Weight Loss: ಚಾಟ್ಸ್ ತಿನ್ನಿ ತೂಕ ಇಳಿಸಿ: ಇಲ್ಲಿವೆ 5 ರುಚಿಕರ ಚಾಟ್ ರೆಸಿಪಿಗಳು..!

ತರಾವರಿ ಚಾಟ್ಸ್‌ಗಳನ್ನು ಸವಿಯುವ ಅಭ್ಯಾಸ ಇರುವವರಿಗೆ ಅವುಗಳನ್ನು ಸೇವಿಸದಂತೆ ಇರುವುದು ತುಂಬಾ ಕಷ್ಟ. ಸಾಕಷ್ಟು ಸಲ ಇಂತಹ ಚಾಟ್​ಗಳಿಂದೇ ದೇಹದ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆರೋಗ್ಯಕರ ಹಾಗೂ ರುಚಿಕರ ಚಾಟ್​ಗಳನ್ನು ಮನೆಗಳಲ್ಲೇ ಮಾಡಿಕೊಂಡು ಸವಿಯುವ ಮೂಲಕ ದೇಹದ ತೂಕ ಸಹ ಇಳಿಸಿಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಸೋದು ಅಂದ್ರೆ ಸುಮ್ನೆ ಅಲ್ಲ. . . .ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕು. ಅದರಲ್ಲಿ ಏನು ತಿನ್ನಬೇಕು , ಏನು ತಿನ್ನಬಾರದು ಎಂದು ಪಟ್ಟಿ ಮಾಡೋದು ಕೂಡ ಒಂದು. ಸರಳವಾಗಿ ಡಯಟ್ ಪ್ಲಾನ್  ಮಾಡುವುದು ಬಹಳ ಮುಖ್ಯ. ನಮ್ಮ ನಿತ್ಯದ ಆಹಾರ  ಕ್ರಮದಲ್ಲಿ ಫೈಬರ್ ಮತ್ತು ವಿಟಮಿನ್‍ಗಳಂತಹ ಅಗತ್ಯ ಪೋಷಕಾಂಶಗಳು ಇರುವಂತೆ ಎಚ್ಚರ ವಹಿಸಬೇಕಾಗುತ್ತದೆ. ಭಾರತೀಯರಾದ ನಮಗೆ ಬೀದಿ ಬದಿಯ ತರಾವರಿ ಚಾಟ್ಸ್‌ಗಳ ಮೋಹವನ್ನು ಬಿಟ್ಟು ಬದುಕುವುದು ಕಷ್ಟದ ಕೆಲಸ. ನಾಲಿಗೆಗೆ ಚುರುಕು ಮುಟ್ಟಿಸುವ ಖಾರ , ಹುಳಿ ಮತ್ತು ಸಿಹಿ ಚಟ್ನಿಗಳೂ ಬೇಕು... ತೂಕಾನೂ ಇಳಿಬೇಕು ಅಂದ್ರೆ ಹೇಗಪ್ಪಾ? ಅಯ್ಯೋ ಯಾಕಾಗಲ್ಲ, ಖಂಡಿತಾ ಅಗುತ್ತದೆ..! ಅದಕ್ಕಾಗಿ ನಾವು ಮಾಡಬೇಕಾದದ್ದು ಇಷ್ಟೆ, ಚಾಟ್‍ನಲ್ಲಿ ಅನಾರೋಗ್ಯಕರ ಪದಾರ್ಥಗಳಿಗೆ ಟಾಟಾ ಹೇಳಿ, ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಸೇರಿಸಬೇಕು.

ತೂಕ ಇಳಿಸಲು ಸಹಾಯ ಮಾಡುವ 5 ರುಚಿಕರ ಚಾಟ್ಸ್ ರೆಸಿಪಿಗಳು ಇಲ್ಲಿವೆ:

ರಾಜ್ಮಾ ಚಾಟ್:  ಇದುವರೆಗೆ ನಾವು ಅನ್ನ ಮತ್ತು ರಾಜ್ಮಾ ಸಾಂಬಾರ್ ಚಪ್ಪರಿಸಿಕೊಂಡು ತಿನ್ನುತ್ತಾ ಬಂದಿದ್ದೇವೆ. ಇದೀಗ ಅದೇ ರಾಜ್ಮಾದ ಚಾಟ್ಸ್ ಸವಿಯುವ ಸರದಿ. ಅದನ್ನು ತಯಾರಿಸಬೇಕಾದರೆ, ಮೊದಲು ರಾಜ್ಮಾವನ್ನು ನೆನೆಸಿ, ಬೇಯಿಸಿಟ್ಟುಕೊಳ್ಳಬೇಕು. ಅದಕ್ಕೆ ನಿಮಗಿಷ್ಟವಾದ ತರಕಾರಿಯನ್ನು ಕತ್ತರಿಸಿ ಹಾಕಿ, ಜೊತೆಗೆ ಒಂದಿಷ್ಟು ಮಸಾಲೆ ಕೂಡ ಸೇರಿಸಿ. ಅದರ ಮೇಲೆ ನಿಂಬೆ ರಸ ಹಿಂಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ನಿಮ್ಮ ರಾಜ್ಮಾ ಚಾಟ್ಸ್ ಸಿದ್ಧವಾಗುತ್ತದೆ.

ಸಾಂದರ್ಭಿಕ ಚಿತ್ರ


ಫಲ್‍ದಾರಿ ಚಾಟ್: ಇದು ಹಣ್ಣುಗಳ ಚಾಟ್ಸ್... ಇದಕ್ಕೆ ಸ್ವಲ್ಪ ಟ್ವಿಸ್ಟ್ ಕೊಡೋಣ ಅಷ್ಟೆ. ಟ್ವಿಸ್ಟ್ ಏನೆಂದರೆ, ಕತ್ತರಿಸಿದ ಕಿವಿ, ಅನಾನಾಸ್, ಸೇಬು ಹಣ್ಣುಗಳ ಜೊತೆ ಅಣಬೆ ಅಂದರೆ ಮ ಶ್ರೂಮ್​ ಅನ್ನು ಸೇರಿಸುವುದು. ಅವುಗಳಿಗೆ ಕೊಂಚ ಮಸಾಲೆ ಸೇರಿಸಿ, ಗ್ರಿಲ್ ಮಾಡಿದರಾಯಿತು. ಈ ಚಾಟ್‍ನಲ್ಲಿ ಸಾಕಷ್ಟು ವಿಟಮಿನ್ ಮತ್ತು ಮಿನರಲ್ಸ್‌ಗಳಿರುತ್ತವೆ. ಇದನ್ನು ತಿಂದರೆ ಬೇಗ ಹಸಿವಾಗುವುದಿಲ್ಲ.

ಮಾವು ಕಡಲೆ ಚಾಟ್ ಅಥವಾ ಆಮ್ ಚನಾ ಚಾಟ್: ಈ ಚಾಟ್‍ಗಾಗಿ ಬೇಯಿಸಿದ ಕಪ್ಪು ಕಡಲೆಗಳ ಅಗತ್ಯ ಇರುತ್ತದೆ. ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ ಮಾವಿನ ಕಾಯಿ ಹೋಳುಗಳು, ಸಣ್ಣ ಹೆಚ್ಚಿರುವ ಈರುಳ್ಳಿ, ಟೊಮ್ಯಾಟೋ ಮತ್ತು ಸೌತೆಕಾಯಿ ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ಈ ಚಾಟ್‍ನಲ್ಲಿ ಫೈಬರ್, ಪ್ರೊಟೀನ್ ಮಾತ್ರವಲ್ಲ ಬಹಳಷ್ಟು ಆ್ಯಂಟಿ ಆ್ಯಕ್ಸಿಡೆಂಟ್‍ಗಳು ಕೂಡ ಇವೆ.

ಮೊಳಕೆ ಕಾಳು ಮತ್ತು ಮೆಕ್ಕೆ ಜೋಳದ ಚಾಟ್: ಈ ಚಾಟ್ ಮಾಡಲು, ಮೆಕ್ಕೆ ಜೋಳ/ ಕಾರ್ನ್‌ ಅನ್ನು ಮೊಳಕೆಕಾಳುಗಳು, ಟೊಮ್ಯಾಟೋ, ಈರುಳ್ಳಿ ಮತ್ತು ಒಂದಷ್ಟು ಮಸಾಲೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ದಿನದ ಮಧ್ಯೆ ಹಸಿವಾದರೆ ತಿನ್ನಲು, ಈ ಚಾಟ್ ಒಂದೊಳ್ಳೆಯ ಆರೋಗ್ಯಕರ ತಿನಿಸು. ಕುಕೀಸ್ ಮತ್ತು ಚಾಕೊಲೇಟ್‍ಗಳ ಬದಲು ಇದನ್ನು ತಿನ್ನಿ, ನಿಮ್ಮ ದೇಹಕ್ಕೆ ನೈಸರ್ಗಿಕ ಪ್ರೋಟೀನ್ ಸಿಗುತ್ತದೆ.

ಮೊಟ್ಟೆ ಚಾಟ್: ಹಲವಾರು ಅಡುಗೆಗಳಲ್ಲಿ ಮೊಟ್ಟೆ ಮಹತ್ವದ ಪಾತ್ರ ವಹಿಸುತ್ತದೆ. ಹುಣಸೆ ಹಣ್ಣಿನ ಚಟ್ನಿ, ಕೆಚಪ್ ಮತ್ತು ನಿಂಬೆ ಸೇರಿಸಿ ಮಾಡುವ ಈ ಚಾಟ್, ದೊಡ್ಡವರು ಮಾತ್ರವಲ್ಲ ಮಕ್ಕಳ ಬಾಯಲ್ಲೂ ನೀರುರಿಸುತ್ತದೆ. ಈ ಚಾಟ್ ಮಾಡುವಾಗ ಕೆಚಪ್ ಆದಷ್ಟು ಕಡಿಮೆ ಸೇರಿಸಿ, ಏಕೆಂದರೆ ಅದರಲ್ಲಿರುವ ಸಕ್ಕರೆ, ನಿಮ್ಮ ತೂಕ ಇಳಿಕೆಗೆ ಅಡ್ಡಿಯಾಗಬಹುದು.

ಈ 5 ಚಾಟ್‍ಗಳಲ್ಲಿ ನೀವು ಮೊದಲು ಮಾಡಿ ತಿನ್ನ ಬಯಸುವ ಚಾಟ್ ಯಾವುದು ಎಂದು ನಿರ್ಧರಿಸಿ. ನಂತರ ಬೀದಿ ಬದಿಯ ಚಾಟ್‍ಗಳಿಗೆ ಟಾಟಾ ಹೇಳಿ, ಈ ಎಲ್ಲವನ್ನೂ ಮಾಡಿ ರುಚಿ ನೋಡಿ.
Published by:Anitha E
First published: