Easy Garlic Peeling: ಈ ಬೆಳ್ಳುಳ್ಳಿ ಸಿಪ್ಪೆ ಬಿಡಿಸೋ ಕೆಲಸ ಇದ್ಯಲಾ, ಅದಕ್ಕಿಂತ ರಗಳೆಯ ಕೆಲಸ ಮತ್ತೊಂದಿಲ್ಲ ನೋಡಿ. ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಾ ಈರುಳ್ಳಿ (Onion) ಸಿಪ್ಪೆಯಾದ್ರೂ ಬಿಡಿಸಿಕೊಳ್ಬಹುದು, ಬೆಳ್ಳುಳ್ಳಿ ಸಹವಾಸ ಅಲ್ಲಪ್ಪಾ. ಅದ್ರಲ್ಲೂ ಪ್ರತಿದಿನದ ಅಡುಗೆಗೆ (Cooking) ಬೆಳ್ಳುಳ್ಳಿ ಬಳಸುವವರಿಗಂತೂ ಅತ್ತ ರುಚಿಗೆ ಬೆಳ್ಳುಳ್ಳಿ ಬೇಕು, ಆದ್ರೆ ಇತ್ತ ಅದರ ಸಿಪ್ಪೆ ಸುಲಿಯುವ ಭರಾಟೆಯಲ್ಲಿ ಉಗುರೆಲ್ಲಾ ನೋವು (Pain) ಬಂದಿರುತ್ತದೆ. ಇಷ್ಟ ಆದರೆ ಕಷ್ಟ (Difficult) ಎನ್ನುವ ಪರಿಸ್ಥಿತಿ ಇದು. ಹಾಗಂತ ಬಳಸದೇ ಇರೋಕೂ ಆಗಲ್ಲ. ಇದೆಲ್ಲಾ ಗೊತ್ತಿದ್ದರಿಂದಲೇ ಕೆಲವು ತರಕಾರಿ ಅಂಗಡಿಯವರು ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಮಾರಾಟ ಮಾಡ್ತಾರೆ. ಅದು ನೋಡೋಕೆ ಎಷ್ಟೊಂದು ಕೆಲಸ ಉಳಿಸುತ್ತೆ ಅಂತ ಅಂದ್ಕೊಂಡ್ರೂ ಬಹಳ ದುಬಾರಿ (Costly). ಚಿಂತೆ ಮಾಡ್ಬೇಡಿ, ಈ ಸಮಸ್ಯೆಗೂ ಒಂದು ಸಖತ್ ಪರಿಹಾರ ಇದೆ.
ಈ ಕಿಚನ್ ಹ್ಯಾಕ್ಸ್ ಅಂತ ಇರುತ್ತಲಾ, ಅಡುಗೆಮನೆಯಲ್ಲಿ ಹೆಣ್ಣುಮಕ್ಕಳ ಪಾಲಿಗೆ ಅಕ್ಷರಶಃ ದೇವರಂಥಾ ಟ್ರಿಕ್ಸ್ ಅವು. ಬೆಟ್ಟದಂಥಾ ಕೆಲಸವನ್ನು ಸೂಜಿ ಮೊನೆಯಲ್ಲಿ ಸರಿ ಮಾಡೋ ಅದ್ಭುತ. ಅರೇ ಹೌದಲ್ಲಾ, ಎಷ್ಟೊಂದು ಸುಲಭ ಆಯ್ತು ಅಂತ ಖುಷಿಯಾಗಿ ಒಂದ್ಸಲ ಕಲಿತುಕೊಂಡರೆ ಮತ್ತೆ ಜೀವನ ಪೂರ್ತಿ ಅದನ್ನೇ ಫಾಲೋ ಮಾಡೋ ಹೆಣ್ಮಕ್ಕಳಿಗೇನೂ ಕಡಿಮೆ ಇಲ್ಲ. ತಾವು ಕಲಿತ ಹೊಸಾ ವಿಧಾನವನ್ನು ಮತ್ತೊಬ್ಬರಿಗೂ ಹೇಳಿಕೊಡೋ ಧಾರಾಳಿಗಳೂ ಇದ್ದಾರೆ ಎನ್ನಿ.
ಸರಿಯಾದ ಬೆಳ್ಳುಳ್ಳಿ ಕೊಳ್ಳಿರಿ
ಈಗ ಬೆಳ್ಳುಳ್ಳಿ ವಿಚಾರ. ಬೆಳ್ಳುಳ್ಳಿ ಕೊಳ್ಳುವಾಗ ಆದಷ್ಟೂ ಚೆನ್ನಾಗಿ ಒಣಗಿರುವ ಬೆಳ್ಳುಳ್ಳಿ ಕೊಳ್ಳಿರಿ. ಆಗ ಸಿಪ್ಪೆ ಚೆನ್ನಾಗಿ ಪೂರ್ತಿಯಾಗಿ ಸುಲಿಯಲು ಸಾಧ್ಯವಾಗುತ್ತದೆ, ಅಲ್ಲದೇ ಚೆನ್ನಾಗಿ ಒಣಗಿರುವ ಬೆಳ್ಳುಳ್ಳಿ ಬೇಗ ಹಾಳಾಗುವುದಿಲ್ಲ, ತಿಂಗಳುಗಟ್ಟಲೆ ಬಳಸಲು ಯೋಗ್ಯವಾಗಿರುತ್ತದೆ. ಬೆಳ್ಳುಳ್ಳಿಯ ಪ್ರತೀ ಎಸಳನ್ನೂ ಬಿಡಿಸಿ ನಂತರ ಅದನ್ನು ಉಗುರಿನಿಂದ ನಯವಾಗಿ ಪದರಪದರವಾಗಿ ಸುಲಿಯಬೇಕು. ಇಷ್ಟೆಲ್ಲಾ ಮಾಡಬೇಕಾದಾಗ ಒಂದು ಗಂಟೆ ಸಮಯದಲ್ಲಿ ಬಹುಶಃ ಕಾಲು ಕೆಜಿ ಬೆಳ್ಳುಳ್ಳಿಯನ್ನೂ ಬಿಡಿಸಲು ಸಾಧ್ಯವಿಲ್ಲ. ಅದಕ್ಕೇ ಮನೆಯಲ್ಲಿ ಗೃಹಿಣಿಯರು ಅಡುಗೆ ಮಾಡುವಾಗಲೇ ಆಗ ಬೇಕಾದ ಕೆಲವೇ ಎಸಳುಗಳನ್ನು ಬಿಡಿಸಿಕೊಂಡು ಅವತ್ತಿಗೆ ಅವತ್ತಿನದ್ದು ಎನ್ನುವಂತೆ ಕೆಲಸ ಮುಗಿಸಿಕೊಳ್ತಾರೆ.
ಇದನ್ನೂ ಓದಿ: Kitchen Hacks: ಶುಂಠಿ ಸಿಪ್ಪೆ ತೆಗೆಯೋಕೆ ಸಖತ್ ಸುಲಭ ವಿಧಾನ.. ಐದು ಸೆಕೆಂಡ್ನಲ್ಲಿ ಸಿಪ್ಪೆ ಕ್ಲಿಯರ್!
ಇಲ್ಲಿದೆ ನೋಡಿ ಸಖತ್ ಸುಲಭ ವಿಧಾನ
ಆದ್ರೆ ಇನ್ಮೇಲೆ ಇಷ್ಟೆಲ್ಲಾ ಕಷ್ಟಪಡಲೇಬೇಡಿ. ಬಹಳ ಸುಲಭವಾಗಿ ನಿಮಿಷ ಅಲ್ಲ, ಸೆಕೆಂಡುಗಳಲ್ಲಿ ಬೆಳ್ಳುಳ್ಳಿ ಬಿಡಿಸೋ ವಿಧಾನ ಇಲ್ಲಿದೆ. ಇದರ ವಿವರವಾದ ವಿಡಿಯೋ ಕೂಡಾ ಇದೆ ನೋಡಿ:
ಮೊದಲು ಒಂದು ಇಡಿಯಾದ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಅದನ್ನು ಅಡ್ಡಡ್ಡ ಇರಿಸಿ ಚಾಕು ತೆಗೆದುಕೊಂಡು ನಿಂಬೆಹಣ್ಣು ಕತ್ತರಿಸಿದಂತೆ ಅರ್ಧಕ್ಕೆ ಕಟ್ ಮಾಡಿ. ಹೌದು, ಬೆಳ್ಳುಳ್ಳಿಯನ್ನು ಇದ್ದಂತೆಯೇ ಸಿಪ್ಪೆಯ ಸಮೇತ ಅರ್ಧಕ್ಕೆ ಕತ್ತರಿಸಿ. ಕತ್ತರಿಸಿದ ಎರಡು ಭಾಗಗಳನ್ನು ಉಲ್ಟಾ ಇರಿಸಿ ಈಗ ಸ್ವಲ್ಪ ಹೊರಬಂದಂತೆ ಇರುವ ಸಿಪ್ಪೆಯನ್ನು ಇಡಿಯಾಗಿ ಬೇರ್ಪಡಿಸಿ. ಇಷ್ಟು ಮಾಡಿದರೆ ಸಾಕು, ಬೆಳ್ಳುಳ್ಳಿಯ ಪ್ರತಿ ಎಸಳಿನಲ್ಲೂ ಇರುವ ಸಿಪ್ಪೆ ಸರಾಗವಾಗಿ ಕಾಗದ ತೆಗೆದು ಇಟ್ಟಂತೆ ಬಂದುಬಿಡುತ್ತದೆ.
ಇದನ್ನೂ ಓದಿ: Cockroach Problem: ಅಡುಗೆಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ? ಸೌತೆಕಾಯಿ-ದಾಲ್ಚಿನ್ನಿ ಬಳಸಿ ಜಿರಳೆಯನ್ನು ಶಾಶ್ವತವಾಗಿ ಓಡಿಸಿ!
ಬೆಳ್ಳುಳ್ಳಿಯ ಎಸಳುಗಳು ಅರ್ಧಕ್ಕೆ ತುಂಡಾಗಿರುತ್ತವೆ. ಆದರೆ
ಅಡುಗೆಗೆ ಬಳಸಲು ಏನೂ ತೊಂದರೆಯಿಲ್ಲ. ಇಡಿಯಾಗಿ ಹೇಗೋ ಬೆಳ್ಳುಳ್ಳಿ ಬಳಸುವುದು ಕಡಿಮೆ. ಒಗ್ಗರಣೆ ಹಾಕಲು ಅಥವಾ ಮಸಾಲೆ ಅರೆಯಲು ಅಥವಾ ಯಾವುದೇ ಖಾದ್ಯ ತಯಾರಿಸಲು ಹುರಿಯುವಾಗ ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಯೋ, ಜಜ್ಜಿಯೋ ಬಳಸುವುದು ಹೆಚ್ಚು, ಹಾಗಾಗಿ ಈ ರೀತಿ ಎಸಳುಗಳು ತುಂಡಾಗಿದ್ದರೂ ಸಮಸ್ಯೆ ಏನಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ