Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ? ಹೀಗೆ ಮಾಡಿದ್ರೆ ಸಾಕು

ಮಲ್ಲಿಗೆ ಗಿಡದಲ್ಲಿ, ಎಷ್ಟೇ ಆರೈಕೆ ಮಾಡಿದರೂ ನಾಲ್ಕೈದು ಹೂವಷ್ಟೇ ಬಿಟ್ಟರೆ ಬಹಳ ಬೇಸರ ಅಲ್ಲವೇ? ಚಿಂತಿಸದಿರಿ, ನಿಮ್ಮ ಮನೆಯ ಮಲ್ಲಿಗೆ ಗಿಡ ಹೇರಳವಾಗಿ ಹೂ ಬಿಡುವಂತೆ ಮಾಡಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ವಿಧಾನವನ್ನು ಹಂತ ಹಂತವಾಗಿ ಇಲ್ಲಿ ತಿಳಿಸಲಾಗಿದೆ.

ಮಲ್ಲಿಗೆ

ಮಲ್ಲಿಗೆ

  • Share this:
ಮಲ್ಲಿಗೆಯ (Jasmine) ಸುವಾಸನೆಗೆ ಮಾರು ಹೋಗದವರಾರು? ಅಷ್ಟು ಮಾದಕ ಪರಿಮಳ (aroma) ಅದರದ್ದು. ಮೊಗ್ಗಿದ್ದಾಗ ಮುತ್ತಿನಂತೆ, ಅರಳಿದಾಗ ಇನ್ನಷ್ಟು ಸುಂದರ. ಅಲಂಕಾರಕ್ಕೆ (Decoration), ಪೂಜೆಗೆ, ಲಲನೆಯ ಮುಡಿಗೆ ಹೀಗೆ ಎಲ್ಲದ್ದಕ್ಕೂ ಸಲ್ಲುವಂತ ಹೂವು (Flower) ಮಲ್ಲಿಗೆ. ಈ ಹೂವು ಬೇಸಿಗೆಯಡೀ ಮಾತ್ರವಲ್ಲ, ಮಳೆಗಾದಲ್ಲೂ ಬೆಳೆಯುತ್ತದೆ. ಮನೆಯಲ್ಲಿ ಒಂದು ಮಲ್ಲಿಗೆ ಗಿಡ (Jasmine Plant) ನೆಟ್ಟರೂ ಸಾಕು, ಮನೆಯಿಡೀ ಅದ್ಭುತವಾದ ಸುಗಂಧ ಹರಡುತ್ತದೆ. ಇಷ್ಟಪಟ್ಟು ತಂದ ಮಲ್ಲಿಗೆ ಗಿಡದಲ್ಲಿ, ಎಷ್ಟೇ ಆರೈಕೆ ಮಾಡಿದರೂ ನಾಲ್ಕೈದು ಹೂವಷ್ಟೇ ಬಿಟ್ಟರೆ ಬಹಳ ಬೇಸರ ಅಲ್ಲವೇ? ಚಿಂತಿಸದಿರಿ, ನಿಮ್ಮ ಮನೆಯ ಮಲ್ಲಿಗೆ ಗಿಡ ಹೇರಳವಾಗಿ ಹೂ ಬಿಡುವಂತೆ ಮಾಡಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ವಿಧಾನವನ್ನು ಹಂತ ಹಂತವಾಗಿ ಇಲ್ಲಿ ತಿಳಿಸಲಾಗಿದೆ.

1. ಮಲ್ಲಿಗೆ ಗಿಡವನ್ನು ಸೂರ್ಯನ ಬಿಸಿಲಿನಲ್ಲಿ ಇಡಿ
ನಿಮ್ಮ ಮನೆಯ ಒಳಗೆ ಮಲ್ಲಿಗೆ ಗಿಡವನ್ನು ಇಟ್ಟುಕೊಂಡಿರುವಿರಾದರೆ, ನೀವು ಅದನ್ನು ಹೊರಗೆ ಸೂರ್ಯನ ಬೆಳಕಿನಲ್ಲಿ ನಿತ್ಯವೂ 5 ರಿಂದ 6 ಗಂಟೆಗಳ ಕಾಲ ಇಡುವುದು ಅತ್ಯಗತ್ಯ. ನೀವು ಕೇವಲ 1 ರಿಂದ 2 ಗಂಟೆಗಳ ಕಾಲ ಇಟ್ಟರೆ, ನಿಮ್ಮ ಮಲ್ಲಿಗೆ ಗಿಡ ಸಾಕಷ್ಟು ಹೂವು ಬಿಡುವುದಿಲ್ಲ.

2. ಪ್ಲಾಸ್ಟಿಕ್ ಕುಂಡಗಳಲ್ಲಿ ಇಡಬೇಡಿ
ಮಲ್ಲಿಗೆ ಗಿಡಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ಇಡಲು ಹೋಗಬೇಡಿ. ಏಕೆಂದರೆ, ಆ ಗಿಡಗಳನ್ನು ಬಿಸಿಲಿನಲ್ಲಿ ಇಡಬೇಕಾದ ಕಾರಣ, ಕುಂಡಗಳು ಬಿಸಿಯಾಗುತ್ತದೆ. ಅದರಿಂದ ಬೇರುಗಳಿಗೆ ಹಾನಿಯಾಗುತ್ತದೆ ಮತ್ತು ಸಸ್ಯಗಳು ಒಣಗಿ ಹೋಗುತ್ತವೆ.

ಇದನ್ನೂ ಓದಿ:  Explained: ಪಪ್ಪಾಯಿ ಬೆಳೆಗೆ ಯಾವ ಗೊಬ್ಬರ ಹಾಕಿದ್ರೆ ಇಳುವರಿ ಉತ್ತಮವಾಗಿರುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

3. ಬಹಳಷ್ಟು ಪೋಷಕಾಂಶಗಳ ಅಗತ್ಯ
ಮಲ್ಲಿಗೆ ಹೂಗಳಿಗೆ ಸಾಕಷ್ಟು ಪೋಷಕಾಂಶಗಳ ಅಗತ್ಯ ಇರುತ್ತದೆ. ಆದ್ದರಿಂದ ನೀವು ಅದನ್ನು ನೆಡುವಾಗ, ಮಣ್ಣಿನೊಂದಿಗೆ ಎರೆಹುಳು ಗೊಬ್ಬರಕ್ಕೆ ಶೇಕಡಾ 50 ರಷ್ಟು ಸೆಗಣಿಯನ್ನು ಮಿಶ್ರ ಮಾಡಬೇಕು. ತಿಂಗಳಿಗೊಮ್ಮೆ ಕುಂಡಕ್ಕೆ ಗೊಬ್ಬರವನ್ನು ಸೇರಿಸಬೇಕು. ಅಲ್ಲದೆ ನಾಟಿ ಮಾಡಲು ಮಣ್ಣನ್ನು ಸಿದ್ಧಪಡಿಸುವಾಗ, ತೋಟದ ಮಣ್ಣಿಗೆ ಶೇಕಡಾ 50 ರಷ್ಟು ಸೆಗಣಿ, ಶೇಕಡಾ 15 ರಷ್ಟು ಮರಳು, ಶೇಕಡಾ 10 ರಷ್ಟು ಕೋಕೋಪೀಟನ್ನು ಸೇರಿಸಬೇಕು.

4. ಮಲ್ಲಿಗೆ ಹೂವಿನ ವಿಂಗಡನೆ ಅಗತ್ಯ
ಮಲ್ಲಿಗೆ ಮೊಗ್ಗು ಅರಳಿ, ಉದುರಿದಾಗ ಅದರ ಬೀಜಕೋಶ ಹಾಗೆಯೇ ಉಳಿಯುತ್ತದೆ. ನಾವು ಮಲ್ಲಿಗೆ ಗಿಡದ ಕೊಂಬೆಯ ಭಾಗದಲ್ಲಿ ಎರಡು ಎಲೆಗಳ ಮಧ್ಯದ ತೊಟ್ಟನ್ನು ಮತ್ತು ಬೀಜಕೋಶವನ್ನು ಕತ್ತರಿಸಿ ತೆಗೆಯಬೇಕು. ಹಾಗಂತ ಹೆಚ್ಚು ಉದ್ದ ಕತ್ತರಿಸಲು ಹೋಗಬೇಡಿ. ಕೇವಲ ಹೂವುಗಳು ಅರಳಿ, ಉದುರಿದ ಬಳಿಕ ಆ ಜಾಗದ ಸಣ್ಣ ತೊಟ್ಟನ್ನು ಮಾತ್ರ ಕಿತ್ತು ತೆಗೆದರೆ ಸಾಕು. ಹಾಗೆ ಮಾಡುವುದರಿಂದ ಹೊಸ ಕೊಂಬೆಗಳು ಬಹಳ ಬೇಗ ಬೇಳೆಯುತ್ತವೆ ಮತ್ತು ಸಾಕಷ್ಟು ಹೂಗಳನ್ನು ಕೂಡ ಬೀಡುತ್ತವೆ.

5. ಎಪ್ಸಮ್ ಉಪ್ಪು ಸೇರಿಸಿ
ಎರಡು ಲೀಟರ್ ನೀರಿಗೆ ಒಂದು ಟೀ ಚಮಚ ಎಪ್ಸಮ್ ಉಪ್ಪು ಸೇರಿಸಿ, ಕದಡಿ. ಮತ್ತು ಆ ಗಿಡಗಳಿಗೆ ಸುರಿಯಿರಿ. ನೀವು ಸ್ಪ್ರೇ ಬಾಟಲಿನಿಂದ ನೀರನ್ನು ಗಿಡಗಳಿಗೆ ಸಿಂಪಡಿಸಿದರೆ ಇನ್ನೂ ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ಮಲ್ಲಿಗೆ ಗಿಡ ಚೆನ್ನಾಗಿ ಹೂ ಕೊಡುತ್ತದೆ. ಕೇವಲ 15 ದಿನಗಳಲ್ಲೇ ನಿಮ್ಮ ಗಿಡದಲ್ಲಿ ವ್ಯತ್ಯಾಸ ಕಾಣುವಿರಿ.

6. ಗಿಡ ಒಣಗದಂತೆ ನೋಡಿಕೊಳ್ಳಿ
ನಿಮ್ಮ ಮಲ್ಲಿಗೆ ಗಿಡ ಬದುಕಬೇಕು ಮತ್ತು ಚೆನ್ನಾಗಿ ಹೂ ಬಿಡಬೇಕು ಎಂದಾದಲ್ಲಿ, ಅದರ ಬುಡದ ಮಣ್ಣನ್ನು ಒಣಗಲು ಬಿಡಬೇಡಿ. ನಿಮ್ಮ ಗಿಡ ಇಡೀ ದಿನ ಸೂರ್ಯನ ಬಿಸಿಲಿನಲ್ಲಿ ಇರುತ್ತದೆ. ಹಾಗಾಗಿ, ಅದಕ್ಕೆ ನಿತ್ಯವೂ ತಪ್ಪದೆ ನೀರು ಹಾಕುವುದು ಅತ್ಯಗತ್ಯ. ಹಾಗಂತ ಅತಿಯಾಗಿ ನೀರು ಹಾಕುವ ಅಗತ್ಯ ಕೂಡ ಇಲ್ಲ.

ಇದನ್ನೂ ಓದಿ:  Explained: ಬಲವರ್ಧಿತ ಅಕ್ಕಿ ಎಂದರೇನು? ಅದನ್ನು ತಯಾರಿಸೋದು ಹೇಗೆ?

ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮಲ್ಲಿಗೆ ಗಿಡ ಕೇವಲ ಹೆಚ್ಚು ಹೂಗಳನ್ನು ಬಿಡುವುದು ಮಾತ್ರವಲ್ಲ, ಆರೋಗ್ಯವಾಗಿ ಕೂಡ ಇರುತ್ತದೆ.
Published by:Ashwini Prabhu
First published: