ನವಜಾತ ಶಿಶುವಿನ (New Born Baby) ಕೂದಲಿನ (Hair) ವಿಚಾರಕ್ಕೆ ಬಂದಾಗ, ಪ್ರತಿ ಮಗುವಿನ ಕೂದಲು ವಿಭಿನ್ನವಾಗಿರುತ್ತದೆ. ಕೆಲವು ಶಿಶುಗಳು ದಪ್ಪ ಮತ್ತು ಕಪ್ಪನೆಯ ಕೂದಲು ಪಡೆದರೆ ಇನ್ನು ಕೆಲ ಮಕ್ಕಳು ಬೋಳು (Bald) ತಲೆ ಹೊಂದಿರುತ್ತಾರೆ. ತಾಯಂದಿರು ಈ ಬಗ್ಗೆ ಚಿಂತಿಸುವ ಅವಶ್ಯಕತೆಯೇ ಇಲ್ಲ. ಏಕೆಂದರೆ ನವಜಾತ ಶಿಶುವಿಗೆ ಕೂದಲು ಇಲ್ಲದಿರುವುದು ಅಥವಾ ಕೂದಲು ಉದುರುವುದು ಸಹಜವಾದ ಪ್ರಕ್ರಿಯೆ. ಜನನದ ಸಮಯದಲ್ಲಿ ಮಗುವಿನ ಕೂದಲಿನ ಬಣ್ಣ ಮತ್ತು ಪ್ರಮಾಣವು ಹೆಚ್ಚಾಗಿ ಅನುವಂಶಿಕವಾಗಿರುತ್ತದೆ.
ಮೇಲಿನ ವಿಷಯ ಓದಿದ ಮೇಲೂ ಅಯ್ಯೋ ನನ್ನ ಮಗುವಿಗೆ ಕೂದಲು ಚೆನ್ನಾಗಿ ಬೆಳೆದಿಲ್ಲ ಅಂತಾ ಕೊರಗುವ ತಾಯಂದಿರಿಗೆ ಇಲ್ಲಿವೆ ಕೆಲವು ಟಿಪ್ಸ್. ಮಗುವಿನ ಕೂದಲಿನ ಪೋಷಣೆಯನ್ನು ಮನೆಯಲ್ಲಿಯೇ ಮತ್ತು ನೈಸರ್ಗಿಕವಾಗಿ ಹೇಗೆ ಆರೈಕೆ ಮಾಡಬಹುದು ಎಂಬುದು ಇಲ್ಲಿದೆ.
ಮಗುವಿನ ಕೂದಲಿನ ಆರೈಕೆ ಹೀಗಿರಲಿ
1) ತೆಂಗಿನ ಎಣ್ಣೆ ಬಳಸಿ
ತೆಂಗಿನ ಎಣ್ಣೆಯಲ್ಲಿ ನೈಸರ್ಗಿಕವಾಗಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ ಪೋಷಕಾಂಶವಾಗಿದೆ. ಚರ್ಮಕ್ಕೆ ಮಾತ್ರವಲ್ಲದೇ, ಇದು ನೆತ್ತಿಯ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ತೆಂಗಿನ ಎಣ್ಣೆಯು ಕೂದಲಿಗೆ ಹೊಳಪನ್ನು ನೀಡುವುದರ ಜೊತೆ ಕೂದಲು ಉದುರುವುದನ್ನು ತಡೆಯುತ್ತದೆ. ನಿಮ್ಮ ಮಗುವಿನ ನೆತ್ತಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಕ್ರ್ಯಾಡಲ್ ಕ್ಯಾಪ್ ತೊಡೆದುಹಾಕಲು ಸಹಾಯ ಮಾಡಬಹುದು.
2) ಮಗುವಿನ ನೆತ್ತಿಯನ್ನು ಬ್ರಷ್ ಮಾಡಿ
ಮಗುವಿನ ನೆತ್ತಿಯನ್ನು ಮೃದುವಾಗಿ ಬಾಚುವುದು, ಅಥವಾ ಮಸಾಜ್ ಮಾಡುವುದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಮತ್ತು ಕ್ರ್ಯಾಡಲ್ ಕ್ಯಾಪ್ ಅನ್ನು ಸಡಿಲಗೊಳಿಸಿ ಒಣ ಚರ್ಮವನ್ನು ತೆಗೆದುಹಾಕುತ್ತದೆ.
ತಲೆ ಬಾಚುವಾಗ ಅಥವಾ ಎಣ್ಣೆಯನ್ನು ಹಚ್ಚಿದ ನಂತರ, ನಿಮ್ಮ ಮಗುವಿನ ನೆತ್ತಿಯನ್ನು ನಿಮ್ಮ ಬೆರಳುಗಳಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
3) ನಿಯಮಿತವಾಗಿ ತಲೆಸ್ನಾನ ಮಾಡಿಸಿ
ನಿಯಮಿತವಾಗಿ ತಲೆಸ್ನಾನ ಮಾಡಿಸುವುದರಿಂದ ಮಗುವಿನ ನೆತ್ತಿಯು ಸ್ವಚ್ಛವಾಗಿರುತ್ತದೆ ಮತ್ತು ತೊಟ್ಟಿಲು ಕ್ಯಾಪ್ ಅನ್ನು ಸಡಿಲಗೊಳಿಸುತ್ತದೆ.
ಮಗುವಿನ ನೆತ್ತಿಯ ಮೇಲೆ ಕೊಳಕು ಸಂಗ್ರಹವಾಗಿ ಶುಷ್ಕತೆಯನ್ನು ಉಂಟುಮಾಡಬಹುದು, ಇದು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ನವಜಾತ ಶಿಶುವಿಗೆ ಪ್ರತಿ 2 ಅಥವಾ 3 ದಿನಗಳಿಗೊಮ್ಮೆ ಮೃದುವಾದ ಬೇಬಿ ಶಾಂಪೂವನ್ನು ಬಳಸಿ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ: ದಿನಕ್ಕೆ 25 ಬಾದಾಮಿ ತಿಂದ್ರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತಂತೆ
4) ಕಂಡಿಷನರ್ ಬಳಸಿ
ಶಾಂಪೂ ಮಾಡಿದ ನಂತರ ನಿಮ್ಮ ಕೂದಲಿಗೆ ನೀವು ಹೇರ್ ಕಂಡಿಷನರ್ ಅನ್ನು ಹಚ್ಚುವ ರೀತಿಯಲ್ಲಿಯೇ, ನಿಮ್ಮ ಮಗುವಿನ ಕೂದಲಿಗೆ ನೀವು ಕಂಡೀಷನರ್ ಅನ್ನು ಸಹ ಬಳಸಬಹುದು. ಕಂಡೀಷನರ್ ಕೂದಲನ್ನು ರಕ್ಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
ನಿಮ್ಮ ಮಗುವಿನ ಕೂದಲು ಗುಂಗುರಾಗಿದ್ದರೆ ಹೇರ್ ಕಂಡಿಷನರ್ ಬಳಕೆ ಉತ್ತಮ ನೀಳವಾದ ಕೂದಲಿಗೆ ಸಹಾಯ ಮಾಡುತ್ತದೆ. ಸೌಮ್ಯವಾದ ಮತ್ತು ಕಣ್ಣೀರು-ಮುಕ್ತವಾದ ಮಕ್ಕಳ ಸ್ನೇಹಿ ಕಂಡಿಷನರ್ ಅನ್ನು ಆಯ್ಕೆಮಾಡಿ.
5) ಮೃದುವಾದ ಟವೆಲ್ ಬಳಸಿ
ಶಾಂಪೂ ಮತ್ತು ಕಂಡೀಷನಿಂಗ್ ನಂತರ ನಿಮ್ಮ ಮಗುವಿನ ಕೂದಲನ್ನು ಒರೆಸಲು ಸಾಧ್ಯವಾದಷ್ಟು ಮೃದುವಾದ ಟವೆಲ್ ಬಳಸಿ.
6) ಕೂದಲನ್ನು ಬೇರ್ಪಡಿಸಿ
ಟೆಕ್ಸ್ಚರ್ಡ್ ಅಥವಾ ಕರ್ಲಿ ಕೂದಲು ಸುಲಭವಾಗಿ ಸಿಕ್ಕು ಮತ್ತು ಗಂಟುಗಳನ್ನು ಹೊಂದಿರುತ್ತದೆ, ಅದನ್ನು ಬಿಡಿಸುವುದು ಸುಲಭವಲ್ಲ. ಇದರಿಂದಾಗಿ ನಿಮ್ಮ ಮಗುವಿನ ಕೂದಲು ಉದುರುತ್ತದೆ. ಹೀಗಾಗಿ ಪ್ರತಿದಿನ, ನಿಮ್ಮ ಮಗುವಿನ ಕೂದಲನ್ನು ಬಾಚಲು ಮೃದುವಾದ ಬ್ರಷ್ ಅನ್ನು ಬಳಸಿ.
7) ಆರೋಗ್ಯಕರ ಆಹಾರವನ್ನು ನೀಡಿ
ಆರೋಗ್ಯಕರ, ಸಮತೋಲಿತ ಆಹಾರವು ನಿಮ್ಮ ಮಗುವಿನ ಕೂದಲು ಬೆಳೆವಣಿಗೆಗೆ ಸಹಾಯ ಮಾಡುತ್ತದೆ.
6 ತಿಂಗಳ ನಂತರದ ಮಗುವಿಗೆ ನೀವು ಕಬ್ಬಿಣಾಂಶ, ವಿಟಮಿನ್ ಎ, ಬಿ ಜೀವಸತ್ವಗಳು, ವಿಟಮಿನ್ ಡಿ, ಸತು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ನೀಡಿ.
ಉದಾಹರಣೆಗೆ, ಬೂದುಕುಂಬಳಕಾಯಿ ಪಲ್ಯ, ಕ್ಯಾರೆಟ್, ಮಾವು, ಬೀನ್ಸ್, ಮಾಂಸ, ಮೊಟ್ಟೆಗಳು, ಧಾನ್ಯಗಳು, ಆಲೂಗಡ್ಡೆಯನ್ನು ನೀಡಬಹುದು.
ನೀವು ಸ್ತನ್ಯಪಾನ ಮಾಡುತ್ತಿದ್ದರೆ, ನೀವು ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ.
8) ಮಗುವಿನ ನೆತ್ತಿಗೆ ಜೆಲಾಟಿನ್ ಹಚ್ಚಿ
ಜೆಲಾಟಿನ್ ಒಂದು ಅಮೈನೋ ಆಮ್ಲವಾಗಿದ್ದು ಮಗುವಿನ ನೆತ್ತಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 1 ಟೀ ಚಮಚ ಜೆಲಾಟಿನ್ ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪ ಮತ್ತು ಒಂದು ಟೀ ಚಮಚ ಆ್ಯಪಲ್ ಸೈಡರ್ ವಿನೆಗರ್ ಜೊತೆ ಮಿಕ್ಸ್ ಮಾಡಿ ಹಚ್ಚಿ ಅದನ್ನು 10 ರಿಂದ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
9) ಕೂದಲನ್ನು ಕಟ್ಟ ಬೇಡಿ
ಮಕ್ಕಳ ಕೂದಲನ್ನು ಬಿಗಿಯಾಗಿ ಕಟ್ಟುವುದು ಅಥವಾ ವಿವಿಧ ವಿನ್ಯಾಸ ಮಾಡಿಸುವುದು ಮಾಡಿದರೆ ಮಕ್ಕಳ ಕೂದಲಿನ ಬುಡವು ಸಡಿಲವಾಗುವುದು. ಹಾಗಾಗಿ ಮಗುವಿನ ಕೂದಲನ್ನು ಬಿಗಿಯಾಗಿ ಕಟ್ಟುವ ಬದಲು ಫ್ರೀಯಾಗಿ ಬಿಡುವುದು ಉತ್ತಮ.
ಇದನ್ನೂ ಓದಿ: ಮೂತ್ರ ವಿಸರ್ಜನೆ ಮುಜುಗರ ನಿಮ್ಮನ್ನೂ ಕಾಡುತ್ತಿದೆಯಾ? ಅದಕ್ಕೆ ಕಾರಣ ಇದೇ ನೋಡಿ
10) ಹೇರ್ ಕಟ್
ಸೂಕ್ತ ರೀತಿಯಲ್ಲಿ ಮಗುವಿನ ಕೂದಲು ಕತ್ತರಿಸುವುದು ಸೂಕ್ತ. ಆಗ ಮಗುವಿನ ಸ್ನಾನ ಹಾಗೂ ಕೂದಲ ಆರೈಕೆ ಮಾಡಲು ಸುಲಭವಾಗುವುದು. ಜೊತೆಗೆ ಕೂದಲಿಗೆ ಹಾನಿಯಾಗದೆ ಉತ್ತಮ ಬೆಳವಣಿಗೆಯನ್ನು ಕಾಣುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ