ಈಗಾಗಲೇ ಬೇಸಿಗೆ(Summer) ಶುರುವಾಗಿ ಒಂದು ತಿಂಗಳ ಮೇಲೆಯೇ ಆಯ್ತು, ಸ್ವಲ್ಪ ಮನೆಯಿಂದ ಹೊರಗೆ ಹೋಗಿ ಬಂದರೆ ಸಾಕು ಬಿಸಿಲಿನ ತಾಪಕ್ಕೆ ಇಡೀ ದೇಹದ ಚರ್ಮ ಒಂದು ರೀತಿ ಬೇರೆ ಬಣ್ಣಕ್ಕೆ ತಿರುಗುವುದನ್ನು ನಾವೆಲ್ಲಾ ನೋಡಿರುತ್ತೇವೆ. ಬಿಸಿಲಿಗೆ ದೇಹದ ಚರ್ಮದ(Skin) ಮೇಲೆ ಬೆವರು ಬಂದು ಇಡೀ ಮೈಯಲ್ಲಾ ಒಂದು ರೀತಿ ಅಂಟಂಟಾಗಿರುತ್ತದೆ. ಮೈ ಮೇಲೆ ತಣ್ಣೀರು ಹಾಕಿಕೊಳ್ಳುವ ತನಕ ಒಂದು ರೀತಿಯ ತುರಿಕೆ ಮತ್ತು ಕಿರಿಕಿರಿ ನಿಲ್ಲೋದೆಯಿಲ್ಲ ಅಂತ ಹೇಳಬಹುದು.
ಅದರಲ್ಲೂ ಮುಖದ ಮೇಲಿನ ಚರ್ಮವಂತೂ ಬಿಸಿಲಿನ ತಾಪಕ್ಕೆ ಅನೇಕ ರೀತಿ ಅಲರ್ಜಿಗಳಿಗೆ ಕಾರಣವಾಗುತ್ತದೆ ಅಂತ ಹೇಳಬಹುದು. ಮುಖದ ಚರ್ಮದ ಮೇಲೆ ಕೆಂಪಾಗುವಿಕೆ ಮತ್ತು ಕೆಂಪು ಕೆಂಪು ಸಣ್ಣ ಗುಳ್ಳೆಗಳಾಗುವುದು ಮತ್ತು ಮೊಡವೆಗಳಾಗುವುದು ಸಾಮಾನ್ಯವಾಗಿರುತ್ತದೆ.
ಆದ್ದರಿಂದಲೇ ಅನೇಕ ಮಹಿಳೆಯರು ಬಿಸಿಲಿಗೆ ಹೊರಗೆ ಹೋಗುವ ಮುನ್ನ ಇಡೀ ತಲೆಯನ್ನು ಮತ್ತು ಮುಖವನ್ನು ದುಪಟ್ಟಾದಿಂದ ಮುಚ್ಚಿಕೊಂಡು ಹೋಗುತ್ತಾರೆ.
ಮುಖದ ಮೇಲಿನ ಕೆಂಪಾಗುವಿಕೆಗೆ ಕಾರಣಗಳು ಏನು ಗೊತ್ತೇ?
"ರಕ್ತನಾಳಗಳು ಹಿಗ್ಗಿದಾಗ ಮುಖವು ಕೆಂಪಾಗುತ್ತದೆ, ಇದರಿಂದಾಗಿ ಚರ್ಮಕ್ಕೆ ಹೆಚ್ಚಿನ ರಕ್ತವು ನುಗ್ಗುತ್ತದೆ. ಇದು ಸೂರ್ಯನ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಸಹ ಆಗಬಹುದು.
ಕೆಲವೊಮ್ಮೆ ಔಷಧಿಗಳನ್ನು ತೆಗೆದುಕೊಂಡಾಗ ಸಹ ಅಲರ್ಜಿ ಆಗಿ ಮತ್ತು ಅತಿಯಾಗಿ ಮದ್ಯ ಸೇವಿಸುವುದರಿಂದ ಸಹ ಹೀಗೆ ಆಗುತ್ತದೆ" ಅಂತ ಡಾ. ಡಿಂಪ್ಲಾ ಜಂಗ್ಡಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಮುಖದ ಮೇಲಿನ ಕೆಂಪಾಗುವಿಕೆ ತುಂಬಾನೇ ಕಳವಳಕ್ಕೆ ಕಾರಣವಲ್ಲವಾದರೂ, ಅದು ಕಿರಿಕಿರಿ ಮತ್ತು ಅಹಿತಕರವಾಗಿರಬಹುದು. ಇದು ಇತರ ರೋಗಲಕ್ಷಣಗಳನ್ನು ಸಹ ತಂದೊಡ್ಡಬಹುದು ಮತ್ತು ಇದು ನಿರಂತರವಾಗಿದ್ದರೆ, ಇದಕ್ಕೆ ಕಾರಣವನ್ನು ತಿಳಿದುಕೊಳ್ಳುವುದು ಒಳ್ಳೆಯದು. ವೈದ್ಯರ ಬಳಿ ಹೋಗಿ ಇದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಇದನ್ನೂ ಓದಿ: Men Beauty: ಪುರುಷರೇ, ಮೊಡವೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಹ್ಯಾಂಡ್ಸಮ್ ಲುಕ್ಗಾಗಿ ಈ ಹೋಂ ಟಿಪ್ಸ್ ಟ್ರೈ ಮಾಡಿ!
ಮುಖದ ಕೆಂಪಾಗುವಿಕೆಯಿಂದ ದೂರ ಉಳಿಯುವುದಕ್ಕೆ ಹೀಗೆ ಮಾಡಿ..
ತಾಪಮಾನ ಮತ್ತು ಸೂರ್ಯನ ಬೆಳಕಿನಲ್ಲಿ ತ್ವರಿತ ಬದಲಾವಣೆಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ, ಸದಾ ನೀರು ಕುಡಿಯುತ್ತಾ ಹೈಡ್ರೇಟ್ ಆಗಿ ಉಳಿಯುವುದು ಮತ್ತು ಮದ್ಯ ಸೇವನೆಯನ್ನು ಬೇಸಿಗೆಕಾಲದಲ್ಲಿ ಬಿಟ್ಟು ಬಿಡುವುದು ಮುಖದ ಮೇಲೆ ಕೆಂಪಾಗುವಿಕೆಯನ್ನು ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳಾಗಿವೆ.
ಇದಷ್ಟೇ ಅಲ್ಲದೆ ಬೆಳಗ್ಗೆ ಎದ್ದು ಧ್ಯಾನ ಮಾಡುವುದು, ಉಸಿರಾಟದ ವ್ಯಾಯಾಮ ಮಾಡುವುದು ಮುಂತಾದ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡುವುದು ಒಳ್ಳೆಯದು ಅಂತಾರೆ ತಜ್ಞರು.
ಮನೆಯಲ್ಲಿಯೇ ಈ ಮುಖದ ಕೆಂಪಾಗುವಿಕೆಗೆ ಚಿಕಿತ್ಸೆ ಪಡೆಯಲು ತಜ್ಞರು ಕೆಲವು ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ತಿಳಿಸಿದ್ದಾರೆ ನೋಡಿ.
ಅಲೋವೆರಾದಿಂದ ಹಿಡಿದು ತೆಂಗಿನ ಎಣ್ಣೆಯವರೆಗೆ, ಈ ಮುಖ ಕೆಂಪಾಗುವಿಕೆ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವ ಮಾರ್ಗಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ ನೋಡಿ.
ಅಲೋವೆರಾ
ಇದು ಉರಿಯೂತ ನಿವಾರಕ ಮತ್ತು ಗಾಯವನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಇದು ಮುಖದ ಮೇಲೆ ಕಾಣಿಸಿಕೊಳ್ಳುವ ಕೆಂಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಕೆಂಪು ಕಲೆಗಳ ಮೇಲೆ ಹಚ್ಚಿ, ರಾತ್ರಿಯಿಡೀ ಬಿಡಿ ಮತ್ತು ಬೆಳಗ್ಗೆ ಅದನ್ನು ತೊಳೆಯಿರಿ.
ಇದನ್ನೂ ಓದಿ: Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?
ಕೋಲ್ಡ್ ಕಂಪ್ರೆಸ್
ಕೋಲ್ಡ್ ಕಂಪ್ರೆಸ್ ಗಳು ನಿಮ್ಮ ಚರ್ಮದ ಮೇಲಿನ ಉರಿಯೂತ ಮತ್ತು ದದ್ದುಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮುಖದ ಕೆಂಪಾಗುವಿಕೆಯನ್ನು ಕಡಿಮೆ ಮಾಡುತ್ತದೆ.
ಒಂದು ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ನೆನೆಸಿ ಮತ್ತು ಅದನ್ನು ಮುಖದಲ್ಲಿ ಕೆಂಪಾದ ಜಾಗದಲ್ಲಿ 10 ನಿಮಿಷಗಳ ಕಾಲ ಇರಿಸಿ.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಉರಿಯೂತ ಶಮನಕಾರಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವ ಕ್ಯಾಟೆಚಿನ್ ಗಳಿವೆ. ಈ ಗುಣಲಕ್ಷಣಗಳು ನಿಮ್ಮ ಮುಖದ ಮೇಲೆ ಇರುವಂತಹ ಕೆಂಪು ತೇಪೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2-3 ಎಲೆಗಳನ್ನು ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಅದರಲ್ಲಿ ಒಂದು ಬಟ್ಟೆಯನ್ನು ನೆನೆಸಿಟ್ಟು ಮತ್ತು ಅದನ್ನು ಮುಖದಲ್ಲಿನ ಕೆಂಪಾದ ಭಾಗಕ್ಕೆ ಹಚ್ಚಿರಿ.
ತೆಂಗಿನೆಣ್ಣೆ
ತೆಂಗಿನ ಎಣ್ಣೆ ಲಾರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ಮುಖದ ಕೆಂಪಾಗುವಿಕೆಗೆ ಕಾರಣವಾಗುವ ಚರ್ಮದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸ್ವಲ್ಪ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕೆಂಪಾದ ಜಾಗದಲ್ಲಿ ಹಚ್ಚಿರಿ. ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ