ಬೇಸಿಗೆ ಆರಂಭವಾಗಿದ್ದು, ಈ ಸೀಸನ್ ತರಕಾರಿ, ಹಣ್ಣುಗಳು (Summer Vegetables And Fruits) ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಅದರಲ್ಲಿ ವಿಶೇಷವಾಗಿ ಮಾರುಕಟ್ಟೆ ತುಂಬೆಲ್ಲಾ ಮಾವುಗಳು (Mango) ಕಾಣಿಸುತ್ತಿವೆ. ಬಗೆ ಬಗೆಯ ಮಾವುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಮನೆಗಳಲ್ಲಿಯೂ ಬಗೆ ಬಗೆ ಮಾವಿನ ಕಾಯಿ ಖಾದ್ಯಗಳು (Mango Recipe) ಸಿದ್ಧವಾಗುತ್ತಿವೆ. ಯುಗಾದಿ ಹಬ್ಬದಂದು ಎಲ್ಲರ ಮನೆಯಲ್ಲಿ ಮಾವಿನಕಾಯಿ ಚಿತ್ರನ್ನ, ಮಾವಿನಕಾಯಿ ಪಾನಕದ ಪರಿಮಳ ಹರಡಿತ್ತು. ಹಸಿ ಮಾವಿನಕಾಯಿಯಿಂದ ಹಲವು ರೆಸಿಪಿ (Recipe) ಮಾಡಬಹುದು. ಇಂದು ನಾವು ನಿಮಗೆ ರುಚಿಯಾದ ಮಾವಿನಕಾಯಿ ಉಪ್ಪಿಟ್ಟು ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಮಾವಿನಕಾಯಿ ಉಪ್ಪಿಟ್ಟು (Mango Uppittu/ Mango Upma) ಮಾಡೋದು ತುಂಬಾನೇ ಸರಳವಾಗಿದ್ದು, ಅದರ ರುಚಿಯೂ ಸಹ ಅಷ್ಟೇ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು
ದಪ್ಪ ರವೆ: 100 ಗ್ರಾಂ
ಹಸಿಮೆಣಸಿನಕಾಯಿ: 4 ರಿಂದ 5
ಸಾಸವೆ ಮತ್ತು ಜೀರಿಗೆ: ಒಂದು ಟೀ ಸ್ಪೂನ್
ಉದ್ದಿನಬೇಳೆ: ಒಂದು ಟೀ ಸ್ಪೂನ್
ಕಡ್ಲೇಬೇಳೆ: ಅರ್ಧ ಟೀ ಸ್ಪೂನ್
ಮಾವಿನಕಾಯಿ: ಒಂದು
ಈರುಳ್ಳಿ: ಒಂದು (ದೊಡ್ಡ ಗಾತ್ರದ್ದು)
ಕರೀಬೇವು: 5 ರಿಂದ 6 ದಳ
ಇಂಗು: ¼ ಟೀ ಸ್ಪೂನ್
ಕೋತಂಬರಿ ಸೊಪ್ಪು
ಹಸಿಶುಂಠಿ: ಅರ್ಧ ಇಂಚು
ಶೇಂಗಾ: 2 ಟೀ ಸ್ಪೂನ್
ಎಣ್ಣೆ
ಉಪ್ಪು: ರುಚಿಗೆ ತಕ್ಕಷ್ಟು
ಮಾವಿನಕಾಯಿ ಉಪ್ಪಿಟ್ಟು ಮಾಡುವ ವಿಧಾನ
*ಮೊದಲಿಗೆ ಮಾವಿನಕಾಯಿಯನ್ನು ತರಿತರಿಯಾಗಿ ಹೆರಚಿಕೊಂಡು ಎತ್ತಿಟ್ಟುಕೊಳ್ಳಿ. ಅಥವಾ ಮಾವಿನ ಕಾಯಿಯನ್ನು ಕತ್ತರಿಸಿಕೊಂಡು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಬಹುದು.
*ನಂತರ ಕೋತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನ ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ಮೆಣಸಿನಕಾಯಿಯನ್ನ ಉದ್ದವಾಗಿ ಕತ್ತರಿಸಿಕೊಳ್ಳಬೇಕು. ನಂತರ ಶುಂಠಿ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
*ಒಲೆ ಆನ್ ಮಾಡಿಕೊಂಡು ಪ್ಯಾನ್ ಇರಿಸಿ ರವೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ರವೆ ಪರಿಮಳ ಬೀರುತ್ತಿದ್ದಂತೆ ಒಂದು ಬೌಲ್ಗೆ ಹಾಕಿಕೊಳ್ಳಿ.
*ಈಗ ಇದೇ ಪಾತ್ರಕ್ಕೆ ಮೂರರಿಂದ ನಾಲ್ಕು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಮೊದಲಿಗೆ ಸಾಸವೆ ಮತ್ತು ಜೀರಿಗೆ ಹಾಕಿ. ಚಟಪಟ ಸದ್ದು ಬರುತ್ತಿದಂತೆ ಕಡಲೆಬೇಳೆ ಮತ್ತು ಶೇಂಗಾ ಹಾಕಿ ಫ್ರೈ ಮಾಡಿಕೊಳ್ಳಿ.
*ನಂತರ ಉದ್ದಿನಬೇಳೆಯನ್ನು ಈ ಒಗ್ಗರಣೆಗೆ ಸೇರಿಸಬೇಕು. ಕಡಲೇಬೇಳೆ, ಶೇಂಗಾ ಮತ್ತು ಉದ್ದಿನಬೇಳೆ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಕರೀಬೇವು, ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.
*ಈರುಳ್ಳಿಯ ನಂತರ ಇದಕ್ಕೆ ಹಸಿಶುಂಠಿ, ಹಸಿಮೆಣಸಿನಕಾಯಿ ಮತ್ತು ತರಿತರಿಯಾಗಿ ಮಾಡಿಕೊಂಡಿರುವ ಮಾವಿನಕಾಯಿ ಸೇರಿಸಿ ಚೆನ್ನಾಗಿ ಮೂರರಿಂದ ನಾಲ್ಕು ನಿಮಿಷ ಫ್ರೈ ಮಾಡಿ.
*ಇಂಗು, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಮೂರು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಲು ಬಿಡಿ.
*ಐದು ನಿಮಿಷದ ಬಳಿಕ ಮುಚ್ಚಳ ತೆಗೆದು ಹುರಿದಿಟ್ಟುಕೊಂಡಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಹೋಗಬೇಕು. ಒಂದು ಕಡೆ ರವೆ ಹಾಕುತ್ತಿದ್ರೆ ಮತ್ತೊಂದು ಚಮಚದಿಂದ ಮಿಕ್ಸ್ ಮಾಡುತ್ತಿರಬೇಕು.
ಇದನ್ನೂ ಓದಿ: Chicken Upma: ಕೇವಲ ತರಕಾರಿ ಅಲ್ಲ, ಚಿಕನ್ ಹಾಕಿಯೂ ಮಾಡಬಹುದು ಉಪ್ಪಿಟ್ಟು; ತಿಂದವರು ಫಿದಾ ಆಗೋದು ಗ್ಯಾರೆಂಟಿ
*ರವೆ ಸೇರಿಸಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಮೂರು ನಿಮಿಷ ಬೇಯಿಸಬೇಕು. ಮೂರು ನಿಮಿಷಗಳ ನಂತರ ಒಲೆ ಆಫ್ ಮಾಡಿ ಐದರಿಂದ ಆರು ನಿಮಿಷವಾದ್ರೆ ಸವಿಯಲು ರುಚಿಯಾದ ಮಾವಿನಕಾಯಿ ಉಪ್ಪಿಟ್ಟು ಸಿದ್ಧ.
ಈ ಮಾವಿನಕಾಯಿ ಉಪ್ಪಿಟ್ಟು ಜೊತೆ ಶೇಂಗಾ ಚಟ್ನಿ ಪುಡಿ, ತುಪ್ಪ ಅಥವಾ ಹಸಿತೆಂಗಿನಕಾಯಿ ಚಟ್ನಿ ಸೂಪರ್ ಕಾಂಬಿನೇಷನ್ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ