• Home
  • »
  • News
  • »
  • lifestyle
  • »
  • Indian Railway: ವಿಶ್ವ ಪಾರಂಪರಿಕ ತಾಣ ಎಂದು ಹೆಸರು ಪಡೆದ ಐತಿಹಾಸಿಕ ಭಾರತೀಯ ರೈಲು ನಿಲ್ದಾಣಗಳಿವು

Indian Railway: ವಿಶ್ವ ಪಾರಂಪರಿಕ ತಾಣ ಎಂದು ಹೆಸರು ಪಡೆದ ಐತಿಹಾಸಿಕ ಭಾರತೀಯ ರೈಲು ನಿಲ್ದಾಣಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Historic Indian Railway Stations: ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದಿರುವಭಾರತದ ರೈಲು ಮಾರ್ಗಗಳು, ರೈಲು ನಿಲ್ದಾಣಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • Share this:

ಭಾರತೀಯ ರೈಲ್ವೇಯು (Indian Railway) ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು (History) ಹೊಂದಿದೆ. 170 ವರ್ಷಗಳ ಹಿಂದೆ ಅಂದರೆ 1845ರಲ್ಲಿ ಸ್ಥಾಪನೆಯಾದ ರೈಲ್ವೇಗಳು ಇಂದಿನವರೆಗೂ ದೇಶದ ಪ್ರಯಾಣಿಕರ ಪ್ರಥಮ ಆಯ್ಕೆಯ ಸಂಚಾರ ವ್ಯವಸ್ಥೆಯಾಗಿದೆ. ಬಜೆಟ್‌ ಸ್ನೇಹಿಯಾಗಿರುವ ರೈಲು ಯಾವಾಗಲೂ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತದೆ. ರೈಲು ವ್ಯವಸ್ಥೆ ಎಷ್ಟು ಜನಪ್ರಿಯವಾಗಿದೆಯೋ, ಅದರಂತೆ ಕೆಲ ರೈಲು ಮಾರ್ಗಗಳು, ರೈಲು ನಿಲ್ದಾಣಗಳು ಸಹ ಸಾಕಷ್ಟು ಜನಪ್ರಿಯತೆ ಹೊಂದಿವೆ. ಕೇವಲ ಜನಪ್ರಿಯತೆ ಅಲ್ಲ ಅವು ಪ್ರತಿಷ್ಠಿತ ಯುನೆಸ್ಕೋದ  (UNESCO) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೂ ಸಹ ಸೇರಿಕೊಂಡಿವೆ.


ಹಾಗಾದರೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದಿರುವ ರೈಲು ಮಾರ್ಗಗಳು, ರೈಲು ನಿಲ್ದಾಣಗಳು ಯಾವುವು ಎಂದು ಇಲ್ಲಿ ತಿಳಿಯೋಣ.


1. ದಾರ್ಜಿಲಿಂಗ್ ಹಿಮಾಲಯನ್ ರೈಲ್ವೆ
ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ 1879 ಮತ್ತು 1881ರ ನಡುವೆ ನಿರ್ಮಿಸಲಾದ ದಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯು ಭಾರತದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ದಾರ್ಜಿಲಿಂಗ್ ನಡುವೆ ಚಲಿಸುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ.


ಇದು ಸುಮಾರು 88 ಕಿಮೀ ಉದ್ದದವರೆಗೆ ವಿಸ್ತರಿಸುತ್ತದೆ ಮತ್ತು ಎತ್ತರದ ಭೂಪ್ರದೇಶದ ಮೇಲೆ ಚಲಿಸುತ್ತದೆ. ಈ ಮಾರ್ಗದ ಹಳಿಗಳ ನಡುವಿನ ಅಂತರ ಕೇವಲ ಎರಡು ಅಡಿಗಳಿದ್ದು ಇದರ ಮೇಲೆ ಸಾಗುವ ರೈಲನ್ನು ಆಟಿಗೆ ರೈಲು (ಟಾಯ್‌ ಟ್ರೇನ್) ಎಂದು ಸಹ ಕರೆಯಲಾಗುತ್ತದೆ.


ಈ ರೈಲಿನಲ್ಲಿ ಪ್ರಯಾಣಿಸಿದರೆ ನೀವು, ಹಿಮಾಲಯ ಮತ್ತು ಹತ್ತಿರದ ಬೆಟ್ಟಗಳ ವಿಹಂಗಮ ನೋಟಗಳನ್ನು ಸವಿಯಬಹುದು. ಈ ರೈಲು ಮಾರ್ಗವು 1999 ರಲ್ಲಿ UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಕೊಂಡಿತು. ಈ ಮೂಲಕ ಏಷ್ಯಾದಲ್ಲಿ ಈ ಗೌರವವನ್ನು ಪಡೆದ ಮೊದಲ ರೈಲ್ವೆಯಾಗಿದೆ.


2. ನೀಲಗಿರಿ ಮೌಂಟೇನ್ ರೈಲ್ವೆ
1908 ರಲ್ಲಿ ತೆರೆಯಲಾದ ನೀಲಗಿರಿ ಪರ್ವತ ರೈಲುಮಾರ್ಗವು ಬ್ರಿಟಿಷ್ ರಾಜ್‌ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಊಟಿ ಗಿರಿಧಾಮಕ್ಕೆ ಪ್ರಯಾಣಿಸಲು ಮತ್ತು ಹವಾಮಾನವನ್ನು ಆನಂದಿಸಲು ಆಗ ಬ್ರಿಟಿಷರು ಟಾಯ್ ಟ್ರೈನ್ ಅನ್ನು ನಿರ್ಮಿಸಿದರು.
ಈ ರೈಲುಮಾರ್ಗವು 326 ಮೀಟರ್‌ಗಳಿಂದ 2,203 ಮೀಟರ್‌ಗಳಷ್ಟು ಎತ್ತರದಲ್ಲಿನ ಭಾರತದ ತಮಿಳುನಾಡು ರಾಜ್ಯದ ಮೆಟ್ಟುಪಾಳಯಮ್‌ ಇಂದ ಉದಕಮಂಡಲ ಗಿರಿಧಾಮಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ.


ಈ ರೈಲು, ಊಟಿಯ ಸುಂದರ ಪರ್ವತಗಳನ್ನು ಹಾದು ಕೂನೂರ್ ಮೂಲಕ ಮೆಟ್ಟುಪಾಳ್ಯಂಗೆ ಸಾಗುತ್ತದೆ. ಈ ರೈಲಿನಲ್ಲಿ ನೀವು ಪ್ರಯಾಣಿಸಿದರೆ ಮಂಜಿನಿಂದ ಆವೃತವಾದ ಬೆಟ್ಟಗಳು, ಹಚ್ಚ ಹಸಿರಿನ ಭೂಮಿಗಳು, ದಟ್ಟವಾದ ಕಾಡುಗಳು ಮತ್ತು ಕಿರಿದಾದ ಕಣಿವೆಗಳ ಭವ್ಯವಾದ ನೋಟವನ್ನು ಸವಿಯಬಹುದು.


ಯುನೆಸ್ಕೋ 2005ರಲ್ಲಿ ನೀಲಗಿರಿ ಮೌಂಟೇನ್ ರೈಲ್ವೆ (NMR) ಆಟಿಕೆ ರೈಲನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.


3. ಕಲ್ಕಾ ಶಿಮ್ಲಾ ರೈಲ್ವೆ
ಶಿಮ್ಲಾ 1864 ರಲ್ಲಿ ಬ್ರಿಟಿಷ್ ಭಾರತದ ಬೇಸಿಗೆಯ ರಾಜಧಾನಿಯಾಗಿತ್ತು ಮತ್ತು ಭಾರತದಲ್ಲಿ ಬ್ರಿಟಿಷ್ ಸೈನ್ಯದ ಪ್ರಧಾನ ಕಛೇರಿಯಾಗಿತ್ತು. ಕಲ್ಕಾ ಶಿಮ್ಲಾ ರೈಲುಮಾರ್ಗವನ್ನು ಬ್ರಿಟಿಷರು 1898 ಮತ್ತು 1903 ರ ನಡುವೆ ನಿರ್ಮಿಸಿದರು. ಈ ಐಕಾನಿಕ್ ರೈಲು ಮಾರ್ಗವು ಹಿಮಾಲಯ ಶ್ರೇಣಿಗಳ ಅದ್ಭುತ ನೋಟಗಳಿಗೆ ಹೆಸರುವಾಸಿಯಾಗಿದೆ.


ಇದು ಹಿಮಾಚಲ ಪ್ರದೇಶದ ಕಲ್ಕಾ ಮತ್ತು ಶಿಮ್ಲಾದ ಪರ್ವತ ಮಾರ್ಗದ ನಡುವಿನ 96.6 ಕಿಲೋಮೀಟರ್ ಉದ್ದದ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ. ಈ ರೈಲುಮಾರ್ಗವು ವಿಶ್ವದಲ್ಲಿಯೇ ಅತಿ ಹೆಚ್ಚು ಕಡಿದಾದ ರೈಲು ಹಾದಿಯೆನಿಸಿದೆ.


ಈ ಮಾರ್ಗವನ್ನು ಜುಲೈ 2008ರಲ್ಲಿ ಯುನೆಸ್ಕೋ, ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಈ ರೈಲುಮಾರ್ಗ ಪ್ರಯಾಣಿಕರಿಗೆ ತೋರಿಸುತ್ತದೆ


ಇದನ್ನೂ ಓದಿ: ತೂಕ ಇಳಿಸೋಕೆ ಊಟ ಬಿಡೋದು ಈ ಸಮಸ್ಯೆಗಳಿಗೆ ಕಾರಣವಾಗಬಹುದು


4. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್
ಛತ್ರಪತಿ ಶಿವಾಜಿ ಟರ್ಮಿನಸ್ ಯು 1888 ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ.


ಇದು ಈಗ ಮುಂಬಯಿಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿದೆ. ಟರ್ಮಿನಸ್​ ರಚನೆಯನ್ನು 1800 ರ ದಶಕದ ಉತ್ತರಾರ್ಧದಲ್ಲಿ ಇಟಾಲಿಯನ್ ಗೋಥಿಕ್ ಶೈಲಿಯಲ್ಲಿ F.W. ಸ್ಟೀವನ್ಸ್ ಎಂಬ ಬ್ರಿಟಿಷ್ ವಾಸ್ತುಶಿಲ್ಪದ ಎಂಜಿನಿಯರ್ ವಿನ್ಯಾಸಗೊಳಿಸಿದರು.


1878 ರಲ್ಲಿ ಪ್ರಾರಂಭವಾಗಿ, ಬೋರಿ ಬಂದರ್ ಟರ್ಮಿನಸ್ ಬದಲಿಗೆ ನಿರ್ಮಿಸಲಾದ ಟರ್ಮಿನಸ್​​  ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು 10 ವರ್ಷಗಳನ್ನು ತೆಗೆದುಕೊಂಡಿತು ಮತ್ತು ವಿಕ್ಟೋರಿಯಾ ರಾಣಿಯ ಸುವರ್ಣ ಮಹೋತ್ಸವದ ನೆನಪಿಗಾಗಿ ವಿಕ್ಟೋರಿಯಾ ಟರ್ಮಿನಸ್​​  ಎಂದು ಹೆಸರಿಸಲಾಯಿತು. ನಂತರ 1996 ರಲ್ಲಿ, ಮಹಾನ್ ಮರಾಠ ಚಕ್ರವರ್ತಿಯನ್ನು ಗೌರವಿಸಲು ಇದನ್ನು ಛತ್ರಪತಿ ಶಿವಾಜಿ ಟರ್ಮಿನಸ್​​ ಎಂದು ಮರುನಾಮಕರಣ ಮಾಡಲಾಯಿತು.


ಸುಂದರವಾದ ಕಲ್ಲಿನ ಗುಮ್ಮಟ, ಗೋಪುರಗಳು, ಮೊನಚಾದ ಕಮಾನುಗಳು ಮತ್ತು ಸಾಂಪ್ರದಾಯಿಕ ಭಾರತೀಯ ಅರಮನೆಯ ವಾಸ್ತುಶಿಲ್ಪಕ್ಕೆ ಇದು ಹೆಸರುವಾಸಿಯಾಗಿದೆ.


ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡವರನ್ನೂ ಬಿಡಲ್ಲ ಕೊರೋನಾ, ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ


ಈ ರೈಲು ನಿಲ್ದಾಣ ಬ್ರಿಟಿಷ್ ಮತ್ತು ಭಾರತೀಯ ಸಂಸ್ಕೃತಿಗಳ ಸಮ್ಮಿಲನವಾಗಿದೆ. 20 04ರಲ್ಲಿ ಈ ರೈಲ್ವೆ ನಿಲ್ದಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಿತು.

Published by:Sandhya M
First published: