ಗೌರಿ-ಗಣೇಶ ಹಬ್ಬ (Gowri Ganesha Festival) ಹತ್ತಿರ ಬಂದಿದೆ. ಇದು ಬಹಳ ಪ್ರಮುಖವಾದ ಹಬ್ಬಗಳಲ್ಲಿ ಒಂದು. ಅದರಲ್ಲೂ ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ (Ladies) ಬಹಳ ಮುಖ್ಯ. ಈ ಹಬ್ಬ ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಒಂದು ಎನ್ನಬಹುದು. ಈ ಹಬ್ಬ ವಿವಾಹಿತ ಮಹಿಳೆಯರಿಗೆ (Married Women) ಬಹಳ ವಿಶೇಷ ಎನ್ನಬಹುದು. ಈ ದಿನ ಮಹಿಳೆಯರು ತನ್ನ ತಾಯಿ, ಅತ್ತಿಗೆಗೆ ಬಾಗಿನ ನೀಡಿ, ಮುತ್ತೈದೆಯರಿಗೆ ಅರಿಶಿನ, ಕುಂಕುಮವನ್ನು ನೀಡಿ ಆಶೀರ್ವಾದ ಬೇಡುತ್ತಾರೆ. ಅದರಲ್ಲೂ ಮದುವೆಯ ನಂತರ ಮೊದಲ ಗೌರಿ ಹಬ್ಬವಾದರೇ ಇನ್ನೂ ಹೆಚ್ಚು ವಿಶೇಷವಾಗಿರುತ್ತದೆ. ಈ ದಿನ ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಗೌರಿಯನ್ನು ಪೂಜೆ ಮಾಡುವುದರಿಂದ ತಾಯಿ ನಮ್ಮ ಕಷ್ಟಗಳನ್ನು ದೂರ ಮಾಡಿ, ಇಷ್ಟಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಈ ರೀತಿ ಮಾಡುವುದರಿಂದ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿರುತ್ತದೆ ಎನ್ನಲಾಗುತ್ತದೆ. ಇದು ಬಹಳ ವಿಭಿನ್ನವಾದ ಹಬ್ಬ.
ಮೊದಲೇ ಹೇಳಿದಂತೆ ಈ ದಿನ ಬಾಗಿನ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮೊರದ ಬಾಗಿನ ಕೊಡುವುದನ್ನ ನೋಡಿರುತ್ತೇವೆ. ಅದರಲ್ಲಿ ಏನಿರುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ, ಇನ್ನೂ ಕೆಲವರಿಗೆ ಈ ವಿಚಾರದಲ್ಲಿ ಬಹಳ ಗೊಂದಲವಿದೆ. ಹಾಗಾಗಿ ಮೊರದ ಬಾಗಿನದಲ್ಲಿ ಏನೆಲ್ಲಾ ಇದೆ ಎಂಬುದನ್ನ ನಾವಿಲ್ಲಿ ಕೊಟ್ಟಿದ್ದು, ನಿಮ್ಮ ಮೊದಲ ಗೌರಿಯಾದರೆ ಇನ್ನೂ ಹೆಚ್ಚಿನ ಸಹಾಯವಾಗುತ್ತದೆ.
ಮೊರದ ಬಾಗಿನದಲ್ಲಿ ಏನೆಲ್ಲಾ ಇರಬೇಕು?
10 ಮೊರ
4 ವಿವಿಧ ಬೇಳೆಗಳ ಮಿಶ್ರಣ 3 ಕಪ್
(ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ಹೆಸರುಕಾಳು)
2 ಕಪ್ ಅಕ್ಕಿ
1/2 ಕಪ್ ಗೋಧಿ
ಇದನ್ನೂ ಓದಿ: ಕಾಲ್ಗೆಜ್ಜೆ ಅಲಂಕಾರಕ್ಕೆ ಮಾತ್ರ ಅಲ್ಲ, ಆರೋಗ್ಯಕ್ಕೂ ಉತ್ತಮ - ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ
ಬೆಲ್ಲ ಅಚ್ಚು 1
ಅರಿಶಿನ ಮತ್ತು ಕುಂಕುಮ
ಕಣ್ಣು ಕಪ್ಪು 1 ಡಬ್ಬ
1 ಡಜನ್ ಬಳೆ
1 ಜೋಡಿ ಓಲೆ
1 ಕರಿಮಣಿ
1 ಕನ್ನಡಿ
1 ಬಾಚಣಿಗೆ
1 ಬ್ಲೌಸ್ ಪೀಸ್ (ಕೆಂಪು ಅಥವಾ ಹಸಿರು)
ವೀಳ್ಯದ ಎಲೆ ಮತ್ತು ಅಡಿಕೆ
1 ತೆಂಗಿನಕಾಯಿ
ಬಾಳೆಹಣ್ಣು 2
ದಕ್ಷಿಣೆ
ಇನ್ನು ಈ ಬಾಗಿನದಲ್ಲಿ ಕೊಡುವ ಪ್ರತಿಯೊಂದು ವಸ್ತುವಿಗೂ ಒಂದೊಂದು ಅರ್ಥವಿದೆ.
ಅರಿಶಿನ ಗೌರಿದೇವಿ, ಕುಂಕುಮ ಮಹಾಲಕ್ಷ್ಮಿ ಹಾಗೂ ಸಿಂಧೂರ ಸರಸ್ವತಿ ದೇವಿಯ ಸ್ವರೂಪ ಎನ್ನಲಾಗುತ್ತದೆ. ಹಾಗೆಯೇ ಕನ್ನಡಿಯು ರೂಪ ಲಕ್ಷ್ಮಿಯ ಸಂಕೇತವಾದರೆ, ಬಾಚಣಿಗೆ -ಶೃಂಗಾರ ಲಕ್ಷ್ಮಿ, ಕಾಡಿಗೆ – ಲಜ್ಜಾಲಕ್ಷ್ಮಿ ಅಕ್ಕಿ - ಶ್ರೀ ಲಕ್ಷ್ಮಿಯ ಸ್ವರೂಪ ಎನ್ನುವ ನಂಬಿಕೆ ಇದೆ.
ಅದರಂತೆಯೇ ನಾವು ಕೊಡುವ ಬೇಳೆಗಳಿಗೆ ಸಹ ಒಂದೊಂದು ಅರ್ಥವಿದೆ. ತೊಗರಿ ಬೇಳೆ - ವರ ಲಕ್ಷ್ಮಿ, ಉದ್ದಿನ ಬೇಳೆ - ಸಿದ್ಧ ಲಕ್ಷ್ಮಿ, ಹೆಸರು ಬೇಳೆ - ವಿದ್ಯಾ ಲಕ್ಷ್ಮಿ, ತೆಂಗಿನ ಕಾಯಿ - ಸಂತಾನ ಲಕ್ಷ್ಮಿ, ವೀಳ್ಯದೆಲೆ - ಧನ ಲಕ್ಷ್ಮಿ, ಅಡಿಕೆ – ಇಷ್ಟಲಕ್ಷ್ಮಿ ಎನ್ನಲಾಗುತ್ತದೆ. ಇದರ ಜೊತೆಗೆ ಹಣ್ಣು - ಜ್ಞಾನ ಲಕ್ಷ್ಮಿ, ಬೆಲ್ಲ - ರಸ ಲಕ್ಷ್ಮಿ, ಬಟ್ಟೆ - ವಸ್ತ್ರ ಲಕ್ಷ್ಮಿ.
ಇದನ್ನೂ ಓದಿ: ಗೌರಿ ಹಬ್ಬಕ್ಕೆ ಹೊಸಾ ಡಿಸೈನ್ ಬಳೆಗಳು ಬಂದಿವೆ, ನೋಡಿದ್ರಾ?
ಬಾಗಿನ ಮೊರವನ್ನು ತಯಾರಿಸುವುದು ಹೇಗೆ?
ಮೊದಲೇ ನಿಮಗೆ ಬೇಕಾದಷ್ಟು ಮೊರ ತಂದು ಚೆನ್ನಾಗಿ ತೊಳೆಯಿರಿ. ನಂತರ ಅದರ ಮೇಲೆ ಅರಿಶಿನ, ಕುಂಕುಮದ ಪಟ್ಟಿ ಬಳಿಯಿರಿ. ಹಾಗೆಯೇ ಅದರ ಅಂಚುಗಳಲ್ಲಿ ಕುಂಕುಮ ಹಚ್ಚಿ. ಈಗ ಅದರಲ್ಲಿ ಕನಿಷ್ಟ 2 ಎಲೆ, ಕನಿಷ್ಠ 4 ಅಡಿಕೆ ಹಾಗೂ ತೆಂಗಿನ ಕಾಯಿ ಇಡಿ. ಹಾಗೆಯೇ ದಕ್ಷಿಣೆ ಇಡಿ ನಂತರ ಈಗಾಗಲೇ ಮೇಲೆ ತಿಳಿಸಿರುವ ಇತರ ಸಾಮಾನುಗಳನ್ನು ಇಡಿ. ಈಗ ಇನ್ನೊಂದು ಮೊರವನ್ನು ತೆಗೆದುಕೊಂಡು. ವಿರುದ್ಧ ದಿಕ್ಕಿನಲ್ಲಿ ಇಡಿ. ನಂತರ ಮೊರವನ್ನು ದಾರದಿಂದ ಕಟ್ಟಿದರೆ ಮೊರದ ಬಾಗಿನ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ