ಒಬ್ಬ ವ್ಯಕ್ತಿಗೆ ಜೀವನದ ಕೊನೆಯ ಘಟ್ಟದಲ್ಲಿ ಯಾರಾದರೂ ಒಬ್ಬರ ಸಹಾಯಬೇಕಾಗುತ್ತದೆ. ಕಡಿಮೆ ಚಲನಶೀಲತೆ ದೈಹಿಕ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ವಯೋವೃದ್ಧರು (Elder People) ನಾನಾ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಮೂಳೆಗಳು (Bones Weak) ದುರ್ಬಲವಾಗುತ್ತವೆ, ಚರ್ಮವೂ ನಿರ್ಜೀವವಾಗುತ್ತದೆ. ವೃದ್ಧಾಪ್ಯದಲ್ಲಿ ಸ್ನಾಯು ನೋವು (Muscle Pain), ಅಜೀರ್ಣ(Indigestion), ದೃಷ್ಟಿ ಹೀನತೆ (Poor Eyesight) ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮನೆಯಲ್ಲಿ ವಯಸ್ಸಾದವರನ್ನು ಹೇಗೆ ನೋಡಿಕೊಳ್ಳಬೇಕು ಎಂದು ನಾವು ಇಂದು ತಿಳಿದುಕೊಳ್ಳೋಣ ಬನ್ನಿ.
ವಯಸ್ಸಾದವರ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಹಾಗಾಗಿ ಆಹಾರ ಕ್ರಮದಲ್ಲೂ ಕೆಲವು ಬದಲಾವಣೆಗಳ ಅಗತ್ಯವಿದೆ. ಒಂದು ದಿನದಲ್ಲಿ ಪುರುಷರ ದೇಹಕ್ಕೆ 2200 ಕೆ.ಕೆ.ಎಲ್ ಮತ್ತು ಮಹಿಳೆಗೆ 1800 ಕೆ.ಕೆ.ಎಲ್ ಅಗತ್ಯವಿದೆ. ಇದಕ್ಕೆ ಅನ್ನ, ಉಪ್ಮಾ, ಇಡ್ಲಿ, ಚಪಾತಿಗಳನ್ನು ಆಹಾರವಾಗಿ ತಿನ್ನಬೇಕು. ಇದು ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ ಮತ್ತು ದೇಹದ ಕ್ಯಾಲೋರಿಗಳ ಅಗತ್ಯವನ್ನು ಪೂರೈಸುತ್ತದೆ.
ಹಾಲು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ವಯಸ್ಸಾದವರ ಆಹಾರದಲ್ಲಿ ಮೃದುವಾದ ಮತ್ತು ಅಗಿಯಲು ಸುಲಭವಾದ ಆಹಾರಗಳನ್ನು ಸೇರಿಸಬೇಕು. ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೇ, ಆಹಾರವಾಗಿ ಹಸಿರು ಎಲೆಗಳ ತರಕಾರಿಗಳು ಮತ್ತು ಸಲಾಡ್ ಅನ್ನು ನೀಡಬೇಕು. ಮಾವು, ಕ್ಯಾರೆಟ್, ಕಿತ್ತಳೆ, ದಾಳಿಂಬೆ, ಪೇರಲದಂತಹ ಹಣ್ಣುಗಳನ್ನು ತಿನ್ನುವಾಗ, ಅವುಗಳ ಬೀಜಗಳು ಹಲ್ಲುಗಳಲ್ಲಿ ಸಿಲುಕಿಕೊಳ್ಳಬಹುದು, ಆದ್ದರಿಂದ ಈ ಹಣ್ಣುಗಳನ್ನು ಸಾಧ್ಯವಾದಷ್ಟು ಜ್ಯೂಸ್ ಮಾಡಬೇಕು. ಅಲ್ಲದೇ, ಪ್ರೋಟೀನ್ ಭರಿತ ಆಹಾರಗಳು ಅಂದರೆ ಬೇಳೆಕಾಳುಗಳು, ಮೊಟ್ಟೆಗಳನ್ನು ಆಹಾರದ ಜೊತೆಗೆ ತಿನ್ನಬೇಕು.
ಅತಿ ಹೆಚ್ಚು ಕಾಫಿ ನೀಡಬೇಡಿ: ನಿಮ್ಮ ಮನೆಯಲ್ಲಿ ವಯಸ್ಸಾದವರಿಗೆ ಅತಿಯಾದ ಚಹಾ, ಕಾಫಿ ಮತ್ತು ತಂಪು ಪಾನೀಯಗಳನ್ನು ನೀಡಬೇಡಿ. ಕಾಫಿನ್ ಪದಾರ್ಥಗಳನ್ನು ತ್ಯಜಿಸಬೇಕು. ಸಿಹಿ ಆಹಾರಗಳು ಅಂದರೆ ಸಿಹಿತಿಂಡಿಗಳು, ಇತರ ಸಕ್ಕರೆ ಆಹಾರ ಪದಾರ್ಥಗಳು ಮತ್ತು ಉಪ್ಪನ್ನು ಆಹಾರದಲ್ಲಿ ಕಡಿಮೆ ಸೇವಿಸಬೇಕು. ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ನೀಡುವುದನ್ನು ಸಹ ತಪ್ಪಿಸಿ. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟು ಮಾಡುತ್ತದೆ. ಕೀಲು ನೋವಿನಿಂದ ಬಳಲುತ್ತಿರುವ ವೃದ್ಧರು ಉಪ್ಪಿನಕಾಯಿ, ಕರಿಬೇವು, ಹುಣಸೆಹಣ್ಣು ಮುಂತಾದ ಹುಳಿ ಪದಾರ್ಥಗಳನ್ನು ಸೇವಿಸಬಾರದು.
ನಿಮ್ಮ ವೈದ್ಯರೊಂದಿಗೆ ಸಂಪರ್ಕದಲ್ಲಿರಿ: ಮನೆಯ ಹಿರಿಯ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ನಿಮ್ಮ ವೈದ್ಯರೊಂದಿಗೆ ಸಹ ಸಂಪರ್ಕದಲ್ಲಿರಿ. ವಯಸ್ಸಾದವರು ಯಾವುದೇ ಅಸ್ವಸ್ಥತೆಯನ್ನು ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸೂಚಿಸಿದ ಔಷಧಿ ಮತ್ತು ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಇದರಿಂದಾಗಿ ಅವರು ಯಾವುದೇ ತೊಂದರೆ ಅನುಭವಿಸುವುದಿಲ್ಲ. ಆಗಾಗ್ಗೆ ವೈದ್ಯರನ್ನು ಬದಲಾಯಿಸಬೇಡಿ. ಏಕೆಂದರೆ ಅನೇಕ ಬಾರಿ ಮತ್ತೊಬ್ಬ ವೈದ್ಯರು ನೀಡುವ ಔಷಧಿ, ಮಾತ್ರೆಗಳನ್ನು ಬದಲಾಯಿಸುವುದರಿಂದ ವಯಸ್ಸಾದವರಿಗೆ ತೊಂದರೆಯಾಗುತ್ತದೆ.
ಮಾನಸಿಕವಾಗಿ ಕಾಳಜಿ ವಹಿಸಿ: ವಯಸ್ಸಾದವರಿಗೆ ಶಕ್ತಿಯ ಕೊರತೆ ಇರುತ್ತದೆ. ಹಾಗಾಗಿ ಕೆಲವು ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಮಾನಸಿಕ ಆರೋಗ್ಯವೂ ಹದಗೆಡಬಹುದು. ಅಂತಹ ಸಂದರ್ಭಗಳಲ್ಲಿ ಮನೆಯ ಕಿರಿಯ ಸದಸ್ಯರು ಅವರನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಅವರಿಗೆ ಮನರಂಜನೆಯ ಸಾಧನಗಳನ್ನು ಒದಗಿಸುವುದು. ಅವರ ದಿನಚರಿಯನ್ನು ನೆನಪಿಟ್ಟುಕೊಳ್ಳುವುದು ಮತ್ತು ಅವರೊಂದಿಗೆ ಹರಟೆ ಹೊಡೆಯುವುದು, ಅವರಿಗೆ ಸಂತೋಷವನ್ನು ನೀಡುವ ಕೆಲಸಗಳನ್ನು ಮಾಡುವುದು ಮುಖ್ಯ. ಅಲ್ಲದೇ, ಅನೇಕ ವೃದ್ಧರು ವಸ್ತುಗಳನ್ನು, ರಸ್ತೆಯಲ್ಲಿಯೇ ಮರೆತು ಬಿಡುತ್ತಾರೆ, ಆದ್ದರಿಂದ ಸಾಧ್ಯವಾದರೆ ಅವರನ್ನು ಒಂಟಿಯಾಗಿ ಬಿಡಬೇಡಿ.
ಇದನ್ನೂ ಓದಿ: World Senior Citizen's Day: ಇಂದು ವಿಶ್ವ ಹಿರಿಯ ನಾಗರಿಕರ ದಿನ! ಮಕ್ಕಳ ಮನಸಿನ ಹಿರಿಯರ ಬಗ್ಗೆ ಇರಲಿ ಕಾಳಜಿ
ಫಿಟ್ ಆಗಿರಲು ಸಹಾಯ ಮಾಡಿ: ವಯಸ್ಸಾದವರಿಗೆ ಫಿಟ್ನೆಸ್ ಬಹಳ ಮುಖ್ಯ. ಆದ್ದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ಅವರಿಗೆ ಸಹಾಯ ಮಾಡಿ. ಅವರು ಕ್ರಿಯಾಶೀಲರಾಗಿದ್ದರೆ ಅನೇಕ ರೋಗಗಳನ್ನು ತಪ್ಪಿಸಬಹುದು. ಆದ್ದರಿಂದ ವ್ಯಾಯಾಮ ಮತ್ತು ಯೋಗ ಮಾಡಲು ಅವರನ್ನು ಪ್ರೋತ್ಸಾಹಿಸಿ. ಸಾಧ್ಯವಾದರೆ ಅವರಿಗಾಗಿ ಕೆಲವು ಸಣ್ಣ ಕೆಲಸಗಳನ್ನು ಮಾಡುತ್ತಲೇ ಇರಿ, ಇದು ಅವರ ಒಂಟಿತನವನ್ನು ಹೋಗಲಾಡಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ