ನೈಸರ್ಗಿಕ ಪೋಷಕಾಂಶಗಳು ಕೂದಲನ್ನು ಹೈಡ್ರೇಟ್ ಮಾಡುವುದಲ್ಲದೇ ದಟ್ಟ ಕೇಶರಾಶಿಯನ್ನು ಪಡೆಯಲು ನೆರವಾಗುತ್ತದೆ. ಜೊತೆಗೆ ಕೇಶಕ್ಕೆ ಹೊಳಪನ್ನು ಸಹ ನೀಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಅಡುಗೆ ಮನೆಯಲ್ಲಿರುವ ಮಾಂತ್ರಿಕ ಪದಾರ್ಥಗಳು ನಿಮ್ಮ ಕೇಶರಾಶಿಯ ಆರೋಗ್ಯವನ್ನು ಸುಧಾರಣೆ ಮಾಡುವುದಲ್ಲದೇ ಅದ್ಭುತ ಪರಿಣಾಮಗಳನ್ನು ನೀಡುತ್ತವೆ. ನಿಮ್ಮ ಕೂದಲಿಗೆ ಅಗತ್ಯವಾಗಿರುವಂತಹ ಕೇಶತೈಲವನ್ನು ನೀವು ಮನೆಯಲ್ಲೇ ತಯಾರಿಸಬಹುದಾಗಿದೆ. ಆ ಮೂಲಕ ಸುಂದರವಾದ ಮತ್ತು ಆಕರ್ಷಕ ಕೂದಲನ್ನು ಹೊಂದಬಹುದು. ಸೌಂದರ್ಯ ತಜ್ಞೆ ಶಹನಾಜ್ ಹುಸೇನ್ ಅವರು ಮನೆಯಲ್ಲೇ ತಯಾರಿಸಬಹುದಾದ ಕೆಲವು ಕೇಶ ತೈಲಗಳನ್ನು ಮಾಡುವುದು ಹೇಗೆ ಎಂದು ವಿವರಿಸಿದ್ದಾರೆ.
ಮನೆಯಲ್ಲೇ ಎಣ್ಣೆಯನ್ನು ತಯಾರಿಸಿ ಕೂದಲಿನ ಆರೈಕೆ ಮಾಡುವುದರಿಂದ ಕೇಶದ ಸೌಂದರ್ಯ ವೃದ್ಧಿಯಾಗುವುದು ಮಾತ್ರವಲ್ಲ, ಹೊಳಪು ಮತ್ತು ದಟ್ಟತೆಯನ್ನು ಸಹ ನೀಡುತ್ತದೆ.
ಅಲೋವೆರಾ ಕೇಶ ತೈಲ
ಅಲೋವೆರಾ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ತಡೆಗಟ್ಟುತ್ತದೆ. ಜೊತೆಗೆ ಶುಷ್ಕವಾದ ಕೂದಲಿನ ಬುಡಕ್ಕೆ ಆರೈಕೆ ನೀಡುತ್ತದಲ್ಲದೇ ಅನೇಕ ಅನುಕೂಲಗಳು ಇವೆ. ಇದು ನಿಮ್ಮ ಕೂದಲನ್ನು ಬಲಪಡಿಸುವುದಲ್ಲದೇ, ಪೋಷಿಸುತ್ತದೆ. ಜೊತೆಗೆ ಕೂದಲಿನ ಬುಡದಲ್ಲಿ ಮತ್ತು ಕೂದಲಿನ ಪಿಹೆಚ್ ಸಮತೋಲನವನ್ನು ಮರಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಅಲೋವೆರಾ ಕೇಶ ತೈಲ ತಯಾರಿಸುವ ವಿಧಾನ
ಮೊದಲಿಗೆ ಒಂದು ಪೂರ್ಣ ಅಲೋವೆರಾ ಎಲೆಯನ್ನು ಅರ್ಧಕ್ಕೆ ಕತ್ತರಿಸಿ ಎರಡು ಭಾಗವಾಗಿಸಿ. ಬಳಿಕ ಎಲೆಯಲ್ಲಿರುವ ಸಂಪೂರ್ಣ ಜೆಲ್ ಅನ್ನು ತೆಗೆದಿಟ್ಟುಕೊಳ್ಳಿ. ಅರ್ಧ ಕಪ್ನಷ್ಟು ಅಲೋವೆರಾ ಜೆಲ್ ತೆಗೆದುಕೊಳ್ಳಬೇಕು. ಇದಕ್ಕೆ ಅರ್ಧ ಕಪ್ನಷ್ಟು ಶುದ್ಧ ತೆಂಗಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣವನ್ನು 5 ರಿಂದ 7 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ತೈಲ ಮಿಶ್ರಣಕ್ಕೆ 5 ಹನಿ ರೋಸ್ಮೆರಿ ಎಸೆನ್ಷಿಯಲ್ ಎಣ್ಣೆಯನ್ನು ಸೇರಿಸಿ. ತಂಪಾದ ಸ್ಥಳದಲ್ಲಿ ಮತ್ತು ಗಾಢವಾದ ಬಾಟಲಿಯಲ್ಲಿ 2 ವಾರಗಳ ಕಾಲ ಸಂಗ್ರಹಿಸಿ ಇಡಬೇಕು. ಆ ನಂತರ ನಿಯಮಿತವಾಗಿ ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚುತ್ತಾ ಬನ್ನಿ, ಉತ್ತಮ ಪ್ರಯೋಜನ ಪಡೆದುಕೊಳ್ಳಿ.
ಇದನ್ನೂ ಓದಿ: ಕೂದಲು ಬೆಳ್ಳಗಾಗದಿರಲು ಈ ಆಹಾರಗಳನ್ನು ಸೇವಿಸಿದರೆ ಸಾಕು.. ಡೈ ಸಹವಾಸ ತಪ್ಪುತ್ತದೆ
ಆಮ್ಲ ಕೇಶ ತೈಲ
ಈ ಎಣ್ಣೆಯನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸಬಹುದು. ಹಾನಿಯಾದ ಕೂದಲು, ಬಾಲ ನೆರೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಲ್ಲದೇ ಕೂದಲಿನ ಬೆಳವಣಿಗೆಗೂ ಪ್ರಯೋಜನಕಾರಿಯಾಗಿದೆ. ಬುಡವನ್ನು ತಣ್ಣಗಿಟ್ಟು, ದಟ್ಟವಾದ ಕಪ್ಪು ಕೂದಲನ್ನು ಹೊಂದಲು ಪ್ರಯೋಜನಕಾರಿಯಾಗಿದೆ.
ಆಮ್ಲ ಕೇಶ ತೈಲ ತಯಾರಿಸುವ ವಿಧಾನ
2 ಆಮ್ಲವನ್ನು 4 ಭಾಗವಾಗಿ ಕತ್ತರಿಸಿಕೊಳ್ಳಬೇಕು. ಅದನ್ನು ನೆರಳಿನಲ್ಲಿ ಒಣಹಾಕಬೇಕು. ಒಂದು ಗಂಟೆಗಳ ಕಾಲ ಒಣಗಲು ಬಿಡಬೇಕು. ಈಗ 2 ಟೇಬಲ್ ಸ್ಪೂನ್ನಷ್ಟು ಎಳ್ಳೆಣ್ಣೆ, 4 ಟೇಬಲ್ ಸ್ಪೂನ್ನಷ್ಟು ಎಕ್ಸ್ಟ್ರಾ ವರ್ಜಿನ್ ತೆಂಗಿನ ಎಣ್ಣೆ ಮತ್ತು ಒಣಗಿಸಿದ ಆಮ್ಲವನ್ನು ಸೇರಿಸಬೇಕು. ಸಣ್ಣ ಉರಿಯಲ್ಲಿ ಬಬಲ್ಗಳು ಬರುವ ತನಕ ಬಿಸಿ ಮಾಡಬೇಕು. ಬಳಿಕ ತಣ್ಣಗಾಗಲು ಬಿಡಬೇಕು. ಇದನ್ನು ಡಾರ್ಕ್ ಬಾಟೆಲ್ನಲ್ಲಿ ಸಂಗ್ರಹಿಸಿಕೊಂಡು ಸೂರ್ಯನ ಕಿರಣ ಬೀಳದ ಕಡೆ ತಂಪಾದ ಸ್ಥಳದಲ್ಲಿ ಒಂದು ವಾರಗಳ ಕಾಲ ಇಡಬೇಕು. ಬಳಿಕ ಇದನ್ನು ಬಳಸಬಹುದು.
ದಾಸವಾಳದ ಕೇಶ ತೈಲ
ದಾಸವಾಳವು ವಿಟಮಿನ್ ಎ, ಸಿ ಮತ್ತು ಇನ್ನಿತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆ ಜೊತೆಗೆ ಹೊಸ ಕೂದಲು ಬರಲು ಸಹಕಾರಿಯಾಗಿದೆ. ಜೊತೆಗೆ ನಯವಾದ, ಹೊಳಪುಳ್ಳ ಕೇಶರಾಶಿ ಪಡೆಯಲು ನೆರವಾಗುತ್ತದೆ.
ದಾಸವಾಳ ಕೇಶ ತೈಲವನ್ನು ತಯಾರಿಸುವ ವಿಧಾನ
ಅರ್ಧ ಕಪ್ನಷ್ಟು ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ 2 ದಾಸವಾಳದ ಹೂಗಳನ್ನು ಸೇರಿಸಬೇಕು. ಇದನ್ನು ತಣ್ಣೀರಿನಲ್ಲಿ ತೊಳೆದು ಮತ್ತು ಅದನ್ನು ಸೂರ್ಯನ ಬಿಸಿಲು ಇಲ್ಲವೇ ಓವನ್ನಲ್ಲಿ ಒಣಗಿಸಿ. ಬಳಿಕ ಒಂದು ಪ್ಯಾನ್ಗೆ ಅರ್ಧ ಕಪ್ನಷ್ಟು ಸಾವಯವ ತೆಂಗಿನ ಎಣ್ಣೆ, ಅರ್ಧ ಕಪ್ನಷ್ಟು ಬಾದಾಮಿ ಎಣ್ಣೆ ಸೇರಿಸಿ, ಒಣಗಿಸಿಟ್ಟ ದಾಸವಾಳದ ದಳ ಮತ್ತು ಎಲೆಗಳನ್ನು ಸೇರಿಸಿ 5 ನಿಮಿಷ ಬಿಸಿ ಮಾಡಿ ಸ್ಟೌ ಆರಿಸಿ. ಈಗ ಎಣ್ಣೆ ತಣ್ಣಗಾಗುವವರೆಗೆ ಕಾಯಬೇಕು.
ಈಗ ತಣ್ಣಗಾದ ಎಣ್ಣೆಯನ್ನು ಒಂದು ಡಾರ್ಕ್ ಬಾಟೆಲ್ನಲ್ಲಿಟ್ಟು ಒಂದು ವಾರದ ತನಕ ತಂಪಾದ ಸ್ಥಳದಲ್ಲಿ ಇಡಬೇಕು. ಪ್ರತಿ ಬಾರಿ ನೀವು ಬಳಸುವ ಮುನ್ನ ಎಣ್ಣೆಯನ್ನು ಬೆಚ್ಚಗೆ ಮಾಡಿ ತಲೆಗೆ ಹಚ್ಚಿಕೊಳ್ಳಿ.
ಈರುಳ್ಳಿ ಕೇಶ ತೈಲ
ಈರುಳ್ಳಿಯಲ್ಲಿರುವ ಹೆಚ್ಚಿನ ಸಲ್ಫರ್ ಅಂಶವು ಕೂದಲಿನ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೂದಲು ಸಣ್ಣ ಆಗುವುದು, ತಲೆಹೊಟ್ಟು, ಬೊಕ್ಕ ತಲೆಗೆ ಪರಿಹಾರವಾಗಿದೆ. ಅಲ್ಲದೇ ಆ್ಯಂಟಿ ಬ್ಯಾಕ್ಟೀರಿಯಲ್ ಗುಣದಿಂದ ಕೂದಲಿನ ಬುಡದಲ್ಲಿ ಸೋಂಕನ್ನು ನಿವಾರಿಸುತ್ತದೆ. ವಿಟಮಿನ್ , ಮಿನರಲ್ ಭರಿತ ಈರುಳ್ಳಿಯೂ ಕೂದಲಿನ ಬುಡವನ್ನು ಭದ್ರಗೊಳಿಸುತ್ತದೆ. ಅಲ್ಲದೇ ದಟ್ಟವಾದ , ಶಕ್ತಿಯುತ ಕೇಶವನ್ನು ಹೊಂದಲು ಅನುಕೂಲಮಾಡಿಕೊಡುತ್ತದೆ.
ಈರುಳ್ಳಿ ಕೇಶ ತೈಲ ತಯಾರಿಸುವ ವಿಧಾನ
ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಇದಕ್ಕೆ 5 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ, 2 ಬೆಳ್ಳುಳ್ಳಿ ಎಸಳು, 2 ಲವಂಗ ಸೇರಿಸಿ ಒಂದು ಪ್ಯಾನ್ನಲ್ಲಿ ಬಿಸಿ ಮಾಡಿಕೊಳ್ಳಿ. ಎಣ್ಣೆಯಲ್ಲಿ ಬಬಲ್ ಬರಲು ಆರಂಭಿಸಿದ ಬಳಿಕ ಸ್ಟೌ ಆರಿಸಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ. ಬಳಿಕ 3-4 ಹನಿ ಲ್ಯಾವೆಂಡರ್, ರೋಸ್ಮೆರಿ ಎಸೆನ್ಷಿಯಲ್ ಎಣ್ಣೆ ಹಾಕಿ ಈ ಮಿಶ್ರಣವನ್ನು ರೆಫ್ರಿಜರೇಟರ್ನಲ್ಲಿ 10 ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಿ. ಬಳಿಕ ಇದನ್ನು ಬಳಸಲು ಆರಂಭಿಸಬಹುದು.
ನಿಮ್ಮ ಕೂದಲಿಗೆ ಈ ಎಣ್ಣೆಗಳನ್ನು ಹಾಕುವಾಗ ಎಚ್ಚರಿಕೆಯಿಂದ ಬಳಸಿ. ಕೂದಲಿನ ಬುಡಕ್ಕೆ ನಯವಾಗಿ ಹಚ್ಚಬೇಕು. ಬಲವಾಗಿ ಉಜ್ಜಿ ಮಸಾಜ್ ಮಾಡುವುದರಿಂದ ಕೂದಲುದುರುವಿಕೆ ಹೆಚ್ಚಾಗುತ್ತದೆ. ಕ್ಯೂಟಿಕಲ್ಸ್ನಲ್ಲಿ ಎಣ್ಣೆಯ ಕೊರತೆಯಿಂದ ಸಿಕ್ಕು ಉಂಟಾಗುತ್ತದೆ. ಆದ್ದರಿಂದ ಒಂದು ಹತ್ತಿಯನ್ನು ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಅದ್ದಿ ಕೂದಲನ್ನು ಎರಡು ಭಾಗವಾಗಿ ಮಾಡಿಕೊಂಡು ಬುಡಕ್ಕೆ ನಿಧಾನವಾಗಿ ಹಚ್ಚಬೇಕು. ಹತ್ತಿಯೂ ಕೂದಲು ಎಣ್ಣೆಯನ್ನು ಹೀರಿಕೊಳ್ಳಲು ಕ್ಯೂಟಿಕಲ್ಸ್ಗೆ ಸಹಾಯ ಮಾಡುತ್ತದೆ. ಆ ಮೂಲಕ ಸಂಪೂರ್ಣ ಕೂದಲಿಗೆ ಎಣ್ಣೆ ತಲುಪುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ