ಬಹುತೇಕ ಜನರಿಗೆ ಚೆರ್ರಿ ಹಣ್ಣುಗಳು ಎಂದರೆ ಬಹಳ ಇಷ್ಟ. ಈ ಹಣ್ಣು ಹುಳಿ ಮತ್ತು ಸಿಹಿಯ ಮಿಶ್ರಣ. ಇದು ಕೆಲವೊಂದು ಸಿಹಿ ಆಹಾರ ಪದಾರ್ಥದೊಂದಿಗೆ ಹೆಚ್ಚಿನ ರುಚಿ ನೀಡುತ್ತದೆ. ಇವುಗಳನ್ನು ಕೇಕ್, ಟಾರ್ಟ್ಸ್, ಪೈ ಮತ್ತು ಚೀಸ್ ಕೇಕ್ ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಕೇವಲ ರುಚಿಯನ್ನು ನೀಡುವುದಲ್ಲದೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆರೋಗ್ಯಕರ ಸೂಪರ್ಫುಡ್ಗಳಲ್ಲಿ ಒಂದು ಎಂದು ಕರೆಯಲ್ಪಡುವ ಚೆರ್ರಿಗಳು ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿವೆ. ಏಕೆಂದರೆ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ. ಈ ಹಣ್ಣುಗಳನ್ನು ಹಲವಾರು ಆರೋಗ್ಯ ಸಮಸ್ಯೆಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿರುವ ಮೆಲಟೋನಿನ್ ಅಂಶ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಹಣ್ಣು ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಚೆರ್ರಿಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇದ್ದು ಅದು ಒಳ್ಳೆಯ ನಿದ್ರೆಗೆ ಕಾರಣವಾಗುತ್ತದೆ. ಮೆಲಟೋನಿನ್ ಮೆದುಳಿನಲ್ಲಿರುವ ಪೀನಿಯಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್. ಇದು ನಿಮ್ಮ ನಿದ್ರೆ ಮತ್ತು ಎಚ್ಚರ ಚಕ್ರಗಳನ್ನು ನಿಯಂತ್ರಿಸುತ್ತದೆ ಮತ್ತು ಆಂತರಿಕ ದೇಹದ ಗಡಿಯಾರವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಹಣ್ಣು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ನೀವು ಸ್ವಲ್ಪ ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಿ ಸೇವಿಸಲು ಮರೆಯಬೇಡಿ. ಚೆರ್ರಿಗಳಲ್ಲಿ ಕಡಿಮೆ ಕ್ಯಾಲೋರಿಗಳಿದೆ. ಅಂದರೆ ಒಂದು ಕಪ್ ಚೆರ್ರಿಗಳು 100 ಕ್ಯಾಲೋರಿಗಳಿಗಿಂತ ಕಡಿಮೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಹಣ್ಣು ನಿಮ್ಮ ಚಯಾಪಚಯ ಕ್ರಿಯೆಯನ್ನು ಬಲಪಡಿಸುವ ವಿಟಮಿನ್ಗಳನ್ನು ಹೊಂದಿದೆ. ಅಲ್ಲದೇ ನಿಮ್ಮ ದೇಹದಲ್ಲಿರುವ ವಿಷದ ಅಂಶಗಳನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಎಣ್ಣೆ ಚರ್ಮದಿಂದ ಮುಕ್ತಿ ಬೇಕಾ? ಹಾಗಾದ್ರೆ ಹೀಗೆ ಮಾಡಿ.
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಚೆರ್ರಿಗಳು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ ಹೀಗಾಗಿ ದೇಹದಿಂದ ಹೆಚ್ಚುವರಿ ಸೋಡಿಯಂ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಇದು ದೇಹದಲ್ಲಿನ ಪೊಟ್ಯಾಸಿಯಮ್ ಮತ್ತು ಸೋಡಿಯಂ ಎರಡರ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಎರೆಡರ ಮಟ್ಟ ಸಮತೋಲಿತವಾದಾಗ ನಿಮ್ಮ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ. ಆಂಥೋಸಯಾನಿನ್ಸ್ ಎಂದು ಕರೆಯಲ್ಪಡುವ ಚೆರ್ರಿಗಳಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಿ, ಹಲವಾರು ಸಮಸ್ಯೆಗಳನ್ನು ತಂದೊಡ್ಡುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ತೊಂದರೆ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ಈ ಹಣ್ಣುಗಳು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಅಲ್ಲದೇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚೆರ್ರಿಗಳು ನಿಮ್ಮ ಚರ್ಮದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಅದು ಸೂರ್ಯನ ಕಿರಣಗಳಿಂದ ಉಂಟಾಗುವ ತೊಂದರೆಯನ್ನು ಸಹ ನಿವಾರಿಸುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಚೆರ್ರಿಗಳನ್ನು ಪೇಸ್ಟ್ ಮಾಡಿ ಮತ್ತು ಅವುಗಳಿಗೆ ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ತೊಳೆಯಿರಿ. ಇದು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ. ಇವುಗಳ ಜೊತೆಗೆ ಚೆರ್ರಿಗಳು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವ ಹಣ್ಣು ಎಂದು ಹೇಳಲಾಗುತ್ತದೆ. ಅವು ರಕ್ತ ಕಣಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ