#Relationship: ಹದಿಹರೆಯದವರ ನೋವಿಗೆ ಪೋಷಕರ ಬೆಂಬಲವೇ ಮುಲಾಮು

news18
Updated:August 23, 2018, 7:02 PM IST
#Relationship: ಹದಿಹರೆಯದವರ ನೋವಿಗೆ ಪೋಷಕರ ಬೆಂಬಲವೇ ಮುಲಾಮು
news18
Updated: August 23, 2018, 7:02 PM IST
-ನ್ಯೂಸ್ 18 ಕನ್ನಡ

ಲೈಫ್ ಬ್ಯೂಟಿಫುಲ್ ಎಂದು ಅನಿಸಿಕೊಳ್ಳಬೇಕಿದ್ದರೆ ಪ್ರೀತಿ ಪ್ರೇಮ ಪ್ರಣಯ ಇರಲೇಬೇಕು. ಹದಿಹರೆಯದಲ್ಲಿ ಮೂಡುವ ಪ್ರೀತಿಗೆ ಆಯಸ್ಸು ಕಡಿಮೆ. ಕನಸಿನ ಕನವರಿಕೆಯೇ ಪ್ರೀತಿ ಎಂದು ತಿಳಿಯುವ ಯುವ ಮನಸ್ಸುಗಳು ಬ್ರೇಕಪ್​ ಎಂಬ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.

ಇಂತಹ ಸಮಯದಲ್ಲಿ ಹದಿ ಹರೆಯದವರ ನಿರ್ಧಾರಗಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ರೀತಿಯ ಸಂದರ್ಭದಲ್ಲಿ ಮಕ್ಕಳ ನೆರವಿಗೆ ನಿಲ್ಲಬೇಕಾಗಿರುವುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳ ನಡುವಳಿಕೆ ಮತ್ತು ಸ್ವಭಾವದಲ್ಲಿ ಬದಲಾವಣೆಗಳು ಕಂಡು ಬರುತ್ತಿದ್ದರೆ ಅವರ ಮೇಲೆ ಎಚ್ಚರಿಕೆವಹಿಸಿ. ಮಕ್ಕಳಿಗೆ ಪ್ರೀತಿಯಿಂದ ಸಲಹೆಗಳನ್ನು ನೀಡಿ ಧೈರ್ಯ ತುಂಬುವ ಪ್ರಯತ್ನವನ್ನು ಮಾಡಿ.



ಪ್ರೀತಿ ಎಂಬುದು ಯಾರಿಗೂ ಯಾರ ಮೇಲೂ ಮೂಡಬಹುದಾದ ಸಹಜ ಕ್ರಿಯೆ. ಮಕ್ಕಳಲ್ಲಿ ಸಹಜವಾಗಿ ಪ್ರೀತಿ ಎಂದರೆ ಪವಿತ್ರ ಭಾವನೆ ಇರುತ್ತದೆ. ಆದರೆ ಪ್ರೀತಿಯಲ್ಲಿನ ಗೊಂದಲಗಳು ಮುಗ್ಧ ಮನಸುಗಳಿಗೆ ಅರ್ಥವಾಗಿರುವುದಿಲ್ಲ. ಯಾವುದೊ ಮೋಹಕ್ಕೆ ಒಳಗಾಗಿ ತೆಗೆದುಕೊಂಡ ನಿರ್ಧಾರದ ಬಗೆಗಿನ  ಅರಿವು ಮಕ್ಕಳಲ್ಲಿರುವುದಿಲ್ಲ. ಆದರೆ ಬ್ರೇಕಪ್​ ನಂತಹ ಸಂದರ್ಭದಲ್ಲಿ ತನ್ನ ನೋವಿಗೆ ಸ್ಪಂದಿಸಲು ಯಾರೂ ಕೂಡ ಇಲ್ಲವೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಪೋಷಕರಿಗೆ ಮೋಸ ಮಾಡಿ, ಮೋಸದಾಟಕ್ಕೆ ಬಲಿಯಾದೆ ಎಂಬ ಅಪರಾಧಿ ಪ್ರಜ್ಞೆ ಮಕ್ಕಳಲಲ್ಲಿರುತ್ತದೆ. ಈ ವೇಳೆ ಅವರ ತಪ್ಪುಗಳನ್ನು ಹೇಳಿ ನಿಂದಿಸುವುದಕ್ಕಿಂತ ಅವರಿಗೆ ಬೆಂಬಲವಾಗಿ ನಿಂತು ಪೋಷಕರು ತಪ್ಪಿನ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ.



ಹದಿಹರೆಯದವರು ತಮ್ಮೆಲ್ಲಾ ಸಿಕ್ರೆಟ್​ಗಳನ್ನು ಗೆಳೆಯ-ಗೆಳೆತಿಯರೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ಪೋಷಕರು ಮಕ್ಕಳ ಉತ್ತಮ ಸ್ನೇಹಿತರಾಗುವುದು ಒಳ್ಳೆಯದು. ಇದರಿಂದ ಅವರ ಆಲೋಚನೆಗಳು, ನಿರ್ಧಾರಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಮಕ್ಕಳು ಮತ್ತು ಪೋಷಕರ ನಡುವಿನ ಯೋಚನೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇದನ್ನು ಪೋಷಕರು ಅರ್ಥ ಮಾಡಿಕೊಂಡು ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸುವುದು ಅಗತ್ಯ. ಪೋಷಕರು ಎಷ್ಟು ಹತ್ತಿರವಾಗುತ್ತಾರೊ ಎಂಬುದರ ಮೇಲೆ ಮಕ್ಕಳು ತಮ್ಮ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ.

ಅವರ ತಪ್ಪುಗಳು ಅರಿವಿಗೆ ಬಂದಾಗ ಪ್ರೀತಿಯಿಂದ ತಿಳಿ ಹೇಳುವ ಪ್ರಯತ್ನ ಮಾಡಿ. ಅಧ್ಯಯನ ಕಡೆ ಗಮನ ಹರಿಸುವಂತೆ ಸಲಹೆಗಳನ್ನು ನೀಡಿ ಬೆಂಬಲವಾಗಿ ನಿಲ್ಲಬೇಕು. ಆದರೆ ಅವರ ನಡವಳಿಕೆಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದ್ದರೆ ನೋವುಂಟು ಮಾಡುವಂತೆ ವರ್ತಿಸಬೇಡಿ. ಇದರಿಂದ ಅವರಲ್ಲಿ ಅನಾಥ ಭಾವನೆ ಆವರಿಸಿಕೊಳ್ಳಬಹುದು. ಇಂತಹ ಸಮಯದಲ್ಲಿ ತಪ್ಪು ನಿರ್ಧಾರಗಳತ್ತ ಮನಸ್ಸು ಹೊರಳುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಕೆದಕಿ ತೆಗೆಯುವ ಕಾರ್ಯವನ್ನು ಮಾಡಿ. ಪ್ರತಿಯೊಂದಕ್ಕೂ ಬೆಂಬಲವನ್ನು ಸೂಚಿಸಿ, ನಿಧಾನಕ್ಕೆ ಅವರು ಮಾಡಿರುವ ತಪ್ಪಿನ ಗಂಭೀರತೆಯನ್ನು ವಿವರಿಸಿ ಹೇಳಿ. ಅವರ ನೋವನ್ನು ಮರೆಮಾಚಲು ಕೆಲ ಉದಾಹರಣೆಗಳನ್ನು ನೀಡಿ ಮಾನಸಿಕ ಧೈರ್ಯ ಹೆಚ್ಚಿಸುವ ಕೆಲಸವನ್ನು ಪೋಷಕರು ಮಾಡಬೇಕಿದೆ.
First published:August 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ