ಆಲೂ ಮಟರ್, ಮಟರ್ ಪನೀರ್, ಮಟರ್ ಕಚೋರಿ, ಮಟರ್ ಪಲಾವ್. . . ಹೀಗೆ ಹಸಿ ಬಟಾಣಿಯುಳ್ಳ ಭಾರತೀಯ ಖಾದ್ಯಗಳು ಆಹಾರಪ್ರಿಯರ ಬಾಯಲ್ಲಿ ನೀರೂರಿಸುತ್ತವೆ. ಉಪ್ಪಿಟ್ಟು, ಅವಲಕ್ಕಿ, ದೋಸೆ, ಸಾಗು - ಹೀಗೆ ಯಾವುದೇ ತಿನಿಸಿರಲಿ, ಹಸಿರು ಬಟಾಣಿ ಹಾಕಿದರೆ ರುಚಿಯ ಜೊತೆ ತಿನಿಸಿನ ಚಂದವೂ ಇಮ್ಮಡಿಸುತ್ತದೆ. ಹಸಿರು ಬಟಾಣಿ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ. ಅದರಲ್ಲಿ ಹೇರಳ ಪ್ರೋಟೀನ್ ಹಾಗೂ ಕಾರ್ಬೊಹೈಡ್ರೇಟ್ಗಳಿವೆ. ವಿಟಮಿನ್ಗಳು, ಮಿನರಲ್ಗಳು ಮತ್ತು ಫೈಬರ್ ಕೂಡ ಸಾಕಷ್ಟು ಪ್ರಮಾಣದಲ್ಲಿದೆ. ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುವ ಪೋಷಕಾಂಶಗಳಾದ ಕಬ್ಬಿಣಾಂಶ, ಜಿಂಕ್, ಮ್ಯಾಂಗನೀಸ್ ಮತ್ತು ಕಾಪರ್ ಕೂಡ ಹಸಿರು ಬಟಾಣಿಯಲ್ಲಿದೆ.
ಜನ ವರ್ಷವಿಡೀ ಹಸಿರು ಬಟಾಣಿ ತಿನ್ನಲು ಇಷ್ಟಪಡುತ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ ಇರುವ ಫ್ರೋಜನ್ ಬಟಾಣಿ ಖರೀದಿಸಿದರೆ, ಇನ್ನು ಕೆಲವರು ಅದನ್ನು ಸಂರಕ್ಷಿಸಿಡಲು ಮನೆಯಲ್ಲೇ ನಾನಾ ರೀತಿಯ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ತಾಜಾ ಹಸಿರು ಬಟಾಣಿಗಳ ಋತು ನವೆಂಬರ್ನಲ್ಲಿ ಆರಂಭವಾಗುತ್ತದೆ ಮತ್ತು ಮಾರ್ಚ್ವರೆಗೆ ಇರುತ್ತದೆ. ಹಸಿರು ಬಟಾಣಿಯನ್ನು ವರ್ಷವಿಡೀ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ ಇಡಬಹುದು ಎನ್ನುವುದು ನಿಮಗೆ ಗೊತ್ತೇ? ಆ ಕುರಿತ ಮಾಹಿತಿ ಇಲ್ಲಿದೆ.
• ಮೊದಲು ಹಸಿರು ಬಟಾಣಿಯನ್ನು ಬಿಡಿಸಿ ಒಂದು ಪಾತ್ರೆಯಲ್ಲಿಡಿ.
• ಬಳಿಕ, ಚೆನ್ನಾಗಿರುವ ದೊಡ್ಡ ಬಟಾಣಿ ಕಾಳುಗಳನ್ನು ಸಂರಕ್ಷಿಸಿಡಲು ಪ್ರತ್ಯೇಕ ಮಾಡಿ.
• ಯಾವಾಗಲೂ ತಾಜಾ, ಮೃದು ಹಾಗೂ ಉತ್ತಮ ಗುಣಮಟ್ಟದ ಹಸಿರು ಬಟಾಣಿಗಳನ್ನು ಖರೀದಿಸಬೇಕು ಎಂಬುವುದು ನೆನಪಿರಲಿ.
• ಎರಡು ಬಾರಿ ಹಸಿರು ಬಟಾಣಿ ಕಾಳುಗಳನ್ನು ನೀರಿನಿಂದ ಚೆನ್ನಾಗಿ ತೊಳೆದು, ಸೋಸಿಡಿ.
• ಈಗ, ಒಂದು ಪಾತ್ರೆಯಲ್ಲಿ ನೀರು ಬಿಸಿಗಿಡಿ. ಬಟಾಣಿ ಕಾಳುಗಳು ಮುಳುಗುವಷ್ಟು ನೀರು ತೆಗೆದುಕೊಳ್ಳಬೇಕು.
• ನೀರು ಕುದಿಯಲು ಆರಂಭಿಸಿದಾಗ, 2 ಟೇಬಲ್ ಚಮಚ ಉಪ್ಪು ಹಾಕಿ.
• ಬಟಾಣಿ ಕಾಳುಗಳನ್ನು ಕುದಿಯುವ ನೀರಿಗೆ ಹಾಕಿ.
• ಅವುಗಳನ್ನು ಆ ನೀರಿನಲ್ಲಿ 2 ನಿಮಿಷಗಳವರೆಗೆ ನೆನೆಯಲು ಬಿಡಿ.
• 2 ನಿಮಿಷಗಳ ಬಳಿಕ ಗ್ಯಾಸ್ ಆಫ್ ಮಾಡಿ, ಬಟಾಣಿ ಕಾಳುಗಳನ್ನು ಜರಡಿಗೆ ಹಾಕಿ, ನೀರನ್ನು ಸೋಸಿ.
• ಬಳಿಕ ಪಾತ್ರೆಯೊಂದಕ್ಕೆ ಐಸ್ ನೀರು ಅಥವಾ ತಣ್ಣನೆಯ ನೀರು ಹಾಕಿ.
• ಬಟಾಣಿ ಕಾಳುಗಳನ್ನು ಆ ತಣ್ಣನೆಯ ನೀರಿನ ಪಾತ್ರೆಗೆ ಹಾಕಿ.
• ಬಟಾಣಿ ಕಾಳುಗಳು ತಣ್ಣಗಾದ ಬಳಿಕ, ಉಳಿದ ನೀರನ್ನು ಬಸಿದು ತೆಗೆಯಿರಿ.
• ಒಂದು ದಪ್ಪ ಬಟ್ಟೆಯಲ್ಲಿ ಬಟಾಣಿ ಕಾಳುಗಳನ್ನು ಕೆಲ ಸಮಯದವರೆಗೆ ಹರಡಿ ಇಡಿ.
• ಬಟಾಣಿ ಕಾಳುಗಳು ಸಂಪೂರ್ಣವಾಗಿ ಒಣಗಿದ ನಂತರ, ಅವುಗಳನ್ನು ಜಿಪ್ಲಾಕ್ ಕವರ್ ಅಥವಾ ಗಾಳಿಯಾಡದ ಡಬ್ಬದಲ್ಲಿ ಹಾಕಿ, ಫ್ರೀಜರ್ನಲ್ಲಿಡಿ.
• ಈ ರೀತಿ ಬಟಾಣಿ ಕಾಳು ಹಸಿರಾಗಿರುತ್ತದೆ ಮತ್ತು ನೀವದನ್ನು ವರ್ಷವಿಡೀ ಬಳಸಬಹುದು.
ಹಸಿರು ಬಟಾಣಿಯಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ