ಪೇರಲೆ ಹಣ್ಣು ಅಥವಾ ಸೀಬೆ ಹಣ್ಣು ಬಹಳಷ್ಟು ಜನರಿಗೆ ಇಷ್ಟದ ಹಣ್ಣು. ಅದರ ರುಚಿ ಮಕ್ಕಳಿಂದ ಹಿಡಿದು ದೊಡ್ಡವರ ಮನಸೋರೆಗೊಂಡಿದೆ. ಮಕ್ಕಳು ಮರದಲ್ಲಿ ಸೀಬೆ ಹಣ್ಣು ಕಂಡರೆ ಸಾಕು ಕಲ್ಲು ಹೊಡೆದೋ, ಮರ ಹತ್ತಿಯೋ ಅದನ್ನು ಕಿತ್ತು ತಿನ್ನದೆ ಬಿಡುವುದಿಲ್ಲ. ಆದರೆ ಕೆಲವರಿಗೆ ಈ ಹಣ್ಣು ಶೀತಕ್ಕೆ ಕಾರಣವಾಗುತ್ತದೆ. ಇನ್ನು ಸೀಬೆ ಹಣ್ಣಿಗೆ ಉಪ್ಪು ಖಾರ ಹಾಕಿ ತಿನ್ನುವುದು ಸಾಮಾನ್ಯ, ಆದರೆ ಪೇರಲೆ ಪಾಯಸ ತಿಂದಿದ್ದೀರಾ? ಅರೆ ಪೇರಲೆ ಹಣ್ಣಿನಿಂದ ಪಾಯಸ ಮಾಡೋದಾ? ಹೌದು, ಈ ಪೇರಲೆ ಹಣ್ಣಿನಿಂದ ರುಚಿಯಾದ ಪಾಯಾಸ ಮಾಡುವುದು ಹೇಗೆ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
3 – ಸೀಬೆಕಾಯಿ
ಅರ್ಥ ಲೀಟರ್ ಹಾಲು
2 ಚಮಚ ತುಪ್ಪ
ಒಣ ದ್ರಾಕ್ಷಿ
ಗೋಡಂಬಿ
ಹಸಿರು ಏಲಕ್ಕಿ ಪುಡಿ
1 ಕಪ್ ಬೆಲ್ಲ
ನೀರು
ಪೇರಲೆ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ತೆಗೆದುಹಾಕಿ. ನಂತರ ಪೇರಲೆ ಹಣ್ಣಿನ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಬೀಜಗಳು ಉಳಿದರೆ ಅದು ಸರಿಯಾಗಿ ಪೇಸ್ಟ್ ಆಗುವುದಿಲ್ಲ. ಅದು ಬಾಯಿಗೆ ಸಿಗುವುದರಿಂದ, ಪಾಯಸದ ರುಚಿ ಹಾಳಾಗುತ್ತದೆ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಈ ಪಾನೀಯಗಳನ್ನು ಟ್ರೈ ಮಾಡಿ
ಪೇರಲೆ ಪೇಸ್ಟ್ ಮಾಡಿದ ನಂತರ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ, ಕೈ ಆಡಿಸುತ್ತಿರಿ. ಅಲ್ಲದೆ ಬೆಲ್ಲ ಕರಗುವ ತನಕ ಅದನ್ನು ಚನ್ನಾಗಿ ಕುದಿಸಿ. ಸರಿಯಾಗಿ ಪಾಕವಾದ ನಂತರ ತಣ್ಣಗಾಗಲು ಬಿಡಿ.
ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಮತ್ತು ಗೋಡಂಬಿ ಹಾಕಿ ಹುರಿಯಿರಿ. ಗೋಡಂಬಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ ಹುರಿದ ನಂತರ ಒಣದ್ರಾಕ್ಷಿ ಸೇರಿಸಿ, ಅವುಗಳನ್ನು ಕೇವಲ ಒಂದು ನಿಮಿಷ ಒಲೆಯ ಮೇಲೆ ಬಿಸಿ ಮಾಡಿ. ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿಯುವುದು ರುಚಿಯನ್ನು ಹೆಚ್ಚಿಸುತ್ತದೆ.
ತುಪ್ಪದಲ್ಲಿ ಗೋಡಂಬಿ ಹುರಿದ ಬಾಣಲೆಗೆ ಪೇರಲೆಯ ಪೇಸ್ಟ್ ಅನ್ನು ಹಾಕಿ, ಸುಮಾರು 10 ನಿಮಿಷ ಬೇಯಿಸಿ, ಅದು ಸರಿಯಾಗಿ ಬೆಂದ ನಂತರ ಅದಕ್ಕೆ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಸರಿಯಾಗಿ ಕಲಸಿ. ಒಟ್ಟಿಗೆ ಹಾಲು ಹಾಕುವುದರಿಂದ ಪೇರಲೆ ಪೇಸ್ಟ್ ಗಟ್ಟಿಯಾಗುವ ಅಥವಾ ಉಂಡೆಯಾಗುವ ಸಾಧ್ಯತೆ ಹೆಚ್ಚು.
ಹಾಲು ಹಾಕಿ 2 ನಿಮಿಷಗಳ ಕಾಲ ಕುದಿಸಿದ ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಬೆಲ್ಲದ ಪಾಕ ಸೇರಿಸಿ.ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ. ಸುಮಾರು 2 ನಿಮಿಷಗಳ ಕಾಲ ಕೈ ಆಡಿಸುತ್ತಿರಿ. ನಂತರ ಅದನ್ನು 3-4 ನಿಮಿಷಗಳ ಕಾಲ ಕುದಿಯಲು ಬಿಡಿ. ಇದಕ್ಕೆ ಅಲಂಕಾರಕ್ಕೆ ಮೇಲೆ 4 ಗೋಡಂಬಿ ತುಂಡುಗಳನ್ನು ಹಾಕಿದರೆ ನಿಮ್ಮ ಪೇರಲೆ ಪಾಯಸ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ