Weight Loss: ಡಯಟ್ ಮತ್ತು ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಇಲ್ಲಿವೆ ಸುಲಭ ವಿಧಾನಗಳು..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಥೂಲಕಾಯಿಗಳು ಸಫೂರವಾಗಲು ಹಾಗೂ ಸಪೂರವಾಗಿರುವವರು ದಪ್ಪಗಾಗುವ ಪ್ರಯತ್ನದಲ್ಲಿರುತ್ತಾರೆ. ಅದರಲ್ಲೂ ದಪ್ಪಗಿರುವವರು ತೂಕ ಇಳಿಸಿಕೊಳ್ಳಲು ಡಯಟ್​... ವ್ಯಾಯಾಮ... ಅಂತ ಮಾಡುತ್ತಲೇ ಇರುತ್ತಾರೆ. ವ್ಯಾಯಾಮ ಹಾಗೂ ಡಯಟ್​ ಇಲ್ಲದೆ ತೂಕ ಇಳಿಸಿಕೊಳ್ಳುವ ಕೆಲವು ವಿಧಾನಗಳು.

  • Share this:

ಕೆಲವರು ಆರೋಗ್ಯದ ದೃಷ್ಟಿಯಿಂದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇನ್ನೂ ಕೆಲವರು ದೇಹದ ಸೌಂದರ್ಯ ಹೆಚ್ಚಿಸಿಕೊಳ್ಳುವ ಕಾರಣದಿಂದ ತೆಳ್ಳಗಾಗಲು ಮುಂದಾಗುತ್ತಾರೆ. ತೂಕ ಇಳಿಸಬೇಕೆಂದು (Weight Loss), ನಿರ್ದಿಷ್ಟ ಆಹಾರ ಕ್ರಮವನ್ನು (Diet) ದೀರ್ಘ ಕಾಲದವರೆಗೆ ಅನುಸರಿಸುವುದು ತುಂಬಾ ಕಷ್ಟ. ಇನ್ನು ಒತ್ತಡದ  ಬದುಕಿನಲ್ಲಿ ವ್ಯಾಯಮಕ್ಕೆಂದು ಸಮಯ ಮೀಸಲಿಡುವುದು ಕೂಡ ಅಷ್ಟು ಸುಲಭವಲ್ಲ. ಹಾಗಾದರೆ ಇದ್ಯಾವುದನ್ನು ಮಾಡದೆ ತೂಕ ಇಳಿಸುವುದು ಸಾಧ್ಯವೇ..? ಖಂಡಿತಾ ಸಾಧ್ಯ! ದೇಹದ ತೂಕ ಇಳಿಕೆಗೆ ಹಲವಾರು ವಿಧಾನಗಳನ್ನು ಅನುಸರಿಸಬಹುದು. ಈ ಲೇಖನದಲ್ಲಿ ಯಾವುದೇ ಡಯಟ್ ಅಥವಾ ವ್ಯಾಯಾಮ ಇಲ್ಲದೆ ತೂಕ ಇಳಿಸುವ 14 ವಿಧಾನಗಳನ್ನು ತಿಳಿಸಲಾಗಿದೆ.


1. ಪಾಕ ಪ್ರವೀಣರಾಗಿ:  ತರಾವರಿ ಅಡುಗೆಗಳನ್ನು ಕಲಿಯುವುದರಿಂದ ತೂಕ ಇಳಿಕೆ ಸಾಧ್ಯ. ಊಟ ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡದೆಯೇ ತೂಕ ಇಳಿಸಿಕೊಳ್ಳಬೇಕೆಂದರೆ, ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವುದನ್ನು ಕಲಿಯಿರಿ. ತರಾವರಿ ಅಡುಗೆಯನ್ನು ಮಾಡಲು ತಿಳಿದಿರುವವರು, ಸಾಮಾನ್ಯವಾಗಿ ವಿವಿಧ ಪ್ರಕಾರದ ಹಣ್ಣು ತರಕಾರಿ ಸೇರಿದಂತೆ ಹೆಚ್ಚು ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇವಿಸುತ್ತಾರೆ, ಅದರಿಂದ ತೂಕ ಇಳಿಕೆ ಸುಲಭ. ಸರಿಯಾಗಿ ಅಡುಗೆ ಮಾಡಲು ಗೊತ್ತಿಲ್ಲ ಎಂದರೆ, ಬಹುಶ: ಬೊಜ್ಜು ಖಾತರಿ ಎನ್ನತೊಡಗಿದ್ದಾರೆ ಸಂಶೋಧಕರು.


ಸಾಂದರ್ಭಿಕ ಚಿತ್ರ


2. ಹೆಚ್ಚು ಪ್ರೋಟೀನ್ ತಿನ್ನಿ: ಪ್ರೋಟೀನ್, ಬೆಳವಣಿಗೆ ಮತ್ತು ಸರಿಯಾದ ಚಯಾಪಚಯ ಕ್ರಿಯೆಗೆ ಸಹಕರಿಸುವ, ಆರೋಗ್ಯಕರ ಆಹಾರ ಕ್ರಮದ ಭಾಗ. ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗುವುದು, ಹಾಗಾಗಿ ಬಹಳ ಬೇಗ ಹಸಿವಾಗುವುದಿಲ್ಲ. ಚಿಕ್ಕ ವಯಸ್ಸಿನ ಮಹಿಳೆಯರ ಮೇಲೆ ನಡೆಸಿದ ಸಣ್ಣ ಅಧ್ಯಯನವೊಂದರಿಂದ, ಮಧ್ಯಾಹ್ನ ಹೆಚ್ಚು ಪ್ರೋಟೀನ್‌ವುಳ್ಳ ಆಹಾರ ಸೇವಿಸುವುದರಿಂದ ಹಸಿವು ಕಡಿಮೆಯಾಗಿ, ಆನಂತರ ಸೇವಿಸುವ  ಊಟದಲ್ಲಿ ಸೇವಿಸುವ ಕ್ಯಾಲೊರಿಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ತಿಳಿದು ಬಂದಿದೆ.


ಇದನ್ನೂಓದಿ: ಮತ್ತೊಂದು ಹೊಸ ದಾಖಲೆ ಮಾಡಿದ ಕೆಜಿಎಫ್​ ಚಾಪ್ಟರ್​ 2 ಟೀಸರ್​


ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸುವ ಸರಳ ವಿಧಾನವೆಂದರೆ, ಬೆಳಗಿನ ಉಪಹಾರದಲ್ಲಿ ಒಂದು ದೊಡ್ಡ ಚಮಚ ಚಿಯಾ ಬೀಜಗಳನ್ನು ಅಥವಾ ಹೆಂಪ್ ಬೀಜಗಳನ್ನು ಸೇರಿಸಬಹುದು ಅಥವಾ ಆಹಾರ ಕ್ರಮದಲ್ಲಿ ಮೊಟ್ಟೆಯನ್ನು ಕೂಡ ಒಂದು ಭಾಗವಾಗಿ ಸೇರಿಸಿಕೊಳ್ಳಬಹುದು.


3. ಹೆಚ್ಚು ನಾರಿನಂಶ (ಫೈಬರ್) ತಿನ್ನಿ: ಫೈಬರ್ ಹಣ್ಣು, ದ್ವಿದಳ ಧಾನ್ಯ ಮತ್ತು ಬೇಳೆ ಕಾಳುಗಳಲ್ಲಿ ಇರುತ್ತದೆ. ಫೈಬರ್ ಇತರ ಆಹಾರಗಳಿಗಿಂತ ಭಿನ್ನ, ಏಕೆಂದರೆ ಇದನ್ನು ಸಣ್ಣ ಕರುಳು ಅಷ್ಟು ಸುಲಭವಾಗಿ ಜೀರ್ಣ ಮಾಡಿಕೊಳ್ಳುವುದಿಲ್ಲ. ಬದಲಾಗಿ, ಅದು ದೊಡ್ಡ ಕರುಳಿಗೆ ಹೋಗುತ್ತದೆ ಮತ್ತು ಅಲ್ಲಿ ಹುದುಗುವಿಕೆಯ ಪ್ರಕ್ರಿಯೆ ಆರಂಭವಾಗುತ್ತದೆ. ಫೈಬರ್ ಸೇವನೆಯಿಂದ ಹೊಟ್ಟೆ ತುಂಬಿದಂತೆನಿಸುತ್ತದೆ. ಜೀರ್ಣ ಕ್ರಿಯೆ ನಿಧಾನವಾಗುತ್ತದೆ. ಆಹಾರ ಸಾಗಾಣೆಯ ಸಮಯ ಮತ್ತು ಪೌಷ್ಟಿಕಾಂಶ ಹೀರುವಿಕೆಯ ಸಮಯವನ್ನು ಹೆಚ್ಚಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ನಿತ್ಯವೂ ಹಣ್ಣು , ತರಕಾರಿ ಮತ್ತು ಓಟ್ಸ್ ಹಾಗೂ ಬ್ರೌನ್ ರೈಸ್‌ನಂತಹ ಧಾನ್ಯಗಳನ್ನು ಆಹಾರದಲ್ಲಿ ಸೇರಿಕೊಳ್ಳುವುದರಿಂದ ಫೈಬರನ್ನು ನಿಯಮಿತವಾಗಿ ಸೇವಿಸಲು ಸಾಧ್ಯ. ಹಲವಾರು ತರಕಾರಿಗಳ ಸಿಪ್ಪೆಯಲ್ಲೂ ಹೇರಳ ಫೈಬರ್ ಇದೆ, ಹಾಗಾಗಿ ಅವುಗಳನ್ನು ಎಸೆಯಬೇಡಿ. ಚೆನ್ನಾಗಿ ತೊಳೆದು ಅಡುಗೆಯಲ್ಲಿ ಬಳಸಿ.


4. ಪ್ರೋಬಯಾಟಿಕ್ ಸೇವಿಸಿ:  ಪ್ರೋಬಯಾಟಿಕ್ಸ್ ಎಂದರೆ ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಪ್ರಯೋಜನಕಾರಿ ಬ್ಯಾಕ್ಟಿರೀಯಗಳು. ಇವು ಕರುಳು ಮತ್ತು ಮೆದುಳಿನಕ್ರಿಯೆಗೆ ಸಂಬಂಧಿಸಿದ್ದು, ತೂಕ, ಫ್ಯಾಟ್ ಮಾಸ್ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಈ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಒಂದು ರೀತಿ ಅತಿಥಿ ಇದ್ದಂತೆ, ನಾವು ಫೈಬರ್ ಸೇರಿದಂತೆ ಇತರ ಆಹಾರಗಳನ್ನು ಅದಕ್ಕೆ ನೀಡುತ್ತೇವೆ, ಬದಲಿಗೆ ಅದು ಕರುಳು ಮತ್ತು ಸಾಮಾನ್ಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅವು ಕರುಳಿನ ಗೋಡ ಮತ್ತು ಜಠರ ಕೋಶಗಳಿಗೆ ಶಕ್ತಿ ನೀಡುತ್ತದೆ. ಅದರಲ್ಲಿ ಕ್ಯಾನ್ಸರ್ ನಿರೊಧಕ ನಿರ್ದಿಷ್ಟ ಫ್ಯಾಟಿ ಆ್ಯಸಿಡ್ಸ್ ಇವೆ. ಪ್ರೋಬಯಾಟಿಕ್ಸ್  ದೇಹದ ತೂಕವನ್ನು ನಿಯಂತ್ರಿಸುತ್ತವೆ.


5. ಸರಿಯಾಗಿ ನಿದ್ರಿಸಿ: ದೇಹದ ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಸರಿಯಾದ ನಿದ್ರೆ ಇಲ್ಲದಿದ್ದರೆ, ಚಯಾಪಚಯ ಕ್ರಿಯೆಗೆ ತೊಂದರೆ ಆಗುತ್ತದೆ ಮತ್ತು ಕೆಲವು ಪ್ರಮುಖ ಹಾರ್ಮೋನ್‍ಗಳಿಗೆ ತೊಂದರೆಯಾಗುತ್ತದೆ. ಆರು ಗಂಟೆಗಿಂತ ಕಡಿಮೆ ನಿದ್ರಿಸುವುದರಿಂದ ಬೊಜ್ಜು ಹೆಚ್ಚಿಸಬಹುದು.


6. ಒತ್ತಡ ಕಡಿಮೆ ಮಾಡಿ: ಯೋಗದಿಂದ ಒತ್ತಡ ನಿವಾರಣೆ ಆಗುತ್ತದೆ ಮತ್ತು ತೂಕ ಇಳಿಯುತ್ತದೆ. ಒತ್ತಡ ಹೆಚ್ಚಿದರೆ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ವ್ಯಕ್ತಿ ಒತ್ತಡಕ್ಕೆ ಒಳಗಾದ ದೇಹವು ಗ್ಲುಕೋಕಾರ್ಟಿಯಾಕಾಯ್ಡ್ಸ್ ಎಂಬ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ. ಆ ಹಾರ್ಮೋನ್‍ಗಳು ಹಸಿವನ್ನು ಹೆಚ್ಚಿಸುತ್ತವೆ ಮತ್ತು ಆ ಮೂಲಕ ತೂಕ ಹೆಚ್ಚಳಕ್ಕೂ ಕಾರಣವಾಗುತ್ತವೆ. ಒತ್ತಡಕ್ಕೊಳಗಾದಾಗ ಮನಸ್ಸನ್ನು ಸರಿಮಾಡಿಕೊಳ್ಳುವದಕ್ಕಾಗಿ ಕೆಲವೊಮ್ಮೆ  ಅನಾರೋಗ್ಯಕರ ತಿಂಡಿಗಳನ್ನು ಕೂಡ ತಿನ್ನುತ್ತಾನೆ. ನಿತ್ಯ ಯೋಗ, ವ್ಯಾಯಾಮ ಮಾಡುವುದು, ಕೆಫಿನ್ ಸೇವನೆ ಕಡಿಮೆ ಮಾಡುವುದು, ಧ್ಯಾನ ಮಾಡುವುದು, ಅನಗತ್ಯ ಕೆಲಸಗಳನ್ನು ತಿರಸ್ಕರಿಸುವುದು, ಮನೆಯ ಹೊರಗೆ ಸಮಯ ಕಳೆಯುವುದು ಇತ್ಯಾದಿಗಳಿಂದ ಒತ್ತಡ ನಿವಾರಣೆ ಸಾಧ್ಯ.


7. ವಿಟಮಿನ್ ಡಿ ಸೇವನೆ: ವಿಟಮಿನ್ ಡಿ ಯ ಕೊರತೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.  ಮೆಟಬೋಲಿಕ್ ಸಿಂಡ್ರೊಮ್, ಖಿನ್ನತೆ ಮತ್ತು ಆತಂಕ, ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್, ಆಸ್ಟಿಯೋಪೊರೋಸಿಸ್ ಮತ್ತು ಅಸ್ಥಿಸಂಧಿವಾತ ದಂತಹ ರೋಗಗಳು ವಿಟಮಿನ್ ಡಿ ಕೊರತೆಯಿಂದ ಬರುತ್ತವೆ. ಸೂರ್ಯನ ಕಿರಣಗಳಿಂದ ಮತ್ತು ಮೊಟ್ಟೆಯ ಲೋಳೆ, ಕೊಬ್ಬಿನ ಮೀನು, ಕೆಲವು ರೀತಿಯ ಅಣಬೆಗಳು ಹಾಗೂ  ಪುಷ್ಠಿಗೊಳಿಸುವ ಆಹಾರಗಳಿಂದ ನಮಗೆ ವಿಟಮಿನ್ ಡಿ ದೊರಕುತ್ತವೆ.


8. ಅನೇಕ ಸಣ್ಣ ಭಾಗಗಳಲ್ಲಿ ಆಹಾರ ಸೇವಿಸಿ: ಆಹಾರಗಳನ್ನು ಸಣ್ಣ ಭಾಗಗಳನ್ನಾಗಿ ಬಡಿಸಿದಾಗ ಅವರಿಗೆ ಹೊಟ್ಟೆ ತುಂಬಿದಂತಾಗುತ್ತದೆಯೇ ಎಂದು ನೋಡುವ ಅಧ್ಯಯನ ಮಾಡಲಾಯಿತು. ಆಹಾರವನ್ನು ಮೂರು ಅಥವಾ ಆರು ಭಾಗಗಳನ್ನಾಗಿ ವಿಂಗಡಿಸಿದಾಗ ಜನರಿಗೆ ಹೊಟ್ಟೆ  ತುಂಬಿದಂತಾಗುತ್ತದೆ ಎಂಬುದು ಅದರಿಂದ ತಿಳಿದು ಬಂತು. ಬಫೆಯಲ್ಲಿ ಊಟ ಮಾಡುವಾಗಲೂ, ಆಹಾರವನ್ನು ವಿಭಾಗಿಸಿ ತಿನ್ನಲು,  ಪ್ರತ್ಯೇಕ ಪುಟ್ಟ ತಟ್ಟೆಗಳನ್ನು ತಿನ್ನಬಹುದು. ಒಮ್ಮೆಲೆ ಒಂದೇ ತಟ್ಟೆಯಲ್ಲಿ ತಿನ್ನುವ ಬದಲು, ವ್ಯಕ್ತಿ ತನ್ನ ಊಟದ ಸಮಯವನ್ನು ಕೂಡ ಹಲವಾರು ವಿಭಾಗಗಳಾಗಿ ವಿಂಗಡಿಸಬಹುದು.


9. ಸಣ್ಣ ತಟ್ಟೆಯನ್ನು ಬಳಸಿ: ಜನರು ಹೆಚ್ಚಾಗಿ ಒಂದೇ ತಟ್ಟೆಯಲ್ಲಿ ಊಟ ಬಡಿಸಿಕೊಂಡು, ಅದರಲ್ಲಿರುವ ಎಲ್ಲ ಊಟವನ್ನು ತಿಂದು ಮುಗಿಸುತ್ತಾರೆ.  ತಟ್ಟೆಯ ಗಾತ್ರ ಚಿಕ್ಕದಾಗಿದ್ದರೆ, ಊಟದ ಪ್ರಮಾಣವನ್ನು ಕೂಡ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.


10. ಸಿಹಿ ಕಡಿಮೆ ಮಾಡಿ: ನೀರಿಗೆ ಹಣ್ಣು ಅಥವಾ ಗಿಡಮೂಲಿಕೆಗಳನ್ನು ಹಾಕುವುದರಿಂದ ಸಿಹಿ ತಿನ್ನಬೇಕೆಂಬ ಆಸೆಯನ್ನು ಹತ್ತಿಕ್ಕಬಹುದು. ನಿತ್ಯ ಸಿಹಿ ಮತ್ತು ಕೃತಕ ಸಿಹಿಯುಳ್ಳ ಪಾನೀಯ ಸೇವಿಸುವುದರಿಂದ ಮಕ್ಕಳ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚುತ್ತಿದೆ ಎಂದು ಬ್ರಿಟಿಷ್ ಅಧ್ಯನವೊಂದರಿಂದ ತಿಳಿದುಬಂದಿದೆ. ಕೃತಕ ಸಿಹಿ ಪಾನೀಯಗಳ ಬದಲು, ಪುದೀನ, ಶುಂಠಿ , ಲಿಂಬೆ ಅಥವಾ  ಲಿಂಬೆ ಹಣ್ಣಿನ ಪೇಯಗಳನ್ನು ಸೇವಿಸಬಹುದು. ಹರ್ಬಲ್, ಗ್ರೀನ್ ಮತ್ತು ಬ್ಲ್ಯಾಕ್‌ ಟೀ ಕೂಡ ಒಳ್ಳೆಯದು. ಹಣ್ಣಿನ ರಸದ ಬದಲು, ಇಡೀ ಹಣ್ಣನ್ನು ತಿನ್ನುವುದು ಒಳ್ಳೆಯದು.


11. ಆರೋಗ್ಯಕರ ಉಪಹಾರ: ನಮಗೆ ದೇಹಕ್ಕೆ ಮೂರನೇ ಒಂದು ಭಾಗ ಶಕ್ತಿ ಸಿಗುವುದು ನಿತ್ಯ ಉಪಹಾರದಿಂದ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮನೆಯಲ್ಲಿ ಸಿದ್ಧಪಡಿಸಿದ ಆರೋಗ್ಯಕರ ತಿನಿಸುಗಳನ್ನು ತಿನ್ನುವುದರಿಂದ , ಊಟದ ಸಮಯದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದು ತಪ್ಪುತ್ತದೆ. ಮೊಸರು, ಒಣ ಹಣ್ಣುಗಳು, ಸೇಬು, ಕಿತ್ತಳೆ ಮತ್ತು ಬಾಳೆಯಂತಹ ಹೆಚ್ಚು ನಾರುಳ್ಳ ಹಣ್ಣುಗಳು, ಕ್ಯಾರೆಟ್ ಮತ್ತು ಬ್ರಾಕೊಲಿಯಂತಹ ಹೆಚ್ಚು ನಾರುಳ್ಳ ತರಕಾರಿಗಳು, ಗೋಡಂಬಿ ಮತ್ತು ವಾಲ್‍ನಟ್ ತಿನ್ನುವುದು ಅರೋಗ್ಯಕರ.


12. ಅಗಿದು ತಿನ್ನಿ: ಅಗಿದು ತಿನ್ನುವುದರ ಮೂಲಕ ಜೀರ್ಣ ಕ್ರಿಯೆ ಆರಂಭವಾಗುತ್ತದೆ. ಚೆನ್ನಾಗಿ ಅಗಿದು ತಿನ್ನುವುದರಿಂದ ನಿಧಾನವಾಗಿ ಊಟ ಮಾಡುತ್ತೇವೆ. ಮಾತ್ರವಲ್ಲ, ಹೆಚ್ಚು ಊಟ ಸೇವಿಸುವ ಗೋಜಿಗೂ ಹೋಗುವುದಿಲ್ಲ. ಏಕೆಂದರೆ, ನಿಧಾನವಾಗಿ ಅಗಿದು ತಿನ್ನುವುದರಿಂದ, ದೇಹಕ್ಕೆ ಹೊಟ್ಟೆ ತುಂಬಿತು ಎಂಬುದನ್ನು ಅರಿತುಕೊಳ್ಳಲು ಸಮಯ ಸಿಗುತ್ತದೆ.


ಇದನ್ನೂ ಓದಿ: Mahesh Babu: ದತ್ತು ಪಡೆದ ಗ್ರಾಮದ ಜನರಿಗೆ ಉಚಿತವಾಗಿ ಕೋವಿಡ್​ ಲಸಿಕೆ ಕೊಡಿಸಿದ ಮಹೇಶ್ ಬಾಬು


13. ತಿಳಿದು ತಿನ್ನಿ: ನಾವು ತಿನ್ನುವ ಆಹಾರದ ಬಗ್ಗೆ ತಿಳಿದು ತಿನ್ನುವುದು ತೂಕ ನಿಯಂತ್ರಣಕ್ಕೆ ಉತ್ತಮ ಮಾರ್ಗ. ಅದರಿಂದ ಪದೇ ಪದೇ ತಿನ್ನಬೇಕೆಂಬ ಆಸೆ ಮೂಡುವುದಿಲ್ಲ ಮತ್ತು ಆಹಾರ ಸೇವನೆಯ ಪ್ರಮಾಣವೂ ಕಡಿಮೆ ಆಗುತ್ತದೆ. ತಿಳಿದು ತಿನ್ನಬೇಕೆಂದರೆ, ಊಟ ಮಾಡುವಾಗ ಟೀವಿ, ಲ್ಯಾಪ್‍ಟಾಪ್ ಮತ್ತು ಓದುವುದರಿಂದ ದೂರ ಇರಿ. ಟೇಬಲ್ ಮೇಲೆ ಕುಳಿತು, ಆಹಾರದ ರುಚಿಯನ್ನು ಸವಿಯುತ್ತಾ, ಹೊಟ್ಟೆ ತುಂಬಿದ ಸಂಕೇತಗಳನ್ನು ಅರಿತುಕೊಳ್ಳುವುದು ಒಳ್ಳೆಯ ಅಭ್ಯಾಸ.


14. ಕುಟುಂಬದ ಜೊತೆ ಊಟ ಸೇವಿಸಿ:  ಕುಟುಂಬದ ಸದಸ್ಯರ ಜೊತೆ ಕೂತು, ಆರೋಗ್ಯಕರ ಆಹಾರ ಸೇವಿಸುವುದು ತೂಕ ನಿಯಂತ್ರಣಕ್ಕೆ ಉತ್ತಮ ಉಪಾಯ. ಮಕ್ಕಳು ಕೂಡ ಇದರಿಂದ ಉತ್ತಮ ಆಹಾರ ಸೇವನೆಯ ಅಭ್ಯಾಸವನ್ನು ಕಲಿಯುತ್ತಾರೆ.

Published by:Anitha E
First published: