ್ಮ ಎಲ್ಡಿಎಲ್ (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) 70 mg/dL ಗಿಂತ ಕಡಿಮೆ ಇದ್ದರೆ ಅಪಾಯ ಕಡಿಮೆ ಎಂದು ತಿಳಿಸಿರುವ ವೈದ್ಯರು, 35 ವಯಸ್ಸಿನವರಾಗಿದ್ದು ಹೃದಯ ಸಮಸ್ಯೆಯನ್ನು ಹೊಂದಿದ್ದರೆ ಎಲ್ಡಿಎಲ್ ಮಟ್ಟ 50 mg/dL ಗಿಂತ ಕಡಿಮೆ ಇರಬೇಕು ಹಾಗೂ ಈ ಸಮಯದಲ್ಲಿ ಔಷಧಗಳನ್ನು ತೆಗೆದುಕೊಳ್ಳುವ ಮೂಲಕ ಈ ಮಟ್ಟವನ್ನು ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ