Health Tips: ಮಧುಮೇಹ ಸಮಸ್ಯೆ ಹೊಂದಿರುವವರು ಈ ಹಣ್ಣುಗಳ ಸೇವನೆ ಮಾಡಬಾರದು..

Diabetes and Fruits: ಕೆಲವು ಹಣ್ಣುಗಳು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುತ್ತದೆ,  ಆದ್ದರಿಂದ ಮಧುಮೇಹಿಗಳು ತಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಲುವಾಗಿ ಆ ಹಣ್ಣುಗಳನ್ನು ಸೇವನೆ ಮಾಡಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧುಮೇಹದಿಂದ ಬಳಲುತ್ತಿರುವ ಜನರು ಎಚ್ಚರಿಕೆಯಿಂದ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು, ಹಾಗೆಯೇ  ಹಣ್ಣುಗಳನ್ನು ಸಹ ಸರಿಯಾಗಿ ಯೋಚಿಸಿ ಸೇವನೆ ಮಾಡುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹೃದಯ ರೋಗ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಹಣ್ಣುಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಆದರೂ ಕೂಡ, ಕೆಲವು ಹಣ್ಣುಗಳು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುತ್ತದೆ,  ಆದ್ದರಿಂದ ಮಧುಮೇಹಿಗಳು ತಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಲುವಾಗಿ ಸೇವನೆ ಮಾಡಬಾರದು.  ಇನ್ನು ಸಕ್ಕರೆ ಅಂಶವನ್ನು ಹೆಚ್ಚು ಒಳಗೊಂಡಿರುವ ಹಣ್ಣು ಮತ್ತು ಚಾಕೊಲೇಟ್ ಮತ್ತು ಬೇಯಿಸಿದ ಆಹಾರಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವನೆ ಮಾಡಬಾರದು ಎಂಬುದು ಮುಖ್ಯವಾಗುತ್ತದೆ.

ಒಬ್ಬ ವ್ಯಕ್ತಿಯು ಮಧುಮೇಹ ಇದ್ದರೂ ಇಲ್ಲದಿರಲಿ ತನ್ನ ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಮುಖ್ಯ.  2017 ರ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ಮಧುಮೇಹವನ್ನು ತಡೆಯಬಹುದು ಎಂದು ಹೇಳಲಾಗಿದೆ.  ಆದರೂ ಸಹ ಮಧುಮೇಹ  ತೊಂದರೆ ಇರುವ ಜನರು ಈ ಕೆಳಗಿನ ಹಣ್ಣುಗಳ ಸೇವನೆಯನ್ನು ಕಡಿಮೆ ಮಾಡುವುದಕ್ಕಿಂತ, ಸೇವನೆ ಮಾಡದಿರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಗ್ಲೈಸೆಮಿಕ್ ಸೂಚ್ಯಂಕವು (ಜಿಐ) ಯಾವ  ನಿರ್ದಿಷ್ಟ ಹಣ್ಣುಗಳನ್ನು ಅಥವಾ ಆಹಾರವನ್ನು ಸೇವಿಸಿದ ನಂತರ ವ್ಯಕ್ತಿಯ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ ಹಾಗೂ  ಎಷ್ಟು ಹೆಚ್ಚಿಸುತ್ತದೆ ಎಂಬುದನ್ನ ಸೂಚಿಸುತ್ತದೆ.

ಮಾವಿನ ಹಣ್ಣು: ಮಾವಿನ ಹಣ್ಣು ಪ್ರತಿಯೊಬ್ಬರಿಗೂ ಬಹಳ ಇಷ್ಟ, ಬೇಸಿಗೆಯ ಸಮಯದಲ್ಲಿ ಇದನ್ನು ಮನ ಬಂದಂತೆ ಸೇವಿಸುತ್ತಾರೆ. ಆದರೆ ಕೆಲ ಅಧ್ಯಯನಗಳ ಪ್ರಕಾರ ಮಾವಿನ ಹಣ್ಣು ಮಧುಮೇಹಿಗಳಿಗೆ ಅಷ್ಟು ಸೂಕ್ತವಲ್ಲ. ಒಂದು ಮಧ್ಯಮ ಗಾತ್ರದ ಮಾವಿನಲ್ಲಿ ಸುಮಾರು 40 ರಿಂದ 45 ಗ್ರಾಂ ಸಕ್ಕರೆ ಅಂಶ ಇರುತ್ತದೆ. ಇದು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುವ ಸಾಧ್ಯತೆ ಇದ್ದು, ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇದನ್ನೂ ಓದಿ: ಪಪ್ಪಾಯಿ ಹಣ್ಣುಗಳನ್ನು ಹೀಗೆ ಸೇವಿಸುವುದರಿಂದ ತೂಕ ಇಳಿಸಬಹುದು

ಬಾಳೆಹಣ್ಣು: ಹೆಚ್ಚಿನ ಸಮಯದಲ್ಲಿ ಜನರು ಬಾಳೆಹಣ್ಣನ್ನು ಸೇವನೆ ಮಾಡುತ್ತಾರೆ. ಬಾಳೆಹಣ್ಣು ಪ್ರತಿಯೊಬ್ಬರ ಆಹಾರ ಕ್ರಮದಲ್ಲಿ ಒಂದು ಭಾಗವಾಗಿದೆ. ಇದರಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಆದರೆ ಇದರಿಂದ ಮಧುಮೇಹಿಗಳು ಸ್ವಲ್ಪ ದೂರವಿರುವುದು ಉತ್ತಮ. ಇನ್ನು ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 15 ಗ್ರಾಂ ನೈಸರ್ಗಿಕ ಸಕ್ಕರೆ  ಅಂಶ ಇರುತ್ತದೆ. ಈ ಸಕ್ಕರೆ ಅಂಶ ಮಧುಮೇಹಿಗಳ ಆರೋಗ್ಯಕ್ಕೆ ಸೂಕ್ತವಲ್ಲ.

ಕಲ್ಲಂಗಡಿ: ಕಲ್ಲಂಗಡಿ ಹಣ್ಣು ಕೂಡ ಬೇಸಿಗೆಯಲ್ಲಿ ದೇಹವನ್ನು ತಂಪುಗೊಳಿಸಲು ಸಹಾಯ ಮಾಡುತ್ತದೆ. ಆದರೆ ಒಂದು ಮಧ್ಯಮ ಗಾತ್ರದ ಪೀಸ್​ನಲ್ಲಿ  7 ಗ್ರಾಂ ಸಕ್ಕರೆ ಅಂಶವಿರುವ ಕಾರಣ ಇದರಿಂದ ಮಧುಮೇಹಿಗಳು ದೂರವಿರುವುದು ಸೂಕ್ತ.

ಇದಿಷ್ಟೇ ಅಲ್ಲದೇ, ಇನ್ನು ಹಲವಾರು ಹಣ್ಣುಗಳಲ್ಲಿರುವ ಹೆಚ್ಚಿನ ಸಕ್ಕರೆ ಅಂಶ ಮಧುಮೇಹಿಗಳ ಆರೋಗ್ಯಕ್ಕೆ ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದ್ರಾಕ್ಷಿ: ಒಂದು ಕಪ್ ದ್ರಾಕ್ಷಿಯಲ್ಲಿ 25 ಗ್ರಾಂ ಸಕ್ಕರೆ ಅಂಶ  ಇರುತ್ತದೆ. ಹಾಗಾಗಿ ಮಧುಮೇಹಿಗಳು ದ್ರಾಕ್ಷಿ ಹಣ್ಣಿನ ಸೇವನೆಯನ್ನು ಕಡಿಮೆ ಮಾಡುವುದು ಸೂಕ್ತ.

ಒಣಗಿದ ಖರ್ಜೂರ: ಈ ಒಣಗಿದ ಖರ್ಜೂರದಲ್ಲಿ ಸುಮಾರು  4.5 ಗ್ರಾಂ ಸಕ್ಕರೆ ಅಂಶ ಇರುವ ಕಾರಣ ಇದು ಮಧುಮೇಹಿಗಳಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

ಅನಾನಸ್: ಒಂದು ಕಪ್ ಅನಾನಸ್ ತುಂಡುಗಳಲ್ಲಿ 16.3 ಗ್ರಾಂ ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ. ಇದನ್ನು ಮಧುಮೇಹಿಗಳು ಸೇವನೆ ಮಾಡದಿರುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ.

ಬೆಣ್ಣೆ ಹಣ್ಣು, ನೇರಳೆ, ಕಿವಿ ಹಣ್ಣು, ಪೀಚ್, ಪೇರಳೆ, ಪ್ಲಮ್ ಮುಂತಾದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಈ ಎಲ್ಲಾ ಹಣ್ಣುಗಳಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಕಡಿಮೆ ಇರುವ ಕಾರಣ ಇದನ್ನು ಮಧುಮೇಹ ರೋಗಿಗಳು ಸೇವಿಸಬಹುದು.
Published by:Sandhya M
First published: