ಆಧುನಿಕ ಯುಗಕ್ಕೆ ಕಾಲಿಟ್ಟ 'ಯೋಗ'

news18
Updated:June 21, 2018, 12:15 PM IST
ಆಧುನಿಕ ಯುಗಕ್ಕೆ ಕಾಲಿಟ್ಟ 'ಯೋಗ'
news18
Updated: June 21, 2018, 12:15 PM IST
ನ್ಯೂಸ್​ 18 ಕನ್ನಡ 

ಯೋಗ ಎಂಬುದು 'ಯುಜ್' ಎನ್ನುವ ಸಂಸ್ಕೃತ ಪದದಿಂದ ಬಂದಿದೆ. ಅಂದರೆ ಒಂದುಗೂಡುವುದು ಅಥವಾ ಒಟ್ಟುಸೇರು ಎಂದರ್ಥ. ಆದ್ದರಿಂದ ಯೋಗ ಹಾಗೂ ಜೀವಾತ್ಮವನ್ನು ಪರಮಾತ್ಮನೊಂದಿಗೆ ಒಂದುಗೂಡುವಂತೆ ಮಾಡುವುದು ಎಂದರ್ಥ. ಪತಂಜಲಿ ಮಹರ್ಷಿಗಳು ಹೇಳುವಂತೆ ಯೋಗ ಎನ್ನುವುದು ಮನಸ್ಸಿನ ಮಾರ್ಪಾಡನ್ನು ಹತ್ತಿಕ್ಕುವ ಕ್ರಿಯೆಯಾಗಿದೆ.

ಯೋಗ ಪದದ ವಿವರಣೆ : 'ಅಥ ಯೋಗಾನುಶಾಸನಂ'- ಪತಂಜಲಿ ಯೋಗ ಸೂತ್ರವು ಯೋಗಾನುಶಾಸನದಿಂದ ಪ್ರಾರಂಭವಾಗುತ್ತದೆ. ಯೋಗದ ಶಿಸ್ತಿನ ಬಗ್ಗೆ ತಿಳಿಸಿಕೊಡಲಾಗುತ್ತದೆ. ಶಿಸ್ತಿನಿಂದ ಬರುವ ಸುಖವು ಸದಾ ಕಾಲ ಇರುವಂತಹ ಸಾತ್ವಿಕ ಸುಖ. ಆಸನ, ವ್ಯಾಯಾಮ, ಧ್ಯಾನ, ಕರುಣೆ, ಸಹನೆ ಎಲ್ಲವೂ ಶಿಸ್ತಿನ ನಿಯಮಗಳಾಗಿದ್ದು ಎಲ್ಲವನ್ನೂ ಅಳವಡಿಸಿಕೊಂಡಾಗ ಶಿಸ್ತುಬದ್ಧ ಜೀವನವೆನಿಸುತ್ತದೆ.

'ಯೋಗಃ ಚಿತ್ತ ವೃತ್ತಿ ನಿರೋಧಃ': ಯೋಗ ಎಂದರೆ ಮನಸ್ಸಿನ ಚಂಚಲತೆಗಳ ಮೇಲಿನ ನಿರ್ಬಂಧ ಹೇರುವಿಕೆ. ಯೋಗದ ಗುರಿಗಳು ಆರೋಗ್ಯ ರಕ್ಷಣೆಯಿಂದ ಹಿಡಿದು ಮೋಕ್ಷವನ್ನು ಸಾಧಿಸುವವರೆಗೆ. ಯೋಗಕ್ಕೆ ಯಾವುದೇ ಜಾತಿ ಧರ್ಮದ ತಾರತಮ್ಯಗಳಿಲ್ಲ .ಆಸಕ್ತಿ ಇರುವ ಯಾರು ಬೇಕಾದರೂ ಅಭ್ಯಾಸಬಹುದಾಗಿದೆ. ಪತಂಜಲಿ ಮಹರ್ಷಿಗಳನ್ನು ಯೋಗದ ಪಿತಾಮಹ ಎಂದು ಕರೆಯಲಾಗುತ್ತಿದ್ದು ಈ ಶ್ಲೋಕದಿಂದ ಪ್ರಾರ್ಥಿಸುತ್ತಾರೆ .

ಯೋಗೇನ ಚಿತ್ತಸ್ಯ ಪದೇನ ವಾಚಾಂ|ಮಲಂ ಶರೀರಸ್ಯ ಚ ವೈದ್ಯಕೇನ|
ಯೋಪಾ ಕರೋತ್ತಮ್ ಪ್ರವರಂ ಮುನೀನಾಂ|
ಪತಂಜಲಿಂ ಪ್ರಾಜಂಲಿರಾನತೋಸ್ಮಿ||
Loading...

ಯೋಗದಿಂದ ಮನಸ್ಸನ್ನು, ಪದಗಳಿಂದ ಮಾತನ್ನೂ, ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿವೆ ಎನ್ನುತ್ತಾ ಯೋಗ ಆರಂಭ ಮಾಡಿದರೆ, ದೇಹಾರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯವೂ ದೊರಕುವುದು.

ಯೋಗದ ಹುಟ್ಟು: ವಿಶ್ವದ ಸಮಸ್ತ ಜನರು ಯೋಗಕ್ಕೆ ಮಾರು ಹೋಗಿರುವ ಈ ಆಧುನಿಕ ಯುಗವು ಯೋಗ ಯೋಗವಾಗಿ ಮಾರ್ಪಾಡಾಗುತ್ತಿದೆ. ಯೋಗ ವಿದ್ಯೆಯ ಜನ್ಮಭೂಮಿಯಾದ ಭಾರತದಲ್ಲಿ ಸಂಸ್ಕೃತಿಯ ತಳಹದಿಯಾದ 'ಸರ್ವೇ ಜನಾಃ ಸುಖಿನೋ ಭವಂತು' ತತ್ತ್ವವು ಯೋಗದ ಮೂಲಕ ಮೂಲೆ ಮೂಲೆಗಳಿಗೂ ಪಸರುತ್ತಿದೆ. ತತ್ವಶಾಸ್ತ್ರದಲ್ಲಿ ರಾಜಯೋಗ ,ಕರ್ಮಯೋಗ, ಜ್ಞಾನಯೋಗ ಭಕ್ತಿಯೋಗ ಮತ್ತು ಹಠಯೋಗಗಳೆಂಬ ಶಾಖೆಗಳ ಬಗೆಗೆ ಪ್ರಸ್ತಾಪಿಸಲಾಗಿದ್ದು ,ಅನೇಕ ಗ್ರಂಥಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಉಪನಿಷತ್ತುಗಳಲ್ಲಿ ಯೋಗದ ವಾಸ್ತವ್ಯವನ್ನು ವಿವರಿಸಲಾಗಿದೆ. ರಾಜಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು, ಯೋಗದ ತಾತ್ವಿಕ ವ್ಯವಸ್ಥೆಯು ಸಾಂಖ್ಯಪಥದೊಂದಿಗೆ ಸಂಪರ್ಕ ಹೊಂದಿರುವುದರಿಂದ ಮನಶಾಸ್ತ್ರ ಹಾಗೂ ಅಧ್ಯಾತ್ಮದತ್ತ ಮುಖ ಮಾಡಿ ನಿಂತಿದೆ.

ಯೋಗ ಮಾರ್ಗಗಳು:

ಕರ್ಮಯೋಗ: ಜೀವಿಯು ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮಗಳನ್ನು ಮಾಡುತ್ತಲೇ 'ಕರ್ಮಬಂಧ'ಕ್ಕೆ ಒಳಗಾಗುತ್ತಾನೆ. ಆ ಕರ್ಮವು ಸರಿಯಾಗಿ ನಿರ್ವಹಿಸಲುಪಟ್ಟು ಆತ್ಮಸಾಕ್ಷಾತ್ಕಾರ ಹಾಗೂ ಮುಕ್ತಿ ಸಾಧಿಸುವುದೇ ಕರ್ಮಯೋಗ.

ಜ್ಞಾನ ಯೋಗ: ಪರಿಪೂರ್ಣ ಅರಿವನ್ನು ಮನೋಚಿಂತನೆಯಿಂದ ಕಂಡುಕೊಳ್ಳುವುದಾಗಿದ್ದು,ಶ್ರವಣ,ಮನನಗಳ ಮೂಲಕ ಪ್ರಾಪಂಚಿಕ ಬಯಕೆಗಳಿಂದ ಮುಕ್ತಿ ಕಂಡುಕೊಂಡು,ನೆಮ್ಮದಿಯ ಬಾಳ್ವೆ ನಡೆಸುವ ದಾರಿಯಾಗಿದೆ.

ಭಕ್ತಿ ಯೋಗ: ಶ್ರವಣ,ಕೀರ್ತನ,ಸ್ಮರಣೆ, ಪಾದ ಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮಸಂವೇದನೆಗಳ ಆರಾಧನೆಯ ಮೂಲಕ ಸಾರ್ವತ್ರಿಕ ಬಂಧುತ್ವ ಸಾರುವ ಮಾರ್ಗವಾಗಿದೆ.

ರಾಜಯೋಗ: ಯಮ,ನಿಯಮ,ಆಸನ,ಪ್ರಾಣಾಯಾಮ,ಪ್ರತ್ಯಾಹಾರ,ಧಾರಣ ಧ್ಯಾನ, ಸಮಾಧಿಗಳ ಮೂಲಕ ಮನಸ್ಸಿನ ಹಿಡಿತ ಸಾಧಿಸುವ ಮಾರ್ಗವಾಗಿದೆ.

ಯೋಗ ಮತ್ತು ಆರೋಗ್ಯ

ಯೋಗಾಸನವು ಮನುಷ್ಯನ ಶರೀರ ರಚನಾ ಶಾಸ್ತ್ರದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಜೀವನದ ಆರೋಗ್ಯಕ್ಕೆ ಯೋಗವೇ ನೇರ ಹಾದಿಯಾಗಿದೆ. 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆಯಂತೆ 'ಯೋಗ ಬಲ್ಲವನು ರೋಗದಿಂದ ಮುಕ್ತ'ನಾಗಿರುತ್ತಾನೆ .ಕಾಯಿಲೆ ಬಂದ ಮೇಲೆ ವಾಸಿ ಮಾಡಿಕೊಳ್ಳುವುದಕ್ಕಿಂತ ಕಾಯಿಲೆ ಬಾರದಂತೆ ತಡೆಯುವುದು ಜಾಣತನ. ಸಕಲ ಕೆಲಸ ಕಾರ್ಯಗಳಿಗೂ ಮೊತ್ತ ಮೊದಲು ಬೇಕಾಗಿರುವುದು ಆರೋಗ್ಯಕರವಾಗಿರುವ ಸದೃಢ ಶರೀರ. ಯೋಗಾಭ್ಯಾಸದಿಂದ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಯೋಗವು ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಸಕಾರಾತ್ಮಕವಾಗಿ, ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಮಾನಸಿಕ ಒತ್ತಡಕ್ಕೊಳಗಾದಂತೆ ನೋಡಿಕೊಳ್ಳುತ್ತದೆ. ಚಿತ್ತ ಚಾಂಚಲ್ಯವನ್ನು ತೊಡೆದು ಹಾಕುತ್ತದೆ.ದೈನಂದಿನ ಯೋಗಾಭ್ಯಾಸದಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಸಂಧಿವಾತಗಳು, ಥೈರಾಯ್ಡ್ ಹಾಗೂ ಮಹಿಳೆಯರ ಋತುಚಕ್ರದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.

'ಮನಸ್ಸಿದ್ದರೆ ಮಾರ್ಗ' ಎಂದು ಯೋಗವನ್ನು ಛಲದಿಂದ ಸಾಧಿಸಿದರೆ 'ಯೋಗದಿಂದ ಆರೋಗ್ಯ'ವನ್ನು ಗಿಟ್ಟಿಸಿಕೊಳ್ಳಬಹುದು. ಪ್ರತಿನಿತ್ಯದ ಆಧುನಿಕ ಜೀವನ ಶೈಲಿಯಿಂದಾಗಿ ಆರೋಗ್ಯ ಹಾಳಾಗುತ್ತಿದ್ದು, ಎಲ್ಲಕ್ಕೂ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿರುವ ಯೋಗದಿಂದ ಪರಿಹಾರ ಸಿಗಲಿದೆ.ಸುಖ,ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಯೋಗ ಅಭ್ಯಾಸ ಪ್ರಾರಂಭಿಸೋಣ.

ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ತಜ್ಞರು
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ