Cancer Treatment: ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ಕಾಡುವ ಖಿನ್ನತೆಗೆ ಇಲ್ಲಿದೆ ಪರಿಹಾರ; ಧೈರ್ಯವಾಗಿ ರೋಗದ ವಿರುದ್ಧ ಹೋರಾಡಿ

ಅನಾರೋಗ್ಯಕ್ಕೆ ಸಂಬಂಧಿಸಿದ ಭಯ ಮತ್ತು ಒತ್ತಡವು ಮಾನಸಿಕ ಆರೋಗ್ಯವನ್ನು ಹದಗೆಡಿಸುವುದರಿಂದ ಕ್ಯಾನ್ಸರ್ ಇರುವವರಲ್ಲಿ ಖಿನ್ನತೆಯು ಸಾಮಾನ್ಯವಾಗಿದೆ. ಖಿನ್ನತೆಯನ್ನು ಹೋಗಲಾಡಿಸಿ ರೋಗದ ವಿರುದ್ಧ ಹೋರಾಡಲು ಕೆಲ ಸಲಹೆಗಳನ್ನು ಅನುಸರಿಸಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಪಂಚದಾದ್ಯಂತ ಜನರು ಬಳಲುತ್ತಿರುವ ಮಾರಣಾಂತಿಕ ಕಾಯಿಲೆಗಳಲ್ಲಿ ಕ್ಯಾನ್ಸರ್ (Cancer) ಒಂದು. ಇದು ದೇಹದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡಬಹುದು, ಇದು ಅಪಾಯಕಾರಿ (Dangerous) ಮತ್ತು ಕೆಲವೊಮ್ಮೆ ಮಾರಣಾಂತಿಕವೂ ಹೌದು. ಒಬ್ಬ ವ್ಯಕ್ತಿಯಲ್ಲಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡಿದಾಗ, ಅದು ಅವರ ದೈಹಿಕ ಆರೋಗ್ಯದ (Health) ಮೇಲೆ ಪರಿಣಾಮ ಬೀರುವುದಕ್ಕೂ ಹೆಚ್ಚಾಗಿ ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಲವು ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ. ಕ್ಯಾನ್ಸರ್ ಕಾಯಿಲೆಯ (Cancer Treatment) ಚಿಕಿತ್ಸೆ ಭಾಗವಾಗಿ ಬಹು ಪರೀಕ್ಷೆಗಳು, ಕೀಮೋಥೆರಪಿ ಅವಧಿಗಳು ಮತ್ತು ಭಾರಿ ಔಷಧಿಗಳು ರೋಗಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ ಮತ್ತು ವ್ಯಕ್ತಿಯನ್ನು ಖಿನ್ನತೆಗೆ ಒಳಪಡಿಸಬಹುದು.

ಅನಾರೋಗ್ಯಕ್ಕೆ ಸಂಬಂಧಿಸಿದ ಭಯ ಮತ್ತು ಒತ್ತಡವು ಮಾನಸಿಕ ಆರೋಗ್ಯವನ್ನು ಹದಗೆಡಿಸುವುದರಿಂದ ಕ್ಯಾನ್ಸರ್ ಇರುವವರಲ್ಲಿ ಖಿನ್ನತೆಯು ಸಾಮಾನ್ಯವಾಗಿದೆ. ಹಾಗಾದರೆ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಮತ್ತು ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದರೆ ಖಿನ್ನತೆಯನ್ನು ನಿರ್ವಹಿಸಲು ಈ ಸಲಹೆಗಳನ್ನು ಅನುಸರಿಸಿ.

ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಖಿನ್ನತೆಯನ್ನು ಹೇಗೆ ನಿರ್ವಹಿಸುವುದು

1) ಮಾತನಾಡಿ ಮತ್ತು ವ್ಯಕ್ತಪಡಿಸಿ

ತಮ್ಮ ಭಾವನೆಗಳ ಬಗ್ಗೆ ಮಾತನಾಡುವ ರೋಗಿಗಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ಖಿನ್ನತೆಯಿರುವ ಜನರು ಸಾಮಾನ್ಯವಾಗಿ ಪ್ರಪಂಚದಿಂದ ದೂರವಿರುವಂತೆ ಭಾವಿಸುತ್ತಾರೆ.ನಿಮ್ಮಲ್ಲಿರುವ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ನೀವು ಏನನ್ನು ಅನುಭವಿಸುತ್ತೀರಿ ಎಂಬುದನ್ನು ಮಾತನಾಡುವುದು ಮತ್ತು ವ್ಯಕ್ತಪಡಿಸುವುದರ ಮೂಲಕ ಹಗುರ ಮಾಡಿಕೊಳ್ಳಬಹುದು, ಇದು ನಿಮಗೆ ಒಂಟಿ ಭಾವನೆಯನ್ನು ದೂರ ಮಾಡುತ್ತದೆ.

ಇದನ್ನೂ ಓದಿ: Cancer: ಮಹಿಳೆಯರನ್ನು ಕಾಡುವ ಗರ್ಭಾಶಯದ ಕ್ಯಾನ್ಸರ್​​ಗೆ ಇದೇ ಕಾರಣವಂತೆ!

2) ನಿಸ್ಸಂಕೋಚವಾಗಿ ಸಹಾಯ ಕೇಳಿ

ಸಹಾಯ ಕೇಳಲು ಹಿಂಜರಿಯಬೇಡಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕಷ್ಟದ ಸಮಯವಾಗಿರಬಹುದು. ಆದರೆ ನಿಮಗೆ ಅಗತ್ಯವಿರುವಾಗ ಕುಟುಂಬವು ನಿಮ್ಮ ಜೊತೆಯೇ ಇರುತ್ತದೆ, ಆದ್ದರಿಂದ ನಿಮಗೆ ಏನಾದರೂ ಬೇಕೆಂದರೆ, ಸಹಾಯ ಬೇಕಾದರೆ ಅವರನ್ನು ಕೇಳಲು ಯಾವುದೇ ಸಂಕೋಚ ಮಾಡಿಕೊಳ್ಳಬೇಡಿ.

3) ನಿಮ್ಮ ವೈದ್ಯರೊಂದಿಗೆ ಸಂಪರ್ಕದಲ್ಲಿರಿ

ನಿಮ್ಮ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು ಮತ್ತು ನಿಮ್ಮ ಕಾಯಿಲೆಯ ಗುಣಮುಖದ ಪ್ರಗತಿಯ ಬಗ್ಗೆ ಕೇಳುವುದು ಯಾವಾಗಲೂ ಉತ್ತಮವಾಗಿದೆ. ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನಿಮಗೆ ರೋಗದ ವಿರುದ್ಧದ ಹೋರಾಟದ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ, ಇದು ನಿಮ್ಮನ್ನು ಅಸಹಾಯಕ ಮತ್ತು ಏಕಾಂಗಿತನದಿಂದ ದೂರ ಮಾಡುತ್ತದೆ.

4) ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಿ

ಯೋಗ ಮತ್ತು ಧ್ಯಾನವು ಖಿನ್ನತೆಯನ್ನು ನಿಭಾಯಿಸಲು ಇರುವ ಉತ್ತಮ ಮಾರ್ಗವಾಗಿದೆ. ಹಾಗೂ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವಂತೆ ಮಾಡುತ್ತದೆ. ನಿಮ್ಮ ದೇಹಕ್ಕೆ ಒತ್ತಡವನ್ನು ಉಂಟುಮಾಡದ ಸರಳ ಆಸನಗಳನ್ನು ಕ್ಯಾನ್ಸರ್ ರೋಗಿಗಳು ವೈದ್ಯರ ಸಲಹೆ ಮೇರೆಗೆ ಪ್ರಯತ್ನಿಸಬಹುದು.

5) ವ್ಯಾಯಾಮ

ಸಾಧ್ಯವಾದರೆ, ವಾಕಿಂಗ್ ಮತ್ತು ಓಟದಂತಹ ದೈಹಿಕ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿ. ವ್ಯಾಯಾಮವು ಎಂಡಾರ್ಫಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ನಿಮ್ಮ ಮನಸ್ಥಿತಿಯನ್ನು ಬಲ ಪಡಿಸುತ್ತದೆ. ನೀವು ಖಿನ್ನತೆಗೆ ಒಳಗಾಗಿದ್ದರೆ ಹೊರಗೆ ಸ್ವಲ್ಪ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ರೆ ಈ 5 ಹಣ್ಣುಗಳನ್ನು ಸೇವಿಸಿ..!

6) ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಕ್ಯಾನ್ಸರ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂದು ಹಲವು ರೋಗಿಗಳು ಬಲವಾಗಿ ನಂಬಿರುತ್ತಾರೆ. ಆದರೆ ತಜ್ಞರು ಕ್ಯಾನ್ಸರ್ ರೋಗವು ಗುಣಪಡಿಸಬಹುದಾದ ಕಾಯಿಲೆ ಎನ್ನುತ್ತಾರೆ. ಕ್ಯಾನ್ಸರ್ ರೋಗದ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಸುಲಭವಾಗಿ ಗುಣಪಡಿಸಬಹುದಾಗಿದೆ. ಆದರೆ, ರೋಗ ಮೀರಿ ಹೋಗಿದ್ದರೆ ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ, ರೋಗದ ವಿರುದ್ಧ ಹೋರಾಡಿ. ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಹಲವರು ಈ ರೋಗವನ್ನು ಜಯಿಸಿರುವ ಉದಾಹರಣೆಗಳಿವೆ. ಹೀಗಾಗಿ ಮೊದಲು ನಿಮ್ಮ ಮೇಲೆ ನಂಬಿಕೆ ಇಡಿ ಮತ್ತು ಖಿನ್ನತೆಗೆ ಒಳಗಾಗಬೇಡಿ.
Published by:Pavana HS
First published: