Food Recipe : ದಿಢೀರ್ ಪುಳಿಯೋಗರೆ ಮಾಡುವ ಸುಲಭ ವಿಧಾನ ಇಲ್ಲಿದೆ..

Pulioyogare Powder : ಫಟಾಫಟ್ ತಯಾರಾಗಬಲ್ಲ, ಪುಳಿಯೋಗರೆ ಮಾಡುವ ವಿಧಾನವೂ ಆಯಾ ಸಮುದಾಯ ಅಥವಾ ಪ್ರಾಂತ್ಯಕ್ಕೆ ತಕ್ಕಂತೆ ಭಿನ್ನವಾಗಿರುತ್ತದೆ. ಮೇಲು ಕೋಟೆ ಅಯ್ಯಂಗಾರ್ ಪುಳಿಯೋಗರೆ, ಮೈಸೂರು ಶೈಲಿ ಪುಳಿಯೋಗರೆ ಹೀಗೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಹುಳಿಯನ್ನ ಅಥವಾ ಪುಳಿಯೋಗರೆ , ಅನ್ನದ ಖಾದ್ಯ ಇಷ್ಟಪಡುವವರ ನೆಚ್ಚಿನ ತಿನಿಸುಗಳಲ್ಲಿ ಒಂದು. ಈ ದಕ್ಷಿಣ ಭಾರತೀಯ ತಿನಿಸು, ಈಗ ಎಲ್ಲೆಡೆ ಜನಪ್ರಿಯ. ವಿದೇಶಕ್ಕೆ ಹೋಗುವ ದಕ್ಷಿಣ ಭಾರತೀಯರಲ್ಲಿ ಹೆಚ್ಚಿನವರು ಪುಳಿಯೋಗರೆ ಪುಡಿ ತೆಗೆದುಕೊಂಡು ಹೋಗಲು ಮರೆಯುವುದಿಲ್ಲ. ಏಕೆಂದರೆ ದಿಢೀರಾಗಿ ತಯಾರಿಸಲು ಸಾಧ್ಯವಿರುವ ಖಾದ್ಯವಿದು.


ಫಟಾಫಟ್ ತಯಾರಾಗಬಲ್ಲ, ಪುಳಿಯೋಗರೆ ಮಾಡುವ ವಿಧಾನವೂ ಆಯಾ ಸಮುದಾಯ ಅಥವಾ ಪ್ರಾಂತ್ಯಕ್ಕೆ ತಕ್ಕಂತೆ ಭಿನ್ನವಾಗಿರುತ್ತದೆ. ಮೇಲು ಕೋಟೆ ಅಯ್ಯಂಗಾರ್ ಪುಳಿಯೋಗರೆ, ಮೈಸೂರು ಶೈಲಿ ಪುಳಿಯೋಗರೆ, ಆಂಧ್ರಶೈಲಿ ಪುಳಿಯೋಗರೆ, ತಮಿಳು ಅಯ್ಯಂಗಾರ್ ಪುಳಿಯೋಗರೆ, ಕರ್ನಾಟಕ ಶೈಲಿ ಪುಳಿಯೋಗರೆ ಇತ್ಯಾದಿ. ಪ್ರತಿಯೊಂದರ ರುಚಿಯು ಕೊಂಚ ಭಿನ್ನ ಆಗಿರುತ್ತದೆ. ಅದರೂ ರುಚಿಯ ಬಗ್ಗೆ ಎರಡು ಮಾತಿಲ್ಲ.


ಎಲ್ಲರೂ ಹುಣಸೆ ಹಣ್ಣನ್ನು ಸೇರಿಸಿ ಪುಳಿಯೋಗರೆ ಗೊಜ್ಜನ್ನು ತಯಾರಿಸುತ್ತಾರೆ. ಆದರೆ ಮೊದಲೇ ಪುಳಿಯೋಗರೆ ಪುಡಿ ಮಾಡಿಟ್ಟು ಕೊಂಡು, ಪುಳಿಯೋಗರೆ ತಯಾರಿಸುವಾಗ ಹುಣಸೆ ಹಣ್ಣಿನ ರಸ ಸೇರಿಸುವುದೂ ಒಂದು ಪ್ರಯೋಜನಕಾರಿ ವಿಧಾನ. ಆ ಪುಡಿಯನ್ನು ತುಂಬಾ ದಿನ ಕೆಡದಂತೆ ಇಡಬಹುದು. ಇಲ್ಲಿ ಅಂತದ್ದೇ ಪುಳಿಯೋಗರೆ ಮಾಡುವ ವಿಧಾನವನ್ನು ತಿಳಿಸಲಾಗಿದೆ.


ಸಾಮಾಗ್ರಿಗಳು
ಕೊತ್ತಂಬರಿ ಬೀಜ- 8 ಟೇಬಲ್ ಚಮಚ
ಎಳ್ಳು - 8 ಟೇಬಲ್ ಚಮಚ
ಮೆಂತ್ಯೆ ಕಾಳು - 2 ಟೇಬಲ್ ಚಮಚ
ಜೀರಿಗೆ - 2 ಟೇಬಲ್ ಚಮಚ
ತುರಿದ ಒಣ ಕೊಬ್ಬರಿ – 4 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ -10 ರಿಂದ 12
ಕರಿ ಬೇವಿನ ಎಲೆಗಳು – ಒಂದು ಕಡ್ಡಿ
ಅಡುಗೆ ಎಣ್ಣೆ - 4 ಟೇಬಲ್ ಚಮಚ


ವಿಧಾನ
1. ಮೊದಲು ಬಾಣಲೆ ಬಿಸಿ ಮಾಡಿ, ಎಳ್ಳನ್ನು ಹುರಿಯಿರಿ, ಬಳಿಕ ಕೊಬ್ಬರಿ ತುರಿಯನ್ನು ಹಾಕಿ ಹುರಿಯಿರಿ. ಎಳ್ಳು ಸಿಡಿಯಲು ಆರಂಭಿಸಿದಾಗ ಮತ್ತು ಕೊಬ್ಬರಿ ಬಣ್ಣ ಬದಲಾಗಲು ಆರಂಭವಾಗುತ್ತಿದ್ದಂತೆ ಒಲೆ ಆರಿಸಿ. ಅದನ್ನು ಬಾಣಲೆಯಿಂದ ತೆಗೆಯಿರಿ.
2. ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಮೆಂತ್ಯೆ ಬೀಜ, ಜೀರಿಗೆ ಹಾಗೂ ಕರಿಬೇವಿನ ಎಲೆಗಳನ್ನು ಒಂದಾದ ಮೇಲೆ ಒಂದು ಹುರಿಯಿರಿ.
3. ಹುರಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
4. ತಣ್ಣಗಾದ ಬಳಿಕ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
5. ಪುಳಿಯೋಗರೆ ಪುಡಿ ಕೋಣೆಯ ತಾಪಮಾನಕ್ಕೆ ಬಂದ ಬಳಿಕ, ಅದನ್ನು ಗಾಳಿಯಾಡದ ಡಬ್ಬದಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಈ ಪುಡಿಯನ್ನು ಸುಮಾರು 15 ದಿನಗಳವರೆಗೆ ಇಡಬಹುದು.


ಗಮನಿಸಿ: ಈ ಪುಡಿಯಲ್ಲಿ ಕರಿ ಎಳ್ಳು ಅಥವಾ ಬಿಳಿ ಎಳ್ಳಿನಲ್ಲಿ ಯಾವುದನ್ನು ಬೇಕಾದರೂ ಬಳಸಬಹುದು. ಹೆಚ್ಚಿನವರು ಪುಳಿಯೋಗರೆ ಪುಡಿಗೆ ಕರಿ ಮೆಣಸನ್ನು ಕೂಡ ಸೇರಿಸುತ್ತಾರೆ. ಅದು ನಿಮ್ಮ ಆಯ್ಕೆಗೆ ಬಿಟ್ಟದ್ದು. ಕೊಬ್ಬರಿಯನ್ನು ಪುಡಿ ಮಾಡುವ ಬದಲು, ಇತರ ಸಾಮಾಗ್ರಿಗಳನ್ನು ಪುಡಿ ಮಾಡಿದ ಬಳಿಕ, ಆ ಪುಡಿಗೆ ಸೇರಿಸಬಹುದು. ಈ ಪುಡಿಯನ್ನು ತಯಾರಿಸಲು ತಗಲುವ ಸಮಯ ಕೇವಲ 20 ನಿಮಿಷ. ಕೆಲವು ಕಡೆ ಪುಳಿಯೋಗರೆ ಪುಡಿಗೆ ಬೆಲ್ಲವನ್ನೂ ಸೇರಿಸುತ್ತಾರೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: