ಗಣೇಶ ಚತುರ್ಥಿ 2019: ಮೋದಕ ಪ್ರಿಯನಿಗೆ ರುಚಿ ರುಚಿಯಾದ ಮೋದಕ ತಯಾರಿಸುವುದು ಹೇಗೆ?

ಇನ್ನು ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಅರ್ಪಿಸಿದರೆನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ಅನೇಕ ಬಗೆಯಲ್ಲಿ ಮೋದಕವನ್ನು ತಯಾರಿಸಲಾಗುತ್ತದೆ.

zahir | news18-kannada
Updated:August 30, 2019, 1:03 PM IST
ಗಣೇಶ ಚತುರ್ಥಿ 2019: ಮೋದಕ ಪ್ರಿಯನಿಗೆ ರುಚಿ ರುಚಿಯಾದ ಮೋದಕ ತಯಾರಿಸುವುದು ಹೇಗೆ?
ganesh-chaturthi
  • Share this:
ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅಥವಾ ಚೌತಿ ಹಬ್ಬ ಕೂಡ ಒಂದು. ಇನ್ನು ಈ ಹಬ್ಬಕ್ಕೆ ಮೋದಕವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಇಂತಹದೊಂದು ಸಂಪ್ರದಾಯದಾಕ್ಕೂ ಒಂದು ಪೌರಾಣಿಕ ಕಾರಣವಿದೆ.

ಗಣೇಶನ ಜನ್ಮದಿನದಂದು ಪಾರ್ವತಿ ಮಗನಿಗೆ ಎಳ್ಳುಂಡೆ, ಮೋದಕ, ಕಾಯಿಕಡುಬುಗಳ ಭಕ್ಷ್ಯಗಳನ್ನು ಮಾಡಿ ಉಣಬಡಿಸುತ್ತಿದ್ದಳು ಎನ್ನುತ್ತದೆ ಪೌರಾಣಿಕ ಮೂಲ. ಹೀಗಾಗಿಯೇ ಗಣೇಶ ಚತುರ್ಥಿಯಂದು ಎಲ್ಲರ ಮನೆಗಳಲ್ಲೂ ಭವ್ಯ ನೈವೇದ್ಯವನ್ನು ಇಡಲಾಗುತ್ತದೆ.

ಇನ್ನು ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಅರ್ಪಿಸಿದರೆನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ಅನೇಕ ಬಗೆಯಲ್ಲಿ ಮೋದಕವನ್ನು ತಯಾರಿಸಲಾಗುತ್ತದೆ. ಅದರಲ್ಲಿ  ಸ್ಟೀಮ್ ಮೋದಕ, ಕರಿದ ಮೋದಕ, ಬಾಳೆಹಣ್ಣಿನ ಮೋದಕ, ಹಾಲಿನ ಮೋದಕ ಪ್ರಮುಖವಾದವು. ಇವುಗಳನ್ನು ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.

ಸ್ಟೀಮ್ ಮೋದಕ
ಬೇಕಾಗುವ ಸಾಮಗ್ರಿ:
ಅಕ್ಕಿ ಹಿಟ್ಟು-1 ಕಪ್‌
ಕಾಯಿ ತುರಿ-1 ಕಪ್‌ಬೆಲ್ಲದ ಪುಡಿ-1 ಕಪ್‌
ತುಪ್ಪ-2 ಚಮಚ
ಗಸಗಸೆ-1 ಚಮಚ
ಏಲಕ್ಕಿ ಪುಡಿ-ಸ್ವಲ್ಪ
ಉಪ್ಪು-1 ಚಿಟಿಕೆ.

ತಯಾರಿಸುವ ವಿಧಾನ: ಒಂದು ಲೋಟ ನೀರನ್ನು (ನಿಮಗೆ ಬೇಕಾದಷ್ಟು) ಚೆನ್ನಾಗಿ ಬಿಸಿ ಮಾಡಿ. ಅದಕ್ಕೆ ಅಕ್ಕಿ ಹಿಟ್ಟು ಕಲಸಿ, ಹಾಗೆಯೇ ಅದರೊಂದಿಗೆ ಉಪ್ಪು ಮತ್ತು ತುಪ್ಪ ಹಾಕಿ. ಆ ಬಳಿಕ ಈ ಮಿಶ್ರಣವನ್ನು ಗಂಟಾಗದಂತೆ ಚೆನ್ನಾಗಿ  ತಿರುವಿ. ಇದಾದ ಮೇಲೆ ಏಲಕ್ಕಿ ಪುಡಿ , ಗಸೆಗಸೆ, ಬೆಲ್ಲ ಮತ್ತು ಕಾಯಿ ತುರಿ ಬೆರೆಸಿ ಹೂರಣ ಮಾಡಿ . ಸ್ವಲ್ಪೊತ್ತಿನ ಬಳಿಕ ಉಕ್ಕರಿಸಿದ ಹಿಟ್ಟನ್ನು ತುಪ್ಪ ಸವರಿ ಸಣ್ಣ ಉಂಡೆ ಮಾಡಿ  ಚಪ್ಪಟೆಯನ್ನಾಗಿಸಿ. ಅದರೊಳಗೆ ಹೂರಣವಿಟ್ಟು ಎಲ್ಲಾ ತುದಿ ಸೇರಿಸಿ ಮುಚ್ಚಿ. ಇದನ್ನು ಸ್ಟೀಮಿಂಗ್ ಅಥವಾ ಹಬೆಯ ಮೂಲಕ ಬೇಯಿಸಿ.ಕರಿದ ಮೋದಕ
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು-1 ಕಪ್‌
ಒಣ ಕೊಬ್ಬರಿ ತುರಿ-1 ಕಪ್‌
ಸಕ್ಕರೆ ಪುಡಿ-1 ಕಪ್‌
ಏಲಕ್ಕಿ ಪುಡಿ-ಸ್ವಲ್ಪ
ಎಣ್ಣೆ- ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ: ಮೈದಾ ಹಿಟ್ಟಿಗೆ ಸ್ವಲ್ಪ ತುಪ್ಪ, ಚಿಟಿಕೆ ಉಪ್ಪು ಹಾಕಿ ಸ್ವಲ್ಪೊತ್ತು ಕಲಸಿಡಿ. ಕೊಬ್ಬರಿ ತುರಿಯೊಂದಿಗೆ ಸಕ್ಕರೆ ಪುಡಿ ಹಾಗೂ ಏಲಕ್ಕಿ ಪುಡಿ ಮಿಶ್ರಣ ಮಾಡಿ ಹೂರಣ ರೆಡಿಮಾಡಿಕೊಳ್ಳಿ. ಕಲಸಿಟ್ಟ ಮೈದಾ ಹಿಟ್ಟನ್ನು ಸಣ್ಣ ಉಂಡೆಗಳನ್ನು ಮಾಡಿ. ಇದನ್ನು ಸಣ್ಣ ಪೂರಿ ಹಾಳೆಯಂತೆ ಮಾಡಿ. ಅದರಲ್ಲಿ ಹೂರಣ ಹಾಕಿ ಎಲ್ಲಾ ತುದಿಯನ್ನು ಮೋದಕ ಆಕಾರದಲ್ಲಿ ಮುಚ್ಚಿ. ಆ ಬಳಿಕ ಮೋದಕವನ್ನು ಕರಿಯಿರಿ.

ಬಾಳೆಹಣ್ಣಿನ ಮೋದಕ
ಬೇಕಾಗುವ ಸಾಮಗ್ರಿ:
ಬಾಳೆಹಣ್ಣು-2
ಬೆಲ್ಲ-1 ಕಪ್‌
ಕಾಯಿ ತುರಿ-1 ಕಪ್‌
ಏಲಕ್ಕಿ ಪುಡಿ- ಸ್ವಲ್ಪ
ಗೋಧಿ ಹಿಟ್ಟು-2 ಕಪ್‌
ಸಣ್ಣ ರವೆ-1 ಕಪ್‌
ಎಣ್ಣೆ- ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ: ಗೋಧಿ ಹಿಟ್ಟು, ಬಾಳೆಹಣ್ಣು, ಬೆಲ್ಲ ಮತ್ತು ಕಾಯಿತುರಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನಿಮಗೆ ಬೇಕಾದಷ್ಟು ಏಲಕ್ಕಿ ಪುಡಿ ಸೇರಿಸಿ. ಆ ಬಳಿಕ ಈ ಮಿಶ್ರಣದೊಂದಿಗೆ ರವೆ ಸೇರಿಸಿ ಸ್ವಲ್ಪ ಹೊತ್ತು ಮುಚ್ಚಿಡಿ. ಆ ಬಳಿಕ ಸಣ್ಣ ಉಂಡೆಗಳನ್ನಾಗಿಸಿ ಮೋದಕ ಆಕಾರ ನೀಡಿ ಎಣ್ಣೆಯಲ್ಲಿ ಕರಿಯಿರಿ.

ಹಾಲಿನ​ ಮೋದಕ
ಬೇಕಾಗುವ ಸಾಮಗ್ರಿ:
ಹಾಲಿನ ಪುಡಿ-1 ಕಪ್‌
ಸಕ್ಕರೆ-4 ಚಮಚ ಸಕ್ಕರೆ
ಹಾಲು-1 ಕಪ್‌
ಕೇಸರಿ-4 ದಳ
ಏಲಕ್ಕಿ ಪುಡಿ- ಸ್ವಲ್ಪ
ತುಪ್ಪ-ಸ್ವಲ್ಪ

ತಯಾರಿಸುವ ವಿಧಾನ: ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಹಾಲಿನ ಪುಡಿ ಹಾಕಿ. ಆ ಬಳಿಕ ಸಕ್ಕರೆ, ತುಪ್ಪ, ಕೇಸರಿ, ಏಲಕ್ಕಿ ಪುಡಿ ಹಾಕಿ ಗಂಟಿಲ್ಲದಂತೆ ತಿರುವಿ. ಈ ಮಿಶ್ರಣ ಆರಿದ ನಂತರ ಸಣ್ಣ ಉಂಡೆಗಳನ್ನಾಗಿಸಿ ಮೋದಕದ ಆಕಾರ ನೀಡಿ. ಇಲ್ಲಿ ಮೊದಲೇ ಎಲ್ಲವನ್ನು ಕುದಿಸಿರುವುದರಿಂದ ಮತ್ತೊಮ್ಮೆ ಬೇಯಿಸುವ ಅವಶ್ಯಕತೆ ಇರುವುದಿಲ್ಲ.

_________________________________________________________________

ಸಾಹೋದಲ್ಲಿ ಮಾದಕ ಮೈಮಾಟದಿಂದಲೇ ಮೋಡಿ ಮಾಡಿದ ಬ್ಯಾಡ್​ ಗರ್ಲ್ ಇವರೇ​..!

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ