ಟಾನ್ಸಿಲ್ ನೋವು ಬಹಳ ಹಿಂಸೆಯನ್ನು ನೀಡುತ್ತದೆ. ಇದು ಹೆಚ್ಚು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದೊಂದು ಗಂಟಲಿನ ಸೋಂಕು ಆಗಿದ್ದು, ಅತಿಯಾದ ನೋವಿನ ಕಾರಣದಿಂದ ನಿಮಗೆ ಯಾವುದೇ ಆಹಾರ ಸೇವನೆ ಮಾಡಲು ಆಗುವುದಿಲ್ಲ., ನೀರನ್ನು ಕುಡಿಯುವಾಗ ಸಹ ನೀವು ಬಹಳ ನೋವನ್ನು ಅನುಭವಿಸುವ ಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಇದಕ್ಕೆ ಔಷಧಿಗಳು ಇದೆ, ಆದರೆ ತ್ವರಿತ ಪರಿಣಾಮಕ್ಕೆ ಮನೆಮದ್ದುಗಳು ಅಂದರೆ ನೈಸರ್ಗಿಕ ಔಷಧಿಗಳು ಸುಲಭ ಮಾರ್ಗ. ಕೆಲವೊಂದು ಮನೆಮದ್ದುಗಳು ಗಂಟಲಿನ ಕಫವನ್ನು ಕಡಿಮೆ ಮಾಡಿ, ನೋವನ್ನು ನಿವಾರಣೆ ಮಾಡುತ್ತದೆ.
ಹಾಗಾದ್ರೆ ಯಾವ ಮನೆಮದ್ದುಗಳು ನಿಮ್ಮ ನೋವನ್ನು ತ್ವರಿತವಾಗಿ ನಿವಾರಣೆ ಮಾಡಬಹುದು ಎಂಬುದು ಇಲ್ಲಿದೆ.
1.ಉಪ್ಪು ನೀರಿನಿಂದ ಬಾಯಿ ತೊಳೆಯಿರಿ
ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಅಥವಾ ತೊಳೆಯುವುದರಿಂದ ಗಂಟಲು ನೋವು ಹಾಗೂ ಉರಿಯೂತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಬಹುದು. ಸುಮಾರು ಅರ್ಧ ಕಪ್ ಬೆಚ್ಚಗಿನ ನೀರಿನಲ್ಲಿ ಸುಮಾರು ½ ಟೀಚಮಚ ಉಪ್ಪನ್ನು ಬೆರೆಸಿ. ಉಪ್ಪು ಕರಗಬೇಕು. ನಂತರ ಅದರಿಂದ ಬಾಯಿ ಮುಕ್ಕಳಿಸಿ. ಉಪ್ಪು ನೀರಿನ ನಂತರ ಸಾಮಾನ್ಯ ನೀರಿನಲ್ಲಿ ಬಾಯಿ ತೊಳೆಯಿರಿ.
2. ಬೆಳ್ಳುಳ್ಳಿ ಟೀ
ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ಉರಿಯೂತ ನಿವಾರಣೆ ಮಾಡುವುದರಲ್ಲಿ ಪ್ರಸಿದ್ಧ, ಇದರಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣ, ಸೋಂಕಿನ ವಿರುದ್ಧ ಹೋರಾಡಿ, ನೋವಿನಿಂದ ಮುಕ್ತಿ ನೀಡುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೀವು ಮಾಡಬೇಕಾಗಿರುವುದಿಷ್ಟೇ, ಎರಡು ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಂಡು ಸರಿಯಾಗಿ ಜಜ್ಜಿ, ಅದನ್ನು ಒಂದು ಕಪ್ ನೀರಿಗೆ ಹಾಕಿ ಐದು ನಿಮಿಷ ಕಾಲ ಕುದಿಸಿ. ನಂತರ ಅದನ್ನು ಸೋಸಿಕೊಂಡು, ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.
ಇದನ್ನೂ ಓದಿ: ಈ ಡಯೆಟ್ ಕ್ರಮಗಳನ್ನು ಅನುಸರಿಸಿದರೆ ನೀವು ಬೇಗ ತೂಕ ಇಳಿಸಿಕೊಳ್ಳಬಹುದು
3. ಕೇವಲ ಬೆಳ್ಳುಳ್ಳಿ ಟೀ ಮಾತ್ರವಲ್ಲದೇ ಶುಂಠಿ ಚಹಾ ಕೂಡ ನಿಮ್ಮ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯನ್ನು ನೀರಿಗೆ ಹಾಕಿ ಕುದಿಸುವಾಗ ಅದರ ಜೊತೆಗೆ ಸೋಂಪಿನ ಕಾಳುಗಳನ್ನು ಹಾಕಿ ಕುದಿಸುವುದು ಉತ್ತಮ ಪರಿಹಾರ ನೀಡುತ್ತದೆ. ಈ ಟೀಗೂ ಸಹ ಒಂದು ಚಮಚ ಜೇನುತುಪ್ಪವನ್ನು ಹಾಕುವುದನ್ನ ಮರೆಯಬೇಡಿ. ನಿಮಗೆ ಶುಂಠಿ ಟೀ ಬೇಡ ಎಂದರೆ ಕೇವಲ ಸೋಂಪಿನ ಕಾಳನ್ನು ಬಳಸಿ ಟೀ ಮಾಡಿ ಸೇವಿಸಿ.
4. ಅರಿಶಿನ ಹಾಲು
ಅರಶಿನ ಮತ್ತು ಕರಿಮೆಣಸಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. . ಅರಶಿನವು ಗಂಟಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ಒಂದು ಚಮಚ ಅರಶಿನ ಮತ್ತು ಒಂದು ಚಮಚ ಕರಿಮೆಣಸಿನ ಪುಡಿಯನ್ನು ಬಿಸಿ ಹಾಲಿಗೆ ಹಾಕಿ ಕುಡಿಯುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ.
5. ಲೈಕೋರೈಸ್
ಗಂಟಲಿನ ಉರಿಯೂತ ಕಡಿಮೆ ಮಾಡಲು ಇದನ್ನು ಹೆಚ್ಚು ಜನರು ಬಳಸುತ್ತಾರೆ. ಲೈಕೋರೈಸ್ ನೋವು ಕಡಿಮೆ ಮಾಡಲು ಬಹಳ ಸಹಕಾರಿ. ಇದನ್ನು ಬಿಸಿ ನೀರಿನ ಜೊತೆ ಅರ್ಧ ಚಮಚ ಹಾಕಿ ಕೊಂಡು ಸೇವನೆ ಮಾಡುವುದು ಉತ್ತಮ ಪರಿಹಾರ ನೀಡುತ್ತದೆ. ದಿನದಲ್ಲಿ ಮೂರು ಬಾರಿ ಇದನ್ನು ಸೇವಿಸಿ.
6. ಜೇನುತುಪ್ಪ
ಜೇನುತುಪ್ಪದಲ್ಲಿ ಇರುವಂತಹ ಕೆಲವೊಂದು ಆರೋಗ್ಯಕರ ಗುಣಗಳು ಗಂಟಲಿನ ನೋವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ ಇದ್ದು ಸೋಂಕಿನ ವಿರುದ್ಧ ಹೋರಾಡುತ್ತದೆ. ಒಂದು ಚಮಚ ಜೇನು ತುಪ್ಪವನ್ನು ನಿಂಬೆ ರಸದ ಜೊತೆ ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ