ಸಾಧನೆಯ ಹಾದಿಗೆ ಆತ್ಮವಿಶ್ವಾಸ (Confidence) ಮತ್ತು ದೃಢ ವ್ಯಕ್ತಿತ್ವಗಳೇ ಮೊದಲ ಮೆಟ್ಟಿಲುಗಳು. ಹೌದು ಆತ್ಮವಿಶ್ವಾಸ ಮತ್ತು ಕೆಲಸ ಮಾಡಲು ಬೇಕಾದ ದೃಢ ವ್ಯಕ್ತಿತ್ವ ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆಗ ನಾವೆಲ್ಲ ಸಾಧನೆಯಿಂದ ಹಿಂದೆ ಸರಿದುಬಿಡುತ್ತೇವೆ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ (Achievement) ಅಡ್ಡಿಪಡಿಸುವವರನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಮತ್ತು ದೃಢತ್ವ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನ (Success)ಖುಷಿಯಲ್ಲಿ ಮಿಂದೇಳುತ್ತೇವೆ.
ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಸಾಧನೆಗೆ ಬಹು ಮುಖ್ಯ ಸಾಧನಗಳು
ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಎಂಬುದು ವ್ಯಕ್ತಿಯ ಬಳಿ ಇರುವ ಅತ್ಯಮೂಲ್ಯ ಆಸ್ತಿಗಳು ಎಂದ್ರೂ ತಪ್ಪಾಗಲಾರದು. ಅವುಗಳನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಅಂತಹ ವ್ಯಕ್ತಿಯನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ವ್ಯಕ್ತಿಯ ಯಶಸ್ಸಿಗೆ ಬಹಳ ಮುಖ್ಯ ಎಂದು ಕರೆಯುತ್ತಾರೆ.
ತನ್ನ ಗುಣ – ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು ಮತ್ತು ಸ್ವಸಾಮರ್ಥ್ಯದ ಬಗ್ಗೆ ವ್ಯಕ್ತಿಗಿರುವ ನಂಬಿಕೆಯೇ “ಆತ್ಮವಿಶ್ವಾಸ” ಆಗಿರುತ್ತದೆ. ಆ ಆತ್ಮವಿಶ್ವಾಸದ ಜೊತೆಗೆ ಹಿಡಿದ ಕೆಲಸವನ್ನು ಎಂತಹ ಕಷ್ಟವೇ ಬರಲಿ ಬಿಡುವುದಿಲ್ಲ ಎಂಬ “ದೃಢವಾದ ವ್ಯಕ್ತಿತ್ವ” ಇದ್ದರೆ ಯಾವುದೇ ವ್ಯಕ್ತಿ ಉನ್ನತ ಸಾಧನೆಯನ್ನು ಮಾಡುತ್ತಾನೆ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ.‘
ಇದನ್ನೂ ಓದಿ: ಒತ್ತಡದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
ಹಾಗಿದ್ರೆ ಆತ್ಮವಿಶ್ವಾಸದಿಂದ ಇರುವ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಶಾಂತವಾಗಿ ಮತ್ತು ಧೈರ್ಯವಾಗಿ ವ್ಯಕ್ತಪಡಿಸುತ್ತಾರೆ ಎಂಬುದು ನಿಮ್ಗೆ ಗೊತ್ತೆ? ಹಾಗೆ ನೀವು ಆಗಬೇಕೆಂದು ಎಂದಾದರೂ ಅಂದುಕೊಂಡಿರುವಿರಾ? ಅಥವಾ ಹೀಗೆ ನಾಚಿಕೆ ಮತ್ತು ಆತ್ಮವಿಶ್ವಾಸವಿಲ್ಲದೇ ಜೀವನ ಸಾಗಿಸಬೇಕು ಎಂದುಕೊಂಡಿರುವಿರಾ? ನೀವೆ ಯೋಚಿಸಿ..ನೀವು ಏನಾಗಬೇಕೆಂದು ಬಯಸಿದ್ದೀರಿ.
ಈ ಲೇಖನದಲ್ಲಿ, ನೀವು ಜೀವನದಲ್ಲಿ ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವವಿರುವ ವ್ಯಕ್ತಿಯಾಗುತ್ತಿರುವ 10 ಸಂಕೇತಗಳ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ತಡ ಯಾಕೆ ಮುಂದೆ ಓದಿ.
ಜೀವನದಲ್ಲಿ ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವವಿರುವ ವ್ಯಕ್ತಿಯಾಗುತ್ತಿರುವ 10 ಸಂಕೇತಗಳು
1) "ಇಲ್ಲ" ಎಂದು ಹೇಳುವ ಅಭ್ಯಾಸ ಹೊಂದಿರುವಿರಿ
ಜೀವನದಲ್ಲಿ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಿ ಇರಲು ಸಾಧ್ಯವೇ ಇಲ್ಲ. ಬೇರೆಯವರು ಹೇಗೆ ಎಂದ್ರೆ ಅವರು ಹೇಳುವ ಕೆಲಸ ಮಾಡಲು ನಾವು ಓಕೆ ಅಂದ್ರೆ ಮಾತ್ರ ನಾವು ಒಳ್ಳೆಯವರು ಇಲ್ಲ ಅಂದ್ರೆ ಕೆಟ್ಟವರು ಅಂತ ನಿರ್ಧಾರ ಮಾಡೋ ಎಷ್ಟೋ ಜನರನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೆವೆ. ಆದ್ರೆ ನಮ್ಮ ನಮ್ಮ ಕೆಲಸ ಮೊದಲು ಮಾಡಿಕೊಳ್ಳುವುದು ಬಹಳ ಮುಖ್ಯ.
ಆದ್ದರಿಂದ ಅನಾವಶ್ಯಕ ನಿರ್ಧಾರಗಳು ಮತ್ತು ವಿಚಾರಗಳಿಗೆ ಮೊದಲು “ಇಲ್ಲ” ಎಂದು ಹೇಳಲು ಕಲಿಯಿರಿ. ಇದರಿಂದ ಜೀವನದಲ್ಲಿ ಎಷ್ಟೋ ಅನಾವಶ್ಯಕ ತಲೆನೋವು ಕಡಿಮೆಯಾಗಿ, ನೀವು ಹೆಚ್ಚು ಆತ್ಮವಿಶ್ವಾಸ ಮತ್ತು ದೃಢತೆಯಿಂದ ನಿಮ್ಮ ಗುರಿಯನ್ನು ತಲುಪಬಹುದು. ಈಗಾಗಲೇ ನೀವೇ “ಇಲ್ಲ” ಎಂದು ಹೇಳುವುದು ಹೇಗೆ ಎಂದು ಕಲಿತು ಕೊಂಡಿದ್ದರೆ ತುಂಬಾ ಒಳ್ಳೆಯದಾಯಿತು. ಇದರರ್ಥ ನೀವು ಹೆಚ್ಚು ಆತ್ಮವಿಶ್ವಾಸ ಮತ್ತು ದೃಢವಾಗಿ ಬೆಳೆಯುತ್ತಿರುವ ಮೊದಲ ಸಂಕೇತವಾಗಿದೆ.
2) ನಿಮ್ಮ ಸಮಯಕ್ಕೆ ಮೊದಲು ಪ್ರಾಮುಖ್ಯತೆ ನೀಡುವುದು
ನಮ್ಮ ಹಿರಿಯರು ಸಮಯವನ್ನು ಚಿನ್ನ ಎಂದು ಕರೆಯುತ್ತಾರೆ. ಇಂದಿನ ಕಾಲದಲ್ಲಿ ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವುದು ನಮ್ಮ ಟೈಮ್ ಎಂಬುದು ಬಹುತೇಕರ ಮಾತಾಗಿದೆ. ಹೌದು, ಸಮಯ ಎಂಬುದು ಯಾರಿಗೋಸ್ಕರವು ಕಾಯುವುದಿಲ್ಲ. ಅದನ್ನು ಸರಿಯಾಗಿ ಬಳಕೆ ಮಾಡುವುದರ ಕುರಿತು ನಮ್ಮ ಗಮನ ಸದಾ ಇರಲೇಬೇಕು. ಇಲ್ಲವೆಂದರೆ ಸಾಧನೆ ಮಾಡಲು ಸಾಧ್ಯವಿಲ್ಲ.
ನಿಮ್ಮ ಲಿಮಿಟ್ಸ್‌ಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಿರಬೇಕು. ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದ್ರೆ, ನೀವು ಹೆಚ್ಚು ಆತ್ಮವಿಶ್ವಾಸ ಮತ್ತು ದೃಢವಾಗಿ ನೀವು ನಿಮ್ಮ ಸಮಯವನ್ನು ಬಳಸಿಕೊಳ್ಳಬೇಕು. ಇದು ನಿಮಗೆ ಜೀವನದಲ್ಲಿ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಸಮಯಕ್ಕೆ ಸೂಕ್ತ ಬೆಲೆ ನೀವು ಈಗಾಗಲೇ ನೀಡುತ್ತಿದ್ದರೆ ಅದು ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವದ ಮತ್ತೊಂದು ಸಂಕೇತವೆಂದು ಹೇಳಬಹುದು.
3) ನಿಮಗೆ ಬೇಕಾದುದನ್ನು ಕೇಳಲು ನೀವು ಹೆದರುವುದಿಲ್ಲ
ಹೌದು, ಜೀವನದಲ್ಲಿ ನಿಮಗೆ ಏನು ಬೇಕು ಎಂಬುದರ ಸ್ಪಷ್ಟ ಕಲ್ಪನೆ ಇರಲೇಬೇಕು. ಇಲ್ಲದಿದ್ದರೆ ಜೀವನದಲ್ಲಿ ಅನೇಕ ಗೊಂದಲಗಳನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ನಿಮಗೆ ಬೇಕಾಗಿರುವುದನ್ನು ಕೇಳಲು ಮುಖ್ಯವಾಗಿ ಧೈರ್ಯವಿರಬೇಕು, ಈ ಗುಣ ನಿಮ್ಮಲ್ಲಿ ಬರುವುದು ಆತ್ಮವಿಶ್ವಾಸ ಮತ್ತು ದೃಢತ್ವದಿಂದ ಮಾತ್ರ.
ಉದಾಹರಣೆಗೆ, ಕಚೇರಿಯಲ್ಲಿ ವೇತನ ಹೆಚ್ಚಳದ ಬಗ್ಗೆ ಧೈರ್ಯವಾಗಿ ಮಾತನಾಡುವುದು, ನಿಮ್ಮ ಸಹಾಯಕ್ಕೆ ಬೇರೆಯವರ ಸಹಾಯ ಕೇಳುವುದು, ನಿಮ್ಮ ಆಸೆ ಕನಸುಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು. ಹೀಗೆ ಇಂತಹ ವಿಚಾರಗಳ ಬಗ್ಗೆ ಈಗಾಗಲೇ ನೀವು ಮುಕ್ತವಾಗಿ ಮಾತನಾಡುತ್ತಿದ್ದೀರಿ ಎಂದರೆ ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವದ ಮತ್ತೊಂದು ಸಂಕೇತವಾಗಿದೆ.
4) ಯಾವುದೇ ಭಯವಿಲ್ಲದೇ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು
ನಿಮಗೆ ಬೇಕಾದುದನ್ನು ಕೇಳುವಂತೆಯೇ, ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನುನಿರ್ಭಯವಾಗಿ ವ್ಯಕ್ತಪಡಿಸುವುದು ನೀವು ಹೆಚ್ಚು ಆತ್ಮವಿಶ್ವಾಸ ಮತ್ತು ದೃಢತೆಯನ್ನು ಹೊಂದುತ್ತಿರುವ ಸಂಕೇತವಾಗಿದೆ. ಇತರರು ಏನು ಯೋಚಿಸುತ್ತಾರೆ ಎಂಬುದನ್ನು ಮರೆತು ನಾವು ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು.
5) ನಿಮಗೆ ಎದುರಾಗುವ ಟೀಕೆಗಳನ್ನು ಉತ್ತಮವಾಗಿ ನಿಭಾಯಿಸುವ ಕಲೆ ಹೊಂದಿರುತ್ತೀರಿ
ಹೌದು, ಈ ಗುಣ ಇದ್ದರೆ ಮಾತ್ರ ಜೀವನವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಇಲ್ಲವೆಂದರೆ ಜೀವನದಲ್ಲಿ ನಾವು ಏನೇ ಮಾಡಿದ್ರೂ ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಅಂತಹವರಿಂದ ನಾವು ಹೆದರಿ ನಮ್ಮ ಸಾಧನೆಯಿಂದ ದೂರ ಓಡುವ ಬದಲು ಆ ಟೀಕೆಗಳು ಎಂಬ ಕಲ್ಲುಗಳನ್ನು ನಮ್ಮ ಸಾದನೆಯೆಂಬ ಕಟ್ಟಡ ನಿರ್ಮಿಸಲು ಬಳಸಿಕೊಳ್ಳುವುದೇ ನಿಜವಾದ ಜಾಣತನ. ಟೀಕೆಗಳನ್ನು ಯಾವಾಗಲೂ ಪಾಸಿಟಿವ್ ತೆಗೆದುಕೊಳ್ಳಬೇಕು. ಈ ಗುಣ ನಿಮ್ಮಲ್ಲಿದ್ದರೆ, ನೀವು ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವ ಹೊಂದುತ್ತಿರುವ ಮತ್ತೊಂದು ಸಂಕೇತವಾಗಿದೆ.
6) ನೀವು ಹೆಚ್ಚು ಮೌನಿಗಳಾಗಿ ಇರಲು ಇಷ್ಟಪಡುತ್ತೀರಿ.
ಒಬ್ಬ ವ್ಯಕ್ತಿ ಮೌನದಿಂದ ಇರುತ್ತಾನೆ ಎಂದ ತಕ್ಷಣ ಅವನು ಏನು ಮಾಡುವುದಿಲ್ಲ ಎಂದು ಭಾವಿಸಬಾರದು. ಹೆಚ್ಚು ಮೌನವಾಗಿರುವ ವ್ಯಕ್ತಿ ಹೆಚ್ಚು ಕಾರ್ಯನಿರತನಾಗಿರುತ್ತಾನೆ. ನಾವು ಹೆಚ್ಚು ಹೆಚ್ಚು ಮೌನವಾಗಿರುವುದನ್ನು ಅಭ್ಯಾಸ ಮಾಡಿದ ಮೇಲೆ ನಾವು ನಮ್ಮ ಯೋಚನೆಗಳ ಜೊತೆ ಪ್ರಬಲವಾಗಿ ಕನೆಕ್ಟ್ ಆಗುತ್ತೇವೆ.
ಆಗ ಯೋಚನೆಗಳು ಮುಂದೆ ಕಾರ್ಯಗಳಾಗಿ ಬದಲಾಗಿ ನಮ್ಮ ಗುರಿಯನ್ನು ಮುಟ್ಟಿಸುವಲ್ಲಿ ಪ್ರಮುಖವಾದವುಗಳಾಗುತ್ತವೆ. ಇದು ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಹೊಂದುತ್ತಿರುವ ಸಂಕೇತವಾಗಿದೆ.
7) ನಿಮ್ಮ ತಪ್ಪುಗಳನ್ನು ಕಲಿಕೆಯ ಅವಕಾಶಗಳನ್ನಾಗಿ ಮಾರ್ಪಡಿಸಿಕೊಳ್ಳುತ್ತೀರಿ
ತಪ್ಪು ಮಾಡದವರೂ ಯಾರಿದ್ದಾರೆ ಹೇಳಿ, ಆದರೆ ಆ ತಪ್ಪುಗಳನ್ನು ತಮ್ಮ ಕಲಿಕೆಗೆ ಸಹ ಕಾರಣವಾಗುವ ಅವಕಾಶಗಳನ್ನಾಗಿ ಮಾಡಿಕೊಳ್ಳುವ ಸಕಾರಾತ್ಮಕ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಇಂತಹ ಗುಣವನ್ನು ನಾವು ಅಗತ್ಯವಾಗಿ ಕಲಿಯಬೇಕು. ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಇದ್ದರೆ ನಮ್ಮ ತಪ್ಪುಗಳನ್ನು ಅವಕಾಶಗಳನ್ನಾಗಿ ಮಾಡಿಕೊಳ್ಳಬಹುದಾದ ಅಭ್ಯಾಸ ನಮ್ಮಲ್ಲಿ ಬರುತ್ತದೆ. ಇದು ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವ ಹೊಂದುತ್ತಿರುವ ಸಂಕೇತವಾಗಿದೆ.
8) ಜೀವನದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಗುಣ ಹೊಂದಿರುತ್ತೀರಿ
ಪ್ರತಿಯೊಬ್ಬರ ಜೀವನವು ಒಂದು ಹೋರಾಟವಿದ್ದಂತೆ. ಕೆಲವರು ಜೀವನದ ಸಮಸ್ಯೆಗಳಿಗೆ ಹೆದರಿ ಕೂರುತ್ತಾರೆ. ಆದರೆ ಇನ್ನು ಕೆಲವರು ಜೀವನದಲ್ಲಿ ಕೆಲವು ರಿಸ್ಕ್ ತೆಗೆದುಕೊಂಡು ತಮ್ಮ ಜೀವನವನ್ನು ಸಮಸ್ಯೆಗಳಿಂದ ದೂರ ಮಾಡಿಕೊಂಡು ಸಂತೋಷದಿಂದ ಬದುಕುತ್ತಾರೆ.
ತಮ್ಮ ಕಂಪರ್ಟ್‌ಜೋನ್‌ನಿಂದ ಹೊರ ಬರುವುದಕ್ಕೆ ತುಂಬಾ ಧೈರ್ಯ ಬೇಕೇಬೇಕು. ನೀವು ತೆಗೆದುಕೊಳ್ಳುವ ಪ್ರತಿಯೊಂದು ಅಪಾಯದೊಂದಿಗೆ, ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಸಾಮರ್ಥ್ಯದ ಪರಿಧಿಯನ್ನು ವಿಸ್ತರಿಸುತ್ತೀರಿ. ಅದರೊಂದಿಗೆ ದೃಢ ವ್ಯಕ್ತಿತ್ವದ ವ್ಯಕ್ತಿಯಾಗಿ ಬೆಳೆಯುತ್ತೀರಿ.
9) ಇತರರ ಯಶಸ್ಸನ್ನು ನೀವು ಮುಕ್ತವಾಗಿ ಸೆಲೆಬ್ರೆಟ್ ಮಾಡುವ ಗುಣ ಹೊಂದಿರುತ್ತೀರಿ
ಯಾವಾಗಲೂ ಇನ್ನೊಬ್ಬರ ಯಶಸ್ಸು ನೋಡಿ ಸಂತೋಷ ಪಡುವ ಗುಣ ಯಾರಲ್ಲಿ ಇದಿಯೋ ಅವರು ಮುಂದೊಂದು ದಿನ ಖಂಡಿತ ಪಡೆಯುತ್ತಾರೆ. ನೀವು ಈಗ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೀರಿ ಎಂಬುದರ ಇನ್ನೊಂದು ಸಂಕೇತವೆಂದರೆ ನೀವು ಇತರ ಜನರ ಯಶಸ್ಸನ್ನು ಆಚರಿಸುತ್ತೀರಿ ಎಂಬುದಾಗಿದೆ. ನಾವು ಯಾವಾಗಲೂ ಇನ್ನೊಬ್ಬರ ಜೊತೆ ನಮ್ಮನ್ನು ಮತ್ತು ನಮ್ಮ ಕೆಲಸಗಳನ್ನು ಹೋಲಿಕೆ ಮಾಡಿ ನೋಡಿಕೊಳ್ಳುತ್ತೇವೆ.
ಆದರೆ ನಮ್ಮ ಜೊತೆ ಇರುವವರು ಏನಾದ್ರೂ ಸಾಧನೆ ಮಾಡಿದಾಗ ಅವರ ಸಂತಸ ನೋಡಿ ಅಸೂಹೆ ಪಡುವುದೇ ಹೆಚ್ಚು. ಇದರ ಬದಲು ಅವರ ಸಾಧನೆಯನ್ನು ಸೆಲೆಬ್ರೆಟ್ ಮಾಡುವ ಗುಣ ಹೊಂದಿದ್ದರೆ, ನೀವು ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಹೊಂದುತ್ತಿರುವ ಸಂಕೇತವಾಗಿದೆ.
10) ನಿಮ್ಮನ್ನು ನೀವು ಗೌರವಿಸಿಕೊಳ್ಳುತ್ತೀರಿ
ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಬಗ್ಗೆ ನಮಗೆ ಗೌರವ ಇರಬೇಕು. ಆತ್ಮವಿಶ್ವಾಸ ಇರುವ ಮತ್ತೊಂದು ಪ್ರಮುಖ ಸಂಕೇತವೆಂದ್ರೆ ನಮ್ಮನ್ನು ನಾವು ಗೌರವಿಸಿಕೊಳ್ಳುವುದು. ನನ್ನ ಆಯ್ಕೆಗಳನ್ನು ನಾವು ಗೌರವಿಸಿಕೊಳ್ಳುವ ಗುಣ ಹೊಂದಿದ್ದರೆ, ಆತ್ಮವಿಶ್ವಾಸ ಮತ್ತು ದೃಢವಾದ ವ್ಯಕ್ತಿತ್ವ ಹೊಂದುತ್ತಿರುವ ಪ್ರಮುಖ ಸಂಕೇತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ