ಮಳೆಗಾಲದ ತಂಪು ವಾತಾವರಣ ಮನಸ್ಸಿಗೆ ಅಹ್ಲಾದ ನೀಡುತ್ತದೆ. ಹಾಗಂತ ಇದು ಕೇವಲ ಸಂತೋಷಪಟ್ಟುಕೊಂಡು ಕುಳಿತುಕೊಳ್ಳುವ ಋತುವಲ್ಲ, ನಮ್ಮ ಮನೆಯನ್ನು ವಾತಾವರಣದ ಬದಲಾವಣೆಯಿಂದ ಎದುರಾಗುವ ಸಮಸ್ಯೆಗಳಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತು ಇಲ್ಲಿದೆ ಮಾಹಿತಿ.
1. ಎಲ್ಲವನ್ನು ಬದಲಾಯಿಸಿ
ಬೆಡ್ ಕವರ್, ಪರದೆಗಳು, ಟವೆಲ್ ಸೇರಿದಂತೆ ಎಲ್ಲವನ್ನು ನಿತ್ಯವೂ ಬದಲಾಯಿಸಿ. ಒಗೆದು ಒಣಗಿಸುವುದು ಕಷ್ಟವಾಗಬಹುದು, ಹಾಗಂತ ಅದನ್ನೇ ನೆಪ ಮಾಡಿಕೊಳ್ಳಬೇಡಿ. ಅಗತ್ಯವಿದ್ದರೆ ಡ್ರೈ ಕ್ಲೀನ್ ಮಾಡಿಸಿ. ಇಲ್ಲವಾದಲ್ಲಿ ಮನೆಯಲ್ಲಿ ಕೊಳಕು ಅಥವಾ ದುರ್ವಾಸನೆ ಇರುತ್ತದೆ.
2. ಪರಿಮಳ ಬೀರಿ
ಮಳೆಗಾಲದಲ್ಲಿ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ನಿತ್ಯ ಮನೆಯನ್ನು ಸ್ವಚ್ಚಗೊಳಿಸುವುದು ಅತ್ಯಂತ ಅಗತ್ಯ. ಮನೆಯ ಎಲ್ಲಾ ಕೋಣೆಗಳಲ್ಲಿ, ಪುಟ್ಟ ಬೌಲ್ನಲ್ಲಿ ಒಣಗಿದ ಹೂವಿನ ಎಸಳುಗಳಿಗೆ ಎಸೆನ್ಶಿಯಲ್ ತೈಲಗಳ ಕೆಲವು ಹನಿಗಳನ್ನು ಹಾಕಿಡಿ. ಮನೆಯೆಲ್ಲಾ ಪರಿಮಳ ಭರಿತವಾಗಿರುತ್ತದೆ.
3. ಗಿಡಗಳನ್ನು ಹೊರಗಿಡಿ
ಈ ವಾತಾವರಣದಲ್ಲಿ ಸೂರ್ಯನ ಬೆಳಕು ಸರಿಯಾಗಿ ಬೀಳುವುದಿಲ್ಲ, ಹಾಗಾಗಿ ಗಿಡಗಳನ್ನು ಮನೆಯೊಳಗಿಡುವುದು ಬೇಡ. ಎಲೆಗಳು ಕೀಟಗಳು ಮತ್ತು ಹುಳುಗಳನ್ನು ಮನೆಯೊಳಗೆ ಆಕರ್ಷಿಸಬಹುದು. ಆದ್ದರಿಂದ ಗಿಡಗಳನ್ನು ಬಾಲ್ಕನಿಯಲ್ಲಿ ಇಡಿ.
4. ನೆಲದ ಸ್ವಚ್ಚತೆ
ಮಳೆಗಾಲದಲ್ಲಿ ಕಾರ್ಪೆಟ್ಗಳ ನಿರ್ವಹಣೆ ಕಷ್ಟಕರ. ಅವು ತೇವಾಂಶ ಮತ್ತು ಧೂಳನ್ನು ಹೀರಿಕೊಂಡು ದುರ್ವಾಸನೆ ಬೀರಬಹುದು. ಅದಕ್ಕಾಗಿ ನಿತ್ಯವೂ ವ್ಯಾಕ್ಯೂಮ್ ಮಾಡಬೇಕಾಗಬಹುದು. ದುಬಾರಿ ನೆಲಹಾಸುಗಳನ್ನು ಒಳಗಿಟ್ಟು ನಿತ್ಯಬಳಕೆಗೆ ಸೂಕ್ತವಾದದ್ದನ್ನು ತನ್ನಿ. ನೆಲಹಾಸುಗಳನ್ನು ಬಳಸದಿದ್ದರೂ ಚಿಂತೆಯಿಲ್ಲ, ನಿಮ್ಮ ಸಮಯ ಮತ್ತು ಶ್ರಮ ಉಳಿಯುತ್ತದಲ್ಲ.
5. ಸಂಪೂರ್ಣ ಸರ್ಕ್ಯೂಟ್
ಗುಡುಗು ಮತ್ತು ಮಿಂಚಿನಿಂದಾಗಿ ವಿದ್ಯುತ್ ಏರಿಳಿತಕ್ಕೆ ಕಾರಣವಾಗುತ್ತವೆ. ಎಲೆಕ್ಟ್ರಿಶಿಯನ್ನನ್ನು ಕರೆಸಿ ಮನೆಯ ವಯರಿಂಗ್ ಪರಿಶೀಲನೆ ಮಾಡಿಸಿ ಮತ್ತು ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗದಂತೆ ನೋಡಿಕೊಳ್ಳಿ. ಸ್ವಿಚ್ಬೋರ್ಡ್ಗಳ ಬಳಿ ಸೋರಿಕೆ ಆಗದಂತೆ ನೋಡಿಕೊಳ್ಳಿ.
6. ಪುಸ್ತಕಗಳ ರಕ್ಷಣೆ
ನೀವು ಪುಸ್ತಕ ಪ್ರೇಮಿಗಳಾಗಿದ್ದರೆ ಅವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವುದು ತಿಳಿದೇ ಇರುತ್ತದೆ. ಮಳೆಗಾಲದ ಕ್ರಿಮಿಕೀಟಗಳು ಮತ್ತು ತೇವಾಂಶದಿಂದ ನಿಮ್ಮ ಪುಸ್ತಕಗಳನ್ನು ಕಾಪಾಡಲು, ಬುಕ್ಶೆಲ್ಫ್ನ ಎಲ್ಲಾ ಮೂಲೆಗಳಲ್ಲೂ ನೆಫ್ತಾಲಿನ್ ಗುಳಿಗೆಗಳು ಮತ್ತು ಸಿಲಿಕಾ ಜೆಲ್ ಪೌಚ್ಗಳನ್ನು ಇಡಬಹುದು.
7. ಸೋರಿಕೆ ತಡೆಯಿರಿ
ಮಳೆಗಾಲ ಆರಂಭವಾಗುವ ಮೊದಲೇ ಮನೆಯಲ್ಲಿ ಸೋರಿಕೆ ಎಲ್ಲೆಲ್ಲಿ ಆಗುತ್ತದೆ ಎಂಬುದನ್ನು ಪರಿಶೀಲಿಸಿ. ಮತ್ತು ಸರಿಪಡಿಸಲು ಕ್ರಮ ಕೈಗೊಳ್ಳಿ.
8. ಗಾಳಿಯಾಡಲು ಬಿಡಿ
ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಸರಿಯಾಗಿ ನಿರ್ವಹಿಸದಿದ್ದರೆ ನಿಮ್ಮ ಮನೆಯ ವಸ್ತುಗಳೆಲ್ಲವೂ ತೇವ, ದುರ್ವಾಸನೆಗೆ ಒಳಗಾಗಬಹುದು. ಆದ್ದರಿಂದ ಮನೆಯೊಳಗೆ ಗಾಳಿಯಾಡುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಕಿಟಕಿಗಳನ್ನು ತೆಗೆದಿಡಿ.
9. ನವೀಕರಣ ಬೇಡ
ಮಳೆಗಾಲ ಸಮೀಪಿಸುತ್ತಿರುವಾಗಲೇ ನವೀಕರಣ ಆರಂಭಿಸುವುದು ಒಳ್ಳೆಯ ಕ್ರಮವಲ್ಲ. ಸಾಧ್ಯವಾದರೆ ಮುಂದಿನ ವರ್ಷ ಅದಕ್ಕೆಲ್ಲಾ ಮುಂಚಿತವಾಗಿ ಯೋಜನೆ ತಯಾರಿಸಿ, ಆಗ ಮೇ ತಿಂಗಳಿಗಿಂತ ಮೊದಲೇ ನವೀಕರಣದ ಕೆಲಸಗಳನ್ನು ಮುಗಿಸಬಹುದು.
10. ಮರದ ಪೀಠೋಪಕರಣಗಳ ರಕ್ಷಣೆ
ಮಳೆಗಾಲದಲ್ಲಿ ಮರದ ಸಾಮಾನುಗಳು ತೇವಾಂಶ ಹೀರಿಕೊಳ್ಳುತ್ತವೆ ಮತ್ತು ಊದಿಕೊಳ್ಳುತ್ತವೆ. ನಿಮ್ಮ ಪೀಠೋಪಕರಣಗಳನ್ನು ತೇವಾಂಶದಿಂದ ಮತ್ತು ಗೆದ್ದಲುಗಳಿಂದ ರಕ್ಷಿಸಲು ವ್ಯಾಕ್ಸಿಂಗ್ ಉತ್ತಮ ಪರಿಹಾರ. ಬಾಗಿಲು , ಕಿಟಕಿಗಳು ಊದಿಕೊಂಡು ಮುಚ್ಚಲು ಕಷ್ಟವಾದರೆ ಸ್ಯಾಂಡ್ ಪೇಪರ್ ಬಳಸಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ