ನಾನ್ವೆಜ್ (Nonveg) ಪ್ರಿಯರ ನೆಚ್ಚಿನ ಖಾದ್ಯ ಅಂದರೆ ಬಿರಿಯಾನಿ. ಬಿರಿಯಾನಿಯನ್ನು ಇಷ್ಟಪಡದೇ ಇರುವವರು ಸಿಗುವುದು ಬಹಳ ಕಡಿಮೆ. ಬೆಳಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಬಿರಿಯಾನಿ (Biriyani) ಕೊಟ್ಟರೂ ಅನೇಕ ಮಂದಿ ಬೇಸರವಿಲ್ಲದೇ ತಿನ್ನುತ್ತಾರೆ. ಚಿಕನ್ (Chicken), ಮಟನ್ (Mutton) ಅಷ್ಟೇ ಅಲ್ಲ ಫಿಶ್ ಬಿರಿಯಾನಿ (Fish Biriyani) ಕೂಡ ಇಷ್ಟಪಡುವವರು ಅನೇಕ ಮಂದಿ ಇದ್ದಾರೆ. ಮೀನು ಆರೋಗ್ಯಕ್ಕೆ ಹಿತಕಾರಿ. ಹೀಗಾಗಿಯೇ ಮಾಂಸಾಹಾರಿಗಳು ಮೀನಿನ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಮೀನಿನಿಂದ ಮಾಡುವ ಫಿಶ್ ಕರಿ, ಫಿಶ್ ಫ್ರೈ (Fish Fry) ಬಗ್ಗೆ ಎಲ್ಲಾ ಕೇಳಿರ್ತೀರಾ. ಆದರೆ ಕೆಲ ಮಂದಿಗೆ ಫಿಶ್ನಲ್ಲಿ ಬಿರಿಯಾನಿ ಕೂಡ ಇದ್ಯಾ ಎಂಬ ವಿಚಾರವೇ ತಿಳಿದಿರುವುದಿಲ್ಲ. ಅಂತಹವರಿಗೆ ಇಂದು ನಾವು ರುಚಿಕರವಾದ ಫಿಶ್ ಬಿರಿಯಾನಿ ಮಾಡುವುದೇಗೆ ಎಂದು ಹೇಳಿ ಕೊಡುತ್ತಿದ್ದೇವೆ.
![]()
ಫಿಶ್ ಬಿರಿಯಾನಿ
ಫಿಶ್ ಬಿರಿಯಾನಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು
- ಮೀನು - 1 ಕೆಜಿ
- ಈರುಳ್ಳಿ – 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್
- ಜೀರಿಗೆ - 1 ಚಮಚ
- ಗರಂ ಮಸಾಲಾ - 1 ಚಮಚ
- ಕೊತ್ತಂಬರಿ ಪುಡಿ - 1 ಚಮಚ
- ಮೆಣಸಿನ ಪುಡಿ - 1 ಚಮಚ
- ಅರಿಶಿನ ಪುಡಿ - 1 ಚಮಚ
- ಉಪ್ಪು, ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಮೊಸರು - 1 ಕಪ್
- ಕೊತ್ತಂಬರಿ ಸೊಪ್ಪು - 1 ಕಪ್
- ಹಸಿರು ಮೆಣಸಿನಕಾಯಿ (ಅರ್ಧಕ್ಕೆ ಕತ್ತರಿಸಿದ) – 2
- ಬಿರಿಯಾನಿ ಮಸಾಲಾ - 1 ಟೇಬಲ್ ಸ್ಪೂನ್
- ಅಕ್ಕಿ - 2 ಕಪ್ಗಳು
- ಲವಂಗ – 4
- ದಾಲ್ಚಿನ್ನಿ - 1
- ಏಲಕ್ಕಿ – 4
- ಕೇಸರಿ – ಅಗತ್ಯಕ್ಕೆ ತಕ್ಕಷ್ಟು
![]()
ಫಿಶ್ ಬಿರಿಯಾನಿ
ಫಿಶ್ ಬಿರಿಯಾನಿ ಮಾಡುವ ವಿಧಾನ:
- ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ನಂತರ ಮೀನನ್ನು ಸ್ವಚ್ಛಗೊಳಿಸಿ ಮತ್ತು ಸರಿಯಾದ ಗಾತ್ರಕ್ಕೆ ಕತ್ತರಿಸಿ.
- ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಆರಿದ ಮೇಲೆ ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಗ್ಗರಣೆ ಮಾಡಿ. ಗರಂ ಮಸಾಲಾ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ.
- ಅದಾದ ಬಳಿಕ, ಮೊಸರು, ಉಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮತ್ತು 5-7 ನಿಮಿಷಗಳ ಕಾಲ ಹುರಿಯಿರಿ, ನಂತರ ಕತ್ತರಿಸಿದ ಮೀನಿನ ತುಂಡುಗಳನ್ನು ಸೇರಿಸಿ (ಚೆನ್ನಾಗಿ ಬೇಯಿಸುವವರೆಗೆ) ಮತ್ತು ಮಧ್ಯಮ ಉರಿಯಲ್ಲಿ ಬೇಯಿಸಿ ಮತ್ತು ಒಲೆಯಿಂದ ಇಳಿಸಿ.
- ಈಗ ಬಿರಿಯಾನಿ ಮಾಡಲು ಒಲೆಯ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಆರಿದ ನಂತರ ಅದಕ್ಕೆ ಲವಂಗ, ತೊಗಟೆ, ಬಿರಿಯಾನಿ ಎಲೆ ಮತ್ತು ಮೆಣಸು ಹಾಕಿ ಒಗ್ಗರಣೆ ಮಾಡಿ. ಜೊತೆಗೆ ಅಕ್ಕಿ ಹಾಕಿ ಹುರಿಯಿರಿ.
- ಅನ್ನದ ಬಣ್ಣ ಬದಲಾದ ಮೇಲೆ ಬೇಕಾದಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿಡಿ. 3 ಸೀಟಿ ಬಂದ ನಂತರ ಅನ್ನವನ್ನು ಒಲೆಯಿಂದ ಕೆಳಗಿಳಿಸಿ.
- ಈಗ ಕುಕ್ಕರ್ ನಲ್ಲಿ ಪ್ರತ್ಯೇಕವಾಗಿ ತಯಾರಿಸಿದ ಬಿರಿಯಾನಿ ಅನ್ನದ ಜೊತೆಗೆ ಮೊದಲೇ ತಯಾರಿಸಿದ ಮೀನಿನ ಮಿಶ್ರಣವನ್ನು ಸೇರಿಸಿದರೆ ರುಚಿಕರವಾದ ಫಿಶ್ ಬಿರಿಯಾನಿ ರೆಡಿ. ಕೊನೆಗೆ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಸರ್ವ್ ಮಾಡಿ.