ಚಾಕೊಲೇಟ್ ದೋಸೆ (Chocolate Dosa), ಗುಲಾಬ್ ಜಾಮೂನ್ ಸಾಂಬಾರ್ (Gulab Jamun Sambar), ಕುರ್ಕುರೆ ಮಿಲ್ಕ್ಶೇಕ್ (Kurkure Milkshake), ಸಿಹಿ ಹಾಲಿನ ಕ್ರೀಂ ಮ್ಯಾಗಿ (Sweet Milk Cream Maggie), ರೂವ್ಅಫ್ಜಾ ಮ್ಯಾಗಿ (Rouvafza Maggi), ಗುಲಾಬ್ ಜಾಮೂನ್ ಪಕೋಡಾ (Gulab Jamoon Pakoda), ಮ್ಯಾಗಿ ಮಿಲ್ಕ್ಶೇಕ್ (Maggi Milkshake)… ಅಯ್ಯಯ್ಯೋ.. ಏನಪ್ಪಾ ಇದೆಲ್ಲಾ ಏನಂತೀರಾ? ಈ ದಿನಗಳಲ್ಲಿ ಆಹಾರದಲ್ಲಿ ನಡೆಯುತ್ತಿರುವ ಚಿತ್ರವಿಚಿತ್ರ ಪ್ರಯೋಗಗಳು..! ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಮ್ಮೆ ಇಣುಕಿ ನೋಡಿದರೆ ಇಂತಹ ವಿಲಕ್ಷಣ ಆಹಾರ ಸಂಯೋಜನೆಯ ಪ್ರಯೋಗಗಳ ವಿಡಿಯೋಗಳು ಕಾಣಸಿಗುತ್ತವೆ. ಅಷ್ಟು ಮಾತ್ರವಲ್ಲ ಇಂತಹ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತವೆ.
ಏನಾದರೂ ಮಾಡಿ, ಇತರರಿಂತ ಭಿನ್ನವಾಗಿ ಮಿಂಚಬೇಕು ಎಂದುಕೊಂಡವರು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಲೈಕ್ಸ್ಗಳನ್ನು, ವೀಕ್ಷಣೆಗಳನ್ನು ಪಡೆದು ಮಿಂಚಬೇಕು ಎಂಬ ಗೀಳು ಹತ್ತಿಸಿಕೊಂಡಿರುವ ಮಂದಿ ಸದಾ ಇಂತಹ ವಿಲಕ್ಷಣ ಪ್ರಯೋಗಗಳ ವಿಡಿಯೋಗಳನ್ನು ಮಾಡುತ್ತಾರೆ. ಫುಡ್ ಬ್ಲಾಗರ್ಗಳು ಕೂಡ ಇಂತಹ ಆಹಾರದಲ್ಲಿನ ವಿಭಿನ್ನ, ಕೆಲವೊಮ್ಮೆ ವಿಚಿತ್ರ ಪ್ರಯೋಗಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಫುಡ್ ಬ್ಲಾಗರ್ ಒಬ್ಬರು ಹಂಚಿಕೊಂಡಿರುವ, ಬೀದಿ ಬದಿ ಪಕೋಡಾ ವ್ಯಾಪಾರಿಯೊಬ್ಬ, ಚಾಕೋಲೇಟ್ ಪೇಸ್ಟ್ರಿಯಿಂದ ಪಕೋಡಾ ಮಾಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಏನಿದು ಚಾಕೊಲೇಟ್ ಪಕೋಡಾ?
ಈ ವಿಡಿಯೋವನ್ನು ಫುಡ್ ಬ್ಲಾಗರ್ ಸಾರ್ಥಕ್ ಜೈನ್ ಎಂಬುವರು, ತಮ್ಮ @wannabefoodie69 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾರ್ಥಕ್ ಜೈನ್, ಚಾಕೊಲೇಟ್ ಪೇಸ್ಟ್ರಿಯಿಂದ ಪಕೋಡಾಗಳ ರುಚಿ ನೋಡುತ್ತಿರುವುದನ್ನು ಕಾಣಬಹುದು. ಪಕೋಡಾ ವ್ಯಾಪಾರಿ, ಕತ್ತರಿಸಿದ ಎರಡು ಪೇಸ್ಟ್ರಿ ತುಂಡುಗಳನ್ನು ಕಲಸಿದ ಕಡಲೇ ಹಿಟ್ಟಿನಲ್ಲಿ ಮುಳುಗಿಸಿ, ಬಾಣಲೆಯಲ್ಲಿನ ಬಿಸಿ ಎಣ್ಣೆಯಲ್ಲಿ ಮುಳುಗಿಸಿ ಕರಿಯುವ ದೃಶ್ಯವನ್ನು ಕೂಡ ನೋಡಬಹುದು. ಚಾಕೊಲೇಟ್ ಪಕೋಡಾ ಮಾಡುವ ಈ ಪ್ರಕ್ರಿಯೆ ನೋಡುವುದಕ್ಕೆ ಒಂದು ರೀತಿ ವಿಲಕ್ಷಣವಾಗಿದೆ, ಅದರ ರುಚಿ ಹೇಗಿರಬಹುದಪ್ಪಾ ಎಂಬ ವಿಚಿತ್ರ ಕುತೂಹಲವನ್ನು ನೋಡುಗರಲ್ಲಿ ಹುಟ್ಟಿಸುತ್ತದೆ.
ಇದನ್ನೂ ಓದಿ: Health Tips: ಅಪ್ಪಿ ತಪ್ಪಿ ಈ ವಸ್ತುಗಳನ್ನು ಹಾಲಿನ ಜೊತೆ ಸೇರಿಸಬೇಡಿ
ವಿಡಿಯೋ ನೋಡಿ:
View this post on Instagram
ಇದನ್ನೂ ಓದಿ: Onion Peel Benefits: ಈರುಳ್ಳಿ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ, ಅದರಿಂದ ಏನೆಲ್ಲಾ ಪ್ರಯೋಜನವಿದೆ ನೋಡಿ
ವೈರಲ್ ಆಯ್ತು ಚಾಕೊಲೇಟ್ ಪಕೋಡಾ ವಿಡಿಯೋ
ಇದುವರೆಗೆ ಈ ವಿಡಿಯೋ 3.5 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, 58,000 ಮೆಚ್ಚುಗೆಗಳನ್ನು ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಈ ವಿಡಿಯೋ ನೋಡಿ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಆದರೆ ಹೆಚ್ಚಿನವು ಈ ವಿಲಕ್ಷಣ ಆಹಾರ ಸಂಯೋಜನೆಯ ಕುರಿತು ಅಸಹ್ಯ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳಾಗಿವೆ.
“ಈ ಜಗತ್ತು ಅಂತ್ಯವಾಗುತ್ತಿದೆ” ಎಂದ ನೆಟ್ಟಿಗರು
“ಈ ಜಗತ್ತು ಅಂತ್ಯವಾಗಲಿದೆ” ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದರೆ, ಇನ್ನೊಬ್ಬ ನೆಟ್ಟಿಗ “ಯಾಕೆ ಆಹಾರವನ್ನು ಹಾಳು ಮಾಡುತ್ತಿದ್ದೀರಾ? ಸಿಹಿಯನ್ನು ಸಿಹಿಯಾಗಿ , ಖಾರವನ್ನು ಖಾರವಾಗಿಯೇ ಇರಲು ಬಿಡಿ. ಮೊದಲೇ ಕೊರೊನಾ ವೈರಸ್ ಕಾರಣದಿಂದ ನಾಲಗೆಯ ರುಚಿ ಕೆಟ್ಟು ಹೋಗಿದೆ” ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಯಾಕೆ ಸಹೋದರ ಯಾಕೆ” ಎಂದು ಪ್ರಶ್ನಿಸಿದ್ದಾರೆ. ವಾಂತಿ ಮಾಡುವ ಇಮೋಜಿಯುಳ್ಳ ಪ್ರತಿಕ್ರಿಯೆಗಳು ಲೆಕ್ಕವಿಲ್ಲದಷ್ಟಿವೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಇಂತಹ ವಿಲಕ್ಷಣ ಸಂಯೋಜನೆಯುಳ್ಳ ಆಹಾರ ಪ್ರಯೋಗಗಳು ಸಾಕಷ್ಟು ಮೆಚ್ಚುಗೆಗಳನ್ನೇನೋ ಗಳಿಸುತ್ತವೆ, ಆದರೆ ನೋಡುಗರೇನಾದರೂ ತಾವೇ ಪ್ರಯೋಗಿಸಲು ಹೋದರೆ ಫಜೀತಿ ಖಂಡಿತಾ. ಹಾಗಾಗಿ, ವಿಡಿಯೋ ನೋಡಿ, ಪ್ರತಿಕ್ರಿಯೆ ನೀಡುವುದಷ್ಟೇ ಜಾಣತನದ ಲಕ್ಷಣ ಎನ್ನಬಹುದಲ್ಲವೇ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ