Rasam Recipe: ಟೊಮ್ಯಾಟೋ ಇಲ್ಲದೆಯೂ ಮಾಡಬಹುದು ಸೂಪರ್ ರಸಂ, ಮಾಡುವ ವಿಧಾನ ಇಲ್ಲಿದೆ

Rasam Without Tomato: ಇದೊಂದೇ ಅಲ್ಲ ಟೊಮ್ಯಾಟೋ  ಹಾಕದೇ ಹಲವಾರು ರೀತಿಯ ರಸಂಗಳನ್ನು ತಯಾರಿಸಬಹುದು. ಕೇವಲ ಬೇಳೆ ರಸಂ, ಕಾಳು ಮೆಣಸಿನ ರಸಂ, ಜೀರಿಗೆ ರಸಂ ಹೀಗೆ ವಿಭಿನ್ನ ಹಾಗೂ ರುಚಿಕರವಾದ ರಸಂಗಳನ್ನು ತಯಾರಿಸಬಹುದು.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ(Karnataka)ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ(Heavy Rainfall) ಪರಿಣಾಮ ತರಕಾರಿ ಬೆಲೆಗಳ(Vegetables Rate) ಮೇಲೆ ಸಹ ಬೀರಿದೆ. ಈ ಕಾರಣದಿಂದ ಟೊಮ್ಯಾಟೋ(Tomato) ಬೆಲೆ ಗಗನಕ್ಕೆರಿದೆ. ಈ ಟೊಮ್ಯಾಟೋವನ್ನು ಪ್ರತಿಯೊಬ್ಬರ ಮನೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಬೇರೆ ತರಕಾರಿ ಇಲ್ಲ ಎಂದಾಗ ಸಹಾಯಕ್ಕೆ ಬರುವುದು ಇದೇ ಟೊಮ್ಯಾಟೋ. ಟೊಮ್ಯಾಟೋ ರಸಂ, ಟೊಮ್ಯಾಟೋ ಬಾತ್ ಹೀಗೆ ಅದರಿಂದ ಹಲವು ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಒಂದರ್ಥದಲ್ಲಿ ಟೊಮ್ಯಾಟೊ ಇಲ್ಲದೇ ಅಡುಗೆಯೇ ಇಲ್ಲ ಎನ್ನುವಂತಾಗಿದೆ. ಆದರೆ ಈಗಿನ ಬೆಲೆಯಲ್ಲಿ ಟೊಮ್ಯಾಟೋ ಖರೀದಿ ಮಾಡುವುದು ನಿಜಕ್ಕೂ ಕಷ್ಟಕರ. ಹೆಂಗಳೆಯರಿಗೆ ಇದೊಂಥರ ಸಂಕಷ್ಟದ ಸಮಯ ಎನ್ನಬಹುದು. ಆದರೆ ಈ ಚಿಂತೆಗೆ ಇಲ್ಲಿದೆ ಪರಿಹಾರ.ಟೊಮ್ಯಾಟೋ ಹಾಕದೆ ಮಾಡುವ ರುಚಿಕರವಾದ ಸೂಪರ್ ರಸಂ ಮಾಡೋದು ಹೇಗೆ ಅಂತ ನಾವಿಲ್ಲಿ ತಿಳಿಸಲಿದ್ದೇವೆ.  

ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರಸಂ ಆರೋಗ್ಯಕ್ಕೂ ಸಹ ಅತಿ ಉತ್ತಮ. ಇದರಲ್ಲಿನ ಅಂಶಗಳು ಶೀತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು

ಬೆಳ್ಳುಳ್ಳಿ- 5 ರಿಂದ 6 ಎಸಳು

ಕಾಳುಮೆಣಸು- 1 ಚಮಚ

ಹುಣಸೇ ಹಣ್ಣು- 1 ಮಧ್ಯಮ ಗಾತ್ರದ ಈರುಳ್ಳಿಯಷ್ಟು

ಉಪ್ಪು- ರುಚಿಗೆ ತಕ್ಕಷ್ಟು

ಅರಿಶಿನ – 1 ಟೀ ಚಮಚ

ಒಗ್ಗರಣೆಗೆ

ಸಾಸಿವೆ

ಜೀರಿಗೆ

ಇದನ್ನೂ ಓದಿ: ಬಾಳೆಹಣ್ಣಿನ ಇಡ್ಲಿ ಟ್ರೈ ಮಾಡಿದ್ದೀರಾ? ಬೆಳಗಿನ ತಿಂಡಿಗೆ ತಿಂದ್ರೆ ಆರೋಗ್ಯಕ್ಕೂ ಒಳ್ಳೆಯದಂತೆ!

ಒಣಮೆಣಸು

ಇಂಗು

ಕರಿಬೇವಿನ ಸೊಪ್ಪು

ಎಣ್ಣೆ ಅಥವಾ ತುಪ್ಪ

ಟೊಮ್ಯಾಟೋ ಹಾಕದೇ ರಸಂ ಮಾಡುವ ವಿಧಾನ

ಮೊದಲಿಗೆ  ಬೇಕಾಗಿರುವಷ್ಟು ಹುಣಸೇ ಹಣ್ಣನ್ನ ತೆಗೆದುಕೊಂಡು ಒಂದು ಸಣ್ಣ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ ರಸ ಬಿಡಲು ಹಾಗೆಯೇ ಬಿಡಿ. ನಂತರ ಕಾಳು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು (ಸಾಮಾನ್ಯಾವಾಗಿ ಎಲ್ಲರ ಮನೆಯಲ್ಲಿ ಜಜ್ಜುವ ವಸ್ತು ಇರುತ್ತದೆ) ಇಲ್ಲವೇ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪುಡಿ​ ಮಾಡಿಕೊಳ್ಳಿ.

ನಂತರ ಒಂದು ಮಧ್ಯಮ ಗಾತ್ರದ ಪಾತ್ರೆಯನ್ನು ತೆಗೆದುಕೊಂಡು ಒಂದು ಟೇ ಸ್ಪೂನ್ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ ಸಿಡಿಸಿ, ಅದು ಸಿಡಿಯುವುದು ನಿಂತ ಮೇಲೆ ಜೀರಿಗೆ, ಒಣ ಮೆಣಸು, ಇಂಗು ಹಾಗೂ ಕರಿ ಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ.

ನಂತರ ಅದಕ್ಕೆ ಮೊದಲೇ ತಯಾರಿಸಿಕೊಂಡಿರುವ ಕಾಳು ಮೆಣಸು ಮತ್ತು ಬೆಳ್ಳುಳ್ಳಿಯ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಚನ್ನಾಗಿ ಹುರಿಯಿರಿ. ಅದರ ಹಸಿ ವಾಸನೆ ಹೋದ ಮೇಲೆ ಅದಕ್ಕೆ ನೆನಸಿಟ್ಟ ಹುಣಸೇ ಹಣ್ಣಿನ ರಸವನ್ನು ಸೇರಿಸಿ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದು ಟೀ ಚಮಚ ಅರಿಶಿನ ಪುಡಿ ಹಾಕಿ ಚನ್ನಾಗಿ ಕುದಿಸಿದರೆ ರಸಂ ರೆಡಿ.

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡ್ಬೋದು ಈ ಸಬ್ಬಕ್ಕಿ ಉಪ್ಪಿಟ್ಟು -ಇಲ್ಲಿದೆ ರೆಸಿಪಿ

ಇದೊಂದೇ ಅಲ್ಲ ಟೊಮ್ಯಾಟೋ  ಹಾಕದೇ ಹಲವಾರು ರೀತಿಯ ರಸಂಗಳನ್ನು ತಯಾರಿಸಬಹುದು. ಕೇವಲ ಬೇಳೆ ರಸಂ, ಕಾಳು ಮೆಣಸಿನ ರಸಂ, ಜೀರಿಗೆ ರಸಂ ಹೀಗೆ ವಿಭಿನ್ನ ಹಾಗೂ ರುಚಿಕರವಾದ ರಸಂಗಳನ್ನು ತಯಾರಿಸಬಹುದು.
Published by:Sandhya M
First published: