HOME » NEWS » Lifestyle » IS THERE AN ALTERNATIVE TO TACTILE PLEASURE RH

ಭಾಗ - 5 | ಸ್ಪರ್ಶ ಸುಖಕ್ಕೆ ಪರ್ಯಾಯ ಸಾಧ್ಯವೇ?

ನಮ್ಮ ಭಾವನೆಗಳಿಗೆ ಹತ್ತಿರವಾದಂತಹ ವ್ಯಕ್ತಿಯು ಸಂಕಟದ ಸ್ಥಿತಿಯಲ್ಲಿ ಕೈ ಹಿಡಿದು ಸಂತೈಸಿದಾಗ ಸಿಗುವ ನೆಮ್ಮದಿಯ ಭಾವವೂ ಅಂತರಂಗದಲ್ಲಿ ಮೂಡಿಸುವ ಚೈತನ್ಯ ಒಮ್ಮೆ ಅನುಭವಿಸದ್ದರೂ ಸಾಕು ಮತ್ತೆ ಮತ್ತೆ ಅದನ್ನೇ ಬಯಸುತ್ತದೆ. 

news18-kannada
Updated:May 1, 2020, 7:33 AM IST
ಭಾಗ - 5 | ಸ್ಪರ್ಶ ಸುಖಕ್ಕೆ ಪರ್ಯಾಯ ಸಾಧ್ಯವೇ?
ಡಾ. ಅ.ಶ್ರೀಧರ.
  • Share this:
ಸದ್ಯದಲಿ ಪ್ರಬಲವಾಗಿರುವ ಕೋವಿಡ್‌ -19 ವೈರಾಣುವು ಮನುಷ್ಯ ಸಂಪರ್ಕಗಳಿಗೊಂದು ಕಡಿವಾಣ ಹಾಕಿದೆ. ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಲಿಯಲೇಬೇಕು. ಅರ್ಥಮಾಡಿಕೊಳ್ಳುವಂತೆ ಮನಸಿನಾಳಕ್ಕೂ ಸೂಚನೆ ಕೊಡುವುದು, ಹಿತವೋ-ಅಹಿತವೋ, ಅನುಸರಿಸಲೇಬೇಕಾಗಿದೆ.

ಮನುಷ್ಯನಾದರೋ ಹುಟ್ಟಿನಿಂದಲೂ ಶರೀರ ಸ್ಪರ್ಶ, ದೇಹ ಸಾಮಿಪ್ಯದ ಮೂಲಕವೇ ಸಂವೇಗಗಳನ್ನು ಬೆಳೆಸಿಕೊಂಡಿರುವುದು. ಹಾಗೇ ನೋಡಿದರೆ ಮುಟ್ಟಿ, ತಟ್ಟಿ, ತಬ್ಬಿಕೊಳ್ಳುವುದರ ಮೂಲಕವೇ ಪ್ರಖ್ಯಾತಿ ಪಡೆದ ಸಾಧು, ಸಾಧ್ವಿಗಳು ದೊಡ್ಡ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ.

ತಾಯಿಯ ಗರ್ಭದಿಂದ ಹೊರಬಂದ ನಂತರದ ದಿನಗಳಲ್ಲಿ ತಾಯಿ ಮಡಲಲ್ಲಿನ ಆಶ್ರಯವೇ ಅದೆಷ್ಟೋ ಸಕಾರಾತ್ಮಕ ಮಾನಸಿಕ ಬಲಗಳು ಮೊಳಕೆಯೊಡೆಯುವುದಕ್ಕೆ ಕಾರಣ. ಕಂದಮ್ಮನ ಅಳಲುಗಳೆಲ್ಲವುಗಳನ್ನು ಮರೆಮಾಚಿಸುವ ಮನೋಶಕ್ತಿ ಹೊಂದಿರುವಂತಹ ಸ್ಪರ್ಶ ಸುಖವದು. ಈ ಗುಣವೇ ನಂತರದಲ್ಲಿಯೂ ವೈಯಕ್ತಿಕ  ಸಂಬಂಧ ಮತ್ತು ಸಾಮಿಪ್ಯಗಳ ಬಗ್ಗೆ ಹೊಸ ಭಾವಬಲಗಳನ್ನು ತುಂಬಿಸಿ ವ್ಯಕ್ತಿಯ  ಸಂಕಟಗಳನ್ನು ನಿಯಂತ್ರಿಸುವ, ಬದಲಾಯಿಸಬಲ್ಲ ಗುಣವಾಗಿ ನಿಲ್ಲುವುದು.

ಆದರೆ ಈಗಿನ ಸ್ಥಿತಿಯಲ್ಲಿ ಇವುಗಳ ಮೇಲೆಯೇ ಒಂದು ವಿಧದ ತಡೆ- ಮುಟ್ಟಿಸ್ಕೊಬೇಡ ರೋಗ ಬರುತ್ತೆ, ಅಲ್ಲೇ ನಿಲ್ಲು, ದೂರ ಸರಿ- ಎನ್ನುವಂತಹದ್ದನ್ನು ಸಾರ್ವಜನಿಕವಾಗಿಯಂತೂ ಅನುಸರಿಸಲೇಬೇಕಾಗಿದೆ. ಆದರೆ, ಆತ್ಮೀಯತೆಯನ್ನು ಸರಾಗವಾಗಿ ವ್ಯಕ್ತಪಡಿಸುವ ಕೈ ಕುಲುಕುವುದು, ಬರಮಾಡಿಕೊಳ್ಳುವುದು, ಆಳಾತ್ಮೀಯತೆಯನ್ನು ವ್ಯಕ್ತಪಡಿಸಬಲ್ಲ ಸ್ಪರ್ಶ ಆಲಿಂಗನದಂತಹ ಕ್ರಿಯೆಗಳಿಗೀಗ  ಸಂಕೋಲೆ. ಎಲ್ಲರ  ಆರೋಗ್ಯದ ರಕ್ಷಣೆಗಿದು ಸಂಬಂಧಿಸಿರುವ ಮುನ್ನೆಚ್ಚರಿಕೆಯ ಕ್ರಮವೆಂದೇ ಇಟ್ಟುಕೊಂಡರೂ ಉಲ್ಲಾಸ, ಉತ್ಸಾಹ, ಉನ್ಮಾದಗಳನ್ನು ಹೆಚ್ಚಿಸುತ್ತಿದ್ದಂತಹ ಸ್ಪರ್ಶ ಸುಖದಂತಹ ಮನೋಶಾರೀರಿಕ ಕ್ರಿಯೆಗಳಿಗೆ ಪ್ರಚೋದನೆ ಇರದೆ ಲವಲವಿಕೆಯ ಕುಸಿತವೂ ಕೆಲವರಲ್ಲಿ ಕಂಡುಬರುತ್ತಿದೆ.

ಈ ಕಾರಣದಿಂದಲೇ ಬೇಸರ, ಉದಾಸೀನದ ಭಾವಗಳು ಮತ್ತು ಅತೃಪ್ತಿಯನ್ನು ಸಂಕೇತಿಸುವ ನಡೆನುಡಿಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ. ನಮ್ಮ ಭಾವನೆಗಳಿಗೆ ಹತ್ತಿರವಾದಂತಹ ವ್ಯಕ್ತಿಯು ಸಂಕಟದ ಸ್ಥಿತಿಯಲ್ಲಿ ಕೈ ಹಿಡಿದು ಸಂತೈಸಿದಾಗ ಸಿಗುವ ನೆಮ್ಮದಿಯ ಭಾವವೂ ಅಂತರಂಗದಲ್ಲಿ ಮೂಡಿಸುವ ಚೈತನ್ಯ ಒಮ್ಮೆ ಅನುಭವಿಸದ್ದರೂ ಸಾಕು ಮತ್ತೆ ಮತ್ತೆ ಅದನ್ನೇ ಬಯಸುತ್ತದೆ. ಇಂತಹ ಸಹಜ ಪ್ರಕೃತಿಯಲ್ಲಿ ಸಂಕಟಗಳಿಂದ ಪಾರಾಗುವ ಉಪಾಯಗಳು ಅಡಗಿದೆ ಎನ್ನುವುದು ಮನೋವೈಜ್ಞಾನಿಕವಾಗಿಯೂ ಸತ್ಯ.

ಇದನ್ನು ಓದಿ: ಭಾಗ-4 | ಬಾಲ್ಯದ ಸ್ಮೃತಿ ಕೊಂಡಿಗಳು ಕಳಚಿದಾಗ ಏನಾಗಬಹುದು ಬಲ್ಲಿರಾ?

ಈ ಬಲಕ್ಕೀಗ ಬಲವಂತದ ತಡೆ ಉಂಟಾಗಿರುವುದರಿಂದ  ವಾತ್ಸಲ್ಯ ಪೂರಕ ಭಾವ , ನುಡಿಗಳು,  ಹುರುಪು ಹೆಚ್ಚಿಸಬಲ್ಲ ನಗೆ ಮತ್ತು ಸ್ನಾಯು ಬಿಗಿತಗಳನ್ನು ಸಡಿಸಬಲ್ಲ ಭಾವಭಂಗಿಗಳು ಕೊಂಚವಾದರೂ ಆರಾಮ ನೀಡಬಲ್ಲದು. ಒಂದು ವಿಧದಲ್ಲಿ ಜೀವ ತುಂಬಿದ ಸಹಜ ಸ್ಮೈಲಿ ಅಥವಾ ಭಾವಾಂಕಿತಗಳು (ಇಮೊಟಿಕಾನ್ಸ್) ಎನ್ನುವ ಧಾಟಿಯಲ್ಲಿ. ಆದರೇ ಸ್ಪರ್ಶ ಸುಖಕ್ಕೊಂದು ಪರ್ಯಾಯ ಇರಲಾರದು ಎನ್ನುವುದೇ ನನ್ನ ಅಭಿಮತ; ನಿಮ್ಮದು?ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.bruhanmati.com/
Youtube Video
First published: May 1, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories