ನಮ್ಮ ಅಡುಗೆ ಮನೆಯಲ್ಲಿರುವ (Kitchen) ಅನೇಕ ಪದಾರ್ಥಗಳು ಬರೀ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ. ಬದಲಾಗಿ ಬೆರಗಾಗುವಂಥ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಮಸಾಲೆ (Masala) ಪದಾರ್ಥಗಳಿಂದ ಹಿಡಿದು ತರಕಾರಿಗಳವರೆಗೆ (Vegetables) ಬಹಳಷ್ಟು ಪದಾರ್ಥಗಳು ನಮಗೆ ಗೊತ್ತಿಲ್ಲದ ಅನೇಕ ಗುಣಗಳನ್ನು ಹೊಂದಿವೆ. ಬಹಳಷ್ಟು ಅಡುಗೆಗಳಲ್ಲಿ ನಾವು ಜೀರಿಗೆಯನ್ನು (Jeera) ಬಳಸುತ್ತೇವೆ. ಒಗ್ಗರಣೆಗಂತೂ ಜೀರಿಗೆ ಇರಲೇಬೇಕು. ಈ ಜೀರಿಗೆ ಅತ್ಯುತ್ತಮ ಆರೋಗ್ಯ ಪ್ರಯೋಜನವನ್ನು ಹೊಂದಿದೆ.
ಜೀರಿಗೆ ಜೀರ್ಣಕ್ರಿಯೆಗೆ ಸಹಕಾರಿ. ಜೊತೆಗೆ ತೂಕ ಇಳಿಕೆಗೂ ಇದು ಕೊಡುಗೆ ನೀಡುತ್ತದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು ಅಲ್ವಾ. ಆದ್ರೆ ಅದು ನಿಜ. ಹಾಗಿದ್ರೆ ತೂಕ ಇಳಿಕೆಗೆ ಜೀರಿಗೆ ಹೇಗೆ ಸಹಾಯ ಮಾಡುತ್ತದೆ? ಅದರ ಆರೋಗ್ಯ ಪ್ರಯೋಜನಗಳೇನು? ಅದನ್ನು ಹೇಗೆ ಸೇವಿಸಬೇಕು ಅನ್ನೋದನ್ನು ನೋಡೋಣ.
ಜೀರಿಗೆ ನೀರಿನ ಆರೋಗ್ಯ ಪ್ರಯೋಜನ
ಜೀರಿಗೆ ನೀರು ಎಂದು ಕರೆಯಲ್ಪಡುವ ಜೀರಾ ನೀರು ಆರೋಗ್ಯಕರ ಪಾನೀಯವಾಗಿದೆ. ಜೀರಿಗೆಯನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಮಿಶ್ರಣವನ್ನು 'ಜಲ್ ಜೀರಾ' ಅಂತಲೂ ಕರೆಯುತ್ತಾರೆ. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹು.
ಜೀರಿಗೆ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಡಿಕೆ ಅವರ 'ಹೀಲಿಂಗ್ ಫುಡ್ಸ್' ಪುಸ್ತಕದ ಪ್ರಕಾರ, ಜೀರಿಗೆ ಉರಿಯೂತದ ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಅಲ್ಲದೇ ಇದು ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕವಾಗಿದೆ.
ಜೀರಿಗೆ ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿದೆ. ಬೆಂಗಳೂರು ಮೂಲದ ಪೌಷ್ಟಿಕ ತಜ್ಞ ಡಾ. ಅಂಜು ಸೂದ್ ಇದನ್ನು ಆರೋಗ್ಯ ಮತ್ತು ತೂಕ ನಷ್ಟಕ್ಕೆ 'ಗೇಮ್ ಚೇಂಜರ್' ಎಂದು ಕರೆಯುತ್ತಾರೆ.
ತೂಕ ನಷ್ಟಕ್ಕೆ ಹೇಗೆ ಜೀರಿಗೆ ನೀರು ಕಾರಣವಾಗುತ್ತದೆ?
1.ಜೀರ್ಣಕ್ರಿಯೆಗೆ ಸಹಕಾರಿ: ಜೀರಿಗೆ ನೀರು ಹಲವಾರು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅದು ಹೊಟ್ಟೆಯುಬ್ಬರ, ಮಲಬದ್ಧತೆ ಅಥವಾ ವಾಕರಿಕೆಯಂಥ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದಾಗಿದೆ.
ಜೀರಿಗೆಯಲ್ಲಿರುವ ಥೈಮಾಲ್ ಎಂಬ ಸಂಯುಕ್ತವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.
ಸರಿಯಾದ ಜೀರ್ಣಕ್ರಿಯೆಯಿಂದ ಹೊಟ್ಟೆಯ ತೊಂದರೆ ಉಂಟಾಗುವುದಿಲ್ಲ. ಆದ್ದರಿಂದ ದೀರ್ಘಾವಧಿಯಲ್ಲಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
2.ಚಯಾಪಚಯವನ್ನು ಹೆಚ್ಚಿಸುತ್ತದೆ: ಜೀರಿಗೆಯನ್ನು ಶಕ್ತಿಯ ಬೂಸ್ಟರ್ ಎಂದು ಕರೆಯಲಾಗುತ್ತದೆ. ಇದು ಮೆಟಬಾಲಿಸಂ ಅಥವಾ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೀಗಾಗಿ, ಜೀರಾ ನೀರು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ಇದು ಕ್ಯಾಲೋರಿ ಬರ್ನ್ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಡಾ. ಅಂಜು ಸೂದ್ ಅವರು, "ನೀವು ನಿಧಾನವಾದ ಚಯಾಪಚಯವನ್ನು ಹೊಂದಿದ್ದರೆ, ಜೀರಿಗೆ ನೀರನ್ನು ಕುಡಿಯಿರಿ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ" ಎಂಬುದಾಗಿ ಹೇಳುತ್ತಾರೆ.
3.ಕಡಿಮೆ ಕ್ಯಾಲೋರಿ: ಅದ್ಭುತ ಆರೋಗ್ಯ ಪ್ರಯೋಜನಗಳ ಹೊರತಾಗಿ, ಜೀರಾ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಒಂದು ಟೀ ಚಮಚ ಜೀರಿಗೆ ಕೇವಲ ಏಳರಿಂದ ಎಂಟು ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಆದ್ದರಿಂದ, ನಿಮಗೆ ಬಾಯಾರಿಕೆಯಾದಾಗ ಜೀರಿಗೆ ನೀರನ್ನು ಕುಡಿಯಿರಿ. ಇದರಿಂದ ಉತ್ತಮ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಜೀರಿಗೆ ನೀರನ್ನು ತಯಾರಿಸುವ ವಿಧಾನಮೊದಲು, ಒಂದು ಬೌಲ್ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ನೀವು ಈ ನೀರನ್ನು ನೇರವಾಗಿ ಕುಡಿಯಬಹುದು ಅಥವಾ 5-6 ನಿಮಿಷಗಳ ಕಾಲ ಕುದಿಸಿ ಕುಡಿಯಬಹುದು.
ಅಲ್ಲದೇ ಬಿಸಿಯಾಗಿಯೂ ನೀವದನ್ನು ಕುಡಿಯಬಹುದಾಗಿದೆ. ಇದಕ್ಕೆ ಬೇಕಿದ್ದರೆ ಜೇನುತುಪ್ಪ ಹಾಗೂ ಎರಡು ಹನಿ ಲಿಂಬೆರಸವನ್ನೂ ಸೇರಿಸಬಹುದು. ಅಲ್ಲದೇ ಉತ್ತಮ ಫಲಿತಾಂಶಕ್ಕಾಗಿ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ