ಛತ್ರಿಯಿಲ್ಲ, ರೈನ್​ಕೋಟಿಲ್ಲ: ಇಡೀದಿನ ಮಳೆಯ ದಿನ

news18
Updated:June 16, 2018, 6:04 PM IST
ಛತ್ರಿಯಿಲ್ಲ, ರೈನ್​ಕೋಟಿಲ್ಲ: ಇಡೀದಿನ ಮಳೆಯ ದಿನ
news18
Updated: June 16, 2018, 6:04 PM IST

- ಸುಷ್ಮಾ ಚಕ್ರೆ , ನ್ಯೂಸ್​18 ಕನ್ನಡ


ಬೆಂಗಳೂರು (ಜೂ. 16): ಮಳೆಗಾಲ ಬಂತೆಂದರೆ ಮಳೆಯ ನೈಜವಾದ ಅನುಭವವನ್ನು ಸವಿಯಲು ಮನಸು ಬಯಸುತ್ತದೆ. ನಗರಪ್ರದೇಶದಲ್ಲಿ ಇರುವವರಿಗಂತೂ ಮಳೆ ಬಂದರೆ ಹೊರಹೋಗಲೂ ಕಷ್ಟಪಡಬೇಕಾದ ಪರಿಸ್ಥಿತಿ. ಈ ಸಮಯದಲ್ಲಿ ಮಳೆಯಲ್ಲಿ ನೆನೆಯಬೇಕು, ಮಕ್ಕಳಾಗಿದ್ದಾಗ ಮಳೆಯಲ್ಲಿ ಆಟವಾಡಿದ ಹಾಗೆ ಈಗಲೂ ಕುಣಿದಾಡಬೇಕು ಎಂದೆಲ್ಲ ಬಯಸುವುದು ಸಾಮಾನ್ಯ. ಆದರೆ, ಅದೆಲ್ಲ ಈಗ ಸಾಧ್ಯಾನಾ? ಉದ್ಯೋಗಕ್ಕೆ ಸೇರಿದ ನಂತರ, ಕುಟುಂಬದೊಳಗೆ ಕಳೆದು ಹೋದನಂತರ ಆ ಎಲ್ಲ ಅನುಭವಗಳನ್ನು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಬೇಸರಿಸಿಕೊಳ್ಳುವವರಿಗೆ ರೈನಥಾನ್​ ಬೆಸ್ಟ್ ಆಯ್ಕೆ.ಏನಿದು ರೈನಥಾನ್? ಅಂತ ಯೋಚನೆ ಮಾಡ್ತಿದ್ದೀರಾ? ನಿಮ್ಮ ಹಾಗೇ ಮಳೆಯನ್ನು ಮಿಸ್​ ಮಾಡಿಕೊಂಡ, ಮಳೆಯೊಂದಿಗೆ ಒಂದು ದಿನವಾದರೂ ಸಂಪೂರ್ಣವಾಗಿ ಕಾಲಕಳೆಯಬೇಕು ಎಂದು ಬಯಸಿದ ಆಸಕ್ತರು ಸೇರಿ ಕಟ್ಟಿಕೊಂಡ ತಂಡವೇ ರೈನಥಾನ್​. ಬೆಂಗಳೂರೆಂಬ ಮಾಯಾನಗರಿಯನ್ನು ಒಮ್ಮೆ ಹೊಕ್ಕುಬಿಟ್ಟರೆ ಮತ್ತೆ ಬೇರೆ ಯಾವುದಕ್ಕೂ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಹೀಗೆ ಸಾಫ್ಟ್​ವೇರ್​ ಇಂಜಿನಿಯರ್​, ಅಕೌಂಟೆಂಟ್​, ಆಡಿಟರ್​ ಆಗಿ ಕೆಲಸಕ್ಕೆ ಬಂದವರು ಮಳೆಗಾಲದಲ್ಲಿ ಎರಡು ಬಾರಿ ರೈನಥಾನ್​ ಮೂಲಕ ರಾಜ್ಯದಲ್ಲಿ ಹೆಚ್ಚು ಮಳೆಯಾಗುವ, ಹೆಚ್ಚು ಜನರಿಗೆ ಪರಿಚಿತವಲ್ಲದ ಸ್ಥಳಗಳಿಗೆ ಪ್ರವಾಸ ಹೋಗಿಬರುತ್ತಾರೆ.ಮಳೆಯಲ್ಲೇ ಇಡೀ ದಿನ : ಸಾಫ್ಟ್​ವೇರ್​ ಉದ್ಯೋಗಿ ಕಿಶೋರ್​ ಪಟವರ್ಧನ್​ ಆರಂಭಿಸಿದ ರೈನಥಾನ್​ನಲ್ಲಿ ಮೊದಲು ಅವರ ಗೆಳೆಯರಷ್ಟೇ ಇದ್ದರು. ಬಳಿಕ, ಅದಕ್ಕೊಂದು ವೆಬ್​ಸೈಟ್​ ಮಾಡಿ ಆಸಕ್ತರಿಗೂ ಆಹ್ವಾನ ನೀಡಿದ ನಂತರ ನೂರಾರು ಜನರು ಈ ತಂಡವನ್ನು ಸೇರಿಕೊಂಡರು. ಈಗಾಗಲೇ 11 ಆವೃತ್ತಿಗಳನ್ನು ಮುಗಿಸಿರುವ ರೈನಥಾನ್​ ತಂಡ ಈ ಬಾರಿ ಜೂನ್​ 23ರಂದು ಭಾಗಮಂಡಲದ ತೊಡಿಕಾನ ಎಂಬ ಹಳ್ಳಿಗೆ ಪ್ರಯಾಣ ಬೆಳೆಸಲಿದೆ. ಇದುವರೆಗೂ ಚಾರ್ಮಾಡಿ ಘಾಟಿ, ಆಗುಂಬೆಯ ಹಳ್ಳಿ, ಎಳನೀರು ಘಾಟಿ, ಮೆಣಸಿನ ಹಾಡ್ಯ, ಗಾಳಿಗುಡ್ಡೆ, ಉದಕಮಂಡಲ, ಹಳುವಳ್ಳಿ ಮುಂತಾದ ಸ್ಥಳಗಳಲ್ಲಿ ಮಳೆಗಾಲದ ಒಂದು ದಿನವನ್ನು ಕಳೆದುಬಂದಿದೆ ರೈನಥಾನ್ ತಂಡ.ಏನಿದರ ವೈಶಿಷ್ಟ್ಯ? :  ಇಡೀ ದಿನ ಯಾವುದೇ ಛತ್ರಿ, ರೈನ್​ಕೋಟ್​ ಇಲ್ಲದೆ ಮಳೆಯಲ್ಲಿಯೇ ನಡೆಯುವ, ಚಾರಣ ಮಾಡುವ ಆಸಕ್ತರು ಮಾತ್ರ ಈ ತಂಡವನ್ನು ಸೇರಿಕೊಳ್ಳುತ್ತಾರೆ. ಊಟ-ತಿಂಡಿಗೂ ಪ್ರವಾಸದ ಮಧ್ಯದಲ್ಲೇ ಮಳೆಯಲ್ಲಿಯೇ ಟಾರ್ಪಲ್​ ಕಟ್ಟಿ ಬಿಸಿಬಿಸಿ ಅಡುಗೆ ಮಾಡಿ ಊಟ ಮಾಡಲಾಗುತ್ತದೆ. 15-20 ಕಿ.ಮೀ. ಮಳೆಯಲ್ಲಿಯೇ ನಡೆಯಬೇಕಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಬೀಳುವ ಮಳೆನೀರು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದುವರೆಗೆ ರೈನಥಾನ್​ಗೆ ಬಂದು ಯಾರೊಬ್ಬರೂ ಮಳೆಯಲ್ಲಿ ನೆಂದು ಆರೋಗ್ಯ ಕೆಡಿಸಿಕೊಂಡ ಉದಾಹರಣೆಯಿಲ್ಲ ಎನ್ನುತ್ತಾರೆ ರೈನಥಾನ್​ನ ಆಯೋಜಕ ಕಿಶೋರ್​ ಪಟವರ್ಧನ್​.


Loading...

ಐದು ವರ್ಷದಿಂದ 70 ವರ್ಷದವರೆಗಿನವರೂ ಪ್ರತಿ ವರ್ಷ ಇದರಲ್ಲಿ ಪಾಲ್ಗೊಂಡು ಮಳೆಗಾಲದ ನಿಜವಾದ ಆನಂದವನ್ನು ಅನುಭವಿಸುತ್ತಾರೆ. ಎಲ್ಲರಿಗೂ ಪ್ರತಿವರ್ಷ ಒಂದೇ ರೀತಿಯ ಟಿ-ಶರ್ಟ್​ ಸಿದ್ಧಪಡಿಸಲಾಗುತ್ತದೆ. ವಾಹನ, ಊಟ-ತಿಂಡಿಯ ಖರ್ಚನ್ನು ಎಲ್ಲರೂ ಹಂಚಿಕೊಂಡು ಹೋಗುವುದರಿಂದ ಹೆಚ್ಚಿನ ಹಣವೂ ಬೇಕಾಗುವುದಿಲ್ಲ. ಹಾಗೇ, ಆ ದಿನ ಸಂಜೆ ಆ ಊರಿನಲ್ಲಿ ಸಣ್ಣದೊಂದು ಕಾರ್ಯಕ್ರಮ ಮಾಡಿ ಅಲ್ಲಿನ ಎಲೆಮರೆಯ ಸಾಧಕರನ್ನು ಸನ್ಮಾನಿಸಿ ಬರುತ್ತದೆ ಈ ತಂಡ. ಕಾಡಿನಲ್ಲಿ ಹೋಗುವಾಗ ಬೀಜದ ಉಂಡೆಗಳನ್ನು ಬಿತ್ತುವ ಮೂಲಕ ಪರಿಸರಪ್ರೀತಿಯನ್ನು ಜಾಗೃತಗೊಳಿಸುವ ಕಾರ್ಯವನ್ನೂ ಮಾಡಲಾಗುತ್ತದೆ.ಯಾರ್ಯಾರು ಪಾಲ್ಗೊಳ್ಳಬಹುದು? :  ಮಳೆಯಲ್ಲಿ ನೆನೆದು ನಡೆಯಬಲ್ಲೆ ಎಂಬ ಧೈರ್ಯವಿರುವವರು ಆನ್​ಲೈನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹಾಗೇ, ಒಂದು ದಿನವನ್ನು ಸಂಪೂರ್ಣವಾಗಿ ಎಂಜಾಯ್​ ಮಾಡಬೇಕೆಂಬ ಕಾರಣಕ್ಕೇ ಈ ಪ್ರವಾಸ ಹೋಗುವುದರಿಂದ ರಾಜಕೀಯ ವಿಚಾರಗಳ ಚರ್ಚೆ, ಜಗಳ, ಆಹಾರದ ಪೋಲು, ಧೂಮಪಾನ, ಮಧ್ಯಪಾನ, ಪ್ಲಾಸ್ಟಿಕ್ ಬಿಸಾಡುವುದು, ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಕೆಲಸಗಳನ್ನು ಮಾಡುವಂತಿಲ್ಲ.


ಈ ಬಾರಿಯ ಪ್ಲಾನ್​ ಏನು?  :  ಜೂ. 23ರಂದು ಭಾಗಮಂಡಲದ ಬಳಿಯ ಬಾಚಿಮಲೆಯಿಂದ ತೊಡಿಕಾನವರೆಗೆ  ಸುಮಾರು 12 ಕಿ.ಮೀ. ರೈನಥಾನ್ ತಂಡ ಕ್ರಮಿಸಲಿದೆ. ಈಗಾಗಲೇ 50ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿಕೊಂಡಿದ್ದು, ಆಸಕ್ತರು ಆದಷ್ಟು ಬೇಗ ನೋಂದಾಯಿಸಿಕೊಂಡರೆ ಟಿ-ಶರ್ಟ್​ ರೆಡಿ ಮಾಡಿಸಲು ಅನುಕೂಲವಾಗುತ್ತದೆ. ಜೂನ್ 22ರಂದು ರಾತ್ರಿ ಬೆಂಗಳೂರಿನಿಂದ ಹೊರಟು ಜೂನ್ 23ರಂದು ಭಾಗಮಂಡಲ ತಲುಪಲಾಗುತ್ತದೆ. ಆಸಕ್ತರು www.rainathon.com ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...