ಭಾರತೀಯ ಅಡುಗೆಗಳಲ್ಲಿ (Cooking) ಎಲ್ಲರೂ ಸಾಮಾನ್ಯವಾಗಿ ಕರಿಬೇವು (Curry Leaves) ಬಳಸುತ್ತಾರೆ. ಅಡುಗೆಗೆ ಹಾಕುವ ಒಗ್ಗರಣೆಗೆ ಕರಿಬೇವಿಲ್ಲದಿದ್ದರೆ ಸೊಗಸೇ ಇಲ್ಲ ಎನ್ನಬಹುದು. ಭಕ್ಷ್ಯಗಳಿಗೆ ಕೊನೆಯಲ್ಲಿ ನೀಡುವ ಕರಿಬೇವಿನ ಒಗ್ಗರಣೆಯಿಂದ ಅಡುಗೆಗೆ ಮತ್ತಷ್ಟು ರುಚಿ ಬರುತ್ತದೆ ಎನ್ನುವುದು ಒಪ್ಪುವ ಮಾತೇ. ಹೌದು, ಕರಿ ಪತ್ತಾ ಎಂದೂ ಕರೆಯಲ್ಪಡುವ ಈ ಕರಿಬೇವಿನ ಎಲೆಗಳು ಭಕ್ಷ್ಯಗಳ ಪರಿಮಳವನ್ನು (Aroma) ಹೆಚ್ಚಿಸುವುದಲ್ಲದೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನೂ (Health Benefits) ಹೊಂದಿದೆ.
ಹೌದು, ನಾವು ಬರೀ ಕರಿಬೇವಿನ ಎಲೆ! ಎಂದುಕೊಳ್ಳುತ್ತೇವೆ. ಆದರೆ ಇದೇ ಕರಿಬೇವಿನ ಎಲೆಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ತೂಕ ನಷ್ಟ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುವುದರಿಂದ ಹಿಡಿದು ಬೆಳಗಿನ ಅನಾರೋಗ್ಯ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುವವರೆಗೆ ಅದರ ಆರೋಗ್ಯ ಪ್ರಯೋಜನಗಳ ಪಟ್ಟಿ ವಿಸ್ತಾರವಾಗಿದೆ.
ಇದನ್ನೂ ಓದಿ: Drumstick Recipe: ನುಗ್ಗೆಕಾಯಿಯಿಂದ ಈ ರೀತಿ ಖಾರವಾದ ಗೊಜ್ಜು ಮಾಡಿ, ಅನ್ನದ ಜೊತೆ ಚಪ್ಪರಿಸಿ ತಿನ್ನಿ
ಆಹಾರ ತಜ್ಞ ಮ್ಯಾಕ್ ಸಿಂಗ್ ಅವರು ಕರಿಬೇವಿನ ಎಲೆಗಳ ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಕರಿಬೇವಿನ ಪ್ರಮುಖವು ಪ್ರಯೋಜನಗಳನ್ನು ಹೈಲೈಟ್ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ಅವುಗಳ ಸಮಗ್ರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. "ಕರಿಬೇವಿನ ಎಲೆಗಳು ಯಾವುದೇ ಭಾರತೀಯ ಆಹಾರದಲ್ಲಿ ಬಳಸುವ ನೈಸರ್ಗಿಕ ಸುವಾಸನೆ ವರ್ಧಕವಾಗಿದೆ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಕರಿಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು
1. ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ: ಕರಿಬೇವಿನ ಎಲೆಗಳ ಪರಿಣಾಮಕಾರಿತ್ವದ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡಲಾಗಿದೆ. “ಆ್ಯಂಟಿ ಬಯೋಸಿಟಿ ಆ್ಯಂಡ್ ಲಿಪಿಡ್ ಲೊವರಿಂಗ್ ಇಫೆಕ್ಟ್ಸ್ ಆಫ್ ಮುರ್ರಾಯ ಕೊಯೆನಿಗಿಯ” ಸಂಶೋಧನೆಯಲ್ಲಿ ಈ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.
ಈ ಅಧ್ಯಯನದಲ್ಲಿ ಕಂಡುಬಂದಂತೆ ಕರಿಬೇವಿನ ಎಲೆಗಳಲ್ಲಿ ಇರುವಂತಹ ಕಾರ್ಬಜೋಲ್ ಆಲ್ಕಲಾಯ್ಡ್ಸ್ ಸಂಯುಕ್ತವು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಲ್ಲದೇ ಸ್ಥೂಲಕಾಯತೆಯನ್ನು ಉತ್ತೇಜಿಸುವ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಈ ಎಲೆಗಳು ಸಹಾಯ ಮಾಡುತ್ತದೆ.
2. ಮಾನಿಂಗ್ ಸಿಕ್‌ನೆಸ್ ಕಡಿಮೆ ಮಾಡಲು ಸಹಕಾರಿ : ಕರಿಬೇವಿನ ಎಲೆಗಳು ಕಾರ್ಮಿನೇಟಿವ್ ಗುಣವನ್ನು ಹೊಂದಿವೆ. ಅಂದರೆ ಅವು ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ ಮತ್ತು ವಾಯುವನ್ನು ಗುಣಪಡಿಸುತ್ತದೆ.
ಅದರಲ್ಲೂ ಪ್ರಮುಖವಾಗಿ ಗರ್ಭಿಣಿಯರಲ್ಲಿ ಕಂಡುಬರುವ ಬೆಳಗಿನ ಅನಾರೋಗ್ಯ ಮತ್ತು ವಾಕರಿಕೆಗೆ ಅಜೀರ್ಣವೇ ಪ್ರಮುಖ ಕಾರಣವಾಗಿದೆ. ಆದರೆ ಕರಿಬೇವಿನ ಎಲೆಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಹಕಾರಿ.
3. ನಂಜು ನಿರೋಧಕದಂತೆ ಕೆಲಸ ಮಾಡುತ್ತದೆ: ಕರಿಬೇವಿನ ಎಲೆಗಳು ನಂಜುನಿರೋಧಕ ಗುಣಗಳನ್ನು ಹೊಂದಿರುವುದರಿಂದ, ಅವುಗಳ ಪೇಸ್ಟ್ ಅನ್ನು ಸುಟ್ಟಗಾಯಗಳು, ಗಾಯಗಳು, ಚರ್ಮದ ತೊಂದರೆಗಳಿಗೆ ಹಚ್ಚಬಹುದು.
ಕರಿಬೇವಿನ ಪೇಸ್ಟ್ಅನ್ನು ಜೇನುನೊಣಗಳು ಕಡಿದಂತಹ ಸಂದರ್ಭದಲ್ಲಿ ಹಾಗೂ ವಿಷಕಾರಿ ಸರೀಸೃಪಗಳ ಕಡಿತದಂತಹ ಸಂದರ್ಭದಲ್ಲಿ ಸಹ ಬಳಸುವಂಥ ಔಷಧವಾಗಿದೆ. ಇದಲ್ಲದೆ, ಇದು ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲೂ ಸಹಾಯ ಮಾಡುತ್ತದೆ.
4. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ಸಂಶೋಧನೆಗಳಲ್ಲಿ ಸಾಬೀತಾಗಿರುವಂತೆ, ಕರಿಬೇವಿನ ಎಲೆಗಳಲ್ಲಿ ಇರುವ ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವನ್ನು ತಡೆಯುತ್ತದೆ.
ಇದು ಕೆಟ್ಟ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ. ಆದ್ದರಿಂದ ನೀವು ಕರಿಬೇವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಅಸ್ವಸ್ಥತೆಗಳ ಅಪಾಯವನ್ನು ತಡೆಯಬಹುದಾಗಿದೆ.
5. ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುತ್ತದೆ: ಕರಿಬೇವಿನ ಎಲೆಗಳು ಇ.ಕೋಲಿ ಮತ್ತು ಸ್ಟ್ಯಾಫಿಲೋಕೊಕಸ್ ಆರಿಯಸ್‌ನಂತಹ ಬ್ಯಾಕ್ಟೀರಿಯಾದ ತಳಿಗಳಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುತ್ತವೆ ಎಂದು ತಿಳಿದುಬಂದಿದೆ.
ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಮತ್ತು ಇನ್ನೊಂದು ಸಂಯುಕ್ತ ಲಿನೂಲ್, ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ. ಆದ್ದರಿಂದ ಕರಿಬೇವು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡುವಂಥ ಅಪರೂಪದ ಗುಣವನ್ನು ಹೊಂದಿದೆ.
6. ಯಕೃತ್ತನ್ನು ರಕ್ಷಿಸುತ್ತದೆ: ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಮತ್ತು ಟ್ಯಾನಿನ್‌ಗಳು ಎಂಬ ಸಂಯುಕ್ತಗಳು ಯಕೃತ್ತಿಗೆ ಹೆಪಟೊಪ್ರೊಟೆಕ್ಟಿವ್ ಪರಿಣಾಮಗಳನ್ನು ನೀಡುತ್ತವೆ. ಯಕೃತ್ತಿನ ಸಿರೋಸಿಸ್ನ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಕರಿಬೇವಿನ ಎಲೆಗಳು ಸಹಾಯಕವಾಗಿವೆ.
7. ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ: ಕರಿಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ಇದು ವರದಾನ ಎಂದು ಪರಿಗಣಿಸಲಾಗಿದೆ.
8. ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುತ್ತದೆ: ಕರಿಬೇವಿನ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ (830 mg/100 g) ಇರುತ್ತದೆ. ಇದರಿಂದಾಗಿ ಕರಿಬೇವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ತುಂಬಲು ಸಹಾಯಕವಾಗುತ್ತದೆ.
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ತೂಕ ನಷ್ಟ!
ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಸಲಹೆಗಾರ, ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞರಾದ ಪ್ರತೀಕ್ಷಾ ಕದಮ್ ಅವರು ಕರಿಬೇವಿನ ಎಲೆಗಳು ತೂಕನಷ್ಟಕ್ಕೆ ಸಹಾಯಕವಾಗಿವೆ ಎನ್ನುತ್ತಾರೆ.
“ಕರಿಬೇವಿನ ಎಲೆಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಅಲ್ಲದೇ ಇವು ಫೈಬರ್‌ನ ಉತ್ತಮ ಮೂಲವಾಗಿದೆ. ಹೆಚ್ಚುವರಿಯಾಗಿ, ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಇದು ತೂಕ ನಿರ್ವಹಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು” ಎಂಬುದಾಗಿ ಹೇಳುತ್ತಾರೆ.
ಆದಾಗ್ಯೂ, ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ತಕ್ಷಣವೇ ತೂಕ ನಷ್ಟವಾಗುವುದಿಲ್ಲ ಎಂಬುದನ್ನೂ ಗಮನದಲ್ಲಿರಿಸಬೇಕು ಎಂದು ಅವರು ಹೇಳಿದ್ದಾರೆ.
"ತೂಕ ನಷ್ಟವನ್ನು ಸಾಧಿಸಲು, ಆರೋಗ್ಯಕರ ಮತ್ತು ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ನಿದ್ರೆಯಂತಹ ಇತರ ಸಾಕಷ್ಟು ಜೀವನಶೈಲಿಯ ಅಂಶಗಳ ಮೇಲೆ ಕೇಂದ್ರೀಕರಿಸುವುದು, ಒತ್ತಡ ರಹಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ" ಎಂದು ಪ್ರತೀಕ್ಷಾ ಕದಮ್ ಹೇಳುತ್ತಾರೆ.
ಕರಿಬೇವು ತೂಕ ನಷ್ಟಕ್ಕೆ ಹೇಗೆ ಸಹಕಾರಿ?
ಹಾಗಿದ್ರೆ ಕರಿಬೇವಿನ ಎಲೆಗಳು ತೂಕ ನಷ್ಟಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಇದಕ್ಕೆ ಉತ್ತರವಾಗಿ ಹೈ-ಟೆಕ್ ಸಿಟಿಯ ಕೇರ್ ಹಾಸ್ಪಿಟಲ್ಸ್, ಹಿರಿಯ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞರಾದ ಸಮೀನಾ ಅನ್ಸಾರಿ, ಅವರು ವಿವರಣೆಯನ್ನು ನೀಡುತ್ತಾರೆ.
ಅವರು ಹೇಳುವ ಪ್ರಕಾರ “ಕರಿಬೇವಿನ ಎಲೆಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅವು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ ಮತ್ತು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ.
ಕರಿಬೇವಿನ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂಬುದಾಗಿ ಹೇಳುತ್ತಾರೆ.
ಅಲ್ಲದೇ “ಕರಿಬೇವಿನ ಎಲೆಗಳು ಕಣ್ಣುಗಳು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಹೆಚ್ಚುವರಿಯಾಗಿ, ಅವು ಕಾರ್ಬಜೋಲ್ ಆಲ್ಕಲಾಯ್ಡ್‌ಗಳನ್ನು ಒಳಗೊಂಡಿರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡಬಹುದು.
ಇದು ಬೊಜ್ಜು-ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಅಲ್ಲದೇ ಕರಿಬೇವಿನ ಎಲೆಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ತೂಕ ನಷ್ಟಕ್ಕೆ ಸಹ ಸಹಾಯ ಮಾಡುತ್ತದೆ” ಎಂಬುದಾಗಿ ಸಮೀನಾ ಅನ್ಸಾರಿ ಹೇಳುತ್ತಾರೆ.
ಕರಿಬೇವು ಸೇವಿಸುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ
ಕರಿಬೇವಿನ ಎಲೆಗಳು ಸಾಮಾನ್ಯವಾಗಿ ಸೇವಿಸಲು ಸುರಕ್ಷಿತವಾಗಿದ್ದರೂ, ಅವುಗಳನ್ನು ಸೇವಿಸುವ ಮುನ್ನ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಹಾಗಾಗಿ ಅನ್ಸಾರಿಯವರು ಈ ಕುರಿತಾದ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ.
*ಯಾವುದೇ ಕೊಳೆ ಅಥವಾ ಕೀಟನಾಶಕಗಳನ್ನು ತೆಗೆದುಹಾಕಲು ಕರಿಬೇವಿನ ಎಲೆಗಳನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯಬೇಕು.
*ಅವುಗಳನ್ನು ಮಿತವಾಗಿ ಸೇವಿಸಬೇಕು, ಏಕೆಂದರೆ ಅವು ಕಹಿ ರುಚಿಯನ್ನು ಹೊಂದಿರುತ್ತವೆ. ಇದು ಕೆಲವರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
* ಗರ್ಭಿಣಿಯರು ಮತ್ತು ಕೆಲವು ಆರೋಗ್ಯ ತೊಂದರೆಗಳನ್ನು ಹೊಂದಿರುವಂಥ ವ್ಯಕ್ತಿಗಳು ಕರಿಬೇವಿನ ಎಲೆಗಳು ಅಥವಾ ಯಾವುದೇ ಇತರ ಗಿಡಮೂಲಿಕೆ ಪರಿಹಾರಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
ಒಟ್ಟಾರೆ, ಭಾರತೀಯರು ಅಡುಗೆಯಲ್ಲಿ ಬಳಸುವಂಥ ಎಲ್ಲ ಪದಾರ್ಥಗಳಲ್ಲೂ ಒಂದಲ್ಲ ಒಂದು ವಿಶಿಷ್ಟ ಆರೋಗ್ಯ ಗುಣಗಳಿರುತ್ತವೆ. ಅದರಲ್ಲೂ ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವಂಥ ಕರಿಬೇವಿನ ಎಲೆಗಳಲ್ಲಿ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ.
ಮಧುಮೇಹ, ಕೊಲೆಸ್ಟ್ರಾಲ್, ನಂಜು ನಿರೋಧಕ, ತೂಕ ನಷ್ಟಕ್ಕೆ ಸಹಾಯಕ, ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವಾಗುವಂಥ, ಕಣ್ಣಿಗೆ, ಕೂದಲಿಗೆ ಒಳ್ಳೆಯದು ಎನ್ನುವ ಈ ಕರಿಬೇವು ಒಂದು ವಿಶಿಷ್ಟ ಗುಣವಿರುವ ಸೊಪ್ಪು ಅಂತಲೇ ಹೇಳಬಹುದು.
ಅನೇಕರು ಇದೇನು ಬರೀ ಕರಿಬೇವಿನ ಸೊಪ್ಪು ಎಂದು ಅಸಡ್ಡೆ ಮಾಡುತ್ತಾರೆ. ಆದರೆ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡ ಮೇಲೆ ಅಡುಗೆಗಳಲ್ಲಿ ಬಳಸಲಾಗಿರುವ ಕರಿಬೇವನ್ನು ತಿನ್ನದೇ ಪಕ್ಕಕ್ಕೆ ತೆಗೆದಿಡುವ ಮುನ್ನ ಯೋಚಿಸಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ