ಯೂರಿಕ್ ಆ್ಯಸಿಡ್ (Uric Acid) ಎಂಬುದು ರಕ್ತದಲ್ಲಿ (Blood) ಕಂಡು ಬರುವ ತ್ಯಾಜ್ಯ (Waste) ಉತ್ಪನ್ನ. ದೇಹದ (Body) ರಕ್ತದಲ್ಲಿ ಸಂಗ್ರಹವಾಗುವ ಈ ಯೂರಿಕ್ ಆ್ಯಸಿಡ್ ಹಲವು ಆರೋಗ್ಯ ಸಮಸ್ಯೆ (Health Problem) ತಂದೊಡ್ಡುತ್ತದೆ. ಯೂರಿಕ್ ಆ್ಯಸಿಡ್ ಹಲವು ಆಹಾರ ಪದಾರ್ಥಗಳು ಮತ್ತು ಪಾನೀಯದಲ್ಲೂ ಇರುತ್ತದೆ. ಇದು ದೇಹವನ್ನು ಸೇರಿದ ನಂತರ ರಕ್ತದಲ್ಲಿ ಸಂಗ್ರಹವಾಗಿ ಹಲವು ಆರೋಗ್ಯ ತೊಂದರೆಗಳನ್ನು ಉಂಟು ಮಾಡುತ್ತದೆ. ಕೇವಲ ಆಹಾರ ಮತ್ತು ಪಾನೀಯ ಮಾತ್ರವಲ್ಲದೇ, ದೇಹದಲ್ಲಿ ಪ್ಯೂರಿನ್ ಎಂಬ ಸಂಯುಕ್ತ ಒಡೆದಾಗ ಯೂರಿಕ್ ಆಮ್ಲ ಉಂಟಾಗುತ್ತದೆ. ಹೀಗೆ ರಕ್ತದಲ್ಲಿ ಸಂಗ್ರಹವಾಗುವ ಈ ತ್ಯಾಜ್ಯ ಯೂರಿಕ್ ಆಮ್ಲವು ಮೂತ್ರಪಿಂಡ ಮತ್ತು ಮೂತ್ರದ ಮೂಲಕ ಹೊರಗೆ ಹೋಗುತ್ತದೆ.
ಯೂರಿಕ್ ಆ್ಯಸಿಡ್ ಎಂಬ ತ್ಯಾಜ್ಯ ಮತ್ತು ಆರೋಗ್ಯ ಸಮಸ್ಯೆ
ಯೂರಿಕ್ ಆ್ಯಸಿಡ್ ಉಂಟು ಮಾಡುವ ಪ್ಯೂರಿನ್ ಗಳು ಸಾಮಾನ್ಯವಾಗಿ ದೇಹದಲ್ಲಿ ತಯಾರಾಗುತ್ತವೆ. ಜೊತೆಗೆ ನಾವು ಸೇವಿಸುವ ಕೆಲವು ಆಹಾರಗಳು ಮತ್ತು ಪಾನೀಯಗಳ ಮೂಲಕವೂ ದೇಹ ಸೇರುತ್ತವೆ.
ಹಾಗಾಗಿ ನಾವು ಹೆಚ್ಚಿನ ಪ್ಯೂರಿನ್ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ. ಹಲವು ಆರೋಗ್ಯ ಸಮಸ್ಯೆ ಉತ್ಪತ್ತಿಯಾಗುತ್ತವೆ.
ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದರೆ ಗೌಟ್, ಮೂತ್ರಪಿಂಡ ಕಾಯಿಲೆ, ಹೃದ್ರೋಗ ಮತ್ತು ಮೂಳೆ ಹಾನಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಉತ್ಪತ್ತಿಯಾಗುತ್ತವೆ. ಹಾಗಾದ್ರೆ ರಕ್ತದಲ್ಲಿ ಎಷ್ಟು ಪ್ರಮಾಣದಲ್ಲಿ ಯೂರಿಕ್ ಆಮ್ಲದ ಮಟ್ಟ ಇರಬೇಕು ಎಂಬುದನ್ನು ನೋಡೋಣ.
ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟ ಎಷ್ಟಿರಬೇಕು?
ಒಂದು ವರದಿಯ ಪ್ರಕಾರ, ಯೂರಿಕ್ ಆಮ್ಲದ ಮಟ್ಟವು ಮಹಿಳೆಯರಲ್ಲಿ 6 mg/dL ಗಿಂತ ಹೆಚ್ಚಿಗೆ ಇರಬಾರದು. ಜೊತೆಗೆ ಪುರುಷರಲ್ಲಿ 7 mg/dL ಗಿಂತ ಹೆಚ್ಚಿಗೆ ಇರಬಾರದು. ಸೀಮಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇದ್ದರೆ ಇದು ಯೂರಿಕ್ ಆ್ಯಸಿಡ್ ಆಗಿ ಹಲವು ಕಾಯಿಲೆಗಳ ಅಪಾಯಕ್ಕೆ ಕಾರಣವಾಗುತ್ತದೆ.
ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಪತ್ತೆ ಹಚ್ಚಲು ಯೂರಿಕ್ ಆ್ಯಸಿಡ್ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಇದನ್ನು ಸೀರಮ್ ಯೂರಿಕ್ ಆ್ಯಸಿಡ್ ಪರೀಕ್ಷೆ, ಸೀರಮ್ ಯುರೇಟ್ ಅಥವಾ ಯುಎ ಎಂದು ಕರೆಯುತ್ತಾರೆ.
ಯೂರಿಕ್ ಆ್ಯಸಿಡ್ ರಕ್ತ ಪರೀಕ್ಷೆ ಮಾಡುವ 4 ಗಂಟೆ ಮೊದಲು ಏನನ್ನೂ ತಿನ್ನದಂತೆ ವೈದ್ಯರು ಸೂಚಿಸುತ್ತಾರೆ. ಯೂರಿಕ್ ಆ್ಯಸಿಡ್ ಗೆ ದೀರ್ಘಕಾಲ ಚಿಕಿತ್ಸೆ ನೀಡದೇ ಹೋದ್ರೆ ಅದು ಗಂಭೀರ ರೋಗ ಲಕ್ಷಣಗಳಿಗೆ ಕಾರಣವಾಗುತ್ತದೆ ಅಂತಾರೆ ತಜ್ಞರು.
ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?
ಸಂಧಿ ನೋವು ಮತ್ತು ಊತ, ಕೀಲುಗಳ ಸುತ್ತ ಚರ್ಮದ ಬಣ್ಣ ಬದಲಾವಣೆಯಾಗುವುದು, ಬೆನ್ನು ನೋವು, ತೋಳು ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಮತ್ತು ವಾಸನೆ, ವಾಕರಿಕೆ ಅಥವಾ ವಾಂತಿ, ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು, ಗೌಟ್ ಸಮಸ್ಯೆ ಉಂಟಾಗುತ್ತವೆ.
ತೂಕ ಕಡಿಮೆ ಮಾಡಿ
ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಿರುವ ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ ಮತ್ತು ಮೆಟಬಾಲಿಕ್ ಸಿಂಡ್ರೋಮ್ ಅಂದ್ರೆ ಹೃದಯ ಕಾಯಿಲೆ, ಮಧುಮೇಹ, ಇತ್ಯಾದಿಗೆ ಸಂಬಂಧಪಟ್ಟಿವೆ ಎಂದು ಸಂಶೋಧನೆ ತೋರಿಸುತ್ತದೆ.
ಆಹಾರದ ಬದಲಾವಣೆ ಮತ್ತು ವ್ಯಾಯಾಮದ ಮೂಲಕ ತೂಕ ನಿರ್ವಹಣೆ ಮತ್ತು ತೂಕ ಇಳಿಕೆ ಮಾಡುವುದು ರಕ್ತದ ಯೂರಿಕ್ ಆಮ್ಲ ಮಟ್ಟ ಕಡಿಮೆ ಮಾಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಯೂರಿಕ್ ಆ್ಯಸಿಡ್ ಮಟ್ಟ ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯಬೇಕು. 6 ರಿಂದ 8 ಗ್ಲಾಸ್ ನೀರನ್ನು ತಪ್ಪದೇ ಕುಡಿಯಿರಿ.
ಪ್ಯೂರಿನ್ ಭರಿತ ಆಹಾರ ಸೇವನೆ ತಪ್ಪಿಸಿ
ಪ್ಯೂರಿನ್ ಆಹಾರಗಳಾದ ಮೀನು, ಸಮುದ್ರಾಹಾರ ಮತ್ತು ಚಿಪ್ಪುಮೀನು, ಜಿಂಕೆ ಮತ್ತು ಯಕೃತ್ತಿನಂತಹ ಹೆಚ್ಚಿನ ಪ್ಯೂರಿನ್ ಆಹಾರ ಸೇವನೆ ತಪ್ಪಿಸಿ. ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಆಹಾರ ಸೇರಿಸಿ. ಇದು ಯೂರಿಕ್ ಆಮ್ಲ ನಿಯಂತ್ರಿಸುತ್ತದೆ. ಕಿತ್ತಳೆ, ನಿಂಬೆ, ಕರಿಮೆಣಸು, ಸ್ಟ್ರಾಬೆರಿ, ಬ್ರೊಕೊಲಿ, ಬ್ರಸೆಲ್ಸ್ ಸೇವಿಸಬಹುದು.
ಇದನ್ನೂ ಓದಿ: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ
ಒತ್ತಡ ಮುಕ್ತವಾಗಿರಿ. ದೈನಂದಿನ ಭಾವನಾತ್ಮಕ ಒತ್ತಡವು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ