ರಾಜ್ಯದಲ್ಲಿ ಮಾರಕ ಕ್ಯಾನ್ಸರ್‌ಗೆ (Cancer) ತುತ್ತಾಗುವವರಲ್ಲಿ ಪುರುಷರಿಗಿಂತ (Men) ಮಹಿಳೆಯರೇ (Women) ಹೆಚ್ಚಾಗಿದ್ದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ (National Cancer Registry Programme) ಕಾರ್ಯಕ್ರಮದ ವರದಿಯ ಮಾಹಿತಿಯ ಪ್ರಕಾರ 42,543 ಪುರುಷರಲ್ಲಿ ಕ್ಯಾನ್ಸರ್ ಕಂಡುಬಂದಿದ್ದರೆ ಸುಮಾರು 47,806 ಮಹಿಳೆಯರು ಪ್ರಾಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದ್ದು ಈ ಪ್ರಮಾಣವನ್ನು 29.5% ಎಂಬುದಾಗಿ ಗುರುತಿಸಲಾಗಿದೆ. ಕರ್ನಾಟಕದಲ್ಲಿ (Karnataka) ವರದಿಯಾಗಿರುವ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗಿಂತ ಸ್ತನ ಕ್ಯಾನ್ಸರ್ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಗರ್ಭಕಂಠದ (10%) ಅಂಡಾಶಯದ (5.9%) ಕ್ಯಾನ್ಸರ್‌ಗಳು ವರದಿಯಾಗಿವೆ. ಪುರುಷರಲ್ಲಿ ಶ್ವಾಸಕೋಶ (12.05%), ಬಾಯಿ (6.47%), ಮತ್ತು ಪ್ರಾಸ್ಟೇಟ್ (6.01%) ಕ್ಯಾನ್ಸರ್ ಹೆಚ್ಚು ವರದಿಯಾಗಿದೆ.
ಬೆಂಗಳೂರಿನಲ್ಲಿ ದಾಖಲಾಗಿರುವ ಕ್ಯಾನ್ಸರ್ ಪ್ರಕರಣಗಳು
ಬೆಂಗಳೂರಿನಲ್ಲಿ ಪ್ರಾಸ್ಟೇಟ್, ಕರುಳು, ಶ್ವಾಸಕೋಶ, ಮೆದುಳು, ನಾಲಿಗೆ, ಶ್ವಾಸಕೋಶ, ಲಿಂಫೋಮಾ, ಬಾಯಿ, ಅನ್ನನಾಳ ಮತ್ತು ಹೊಟ್ಟೆಯ ಕ್ಯಾನ್ಸರ್ ಪುರುಷರಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ.
ಸ್ತನ ಕ್ಯಾನ್ಸರ್ ಹೊರತುಪಡಿಸಿ, ಕಾರ್ಪಸ್ ಯುಟೆರಿ, ಶ್ವಾಸಕೋಶ, ಕೊಲೊನ್, ಅಂಡಾಶಯ, ಥೈರಾಯ್ಡ್ ಮತ್ತು ಹೊಟ್ಟೆಯ ಕ್ಯಾನ್ಸರ್ ನಗರಗಳಲ್ಲಿರುವ ಮಹಿಳೆಯರಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ವರದಿಯಾಗಿದೆ.
ಕೊಲೊರೆಕ್ಟಲ್ ಕ್ಯಾನ್ಸರ್ ಯುವಜನರಲ್ಲಿ ಹೆಚ್ಚು ಕಂಡುಬರುತ್ತಿದೆ
ಕಿದ್ವಾಯಿ ಸ್ಮಾರಕ ಆಂಕೊಲಾಜಿಯ ವೈದ್ಯರ ಪ್ರಕಾರ ಕೊಲೊನ್ ಮತ್ತು ಗುದನಾಳಕ್ಕೆ ಸಂಬಂಧಿಸಿದ ಕೊಲೊರೆಕ್ಟಲ್ ಕ್ಯಾನ್ಸರ್ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವಾರ್ಷಿಕ ಸರಾಸರಿ 1% ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಇದೇ ರೀತಿಯ ಪ್ರವೃತ್ತಿ ಬೆಳೆದು ಬಂದಿದೆ ಎಂದು ಕಿದ್ವಾಯಿ ಸಂಸ್ಥೆಯ ಮಾಜಿ ನಿರ್ದೇಶಕರಾದ ಸ್ತನ ಕ್ಯಾನ್ಸರ್ ತಜ್ಞ ಸಿ.ರಾಮಚಂದ್ರ ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ ಹೆಚ್ಚು ಯುವತಿಯರಲ್ಲಿ ಕಂಡುಬರುತ್ತಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಗರದಲ್ಲಿ ಬಾಯಿ ಹಾಗೂ ಗರ್ಭಕಂಠದ ಕ್ಯಾನ್ಸರ್‌ಗಳು ಇಳಿಕೆಯಾಗಿದ್ದು 40 ರ ದಶಕದ ಅಂತ್ಯದಲ್ಲಿ ಕಾಣಿಸಿಕೊಂಡಿದ್ದ ಕೊಲೊರೆಕ್ಟಲ್ ಕ್ಯಾನ್ಸರ್ ಇದೀಗ ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ ಉಂಟಾಗಲು ಅಪಾಯಕಾರಿ ಅಂಶಗಳು
ಸ್ತನ ಕ್ಯಾನ್ಸರ್‌ಗೆ ನಿಖರವಾದ ಅಪಾಯಕಾರಿ ಅಂಶಗಳು ಇನ್ನೂ ಪತ್ತೆಯಾಗದೇ ಇದ್ದರೂ ಜಡ ಜೀವನಶೈಲಿ, ಫಾಸ್ಟ್ ಫುಡ್‌ಗಳ ಅತಿಯಾದ ಸೇವನೆ, ಧೂಮಪಾನ, ಮದ್ಯಪಾನ ಹಾಗೂ ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆಗಳು ಕಾರಣವಾಗಿರಬಹುದು ಎಂಬುದು ವೈದ್ಯರ ಹೇಳಿಕೆಯಾಗಿದೆ.
ಸ್ಥೂಲಕಾಯತೆ, ಪ್ರೌಢಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು, ದೈಹಿಕ ವ್ಯಾಯಾಮದ ಕೊರತೆ, ಮತ್ತು ಸಂತಾನೋತ್ಪತ್ತಿ ಅಂಶಗಳು, ಗರ್ಭನಿರೋಧಕಗಳ ಬಳಕೆ ಕೂಡ ಸ್ತನ ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ಅಂಶಗಳಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
2025 ರ ವೇಳೆಗೆ ಸುಮಾರು 7% ಹೆಚ್ಚಳ
ರಾಜ್ಯದಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳು 2025 ರ ವೇಳೆಗೆ 97,130 ಪ್ರಕರಣಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು 2022 ರಲ್ಲಿ ದಾಖಲಾಗಿದ್ದ 90,349 ಪ್ರಕರಣಗಳಿಂದ ಸುಮಾರು 7% ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ವರದಿಯ ಪ್ರಕಾರ, 2025 ರಲ್ಲಿ ಕರ್ನಾಟಕದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು 51,437 ರ ಮಟ್ಟಕ್ಕೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದು, 2020 ರಲ್ಲಿ 45,465 ರ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ 11.61% ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ. ಆದರೆ ಪುರುಷರಲ್ಲಿ, ಅಂದಾಜಿಸಲಾದ ಪ್ರಕರಣಗಳ ಹೆಚ್ಚಳವು 45,693 ಅನ್ನು ತಲುಪಬಹುದು ಎಂದು ವರದಿ ನೀಡಿದ್ದಾರೆ.
ತಡೆಗಟ್ಟುವ ಕ್ರಮಗಳ ಅಗತ್ಯವಿದೆ
ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್‌ಗೆ ಕಾರಣ ಜಡ್ಡುಗಟ್ಟಿದ ಜೀವನಶೈಲಿ ಎಂದು ತಿಳಿಸಿರುವ ಎನ್‌ಸಿಡಿಐಆರ್ ನಿರ್ದೇಶಕ ಪ್ರಶಾಂತ್ ಮಾಥೂರ್ ಮಹಿಳೆಯರು ಸೋಮಾರಿತನದ ಜೀವನ ಶೈಲಿಯಿಂದ ಚಟುವಟಿಕೆಯ ಹಾಗೂ ಕ್ರಿಯಾತ್ಮಕವಾಗಿರುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನಿತ್ಯವೂ ತಮ್ಮನ್ನು ತಾವು ದೈಹಿಕ ಚಟುವಟಿಕೆಗಳ ಮೂಲಕ ಆ್ಯಕ್ಟೀವ್ ಆಗಿರಿಸಿಕೊಳ್ಳುವುದು, ಆರೋಗ್ಯಕರ ಡಯೆಟ್ ಅನುಸರಣೆಯನ್ನು ಮಹಿಳೆಯರು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ