ಮನೆಯಲ್ಲಿ ಹಿರಿಯರು ಇದ್ದರೆ ಅವರು ಈ ಕತ್ತರಿಸಿದ ಬೆಂಡೆಕಾಯಿ ( Ladies finger) ಅಥವಾ ಬೆಂಡೆಕಾಯಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಎದ್ದ ನಂತರ ಆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಅಂತ ಹೇಳುವುದನ್ನು ನಾವು ಒಮ್ಮೆಯಾದರೂ ಕೇಳಿರುತ್ತೇವೆ. ಬೆಂಡೆಕಾಯಿ ಈ ಮಧುಮೇಹಿಗಳಿಗೆ ಎರಡು ಕಾರಣಗಳಿಗಾಗಿ ತುಂಬಾನೇ ಒಳ್ಳೆಯದು ಅಂತ ಹೇಳುತ್ತಾರೆ. ಇದು ಕರಗದ ಆಹಾರದ (Food) ನಾರಿನ ಸಮೃದ್ಧ ಮೂಲವಾಗಿದೆ, ಇದು ಈ ತರಕಾರಿ ಹೊಟ್ಟೆಗೆ ಸಂತೃಪ್ತಿಯನ್ನು ನೀಡುತ್ತದೆ ಮತ್ತು ಸಕ್ಕರೆ ಬಿಡುಗಡೆಯನ್ನು ವಿಳಂಬಗೊಳಿಸುತ್ತದೆ ಜೊತೆಗೆ ಹಸಿವನ್ನು ಮಿತಿಗೊಳಿಸುತ್ತದೆ. ಆ ಮೂಲಕ ಕ್ಯಾಲೊರಿ ಹೊರೆಯನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ, ಇದು ಕರುಳಿನ ಮೂಲಕ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ.
ಬೆಂಡೆಕಾಯಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತೆ..
ಜರ್ನಲ್ ಆಫ್ ಫಾರ್ಮಸಿ ಅಂಡ್ ಬಯೋ ಅಲೈಡ್ ಸೈನ್ಸಸ್ ನಲ್ಲಿ ಪ್ರಕಟವಾದ 2011 ರ ಅಧ್ಯಯನದಲ್ಲಿ, ಒಣಗಿದ ಮತ್ತು ನೆಲದ ಬೆಂಡೆಕಾಯಿ ಸಿಪ್ಪೆಗಳು ಮತ್ತು ಬೀಜಗಳನ್ನು ಸೇವಿಸಿದ ಮಧುಮೇಹದಿಂದ ಬಳಲುತ್ತಿದ್ದ ಇಲಿಗಳು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿಕೊಂಡಿವೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.
ಗುರುಗ್ರಾಮದ ಮಣಿಪಾಲ್ ಆಸ್ಪತ್ರೆಯ ಕಾರ್ಯನಿರ್ವಾಹಕ ಆಹಾರ ತಜ್ಞೆ ಶಾಲಿನಿ ಗಾರ್ವಿನ್ ಬ್ಲಿಸ್ ಮತ್ತು ಗುರುಗ್ರಾಮದ ಎಫ್ಎಂಆರ್‌ಐ ನ ಕ್ಲಿನಿಕಲ್ ನ್ಯೂಟ್ರಿಷನ್ ಮುಖ್ಯಸ್ಥೆ ದೀಪ್ತಿ ಖತುಜಾ ಅವರು ಬೆಂಡೆಕಾಯಿ ಸೇವನೆಯ ಪ್ರಯೋಜನಗಳು ಮತ್ತು ಅದನ್ನು ಹೇಗೆಲ್ಲಾ ಸೇವಿಸಬೇಕು ಅನ್ನೋದನ್ನು ವಿವರಿಸಿದ್ದಾರೆ ನೋಡಿ.
ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಸ್ಥಿರಗೊಳಿಸುತ್ತದೆ?
ಬೆಂಡೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಕರಗುವ ಮತ್ತು ಕರಗದ ನಾರುಗಳಿದ್ದು, ಇವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ರಕ್ತಕ್ಕೆ ಸಕ್ಕರೆ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ.
ಆದ್ದರಿಂದ, ರಕ್ತದಲ್ಲಿನ ಸಕ್ಕರೆ ಎಂದಿಗೂ ಯಾವುದೇ ಸಮಯದಲ್ಲಿ ಹೆಚ್ಚಾಗದೆ ಮತ್ತು ಕಡಿಮೆಯಾಗದೆ ಸ್ಥಿರವಾಗಿರುತ್ತದೆ. ಬೆಂಡೆಕಾಯಿಯ ಮಧುಮೇಹ-ನಿಯಂತ್ರಿಸುವ ಸಾಮರ್ಥ್ಯವು ಕರುಳಿನಲ್ಲಿ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಸಾಮರ್ಥ್ಯದ ಪರಿಣಾಮವಾಗಿದೆ.
ಇದನ್ನೂ ಓದಿ: ಅದೇ ಖಾಲಿ ದೋಸೆ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಇಂದು ಪುಡಿ ದೋಸೆಯನ್ನು ಒಮ್ಮೆ ಟ್ರೈ ಮಾಡಿ!
ಇದಲ್ಲದೆ, ಬೆಂಡೆಕಾಯಿ ಫೈಟೊಕೆಮಿಕಲ್ಸ್, ಆಂಟಿ ಆಕ್ಸಿಡೆಂಟ್ ಗಳು ಮತ್ತು ಪೊಟ್ಯಾಸಿಯಮ್, ಲಿನೋಲಿಕ್ ಆಮ್ಲ, ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಫೋಲೇಟ್ ನಂತಹ ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಕೇವಲ ಒಂದು ಕಪ್ ಬೇಯಿಸಿದ ಬೆಂಡೆಕಾಯಿ ಸುಮಾರು 37 ಮೈಕ್ರೋ ಗ್ರಾಂ ಫೋಲೇಟ್ ಅನ್ನು ಹೊಂದಿರುತ್ತದೆ.
ಮಧುಮೇಹಿಗಳಿಗೆ ಬೆಂಡೆಕಾಯಿ ತುಂಬಾ ಒಳ್ಳೆಯದಂತೆ..
ಫೈಬರ್ ಹೊರತುಪಡಿಸಿ, ಬೆಂಡೆಕಾಯಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ6 ಮತ್ತು ಫೋಲೇಟ್ ಅಂಶಗಳ ಸಮೃದ್ಧ ಮೂಲವಾಗಿದೆ, ಇವೆಲ್ಲವೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕ್ರಮಬದ್ಧಗೊಳಿಸಲು ಮತ್ತು ಮಧುಮೇಹ ನರರೋಗದ ಪ್ರಗತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿದೆ, ಜಿಐ ಎಂಬುದು ಆಹಾರವು ನಿಮ್ಮ ರಕ್ತಪ್ರವಾಹದಲ್ಲಿನ ಸಕ್ಕರೆ ಮಟ್ಟದ ಮೇಲೆ ಎಷ್ಟು ವೇಗವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಅಳೆಯುವ ಸೂಚ್ಯಂಕವಾಗಿದೆ.
ಬೆಂಡೆಕಾಯಿ ಉತ್ತಮ ಪ್ರಮಾಣದ ದ್ರವಗಳನ್ನು ಹೊಂದಿರುತ್ತದೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಇಷ್ಟೇ ಅಲ್ಲದೆ ಬೆಂಡೆಕಾಯಿ ಸುಲಭವಾಗಿ ಲಭ್ಯವಿರುವುದರಿಂದ ಮತ್ತು ತಯಾರಿಸಲು ಸುಲಭವಾಗಿರುವುದರಿಂದ ನಿಮ್ಮ ದೈನಂದಿನ ಆಹಾರದ ಉತ್ತಮ ಭಾಗವಾಗಬಹುದು.
ಬೆಂಡೆಕಾಯಿ ಸೇವನೆಯಿಂದ ಇನ್ನೂ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ?
ಹೆಚ್ಚಿನ ಫೈಬರ್ ಅಂಶ ಹೊಂದಿರುವ ಬೆಂಡೆಕಾಯಿ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. ಇದು ಪೆಕ್ಟಿನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಇದರಿಂದಾಗಿ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ ಅಂತ ಹೇಳಬಹುದು. ಇದು ಜೀವಕೋಶಗಳಿಗೆ ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಮತ್ತು ರಕ್ತಹೀನತೆಯನ್ನು ಸಹ ತಡೆಯುತ್ತದೆ.
ಶೇಕಡಾ 47.4 ರಷ್ಟು ಲಿನೋಲಿಕ್ ಆಮ್ಲದೊಂದಿಗೆ, ಬೆಂಡೆಕಾಯಿ ಪಾಲಿಯನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ.
ಬೆಂಡೆಕಾಯಿಯನ್ನು ಹೇಗೆಲ್ಲಾ ಸೇವಿಸಬಹುದು?
ಬೆಂಡೆಕಾಯಿಯ ಪಲ್ಯವನ್ನು ಮಾಡಿಕೊಂಡು ರೊಟ್ಟಿಯ ಜೊತೆಗೆ ತಿನ್ನಬಹುದು. ಇದನ್ನು ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ತಯಾರಿಸಬಹುದು ಮತ್ತು ಲಘುವಾಗಿ ಹುರಿದುಕೊಳ್ಳಬಹುದು.
ಇದನ್ನು ಹುರಿದುಕೊಂಡು ಸಹ ತಿನ್ನಬಹುದು ಮತ್ತು ನಿಮ್ಮ ಸಾರು, ಸೂಪ್ ಮತ್ತು ಪಲ್ಯಗಳಿಗೂ ಇದನ್ನು ಸೇರಿಸಿಕೊಳ್ಳಬಹುದು. ಮತ್ತೊಂದೆಡೆ ಬೆಂಡೆಕಾಯಿ ಗಿಡದ ಎಲೆಗಳನ್ನು ಸಲಾಡ್ ಗಳು, ತರಕಾರಿಗಳು ಮತ್ತು ಗಂಜಿಗಳನ್ನು ತಯಾರಿಸಲು ಸಹ ಬಳಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ