ನಮ್ಮಲ್ಲಿ ಅನೇಕ ಜನರು ತಮ್ಮದೇ ಆದ ಕಂಫರ್ಟ್ ಝೋನ್‌ನಲ್ಲೇ (Comfort Zone) ಇರಲು ಬಯಸುತ್ತಾರೆ. ಅದು ಆಫೀಸಿನ (Office) ಕೆಲಸವಾಗಲಿ. ಮನೆಯೊಳಗೇ (Home) ಇರುವುದಾಗಲಿ ಅಥವಾ ನಮ್ಮ ಸುತ್ತಲಿನ ಜನರ ಜೊತೆ ಬೆರೆಯುವುದಾಗಲಿ. ಇಂಥ ಅಭ್ಯಾಸಗಳೊಂದಿಗೆ ಒಂದು ಆರಾಮದಾಯಕ ಸಂಬಂಧವನ್ನು (Relation) ಹೊಂದಿರುತ್ತಾರೆ. ಅವುಗಳ ಹೊರತಾಗಿ ಹೊಸದನ್ನು ಪ್ರಯತ್ನಿಸಲು ಅವರು ಭಯಪಡುತ್ತಾರೆ. ಹೊಸ ಕೆಲಸ ಹೇಗಿರುತ್ತದೋ. ಅಥವಾ ಮನೆಯಿಂದ ಹೊರಹೋದರೆ ಪರಿಸ್ಥಿತಿ ಹೇಗಿರುತ್ತದೋ. ಅಥವಾ ಯಾರು ಹೇಗಿರುತ್ತಾರೋ. ಎಂದೆಲ್ಲ ಭಾವಿಸಿ ಕಂಫರ್ಟ್ ಝೋನ್‌ನಿಂದ ಹೊರಬರಲು ಭಯಪಡುತ್ತಾರೆ.
ಆದರೆ ನಾವು ನಮ್ಮ ಆರಾಮ ವಲಯದಲ್ಲಿ ವಾಸಿಸುತ್ತಿರುವಾಗ ಜೀವನವು ಸುರಕ್ಷಿತವಾಗಿದೆ ಎಂದೇ ಅಂದುಕೊಳ್ಳುತ್ತೇವೆ. ಹಾಗೆ ಆರಾಮವಾಗಿರುವುದು ನಿಜವಾಗಿದ್ದರೂ ನಾವು ನಮ್ಮ ಕಂಫರ್ಟ್ ಝೋನ್‌ನಲ್ಲಿದ್ದಾಗ ಜೀವನದಲ್ಲಿ ಬಹಳಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ.
ಜೀವನದಲ್ಲಿ ಕೆಲವು ರೂಢಿಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಆದರೆ ಅಭ್ಯಾಸವಾಗಿರುವ ಕೆಲವು ರೂಢಿಗಳನ್ನು ಬಿಡುವುದು ಬಹಳ ಕಷ್ಟ. ಆದರೆ ಕಂಫರ್ಟ್ ಝೋನ್‌ನಿಂದ ಹೊರಬರುವುದು ತುಂಬಾ ಮುಖ್ಯ. ಹಾಗೆ ಹೊರಬಂದಾಗಲೇ ನಿಮ್ಮ ಸಾಮರ್ಥ್ಯದ ಅರಿವು ನಿಮಗಾಗುತ್ತದೆ. ಹೊಸ ಆತ್ಮವಿಶ್ವಾಸ ಮೂಡುತ್ತದೆ. ಹಾಗೆ ನೀವು ಕಂಫರ್ಟ್ ಝೋನ್‌ನಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ತಿಳಿಯಲು ನಿಮ್ಮ ಇಚ್ಛಾಶಕ್ತಿ ಮತ್ತು ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ.
ಕಂಫರ್ಟ್ ಝೋನ್‌ನಿಂದ ಹೊರಬರುವಾಗ ನಿಮಗೆ ಹೀಗೆಲ್ಲಾ ಅನಿಸಬಹುದು.
1.ಅನಿಶ್ಚಿತತೆಯ ಭಯ: ನೀವು ಕಂಫರ್ಟ್ ಝೋನ್‌ನಲ್ಲಿದ್ದಾಗ ನೀವು ಭದ್ರತೆಯ ಭಾವವನ್ನು ಅನುಭವಿಸುತ್ತೀರಿ. ನಿಮ್ಮ ಆರಾಮ ವಲಯದಿಂದ ಹೊರಗೆ ಹೋಗುವುದನ್ನು ನೀವು ಪರಿಗಣಿಸಿದಾಗಲೆಲ್ಲಾ ಅನಿಶ್ಚಿತತೆಯ ಭಯ ನಿಮ್ಮನ್ನು ಕಾಡುತ್ತದೆ. ಆದ್ದರಿಂದ, ನೀವು ನಿಮ್ಮ ಆರಾಮ ವಲಯವನ್ನು ಮೀರಿ ಹೋಗಿದ್ದೀರಿ ಎಂದು ನಿಮಗೆ ತಿಳಿದಿದ್ದರೂ ಸಹ,ಕೆಲವೊಮ್ಮೆ ಭಯವು ಅದನ್ನು ತಡೆಯುವಂತೆ ಮಾಡುತ್ತದೆ.
2.ಆರಾಮಕ್ಕಾಗಿ ಬಯಕೆ: ಜನರು ಇದ್ದಂತೆಯೇ ಇರಲು ಬಯಸುತ್ತಾರೆ. ಏಕೆಂದರೆ ಅವರಿಗೆ ಅದು ಅನುಕೂಲಕರ ಮತ್ತು ಸುರಕ್ಷಿತವಾಗಿರುತ್ತದೆ. ಆದಾಗ್ಯೂ, ನೀವು ಕಂಫರ್ಟ್ ಝೋನ್‌ನಲ್ಲಿಯೇ ಇದ್ದರೆ ಇದ್ದ ಹಾಗೇ ಇರುತ್ತೀರೇ ಹೊರತು ಅಭಿವೃದ್ಧಿಯಾಗುವುದಿಲ್ಲ. ಅವಕಾಶಗಳನ್ನು ಪಡೆದುಕೊಳ್ಳದೇ... ಹೊಸದನ್ನು ಪ್ರಯತ್ನಿಸದೇ ಇರುವುದರಿಂದ ನಿಮ್ಮ ಬದುಕು ನೀರಸವಾಗುವ ಸಾಧ್ಯತೆಗಳಿರುತ್ತವೆ.
3.ಒಂದು ಸ್ಥಿರ ಮನಸ್ಥಿತಿ: ಇದು ನನ್ನಿಂದಾಗುವಂಥದ್ದಲ್ಲ ಎಂಭ ಮನಸ್ಥಿತಿಯಿಂದ ನೋಡಿದಾಗ ನೀವು ಸಾಧಿಸಲು ಅಸಮರ್ಥರಾಗಿದ್ದೀರಿ ಅಂದುಕೊಳ್ಳುತ್ತೀರಿ. ಪರಿಣಾಮವಾಗಿ, ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಲಿಯಲು ಆಸಕ್ತಿ ಹೊಂದುವುದಿಲ್ಲ.
ಬದಲಾಗಿ, ನಿಮ್ಮ ಪ್ರಸ್ತುತದಲ್ಲಿ ಹೇಗಿದ್ದೀರೋ ಹಾಗೆಯೇ ಮುಂದುವರಿಯಲು ಬಯಸುತ್ತೀರಿ. "ನನ್ನಿಂದ ಅದನ್ನು ಮಾಡಲು ಸಾಧ್ಯವಿಲ್ಲ" ಅಥವಾ "ಅದು ನನಗೆ ತಿಳಿದಿರುವ ವಿಷಯವಲ್ಲ “ಎಂದು ಹೇಳುವಂಥ ಮನಸ್ಥಿತಿ ಹೊಂದುತ್ತೀರಿ. ಈ ಮೂಲಕ ನಿಮ್ಮ ಕಂಫರ್ಟ್ ಝೋನ್‌ನಲ್ಲಿಯೇ ಉಳಿದು ಹೊಸ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ.
4.ದಿನನಿತ್ಯದ ಅಭ್ಯಾಸಗಳು: ಬಹಳಷ್ಟು ಕಾಲದಿಂದ ಇರುವಂಥ ನಮ್ಮ ಅಭ್ಯಾಸಗಳನ್ನು... ಯೋಚನಾ ಲಹರಿಯನ್ನು ಬದಲಾಯಿಸಿಕೊಳ್ಳುವುದು ಸವಾಲಿನ ಸಂಗತಿಯಂತೂ ಹೌದು. ನಿರ್ದಿಷ್ಟ ಕ್ರಿಯೆಗಳಲ್ಲಿ ಪದೇ ಪದೇ ತೊಡಗಿಸಿಕೊಳ್ಳುವ ಪರಿಣಾಮವಾಗಿ ನಾವು ಅದನ್ನು ಅಭ್ಯಾಸಗಳನ್ನಾಗಿ ಮಾಡಿಕೊಂಡಿರುತ್ತೇವೆ. ಅಂಥ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಕಷ್ಟಪಡಬೇಕಾಗುತ್ತದೆ.
ಆದರೆ ನೀವು ನಿಮ್ಮ ಆರಾಮ ಜೀವನದಿಂದ ಹೊರಗೆ ಬರುವುದೂ ಬಹಳ ಮುಖ್ಯವಾಗಿದೆ. ಹೊಸದನ್ನು ರೂಢಿಸಿಕೊಳ್ಳುವುದು, ಹೊಸ ಗುರಿಗಳನ್ನು ಹೊಂದುವುದು, ಅದನ್ನು ಈಡೇರಿಸಿಕೊಳ್ಳುವುದನ್ನು ಕಲಿಯಬೇಕು. ಅಷ್ಟಕ್ಕೂ ನೀವು ಕಂಪರ್ಟ್ ಝೋನ್‌ನಿಂದ ಹೊರಬರಬೇಕು ಅಂದುಕೊಂಡಿದ್ದರೆ ಈ 10 ಸಲಹೆಗಳು ನಿಮಗೆ ಸಹಾಯಕವಾಗಬಹುದು.
ಕಂಫರ್ಟ್ ಝೋನ್‌ನಿಂದ ಹೊರಬರಲು ಹೀಗೆ ಮಾಡಿ
1.ಅಪರಿಚಿತರೊಂದಿಗೆ ಮಾತನಾಡಿ: ಕಂಫರ್ಟ್ ಝೋನ್‌ನಿಂದ ಹೊರಬರಲು ಮೊದಲಿಗೆ ನೀವು ಅಪರಿಚಿತರೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಿ. ಇದನ್ನು ಮಾಡುವುದರಿಂದ ನೀವು ಭಯ ಪಟ್ಟರೂ ಅದರ ಜೊತೆ ಜೊತೆಗೆ ಒಂದಷ್ಟು ಕಲಿಯಬಹುದು. ನೀವು ಹೊಸ ಸ್ನೇಹಿತರನ್ನು ಮಾಡಿಕೊಂಡ ನಂತರ ಅಥವಾ ಅವರಿಂದ ಏನನ್ನಾದರೂ ಕಲಿತ ನಂತರ ಅವರ ಜೊತೆಗಿನ ಮಾತನಾಡುವುದನ್ನು ತಪ್ಪಿಸಬಹುದು.
2.ಸೃಜನಾತ್ಮಕ ಯೋಜನೆಯನ್ನು ಪ್ರಾರಂಭಿಸಿ: ನೀವು ಮಾಡಬಹುದಾದ ಅತ್ಯಂತ ಆನಂದದಾಯಕ ಕೆಲಸವೆಂದರೆ ಕ್ರಿಯೇಟಿವ್ ಅಥವಾ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು. ಕ್ರಿಯೇಟಿವ್ ಆಗಿರುವುದೆಂದರೆ ರಿಸ್ಕ್ ತೆಗೆದುಕೊಳ್ಳುವುದು ಅಥವಾ ನಿಮಗೆ ಗೊತ್ತಿಲ್ಲದ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದಾಗಿದೆ. ಇದು ನಿಮಗೆ ಹೊಸ ವಿಷಯಗಳ ಜ್ಞಾನವನ್ನು ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
3. ಪ್ರತಿ ದಿನವೂ ಹೊಸ ಕಲಿಕೆಯ ಅನುಭವ: ನೀವು ಪ್ರತಿದಿನವೂ ಹೊಸದನ್ನು ಕಲಿಯಬೇಕು. ನಿಮ್ಮ ಆರಾಮ ವಲಯದ ಹೊರಗೆ ಹೋಗುವ ಮೂಲಕ ಮಾತ್ರ ಇದನ್ನು ಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ.ಸತತವಾಗಿ ಕೆಲವನ್ನು ಪ್ರಯತ್ನಿಸುವುದರ ಮೂಲಕ ಮಾತ್ರ ಅದನ್ನು ಸಾಧಿಸಬಹುದು. ಹಾಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರಿ.
4. ನೀವೇ ರೆಕಾರ್ಡ್ ಮಾಡಿ: ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದು ಹಲವರಿಗೆ ಭಯ ತರುವಂಥ ವಿಚಾರ. ಆದರೆ ಇದು ಭಾಷಾ ಕೌಶಲ್ಯ ಮತ್ತು ಆತ್ಮ ವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮೊದಲಿಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ನೀವು ಪರಿಶ್ರಮಿಸಿದರೆ, ನಿಮ್ಮ ಸಾಮರ್ಥ್ಯಗಳು ಬಹುಶಃ ಪ್ರಗತಿ ಹೊಂದುತ್ತವೆ.
5. ಅಭಿನಂದಿಸುವುದು: ಅಭಿನಂದನೆಗಳನ್ನು ನೀಡುವುದು ಸವಾಲಾಗಿರಬಹುದು. ಆದರೆ ವಿಶೇಷವಾಗಿ ನಾವು ಅಭಿನಂದನೆಗಳನ್ನು ಸೂಕ್ತ ಸಮಯದಲ್ಲಿ ನೀಡಿದರೆ ನಿಮ್ಮ ಹಾಗೂ ಬೇರೊಬ್ಬರ ದಿನ ಇನ್ನಷ್ಟು ಉಲ್ಲಾಸಮಯವಾಗಿರಬಹುದು.
6. ನಿಮ್ಮ ಆತಂಕವನ್ನು ದೂರಮಾಡಿ: ನಿಮ್ಮ ಆರಾಮ ವಲಯವನ್ನು ತೊರೆಯುವ ನಿಮ್ಮ ಭಯವನ್ನು ಎದುರಿಸುವ ಬದಲು ಬದಲಾವಣೆಯನ್ನು ಏಕೆ ಮಾಡಬಾರದು? ಎಂದು ಯೋಚಿಸಿ. ಮುಂದಿನ ಬಾರಿ ಹೊಸದನ್ನು ಪ್ರಯತ್ನಿಸುವಾಗ ನಿಮಗೆ ಭಯವಾದಾಗ "ಒಳ್ಳೆಯದು" ಮತ್ತು "ಕೆಟ್ಟದು" ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿ. ಕೇವಲ ಭಾವನೆಯನ್ನು ವಶಪಡಿಸಿಕೊಳ್ಳಿ. ಒಳ್ಳೆಯದೇ ಆಗುತ್ತದೆ ಅಂದುಕೊಂಡು ಹೆಜ್ಜೆ ಹಾಕಿ.
7. ಹೊಸ ಅನಾನುಕೂಲ ಸನ್ನಿವೇಶಗಳ ಮೂಲಕ ನಿಮಗೆ ನೀವೇ ತರಬೇತಿ ನೀಡಿ: ನಿಮ್ಮ ಆರಾಮ ವಲಯವನ್ನು ಮೀರಿ ಹೋಗುವಾಗ ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ನಿಮಗೆ ಒಳ್ಳೆಯದಾಗುವಂಥ ವಿಷಯಗಳ ಬಗ್ಗೆ ಹೇಳಿಕೊಳ್ಳಿ. ಧನಾತ್ಮಕವಾಗಿ ಯೋಚನೆ ಮಾಡಿ.
8. ವೇದಿಕೆಯನ್ನು ಬಳಸಿಕೊಳ್ಳಿ: ಸಾರ್ವಜನಿಕ ಭಾಷಣದ ವಿಷಯದಲ್ಲಿ ಶೇ.77 ರಷ್ಟು ಜನರು ಕೆಲವು ಮಟ್ಟದ ಆತಂಕವನ್ನು ಅನುಭವಿಸುತ್ತಾರೆ. ನಿಮ್ಮ ಭಯವನ್ನು ತೊಡೆದುಹಾಕಲು ನೀವು ಸಂದರ್ಭ ಬಂದರೆ ವೇದಿಕೆ ಹತ್ತಿ ಮಾತನಾಡಿ. ಸಾರ್ವಜನಿಕ ಭಾಷಣವು ಕಾಲಾನಂತರದಲ್ಲಿ ನಿಮ್ಮ ಭಯವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಆರಾಮ ವಲಯದಿಂದ ಹೊರಗೆ ತಳ್ಳಲು ನಿಮಗೆ ಸಹಾಯ ಮಾಡುತ್ತದೆ.
9. ಧ್ಯಾನವನ್ನು ಅಭ್ಯಾಸ ಮಾಡಿ: ಧ್ಯಾನ ನಿಮಗೆ ಹೊಸ ಹುಮ್ಮಸ್ಸು ನೀಡುತ್ತದೆ. ನೀವು ಆಳವಾಗಿ ಉಸಿರನ್ನು ತೆಗೆದುಕೊಳ್ಳುವಾಗ ಅದು ಆತ್ಮವಿಶ್ವಾಸದ ಗಾಳಿ ಎಂಬಂತೆ ಊಹಿಸಿಕೊಳ್ಳಿ. ನೀವು ಬಿಡುವಂಥ ಉಸಿರು ಅಭದ್ರತೆಯದ್ದು, ಆತಂಕದ್ದು ಎಂದು ಭಾವಿಸಿ. ಹೀಗೆ ಆಳವಾಗಿ ಉಸಿರನ್ನು ತೆಗೆದುಕೊಳ್ಳುವುದು ಹಾಗೂ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಮತ್ತಷ್ಟು ಆತ್ಮವಿಶ್ವಾಸ ಹೊಂದುತ್ತದೆ.
ಇದನ್ನೂ ಓದಿ:Life Style: ಒಂದೊಳ್ಳೆ ಜೀವನ ಶೈಲಿಗೆ 101 ಸರಳ ಅಭ್ಯಾಸಗಳು; ನೀವೂ ಅಳವಡಿಸಿಕೊಂಡರೆ ಲೈಫಲ್ಲಿ ಖುಷಿಯಾಗಿರ್ತೀರಿ!
10. ನಿಮ್ಮ ಜನರನ್ನು ಹುಡುಕಿ: ಆರೋಗ್ಯಕರವಾಗಿ ತಿನ್ನಲು, ವ್ಯಾಯಾಮ ಮಾಡಲು, ಯಾವುದಾದರೂ ರೂಢಿಗಳನ್ನು ಬಿಡಲು ಅಥವಾ ಹೊಸದನ್ನು ಆರಂಭಿಸಲು ಬಯಸುವಾಗ ನಿಮ್ಮವರ ಬೆಂಬಲ ಪಡೆದುಕೊಳ್ಳಿ. ನಿಮ್ಮ ಕುಟುಂಬ ನಿಮ್ಮ ಜೊತೆ ಇರುತ್ತದೆ. ನೀವು ಈ ಹೊಸ ಪ್ರಯತ್ನವನ್ನು ಕೈಗೊಂಡಾಗ ನಿಮ್ಮನ್ನು ಬೆಂಬಲಿಸುವ ಮತ್ತು ಸ್ಫೂರ್ತಿ ನೀಡುವ, ಧನಾತ್ಮಕವಾಗಿ ಮಾತನಾಡುವ ಜನರೊಂದಿಗೆ ಇರುವುದು ಅತ್ಯಂತ ಮುಖ್ಯವಾಗಿದೆ.
ಒಟ್ಟಾರೆ, ನಿಮ್ಮ ಕಂಫರ್ಟ್ ಝೋನ್‌ನಲ್ಲಿ ಜೀವನವನ್ನು ನಡೆಸುವುದು ಸುರಕ್ಷಿತ, ಆರಾಮದಾಯಕವಾಗಿರುತ್ತದೆ. ಅಲ್ಲದೇ ನಿಮಗೆ ಒತ್ತಡವೂ ಇರುವುದಿಲ್ಲ. ಆದರೆ ಅದೇ ಕಂಫರ್ಟ್ ಝೋನ್ ತೊರೆಯುವುದರಿಂದ ನಿಮ್ಮ ಅಭಿವೃದ್ಧಿಯಾಗುತ್ತದೆ. ಹೊಸ ಮತ್ತು ಸೃಜನಶೀಲ ಅವಕಾಶಗಳು ತೆರೆಯುತ್ತದೆ.
ಆದ್ದರಿಂದ ನಿಮ್ಮ ಆರಾಮ ವಲಯದಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ಕಲಿಯುವ ಮೂಲಕ ನೀವು ಅತ್ಯುತ್ತಮ ಜೀವನವನ್ನು ನಡೆಸಬಹುದು. ಹಾಗಾಗಿ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳುವುದು ಹಾಗೂ ನಿಮಗೆ ಪ್ರೇರಣೆ ನೀಡುವಂಥವರ ಜೊತೆಗೆ ಇರುವುದೂ ಅಷ್ಟೇ ಮುಖ್ಯವಾಗಿದೆ.
ಒಮ್ಮೆ ನೀವು ನಿಮ್ಮ ಆರಾಮ ವಲಯದಿಂದ ಹೊರಬಂದು ರಿಸ್ಕ್ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನೀವು ಹೊಸದೇನನ್ನೋ ಸಾಧಿಸಬಹುದು. ಆಗ ನೀವು ಹೊಸ ಬದುಕನ್ನು ಆರಂಭಿಸಬಹುದು. ನಿಮಗೇ ಗೊತ್ತಿಲ್ಲದ ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೋಡಬಹುದು.
ಅಲ್ಲದೇ ಒಂದೇ ರೀತಿಯ ಜೀವನಶೈಲಿಯಿಂದ ಉಂಟಾದ ನೀರಸ ಬದುಕಿನಿಂದ ಮುಕ್ತಿ ಪಡೆದು ಬದುಕಿನಲ್ಲಿ ಒಂದು ಹೊಸತನವನ್ನು ಅನುಭವಿಸಬಹುದು. ಆದ್ದರಿಂದ ಈ ಮೇಲಿನ ಸಲಹೆಗಳನ್ನು ಪರಿಗಣಿಸಿ ಇಂದೇ ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಬರಲು ಟ್ರೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ