Sunday Special Recipe: ಲೆಮೆನ್ ಚಿಕನ್ ಪಾಸ್ತಾ ಮಾಡೋದು ಎಷ್ಟು ಸುಲಭ ಗೊತ್ತಾ?

Lemon Chicken Pasta: ಹುಳಿ ಹುಳಿ ಮತ್ತು ಖಾರವಾಗಿ ವಿಭಿನ್ನ ರುಚಿ ನೀಡುವ ಈ ಲೆಮೆನ್ ಚಿಕನ್ ಪಾಸ್ತಾ ಮಕ್ಕಳಿಗೆ ಸಹ ಇಷ್ಟವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾನುವಾರ ಬಂತು ಅಂದ್ರೆ ಬಾಡೂಟ ಮಿಸ್ ಮಾಡೋಕೆ ಆಗತ್ತಾ? ಸ್ವಲ್ಪ ಬಿಡುವು ಸಿಗೋ ದಿನ ವಿಶೇಷ ನಾನ್ ವೆಜ್ ಅಡುಗೆ ಮಾಡಿ, ತಿಂದು ಖುಷಿ ಪಡದಿದ್ರೆ ಹೇಗೆ ಅಲ್ವಾ? ಪ್ರತಿ ಬಾರಿ ವೆರೈಟಿ ಟ್ರೈ ಮಾಡಬೇಕು ಅನ್ನೋದು ಪ್ರತಿಯೊಬ್ಬರಿಗೂ ಇಷ್ಟ. ಹಾಗಾದ್ರೆ ಏನ್ ಮಾಡೋದು ಅನ್ನೋದೆ  ದೊಡ್ಡ ಸಮಸ್ಯೆಯಾಗತ್ತೆ. ಸ್ವಲ್ಪ ಸ್ಪೈಸಿಯಾಗಿ, ಹುಳಿ, ಹುಳಿಯಾಗಿ ಲೆಮೆನ್ ಚಿಕನ್ ಪಾಸ್ತಾ ಮಾಡಿದ್ರೆ ಹೇಗಿರತ್ತೆ? ತುಂಬಾ ಸುಲಭವಾಗಿ ಮಾಡೋದು ಹೇಗೆ ಅಂತಾ ಇಲ್ಲಿದೆ.

ಲೆಮೆನ್ ಚಿಕನ್ ಪಾಸ್ತಾ ಮಾಡಲು ಬೇಕಾಗುವ ಸಾಮಾಗ್ರಿಗಳು
ಬೋನ್ಲೆಸ್ ಚಿಕನ್ - ಅರ್ಧ ಕೆಜಿ
ಪಾಸ್ತ - 100-125 ಗ್ರಾಂ
ಮೈದಾ - 1/4 ಬಟ್ಟಲು
ನಿಂಬೆ ರಸ - 3 ಚಮಚ
ಬೆಣ್ಣೆ - 1/4 ಬಟ್ಟಲು
ಕೊತ್ತಂಬರಿ ಸೊಪ್ಪು-ಅರ್ಧ ಕಪ್
ಕಾಳು ಮೆಣಸಿನ ಪುಡಿ - 1/4 ಚಮಚ
ಓರೆಗಾನೊ - 1/4 ಚಮಚ
ರೆಡ್ ಚಿಲ್ಲಿ ಫ್ಲೇಕ್ಸ್ - 1/4 ಚಮಚ
ಎಣ್ಣೆ - 1-1/2 ಚಮಚ
ಬೆಳ್ಳುಳ್ಳಿ - 5-6
ವೈಟ್ ವೈನ್ - 1/2 ಬಟ್ಟಲು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಚಿಕನ್ ಪೀಸ್ ಹಾಕಿ , ನಂತರ ಆ ಚಿಕನ್ ಪೀಸ್​ಗೆ ಉಪ್ಪು ಹಾಗೂ ಕಾಳು ಮೆಣಸಿನ ಪುಡಿಯನ್ನು ಎರಡೂ ಬದಿಗೂ ಸರಿಯಾಗಿ ಹೊಂದುವಂತೆ ಹಚ್ಚಬೇಕು. ಇದರ ನಂತರ ಚಿಕನ್ ಪೀಸ್​ಗೆ ಮೈದಾ ಹಿಟ್ಟನ್ನು ಬೆರೆಸಿ ಸರಿಯಾಗಿ ಮಿಶ್ರಣ ಮಾಡಬೇಕು. 2 ನಿಮಿಷಗಳ ಕಾಲ ಆ ಮಿಶ್ರಣವನ್ನು ಹಾಗೆಯೇ ಬಿಡಬೇಕು.

2 ನಿಮಿಷದ ನಂತರ ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು 2 ಚಮಚ ಬೆಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಕಾಯಲು ಬಿಡಿ. ನಂತರ ಮೈದಾಹಿಟ್ಟು ಹಾಕಿದ ಚಿಕನ್ ಪೀಸ್ ಗಳನ್ನು ಪ್ಯಾನ್​ಗೆ ಹಾಕಿ ಚೆನ್ನಾಗಿ ಎರಡು ಬದಿಯಲ್ಲಿಯೂ ಕಂದು ಬಣ್ಣ ಬರುವಂತೆ ಬೇಯಿಸಬೇಕು.

ಇದನ್ನೂ ಓದಿ: ಏನೆಲ್ಲಾ ಕುಡಿದರೆ ದೇಹದ ತೂಕ ಕಡಿಮೆ ಆಗುತ್ತದೆ; ಇಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಪಟ್ಟಿ

ಒಂದೆಡೆ ಇದು ಬೇಯುವಾಗ ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅರ್ಧ ಕುದಿಯುತ್ತಿರುವಾಗ ಪಾಸ್ತಾವನ್ನು ಈ ನೀರಿಗೆ ಹಾಕಿ ಬೇಯಿಸಿ. ಕೆಲ ನಿಮಿಷಗಳ ನಂತರ ನೀರನ್ನು ಖಾಲಿ ಮಾಡಿ ಪಾಸ್ತಾವನ್ನು ತೆಗೆದಿಟ್ಟುಕೊಳ್ಳಿ. ಆದರೂ ಪಾಸ್ತಾದಲ್ಲಿ ನೀರು ಇರುವ ಕಾರಣ, ನೀರನ್ನು ಸೋಸುವುದು ಉತ್ತಮ.

ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಕಾಯಲು ಬಿಡಿ. ಸಣ್ಣ ಉರಿಯಲ್ಲಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವಂತೆ ಹುರಿಯಬೇಕು. ನಂತರ ಇದಕ್ಕೆ ವೈಟ್ ವೈನ್ ಸೇರಿಸಿ. ಹಾಕಿದ ವೈನ್ ಅರ್ಧದಷ್ಟು ಆಗುವವರೆಗೂ ಕುದಿಸಬೇಕು. ನಂತರ ಇದಕ್ಕೆ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಓರೆಗಾನೊ, ರೆಡ್ ಚಿಲ್ಲಿ ಫ್ಲೇಕ್ಸ್, ಉಪ್ಪು, ಕಾಳು ಮೆಣಸಿನ ಪುಡಿ, ಬೆಣ್ಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬೇಯಿಸಿದ ಪಾಸ್ತಾ ಹಾಗೂ ಚಿಕನ್ ಪೀಸ್ ಗಳನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ಒಂದು ವೇಳೆ ಡ್ರೈ ಆಗಿದೆ ಎಂದು ಅನಿಸಿದರೆ ಪಾಸ್ತಾ ಬೇಯಿಸಿದ ನೀರನ್ನು ಸ್ವಲ್ಪ ಸೇರಿಸಿಕೊಳ್ಳಬಹುದು.

ಈ ಮಿಶ್ರಣ ಸರಿಯಾಗಿ ಬೆಂದ ನಂತರ ಒಂದು ಪ್ಲೇಟ್ ತೆಗೆದುಕೊಂಡು ಲೆಮೆನ್ ಚಿಕನ್ ಪಾಸ್ತಾವನ್ನು ಅದಕ್ಕೆ ಹಾಕಿ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿಕರ ಲೆಮೆನ್ ಚಿಕನ್ ಪಾಸ್ತಾ ರೆಡಿ
Published by:Sandhya M
First published: