ಬೊಜ್ಜಿನ ಸಮಸ್ಯೆಗೆ ಈ ಆಹಾರ ಕೂಡ ಕಾರಣವಾಗಬಹುದು

news18
Updated:September 25, 2018, 1:06 PM IST
ಬೊಜ್ಜಿನ ಸಮಸ್ಯೆಗೆ ಈ ಆಹಾರ ಕೂಡ ಕಾರಣವಾಗಬಹುದು
news18
Updated: September 25, 2018, 1:06 PM IST
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮೊಸರಿನಿಂದ ತಯಾರಿಸಿದ ಆಹಾರ ಉತ್ಪನ್ನಗಳು ದೇಹವನ್ನು ತಂಪಾಗಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಸರಿನಿಂದ ತಯಾರಿಸಲಾಗುವ ಯೋಗರ್ಟ್​ ಉತ್ಪನ್ನಗಳು ಹಲವು ಬಗೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆರೋಗ್ಯದ ಹಿತ ದೃಷ್ಟಿಯಿಂದ ಹೆಚ್ಚಿನವರು ಇಂತಹ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಬಾಯಿಯ ರುಚಿ ಹೆಚ್ಚಿಸುವ ಯೋಗರ್ಟ್​ ಉತ್ಪನ್ನಗಳಿಂದ ಕೂಡ  ಸ್ಥೂಲಕಾಯತೆ ಸಮಸ್ಯೆ ಉಂಟಾಗುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಸಕ್ಕರೆಯುಕ್ತ ಯೋಗರ್ಟ್​ಗಳನ್ನು ಸೇವಿಸುವುದರಿಂದ ದೇಹ ತೂಕ ಹೆಚ್ಚುವುದಲ್ಲದೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬ್ರಿಟನ್​ನ ಯುನಿವರ್ಸಿಟಿ ಆಫ್ ಲೀಡ್ಸ್​ನ ಸಂಶೋಧಕರು ನಡೆಸಿದ ಈ ಅಧ್ಯಯನದಿಂದ ಯೋಗರ್ಟ್​ ಉತ್ಪನ್ನಗಳಲ್ಲಿ ಸಕ್ಕರೆ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂಬುದು ಸಾಬೀತಾಗಿದೆ. ಈ ಅಧ್ಯಯನಕ್ಕಾಗಿ 900 ವಿಧದ ಯೋಗರ್ಟ್​ ಉತ್ಪನ್ನಗಳನ್ನು ಸಂಶೋಧಕರು ವಿಶ್ಲೇಷಿಸಿದ್ದು, ಅದರಲ್ಲಿ ಕೇವಲ 10 ಉತ್ಪನ್ನಗಳಲ್ಲಿ ಮಾತ್ರ ಕಡಿಮೆ ಪ್ರಮಾಣ ಸಕ್ಕರೆ ಅಂಶ ಇರುವುದು ಪತ್ತೆಯಾಗಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.

ಈ ಸಂಶೋಧನೆಯಲ್ಲಿ ಮಕ್ಕಳಿಗೆ ನೀಡಲಾಗುವ ಯೋಗರ್ಟ್​ಗಳಲ್ಲೂ ಹೆಚ್ಚಿನ ಸಕ್ಕರೆ ಅಂಶ ಕಂಡು ಬಂದಿದ್ದು, ಇದರಿಂದಾಗಿ ಬಾಲ್ಯದಲ್ಲೇ ಮಕ್ಕಳು ಬೊಜ್ಜಿನ ಸಮಸ್ಯೆಗೆ ಈಡಾಗುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. 'ಮಕ್ಕಳು ಮತ್ತು ವಯಸ್ಕರ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಅನಾರೋಗ್ಯ ಉಂಟಾಗುತ್ತದೆ. ಆರೋಗ್ಯ ಪೂರ್ಣ ಆಹಾರವೆಂದು ಗುರುತಿಸಲಾಗುವ ಯೋಗರ್ಟ್​​ನಿಂದಲೇ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಚಿಂತೆಯ ವಿಷಯವಾಗಿದೆ' ಎಂದು ಸಂಶೋಧಕ ಜೆ.ಬೆರ್ನಡೆಟ್ಟೆ ತಿಳಿಸಿದ್ದಾರೆ.

ಯೋಗರ್ಟ್​ ಉತ್ಪನ್ನಗಳಲ್ಲಿ ಡಿಸರ್ಟ್​ ವಿಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶಗಳು ಕಂಡು ಬಂದಿದ್ದು, ಸುಮಾರು 100 ಗ್ರಾಂಗಳಲ್ಲಿ 13.1 ಗ್ರಾಂ ಸಕ್ಕರೆಯಂಶ ಹೊಂದಿತ್ತು. ಇದರಿಂದ ದೇಹದಲ್ಲಿ ಕೊಬ್ಬಿನಾಂಶವು ಹೆಚ್ಚಾಗುತ್ತದೆ. ಈ ಅಧ್ಯಯನದಿಂದ ಎಲ್ಲ ಯೋಗರ್ಟ್ ಉತ್ಪನ್ನಗಳು ಆರೋಗ್ಯಕರವಾಗಿರುವುದಿಲ್ಲ ಎಂದು ತಿಳಿದು ಬಂದಿದ್ದು, ಸಕ್ಕರೆ ಪ್ರಮಾಣವು ಕಡಿಮೆ ಇರುವ ಮೊಸರಿನ ಉತ್ಪನ್ನಗಳ ಸೇವಿಸುವುದು ಉತ್ತಮ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೆಚ್ಚಿನವರು ಸಿಹಿ ಯೋಗರ್ಟ್​ಗೆ ಹೊಂದಿಕೊಂಡಿದ್ದು, ಗ್ರಾಹಕರು ತಮ್ಮ ರುಚಿಯನ್ನು ಬದಲಿಸುವುದು ಸ್ವಲ್ಪ ಮಟ್ಟಿಗೆ ಸವಾಲಿನ ಕೆಲಸವಾಗಿದೆ. ಆದರೆ ಆರೋಗ್ಯದ ಮೇಲಿನ ದುಷ್ಪರಿಣಾಮಗಳನ್ನು ಗಮನದಲ್ಲಿರಿಸಿ ಸಕ್ಕರೆಯುಕ್ತ ಯೋಗರ್ಟ್​ ಬಳಕೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಎಂದು ಸಂಶೋಧನಾ ತಂಡದ ಅನ್ನಾಬೆಲ್ಲೆ ಹೋರ್ಟಿ ಅಭಿಪ್ರಾಯ ಪಟ್ಟಿದ್ದಾರೆ.
First published:September 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ