ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿಗೆ (Love) ಅತಿದೊಡ್ಡ ಸ್ಥಾನವಿದೆ. ನೀವು ಪ್ರೀತಿಸುವ ವ್ಯಕ್ತಿ ನಿಮ್ಮ ಪಕ್ಕದಲ್ಲಿದ್ದಾಗ ನೀವು ಹೆಚ್ಚು ಖುಷಿಯಾಗಿರುತ್ತೀರಿ. ಅಲ್ಲದೇ ಅಂಥ ಸಮಯದಲ್ಲಿ ನಿಮ್ಮ ಹೃದಯ (Heart) ವೇಗವಾಗಿ ಬಡಿದುಕೊಳ್ಳುತ್ತಿರುತ್ತದೆ. ಭಾವನೆಗಳು (Feelings) ತೀವ್ರವಾಗುತ್ತಿರುತ್ತವೆ. ಆ ಖುಷಿ, ಉತ್ಸಾಹ ಮತ್ತು ಸಂತೋಷದ ಭಾವನೆಯು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಪ್ರೀತಿಯ ಭಾವನೆಯಿಂದ ಸಾಕಷ್ಟು ಆರೋಗ್ಯಕರ (Health) ಪರಿಣಾಮಗಳಿವೆ. ಇದು ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನಲಾಗುತ್ತೆ. ಪ್ರೀತಿಯ ಸಂಬಂಧವು ಹೃದಯ ಆರೋಗ್ಯದ ಜೊತೆಗೆ ಮತ್ತಷ್ಟು ಮಾನಸಿಕವಾಗಿ (Mentally) ಹಾಗೂ ದೈಹಿಕವಾಗಿ (Physically) ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಪ್ರೀತಿಯ ಆರೋಗ್ಯ ಪ್ರಯೋಜನಗಳು ಹಲವು
ನಿಮ್ಮ ಆರೋಗ್ಯಕ್ಕೆ ಪ್ರೀತಿ ಏಕೆ ಒಳ್ಳೆಯದು ಎಂಬುದನ್ನು ನೋಡೋದಾದ್ರೆ, ರಕ್ತದೊತ್ತಡವು ಶಾಂತತೆ ಮತ್ತು ಶಾಂತಿಗೆ ಪ್ರತಿಕ್ರಿಯಿಸುತ್ತದೆ. ನೀವು ಪ್ರೀತಿಸುತ್ತಿದ್ದರೆ, ನೀವು ಶಾಂತವಾಗಿರುತ್ತೀರಿ. ಆದರೆ ಇಷ್ಟೇ ಅಲ್ಲ. ಬಿಪಿ, ಹೃದಯದ ಆರೋಗ್ಯದ ಜೊತೆಗೆ ಪರಿಧಮನಿಯ ರಕ್ತದ ಹರಿವನ್ನೂ ಇದು ಸುಧಾರಿಸುತ್ತದೆ.
ಅವಿವಾಹಿತರಿಗೆ ಹೋಲಿಸಿದರೆ ವಿವಾಹಿತರು ಬದುಕುವ ಸಾಧ್ಯತೆ ಹೆಚ್ಚು
ಪ್ರೀತಿಯು ನಮಗೆ ಒಳ್ಳೆಯದನ್ನು ನೀಡುತ್ತದೆ. ಪ್ರೀತಿಯು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಪ್ರೀತಿ ನಿಮ್ಮ ಹೃದಯಕ್ಕೆ ಒಳ್ಳೆಯದು. ನೀವೇನಾದರೂ ಹೃದಯದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಪ್ರೀತಿಯು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಂದಹಾಗೆ ಮದುವೆಯು ನಿಮಗೆ ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ. ಮದುವೆಯಾಗದ ಜನರಿಗಿಂತ ವಿವಾಹಿತರು ಬದುಕುವ ಸಾಧ್ಯತೆ ಹೆಚ್ಚು. ವಿವಾಹಿತರು ಉತ್ತಮವಾಗಿ ಚೇತರಿಕೆ ಕಾಣುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.
ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಹೊಂದಿರಬಹುದು ಅಥವಾ ನಿಮ್ಮನ್ನು ಯಾರಾದರೂ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುತ್ತಿರಬಹುದು. ಇದು ನಿಮ್ಮ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ತರುತ್ತದೆ. ಯಾವುದೇ ರೀತಿಯಲ್ಲಿ ವಿವಾಹಿತರು ಒಂಟಿಯಾಗಿರುವವರಿಗಿಂತ ಹೆಚ್ಚು ಉತ್ತಮವಾಗಿ ಚೇತರಿಸಿಕೊಳ್ಳುವುದನ್ನು ನಾವು ನೋಡಬಹುದು. ಅದರಲ್ಲೂ ಪುರುಷರು ಮಹಿಳೆಯರಿಗಿಂತ ಮದುವೆಯಿಂದ ಹೆಚ್ಚು ಹೃದಯರಕ್ತನಾಳದ ಪ್ರಯೋಜನವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.
ಉತ್ತಮ ಚೇತರಿಕೆಗೆ ಪ್ರೀತಿಯೇ ಮದ್ದು !
ಎಲ್ಲಾ ರೀತಿಯ ಪ್ರೀತಿಯು ನಿಮ್ಮ ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವ ಸಂಗಾತಿಯೊಂದಿಗಿನ ಪ್ರೇಮ ಮಾತ್ರವಲ್ಲ. ಬದಲಾಗಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟವಾದ, ಪ್ರೀತಿಯ ಸಂಬಂಧವನ್ನು ಹೊಂದಿರುವುದರಿಂದಲೂ ಹೃದಯರಕ್ತನಾಳದ ಪ್ರಯೋಜನಗಳನ್ನು ಪಡೆಯಬಹುದು.
ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಪ್ರೀತಿಪಾತ್ರರ ಬೆಂಬಲವನ್ನು ಹೊಂದಿರುವವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಕಾಲಾನಂತರದಲ್ಲಿ, ಉತ್ತಮ ಸಾಮಾಜಿಕ ಬೆಂಬಲವನ್ನು ಹೊಂದಿರುವ ರೋಗಿಗಳು ಉತ್ತಮ ಚೇತರಿಕೆ ಕಾಣುತ್ತಾರೆ. ಹಾಗೆಯೇ ಅವರು ಹೆಚ್ಚು ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿರುತ್ತಾರೆ. ಅನೇಕ ಹೃದ್ರೋಗ ತಜ್ಞರು ತಮ್ಮ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅಥವಾ ಆಂಜಿಯೋಪ್ಲ್ಯಾಸ್ಟಿ ನಂತರ ಕಾಳಜಿಯ ಪ್ರಾಮುಖ್ಯತೆಯ ಬಗ್ಗೆ ಸಲಹೆ ನೀಡುತ್ತಾರೆ. ಸಂಗಾತಿ, ಆಪ್ತ ಸ್ನೇಹಿತರು ಹಾಗೆಯೇ ಕುಟುಂಬದವರು ಈ ಕಾಳಜಿಯನ್ನು ತೋರಿಸಬಹುದು.
ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ನೀವು ಇರುವುದರಿಂದ ನೀವು ಹೆಚ್ಚು ಮಾನಸಿಕ ಶಾಂತಿಯನ್ನು ಅನುಭವಿಸಬಹುದು. ಅಲ್ಲದೇ ಇದರಿಂದ ವೈದ್ಯರು ಹೇಳಿದಂತೆ ನೀವು ನಡೆದುಕೊಳ್ಳಬಹುದು. ಜೊತೆಗೆ ನೀವು ನಿಮ್ಮದೇ ಆರೈಕೆಯನ್ನು ಹೆಚ್ಚು ಚೆನ್ನಾಗಿ ಮಾಡಿಕೊಳ್ಳಬಹುದು.
ನೀವು ಪ್ರೀತಿಸುವ ಸಾಕು ಪ್ರಾಣಿಗಳಿಂದಲೂ ಆರೋಗ್ಯ ಪ್ರಯೋಜನ
ನಿಮ್ಮ ಸಾಕು ಪ್ರಾಣಿಗಳೊಂದಿಗೆ ಸಮಯ ಕಳೆದರೆ ಅದರಿಂದಲೂ ನಿಮಗೆ ಗೊತ್ತಾಗದ ಹಾಗೆ ಆರೋಗ್ಯ ಪ್ರಯೋಜನಗಳನ್ನು ಹೊಂದುತ್ತೀರಿ. ಸಾಕುಪ್ರಾಣಿಗಳ ಜೊತೆಗಿನ ಬಾಂಧವ್ಯವು ಹೃದಯ ಚಿಕಿತ್ಸೆಯ ನಂತರವೂ ಜನರು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ನೀವು ಸಾಕುವ ನಾಯಿಗಳು, ಬೆಕ್ಕುಗಳು ನಿರ್ದಿಷ್ಟ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಇದಕ್ಕೆ ಸಾಕುಪ್ರಾಣಿಗಳು ನಿಮಗೆ ನೀಡುವ ಬೇಷರತ್ತಾದ ಪ್ರೀತಿಯೇ ಕಾರಣ ಎಂದು ತಜ್ಞರು ನಂಬುತ್ತಾರೆ.
ಪ್ರೀತಿಯ ವಿಷಯದಲ್ಲಿ ನಮ್ಮ ಹೃದಯ ಘಾಸಿಗೊಂಡಾಗ ಏನಾಗುತ್ತದೆ?
ಜೀವನದಲ್ಲಿ ಪ್ರೀತಿಯು ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದ್ರೆ ಅದೇ ಪ್ರೀತಿ ಕೈಕೊಟ್ಟಾಗ ಹೃದಯಕ್ಕೆ ಘಾಸಿಯಾಗುತ್ತದೆ. ಇದು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಸಿನಿಮಾಗಳಲ್ಲಿ ಪ್ರೀತಿಸಿದವರು ಕೈಕೊಟ್ಟಾಗ ಅಥವಾ ಹಠಾತ್ ಆಘಾತವಾದಾಗ ಸಾವಿಗೀಡಾಗುವುದನ್ನು ನಾವು ನೋಡುತ್ತೇವೆ. ಆದ್ರೆ ಇದು ಕೇವಲ ಕಥೆಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಸಂಭವಿಸುತ್ತದೆ. ಇಂಥ ಗಂಭೀರ ಪರಿಣಾಮ ಕಡಿಮೆ. ಆದರೂ ಕೆಲವರು ಹೃದಯಾಘಾತದಿಂದ ಬಳಲಬಹುದು. ಅಲ್ಲದೇ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಕೂಡ ಸಂಭವಿಸಬಹುದು.
ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದರೇನು?
ಕಾರ್ಡಿಯೊಮಿಯೊಪತಿ ಅಥವಾ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅನೇಕರಲ್ಲಿ ಕಂಡುಬರಬಹುದು. ಇದು ಕೆಲವೊಮ್ಮೆ ಪೂರ್ಣವಾಗಿ ಗುಣವಾದರೆ ಇನ್ನೂ ಕೆಲವೊಮ್ಮೆ ಸ್ವಲ್ಪ ಮಟ್ಟಿಗಿನ ಚೇತರಿಕೆ ಕಾಣಬಹುದು. ಆದರೆ ಕೆಲವರಲ್ಲಿ ಇದು ಹೃದಯಕ್ಕೆ ಶಾಶ್ವತ ಹಾನಿ ಉಂಟುಮಾಡಬಹುದು. ಬ್ರೋಕನ್ ಹಾರ್ಟ್ ಸಿಂಡ್ರೋಮ್ ನಿಜವಾದ ವೈದ್ಯಕೀಯ ಅಸ್ವಸ್ಥತೆಯಾಗಿದೆ. ಇದು ಸಾಮಾನ್ಯವಾಗಿ ತಾತ್ಕಾಲಿಕ ಸ್ಥಿತಿಯಾಗಿದ್ದು, ಹೃದಯವು ಹಠಾತ್ ಹಿಗ್ಗುವಿಕೆಯನ್ನು ಹೊಂದಿರುತ್ತದೆ.
ಹೃದಯಕ್ಕೆ ರಕ್ತವನ್ನು ಪಂಪ್ ಮಾಡುವುದು ಕಷ್ಟವಾಗುತ್ತದೆ. ಇದು ಕೆಲವೊಮ್ಮೆ ತಕ್ಷಣವೇ ಸರಿ ಹೋಗಬಹುದು. ಮತ್ತೆ ಕೆಲವೊಮ್ಮೆ ವಾರಗಳಿಂದ ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು. ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅನ್ನು ಟಕೋಟ್ಸುಬೊ ಕಾರ್ಡಿಯೊಮಿಯೊಪತಿ ಎಂದೂ ಕರೆಯುತ್ತಾರೆ. ಇದು ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಈ ಸ್ಥಿತಿಯು ಅಪಾಯಕಾರಿ ಮತ್ತು ಮಾರಕವಾಗಬಹುದು.
ಹೃದಯ ಸಮಸ್ಯೆಗಳನ್ನು ಹೆಚ್ಚಿಸಬಹುದು ಬ್ರೇಕಪ್ !
ಸಾಮಾನ್ಯವಾಗಿ ಒತ್ತಡವು ನಿಮ್ಮ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎನ್ನಲಾಗುತ್ತದೆ. ಇತ್ತೀಚಿನ ಸಮೀಕ್ಷೆಯು ಇದನ್ನು ದೃಢಪಡಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಮೂರನೇ ಒಂದು ಭಾಗದಷ್ಟು ಜನರಿಗೆ ಒತ್ತಡ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಮತ್ತು ಧೂಮಪಾನದ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿದಿರಲಿಲ್ಲ ಎಂದು ಕಂಡುಹಿಡಿದಿದೆ.
ಹಲವು ರೂಪದಲ್ಲಿರುತ್ತದೆ ಪ್ರೀತಿ!
ನಮ್ಮ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಹಲವು ಆರೋಗ್ಯಕರ ಮಾರ್ಗಗಳಿವೆ. ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಹೊಂದಿರುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಹೊಂದಬಹುದು. ಆ ಪ್ರೀತಿಯು ಸಂಗಾತಿ, ಒಡಹುಟ್ಟಿದವರು, ಪೋಷಕರು, ಸ್ನೇಹಿತರು ಅಥವಾ ಸಾಕುಪ್ರಾಣಿಗಳು ಹೀಗೆ ಯಾವುದಾದರೂ ಆಗಬಹುದು. ಪ್ರೀತಿಯ ಮೂಲಕ ಶಾಂತಿಯನ್ನು ಪಡೆಯುವುದು ಗುರಿಯಾಗಿದೆ. ಇದು ನಿಮ್ಮ ಜೀವನದಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ.
ನಿಮ್ಮ ಮಾನಸಿಕ ಆರೋಗ್ಯ ಮತ್ತು ಹೃದಯರಕ್ತನಾಳದ ಆರೋಗ್ಯದ ನಡುವೆ ಬಲವಾದ ಸಂಬಂಧವಿದೆ. ಕೆಲವು ಸಂಶೋಧನೆಗಳ ಪ್ರಕಾರ, ಹೃದಯರಕ್ತನಾಳದ ಕಾಯಿಲೆ ಇರುವವರು ಖಿನ್ನತೆಯೊಂದಿಗೆ ಹೋರಾಡುವ ಸಾಧ್ಯತೆ 3 ಪಟ್ಟು ಹೆಚ್ಚು ಎನ್ನಲಾಗುತ್ತದೆ. ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದಂತೆ ಜನರು ಏನು ಅಂದುಕೊಳ್ಳುತ್ತಾರೋ ಎಂದುಕೊಂಡು ರೋಗನಿರ್ಣಯ ಮಾಡದೆ ಹೋಗುವ ಸಾಧ್ಯತೆಯಿರುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವಯಸ್ಕರಿಗೆ ಇದು ಬಹಳ ಅಪಾಯಕಾರಿಯಾಗಿದೆ. ಶೇ. 80ರಷ್ಟು ಜನರು ಹೊಸ ಹೃದಯರಕ್ತನಾಳದ ಕಾಯಿಲೆಯನ್ನು ಹೊಂದುವ ಅಪಾಯವನ್ನು ಹೊಂದಿರುತ್ತಾರೆ.
ಖಿನ್ನತೆಯು ಇತರ ಆರೋಗ್ಯ ನಡವಳಿಕೆಗಳ ಮೂಲಕವೂ ಹೃದಯರಕ್ತನಾಳದ ಆರೋಗ್ಯವನ್ನು ಹದಗೆಡಿಸಬಹುದು. ಉದಾಹರಣೆಗೆ, ಖಿನ್ನತೆಯಿಂದ ಬಳಲುತ್ತಿರುವವರು ವೈದ್ಯಕೀಯ ಚಿಕಿತ್ಸಾ ಯೋಜನೆಗಳನ್ನು ಅನುಸರಿಸಲು ಇಷ್ಟಪಡುವುದಿಲ್ಲ. ಅನಾರೋಗ್ಯಕರ ಜೀವನಶೈಲಿಯಿಂದ ಜೀವಿಸುತ್ತಾರೆ.
ಖಿನ್ನತೆಯು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಕೆಲವು ಒತ್ತಡದ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ, ರಕ್ತದೊತ್ತಡ ಹೆಚ್ಚು ಮಾಡಬಹುದು. ಹೃದಯ ಬಡಿತವನ್ನು "ಸ್ಪೈಕ್" ಮಾಡಬಹುದು. ಖಿನ್ನತೆ, ಕೋಪ ಮತ್ತು ಆಂತರಿಕ ಹಗೆತನ, ಹತಾಶೆ, ತೀವ್ರ ಒತ್ತಡ ಮತ್ತು ಉದ್ವೇಗ ಇವುಗಳು ಹೃದಯದ ಆರೋಗ್ಯವನ್ನು ಸ್ವತಃ ಹದಗೆಡಿಸುವ ಭಾವನೆಗಳು ಎಂಬುದಾಗಿ ಹೇಳಲಾಗುತ್ತದೆ.
ಮತ್ತೊಂದೆಡೆ, ಮಾನಸಿಕ ಆರೋಗ್ಯವು ಉನ್ನತ ಮಟ್ಟದ ಹೃದಯರಕ್ತನಾಳದ ಆರೋಗ್ಯದೊಂದಿಗೆ ಸಂಬಂಧ ಹೊಂದಿರಬಹುದು. ಉದಾಹರಣೆಗೆ, ಆಶಾವಾದವು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೇಗೆಂದರೆ ಆಶಾವಾದವು ಒಳ್ಳೆಯದನ್ನು ನಿರೀಕ್ಷಿಸುವ ಮೂಲಕ ನಿರೂಪಿಸಲ್ಪಟ್ಟಿದೆ. ನೀವು ಭರವಸೆ, ಪ್ರೀತಿ, ಉಪಕಾರ ಮತ್ತು ಇತರ ಸಕಾರಾತ್ಮಕ ಭಾವನೆಗಳಿಂದ ತುಂಬಿದ್ದರೆ, ನಿಮ್ಮ ಅನಾರೋಗ್ಯವನ್ನು ಎದುರಿಸಲು ಅವು ಸಹಾಯ ಮಾಡುತ್ತವೆ.
ಇದನ್ನೂ ಓದಿ: Zodiac Diaries: ಬ್ರೇಕ್‌ಅಪ್ ಆದ್ರೆ ಜೀವನ ಮುಗಿಯಲ್ಲ; ಬದುಕನ್ನು ರೀಸ್ಟಾರ್ಟ್ ಮಾಡಲು ರಾಶಿಗನುಗುಣವಾಗಿ ಹೀಗೆ ಮಾಡಿ
ಉತ್ತಮ ಸ್ನೇಹಿತರು, ಸಹಚರರು ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಹೊಂದಿರುವ ಜನರು ಆರೋಗ್ಯಕರ ಮತ್ತು ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಪ್ರೀತಿಯು ಉತ್ತಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ತರಬಹುದು. ಒಟ್ಟಾರೆ, ಮಾನಸಿಕ ಆರೋಗ್ಯ ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಬಗ್ಗೆ ಕಾಳಜಿ ವಹಿಸುವ ಮೂಲಕ ನಿಮ್ಮ ಹೃದಯವನ್ನು ಪ್ರೀತಿಸಿ. ಆಗ ಅದೂ ನಿಮಗಾಗಿ ಮಿಡಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ