ಬೊಜ್ಜಿನ ಬಗ್ಗೆ ಚಿಂತೆಯೇಕೆ? ಓಡುತ್ತಲೇ 51 ಕೆ.ಜಿ. ಇಳಿಸಿಕೊಂಡವನ ಕತೆ ಇಲ್ಲಿದೆ...

ಇಲ್ಲೊಬ್ಬ ವ್ಯಕ್ತಿ ಹಣ ಕೊಟ್ಟು ಜಿಮ್​ಗೂ ಹೋಗಿಲ್ಲ, ಯೋಗ ಕ್ಲಾಸ್​ಗೂ ಹೋಗಿಲ್ಲ. ಈತ ಪ್ರತಿದಿನ ಓಡುತ್ತಾ ಓಡುತ್ತಲೇ ಕಳೆದೊಂದು ವರ್ಷದಲ್ಲಿ 51 ಕೆಜಿ ತೂಕ ಇಳಿಸಿಕೊಂಡಿದ್ದಾನೆ.

news18-kannada
Updated:September 27, 2019, 5:26 PM IST
ಬೊಜ್ಜಿನ ಬಗ್ಗೆ ಚಿಂತೆಯೇಕೆ? ಓಡುತ್ತಲೇ 51 ಕೆ.ಜಿ. ಇಳಿಸಿಕೊಂಡವನ ಕತೆ ಇಲ್ಲಿದೆ...
ಸಾಂದರ್ಭಿಕ ಚಿತ್ರ
  • Share this:
ಅರೆ! ಕಳೆದ ವರ್ಷ ನೋಡಿದಾಗ ಅಷ್ಟು ದಪ್ಪಗಿದ್ಯಲ್ಲೆ.. ಇದೇನಿದು ಈಗ ಹೀಗೆ ಇಷ್ಟು ಸ್ಲಿಮ್ ಆಗಿದ್ದಿ? ಯಾವ ಡಯಟ್ ಫಾಲೋ ಮಾಡ್ತಿದ್ದಿ? ಜಿಮ್​ಗೇನಾದ್ರೂ ಹೋಗ್ತೀಯ? ಹೇಗಿದೆಲ್ಲ ಸಾಧ್ಯ ಆಯ್ತು? ನನಗೂ ಟಿಪ್ಸ್​ ಕೊಡಮ್ಮ. ದಿನದಿಂದ ದಿನಕ್ಕೆ ಹೊಟ್ಟೆ ಊದಿಕೊಳ್ತಾ ಇದೆ. ಏನೇ ಮಾಡಿದ್ರೂ ದೇಹದ ತೂಕ ಕಂಟ್ರೋಲ್ ಮಾಡೋಕೆ ಆಗ್ತಾ ಇಲ್ಲ... ಈ ರೀತಿ ಯಾರಾದ್ರೂ ಹೇಳೋದನ್ನು ನೀವೂ ಕೇಳಿರಬಹುದು. ಮಹಿಳೆಯರಿರಲಿ, ಪುರುಷರೇ ಇರಲಿ. ಇಂದಿನ ಕಾಲದವರಿಗೆ ತೂಕದ್ದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

ತೆಳ್ಳಗಿದ್ದರೆ ಜನ ಕಡ್ಡಿ ಅಂತಾರೆ. ದಪ್ಪಗಿದ್ದರೆ ಡುಮ್ಮ/ಡುಮ್ಮಿ ಅಂತಾರೆ. ಅದಕ್ಕೆಲಲ್ ತಲೆ ಕೆಡಿಸಿಕೊಳ್ಳೋಕೆ ಆಗುತ್ತಾ? ಅಂತ ನೀವು ಸುಮ್ಮನಾಗಬಹುದು. ಆದರೆ, ಇದು ನಿರ್ಲಕ್ಷ್ಯ ಮಾಡುವ ವಿಷಯವಂತೂ ಅಲ್ಲವೇ ಅಲ್ಲ. ಇಂದಿನ ಪೀಳಿಗೆಯ ಜನರಿಗೆ ದೇಹದ ತೂಕವೇ ದೊಡ್ಡ ಶತ್ರು. ಬೊಜ್ಜು ಕರಗಿಸಲು ಜನ ಮಾಡದ ಸರ್ಕಸ್ ಇಲ್ಲ. ನಮ್ಮ ದೇಹದ ತೂಕ ಹೆಚ್ಚಾದರೆ ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಅಪಾಯವೇ.

ದೇಹದ ತೂಕ ಇಳಿಸೋಕೆ ಎಷ್ಟೋ ಜನ ಜಿಮ್​ಗೆ ಹೋಗ್ತಾರೆ, ಸೈಕ್ಲಿಂಗ್ ಮಾಡ್ತಾರೆ, ಯೋಗ ಕ್ಲಾಸ್​ಗೂ ಹೋಗುವವರಿದ್ದಾರೆ. ದಿನ ಬೆಳಗಾದರೆ ತಿಂಡಿ ತಿನ್ನೋದು, ಆಫೀಸ್​ಗೆ ಹೋಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು. ಮತ್ತೆ ಮಧ್ಯಾಹ್ನ ಊಟ ಮಾಡಿಕೊಂಡು ಕಂಪ್ಯೂಟರ್ ಮುಂದೆ ಕೂರೋದು. ಸಂಜೆ ಮನೆಗೆ ಬಂದು ಟಿವಿ ಮುಂದೆ ಕೂರೋದು. ಆಮೇಲೆ ಊಟ ಮಾಡಿ ಮೊಬೈಲ್ ಹಿಡಿದುಕೊಂಡು ಕೂರೋದು. ಮೊಬೈಲ್ ನೋಡಿದ್ದು ಸಾಕಾಯ್ತು ಅಂದಮೇಲೆ ಮಲಗೋದು. ಇಷ್ಟೇ ಇಂದಿನ ಕಾಲದವರ ಜೀವನವಾಗಿಬಿಟ್ಟಿದೆ. ದೇಹಕ್ಕೆ ಯಾವುದೇ ವ್ಯಾಯಾಮಗಳಿಲ್ಲದೆ ಬೊಜ್ಜು ಆವರಿಸಿಕೊಳ್ಳತೊಡಗಿದೆ. ಇದಕ್ಕೆಲ್ಲ ಪರಿಹಾರವಾದರೂ ಏನು ಎಂದು ಯೋಚನೆ ಮಾಡ್ತಿದ್ದೀರಾ?

ಸೌಂದರ್ಯ ಮತ್ತು ತ್ವಚೆಯ ಆರೈಕೆಗೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಇಲ್ಲೊಬ್ಬ ವ್ಯಕ್ತಿ ಹಣ ಕೊಟ್ಟು ಜಿಮ್​ಗೂ ಹೋಗಿಲ್ಲ, ಯೋಗ ಕ್ಲಾಸ್​ಗೂ ಹೋಗಿಲ್ಲ. ಸೈಕ್ಲಿಂಗ್ ಕಡೆ ತಲೆಯನ್ನೂ ಹಾಕಿಲ್ಲ. ಆದರೂ 1 ವರ್ಷದಲ್ಲಿ ಆತ ಬರೋಬ್ಬರಿ 51 ಕೆ.ಜಿ. ತೂಕ ಇಳಿಸಿಕೊಂಡಿದ್ದಾನೆ! ಇದು ಸಾಧ್ಯವಾಗುವ ಮಾತಾ? ಎಂದು ಆಶ್ಚರ್ಯಪಡಬೇಡಿ. ಈತ ಪ್ರತಿದಿನ ಓಡುತ್ತಾ ಓಡುತ್ತಲೇ ಕಳೆದೊಂದು ವರ್ಷದಲ್ಲಿ 51 ಕೆಜಿ ತೂಕ ಇಳಿಸಿಕೊಂಡಿದ್ದಾನೆ. ಈ ವ್ಯಕ್ತಿಯ ಹೆಸರು ಅಭಿಷೇಕ್ ಜೊಹ್ರಿ. 131 ಕೆ.ಜಿ. ತೂಕವಿದ್ದ ಅಭಿಷೇಕ್​ಗೆ ಆತನ ದೇಹದ ತೂಕವೇ ದೊಡ್ಡ ಶತ್ರುವಾಗಿತ್ತು. ಆತನ ದೇಹವನ್ನು ನೋಡಿ ಜನ ಆಡಿಕೊಳ್ಳುತ್ತಿದ್ದರು. ಹೇಗಾದರೂ ಮಾಡಿ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ಬಯಸುತ್ತಿದ್ದ ಅಭಿಷೇಕ್​ಗೆ ಆತನ ಗೆಳೆಯರು ಜಿಮ್, ವ್ಯಾಯಾಮ, ಸೈಕ್ಲಿಂಗ್, ಡ್ಯಾನ್ಸಿಂಗ್ ಈ ರೀತಿಯ ಹಲವು ಸಲಹೆಗಳನ್ನು ಕೊಟ್ಟರು.

ಆರೋಗ್ಯಕ್ಕೆ ಕರಿಬೇವು ಅತೀ ಮುಖ್ಯ...ಯಾಕೆ?

ಆದರೆ, ಅದ್ಯಾವುದೂ ಅಭಿಷೇಕ್​ಗೆ ಸರಿಯೆನಿಸಲಿಲ್ಲ. ಕೊನೆಗೆ ಜಾಗಿಂಗ್ ಮಾಡಲು ನಿರ್ಧರಿಸಿದ ಅಭಿಷೇಕ್ ಓಡುತ್ತ ಓಡುತ್ತಲೇ ತಮ್ಮ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗಮನಿಸತೊಡಗಿದರು. ಇಂದಿಗೂ ದಿನಕ್ಕೆ 1 ಗಂಟೆ ಜಾಗಿಂಗ್ ಮಾಡುವ ಅಭಿಷೇಕ್ ಅದರ ಜೊತೆಗೆ ಕೆಲವು ಡಯಟ್ ಅನ್ನೂ ಪಾಲಿಸುತ್ತಿದ್ದಾರೆ. 39 ವರ್ಷದ ಅಭಿಷೇಕ್ 131 ಕೆಜಿಯಿದ್ದವರು ಈಗ 51 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಈಗ ಅವರು ತಮಗೆ ಇಷ್ಟವಾದ ಬಟ್ಟೆ ಧರಿಸುತ್ತಾರೆ, ಇಷ್ಟವಾದ ಕಡೆ ಯಾವುದೇ ಮುಜುಗರವಿಲ್ಲದೆ ಹೋಗುತ್ತಾರೆ. ಅವರನ್ನು ಈ ಮೊದಲು ನೊಡಿದ್ದವರು ಈಗ ನೋಡಿದರೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಅಷ್ಟರ ಮಟ್ಟಿಗೆ ಅವರ ದೇಹ ಬದಲಾಗಿಬಿಟ್ಟಿದೆ.ಜಾಗಿಂಗ್ ಜೊತೆಗೆ ಏನೆಲ್ಲ ಮಾಡ್ತಾರೆ ಅಭಿಷೇಕ್?:

ಬೆಳಗ್ಗೆ ಬ್ರೌನ್ ಬ್ರೆಡ್, 3 ಬೇಯಿಸಿದ ಮೊಟ್ಟೆ, ಬ್ಲಾಕ್​ ಕಾಫಿ ಕುಡಿಯುವ ಅಭಿಷೇಕ್ ಮಧ್ಯಾಹ್ನ 1 ಚಪಾತಿ, 1 ಬೌಲ್ ದಾಲ್, ಮತ್ತು ಬೇಯಿಸಿದ ಚಿಕನ್ ತಿನ್ನುತ್ತಾರೆ. ರಾತ್ರಿ 1 ಕಪ್ ಸೂಪ್, ಬೇಯಿಸಿದ ಚಿಕನ್, ಚಪಾತಿ ತಿನ್ನುತ್ತಾರೆ. ಇಷ್ಟವೆನಿಸಿದ ಚಾಕೋಲೇಟ್, ಐಸ್​ಕ್ರೀಮ್ ಎಲ್ಲವನ್ನೂ ತಿನ್ನುವ ಅಭಿಷೇಕ್ ಅದಕ್ಕೆ ತಕ್ಕಂತೆ ಓಡುವ ಸಮಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಪ್ರತಿದಿನ ಕಡಿಮೆಯೆಂದರೂ 5 ಲೀಟರ್ ನೀರು ಕುಡಿಯುತ್ತಾರೆ.

ಒಂದು ವರ್ಷದಲ್ಲಿ 51 ಕೆ.ಜಿ. ಇಳಿಸಿಕೊಂಡಿರುವ ಅಭಿಷೇಕ್ ಆತ್ಮವಿಶ್ವಾಸವೂ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇದೀಗ ನಿರಾಳರಾಗಿದ್ದಾರೆ. ಇನ್ನಷ್ಟು ತೆಳ್ಳಗಾಗಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂಬ ಆಸೆ ಅವರದ್ದು. ತಮ್ಮ ಬಳಿ ಆರೋಗ್ಯದ ಬಗ್ಗೆ ಸಲಹೆ ಕೇಳಿಕೊಂಡು ಬರುವವರಿಗೆ ತಮ್ಮ ಜೀವನಶೈಲಿಯೇ ಉದಾಹರಣೆ ಎನ್ನುತ್ತಾರೆ ಅಭಿಷೇಕ್.

First published: September 27, 2019, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading