• Home
  • »
  • News
  • »
  • lifestyle
  • »
  • Mental Health: ಹೊಸ ವರ್ಷದಿಂದ ನಿಮ್ಮ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

Mental Health: ಹೊಸ ವರ್ಷದಿಂದ ನಿಮ್ಮ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

ದೈಹಿಕ ಆರೋಗ್ಯ ಅನ್ನೋದು ವ್ಯಕ್ತಿಗೆ ಎಷ್ಟು ಮುಖ್ಯವೋ, ಈ ಮಾನಸಿಕ ಆರೋಗ್ಯವು ಸಹ ವ್ಯಕ್ತಿಯ ಜೀವನದಲ್ಲಿ ತುಂಬಾನೇ ಮುಖ್ಯವಾಗಿರುತ್ತದೆ ಎಂದು ಹೇಳಬಹುದು.

  • Trending Desk
  • 4-MIN READ
  • Last Updated :
  • Share this:

ನಾವು ಉತ್ತಮ ಆರೋಗ್ಯದ (Health) ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಗಮನ ಹರಿಸುತ್ತೇವೆ. ಕೆಲವೊಮ್ಮೆ ಆರೋಗ್ಯ ಅಂತ ಮಾತಾಡುವಾಗ ನಮ್ಮ ಎದುರಿಗಿರುವವರು ಸಹ ದೈಹಿಕ ಆರೋಗ್ಯದ ಬಗ್ಗೆ ನಾವು ಮಾತಾಡುತ್ತಿದ್ದೇವೆ ಅಂತ ತಿಳಿದುಕೊಳ್ಳುತ್ತಾರೆ. ಆರೋಗ್ಯ ಅಂತ ಅಂದಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಮುಖ್ಯ. ದೈಹಿಕ ಆರೋಗ್ಯ ( Physical) ಅನ್ನೋದು ವ್ಯಕ್ತಿಗೆ (Person) ಎಷ್ಟು ಮುಖ್ಯವೋ, ಈ ಮಾನಸಿಕ ಆರೋಗ್ಯವು ಸಹ ವ್ಯಕ್ತಿಯ ಜೀವನದಲ್ಲಿ ತುಂಬಾನೇ ಮುಖ್ಯವಾಗಿರುತ್ತದೆ ಎಂದು ಹೇಳಬಹುದು. ಮಾನಸಿಕ ಆರೋಗ್ಯವು ಒಮ್ಮೆ ಹದಗೆಟ್ಟರೆ, ಮನಸ್ಸಿಗೆ ನೆಮ್ಮದಿ ಅನ್ನೋದೆ ಇರುವುದಿಲ್ಲ, ದೈಹಿಕವಾಗಿ ನಾವು ತುಂಬಾನೇ ಬಲಶಾಲಿಯಾಗಿದ್ದರೂ ಸಹ ಮಾನಸಿಕವಾಗಿ ದುರ್ಬಲರಾಗಿರುತ್ತೇವೆ.


ಒಟ್ಟಿನಲ್ಲಿ ಹೇಳುವುದಾದರೆ ಮಾನಸಿಕ ಆರೋಗ್ಯವು ನಮ್ಮ ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರಬಹುದು. ಮಾನಸಿಕ ಆರೋಗ್ಯ ಹದಗೆಟ್ಟರೆ ವ್ಯಕ್ತಿಯು ಖಿನ್ನತೆ, ಭಯ, ಆತಂಕ, ಮರೆವಿನ ಕಾಯಿಲೆಗಳಿಂದ ಬಳಲಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಮಾನಸಿಕ ಖಿನ್ನತೆಯು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.


"ಆತ್ಮಹತ್ಯೆಯು 15 ರಿಂದ 29 ವರ್ಷ ವಯಸ್ಸಿನವರಲ್ಲಿ ಸಾವಿಗೆ ನಾಲ್ಕನೇ ಪ್ರಮುಖ ಕಾರಣವಾಗಿದೆ. ತೀವ್ರ ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ಜನರು ತಡೆಗಟ್ಟಬಹುದಾದ ದೈಹಿಕ ಪರಿಸ್ಥಿತಿಗಳಿಂದಾಗಿ ಎರಡು ದಶಕಗಳಷ್ಟು ಮುಂಚಿತವಾಗಿ ಅಕಾಲಿಕವಾಗಿ ಸಾವಿಗೀಡಾಗುತ್ತಿದ್ದಾರೆ" ಎಂದು ಡಬ್ಲ್ಯುಎಚ್ಒ ವೆಬ್‌ಸೈಟ್ ಉಲ್ಲೇಖಿಸಿದೆ.


ನಾವು 2022 ಕ್ಕೆ ವಿದಾಯ ಹೇಳಲು ಮತ್ತು 2023 ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದಂತೆ, ಜನಪ್ರಿಯ ಮಾನಸಿಕ ಆರೋಗ್ಯ ಆರೈಕೆ ಅಪ್ಲಿಕೇಶನ್ ‘ಹೇ’ ನ ಮುಖ್ಯ ಮನಶ್ಶಾಸ್ತ್ರಜ್ಞರಾದ ಮಹಿಮಾ ಸಾಹಿ ಅವರು ಹೊಸ ವರ್ಷದಲ್ಲಿ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು 10 ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.


1. ಯಾವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಮತ್ತು ಹರಿಸಬಾರದು ಅಂತ ತಿಳಿದುಕೊಳ್ಳಿ


ಈ ಯಾವ ಅಂಶಗಳ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಯಾವೆಲ್ಲಾ ವಸ್ತುಗಳಿಗೆ ನಾವು ಗಮನವನ್ನು ನೀಡಬಾರದು ಅಂತ ಮೊದಲು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.


ಒಂದು ವಸ್ತುವಿನ ಅಥವಾ ಸಂದರ್ಭದ ಮೇಲೆ ನಾವು ನೀಡುವ ಅತಿಯಾದ ಗಮನವು ನಮ್ಮ ಮೆದುಳಿನ ಸರ್ಕ್ಯೂಟ್ ಗಳನ್ನು ಹಾಳು ಮಾಡುತ್ತದೆ.


ಹಾರ್ವರ್ಡ್ ಬಿಸಿನೆಸ್ ರಿವ್ಯೂ ಸೆಕೆಂಡ್ಸ್ ಪ್ರಕಾರ, "ಇಲ್ಲಿ ಮತ್ತು ಈಗ ಎಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸುವುದು" ಮತ್ತು ಕೆಲವೊಮ್ಮೆ "ಯಾವುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬಾರದು" ಎಂಬುದರ ನಡುವೆ ಸಮತೋಲನವನ್ನು ಹೊಂದುವ ಅಗತ್ಯವಿದೆ.


ಇದನ್ನೂ ಓದಿ: ಬಾಯಿ ಚಪ್ಪರಿಕೊಂಡು ತಿನ್ನಬಹುದಾದ ಒತ್ತು ಶಾವಿಗೆ, ಕಾಯಿ ಹಾಲು; ಮನೆಯಲ್ಲಿಯೇ ಸುಲಭವಾಗಿ ಮಾಡಿ


ಹಗಲುಗನಸು ಕಾಣುವುದು ಅಥವಾ ತ್ವರಿತ ನಿದ್ರೆಗಳನ್ನು ಮಾಡುವುದರ ಮೂಲಕ, ಇದು ವಾಸ್ತವವಾಗಿ ಮೆದುಳಿನ "ಡೀಫಾಲ್ಟ್ ಮೋಡ್ ನೆಟ್ವರ್ಕ್" ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.


2. ನಮ್ಮನ್ನು ನಾವು ಪ್ರೀತಿಸಿಕೊಳ್ಳವುದನ್ನು ಅಭ್ಯಾಸ ಮಾಡಬೇಕು


ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ನಾವು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು. ಈ ಅಭ್ಯಾಸವನ್ನು ನಾವು ಮಾಡುವುದರಿಂದ ಕಾಲಾನಂತರದಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಎರಡನ್ನೂ ಸುಧಾರಿಸಿಕೊಳ್ಳಬಹುದು.


ನಮ್ಮ ಸ್ವಂತ ಅಗತ್ಯತೆಗಳನ್ನು ನೋಡಿಕೊಳ್ಳುವುದು ಮತ್ತು ಇತರರಿಗಾಗಿ ನಮ್ಮ ಯೋಗಕ್ಷೇಮವನ್ನು ತ್ಯಾಗ ಮಾಡದಿರುವುದು ಉತ್ತಮ ಮಾನಸಿಕ ಆರೋಗ್ಯ, ಹೆಚ್ಚಿನ ಆತ್ಮಗೌರವ, ಸುಧಾರಿತ ಪ್ರೇರಣೆ ಮತ್ತು ಖಿನ್ನತೆ, ಒತ್ತಡ ಮತ್ತು ಆತಂಕದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.


3. ನೀವು ಏನನ್ನು ಇಷ್ಟಪಡುತ್ತೀರೋ ಅದನ್ನೇ ಮಾಡಿ


ನೀವು ಪ್ರೀತಿಸುವ ಕೆಲಸಗಳನ್ನು ಮಾಡಲು ಸಮಯವನ್ನು ತೆಗೆದುಕೊಳ್ಳಿ. ಪ್ರೌಢಾವಸ್ಥೆಯು ಹೆಚ್ಚಾಗಿ ನಿಮಗೆ ಸಂತೋಷವನ್ನು ನೀಡುವ ಚಟುವಟಿಕೆಗಳಿಗೆ ಕಡಿಮೆ ಸಮಯದೊಂದಿಗೆ ಸಂಬಂಧಿಸಿದೆ.


ಆದರೆ ಅಡುಗೆ ಮಾಡುವುದು, ನೃತ್ಯ ಮಾಡುವುದು, ವ್ಯಾಯಾಮ ಮಾಡುವುದು, ಚಿತ್ರಕಲೆ ಅಥವಾ ಇತ್ಯಾದಿಗಳಂತಹ ನೀವು ಆನಂದಿಸುವ ವಿಷಯಗಳನ್ನು ನಿಮ್ಮ ದಿನಚರಿ ಒಳಗೊಂಡಿರಲಿ.


ಏಕೆಂದರೆ ನೀವು ಇಷ್ಟಪಡುವ ಕೆಲಸಗಳು ನಿಮ್ಮ ಸಂತೋಷದ ಹಾರ್ಮೋನುಗಳನ್ನು ಪ್ರಚೋದಿಸುತ್ತದೆ ಮತ್ತು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.


4. ಸದಾ ಕೃತಜ್ಞತರಾಗಿರುವುದನ್ನು ಕಲಿಯಿರಿ


ನಿಮ್ಮಲ್ಲಿರುವ ಎಲ್ಲವನ್ನೂ ಗುರುತಿಸಲು ಮತ್ತು ಆ ಗುಣಗಳನ್ನು ಪ್ರಶಂಸಿಸಲು ಉದ್ದೇಶಪೂರ್ವಕವಾಗಿ ಸಮಯವನ್ನು ತೆಗೆದುಕೊಳ್ಳುವುದು ಆರೋಗ್ಯಕರ ಯೋಗಕ್ಷೇಮವನ್ನು ಬೆಳೆಸಬಹುದು.


"ಕೃತಜ್ಞರಾಗಿರುವುದು" ದೇಹದ ಸಂತೋಷದ ಹಾರ್ಮೋನ್ "ಡೋಪಮೈನ್" ಅನ್ನು ಹೆಚ್ಚಿಸುತ್ತದೆ, ಆದ್ದರಿಂದ ನೀವು ಹೆಚ್ಚು ಕೃತಜ್ಞರಾಗಿರುತ್ತೀರಿ ಮತ್ತು ನೀವು ಹೆಚ್ಚು ಸಂತೋಷವಾಗಿರುತ್ತೀರಿ ಎಂದು ಸಂಶೋಧನೆಯೊಂದು ಸೂಚಿಸುತ್ತದೆ.


5. ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ


ದೇಹ ಮತ್ತು ಮನಸ್ಸು ಪರಸ್ಪರ ಸಂಬಂಧ ಹೊಂದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಯಾವ ರೀತಿಯಲ್ಲಿ ಸಂಬಂಧ ಹೊಂದಿವೆ ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಮ್ಮ ದೇಹವು ಸದೃಢವಾಗಿದೆ ಎಂದು ನಾವು ಭಾವಿಸಿದಾಗ ಮಾತ್ರ ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ.


ಹಗಲು ಹೊತ್ತಿನಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಜೋರಾಗಿ ವಾಕಿಂಗ್ ಮಾಡುವುದು, ಜಾಗಿಂಗ್ ಮಾಡುವುದು, ಸಮತೋಲಿತ ಆಹಾರ ಸೇವಿಸುವುದು, ಸಾಕಷ್ಟು ನಿದ್ರೆ ಮಾಡುವುದು ಇವೆಲ್ಲವೂ ಮಾನಸಿಕವಾಗಿ ಆರೋಗ್ಯವಾಗಿರಲು ಪೂರ್ವಾಪೇಕ್ಷಿತವಾಗಿವೆ.


ದೈಹಿಕ ಸಾಮರ್ಥ್ಯವು ವ್ಯಕ್ತಿಯ ಮನಸ್ಥಿತಿಯನ್ನು ಸಹ ಹೆಚ್ಚಿಸುತ್ತದೆ ಮತ್ತು ದುಃಖ ಮತ್ತು ಚಿಂತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.


6. ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ


ಮನುಷ್ಯರಿಂದ ತಪ್ಪುಗಳು ಆಗುವುದು ಸಹಜ ಮತ್ತು ಅದು ಅನಿವಾರ್ಯ ಕೂಡ ಅಂತ ಹೇಳಬಹುದು. ಆದರೆ ಅಂತಹ ತಪ್ಪು ನಿಮ್ಮಿಂದ ಆದರೆ ನಿಮ್ಮನ್ನು ನೀವು ಕ್ಷಮಿಸಿಕೊಳ್ಳುವುದಕ್ಕೆ ಅಗಾಧವಾದ ಮಾನಸಿಕ ಶಕ್ತಿಯ ಅಗತ್ಯವಿದೆ.


ಕ್ಷಮಿಸಲಾಗದ ಭಾವನೆಗಳು ಮತ್ತು ತಪ್ಪು ಮಾಡಿದ್ದೇನೆ ಎಂಬ ಕೀಳರಿಮೆ ನಿಮ್ಮ ಮೆದುಳಿನ "ಕಾರ್ಟಿಸೋಲ್ ಹಾರ್ಮೋನ್" ಅನ್ನು ಹೆಚ್ಚಿಸಬಹುದು ಎಂದು ಸಂಶೋಧನೆಯು ಸೂಚಿಸುತ್ತದೆ, ಅದು ಒತ್ತಡವನ್ನು ಸಕ್ರಿಯಗೊಳಿಸಲು ಕಾರಣವಾಗಿದೆ.


ನಿಮ್ಮ ಬಗ್ಗೆ ನಿಮಗೆ ತುಂಬಾನೇ ಪ್ರೀತಿ ಇರಲಿ ಮತ್ತು ನೀವು ಮಾಡಿದ ತಪ್ಪುಗಳನ್ನು ಕ್ಷಮಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಯೋಗಕ್ಷೇಮವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.


ಈ ಕೋಪ, ಆತಂಕ ಅಥವಾ ದುಃಖದ ಅನಿಯಂತ್ರಿತ ಭಾವನೆಗಳನ್ನು ಅನುಭವಿಸುವ ಅಪಾಯದಿಂದ ನಿಮ್ಮನ್ನು ತಡೆದು ಕೊಳ್ಳಬಹುದು.


7. ಸಾಮಾಜಿಕ ಮಾಧ್ಯಮಗಳನ್ನು ಮಿತವಾಗಿ ಬಳಸಿ


ಸಾಮಾಜಿಕ ಮಾಧ್ಯಮಗಳು ನಮ್ಮ ಗೋ-ಟು-ಹ್ಯಾಪಿ ಮತ್ತು ವ್ಯಾಲಿಡೇಶನ್-ಬಯಸುವ ಮಾಧ್ಯಮಗಳಾಗಿವೆ. ನಾವು ನಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ನಾವು ಪಡೆಯುವ ಇಷ್ಟಗಳು, ಕಾಮೆಂಟ್ ಗಳು, ದೃಷ್ಟಿಕೋನಗಳ ಆಧಾರದ ಮೇಲೆ ಅವಲಂಬಿತರಾಗಿದ್ದು ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನೆರವನ್ನು ಪಡೆಯುತ್ತಿರುತ್ತೇವೆ.


ನಮ್ಮ ಬಗ್ಗೆ ಅಥವಾ ನಮ್ಮ ಭಾವನೆಗಳನ್ನು ರೂಪಿಸುವ ಶಕ್ತಿಯನ್ನು ಅಂತಹ ಕೃತಕ ಬುದ್ಧಿಮತ್ತೆಗೆ ನೀಡದೆ, ಸಾಮಾಜಿಕ ಗೋಚರತೆಯನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಮನಸ್ಸಿನ ಸ್ಥಿತಿಯ ರಹಸ್ಯವಾಗಿದೆ.


8. ಧನಾತ್ಮಕತೆಯ ಮೇಲೆ ಗಮನ ಹರಿಸಿ


ನಿಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಉತ್ತಮ ವಿಷಯಗಳ ಮೇಲೆ ನಿಮ್ಮ ಇಡೀ ಗಮನವನ್ನು ಕೇಂದ್ರೀಕರಿಸುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸಹ ಸುಧಾರಿಸುತ್ತದೆ.


ಮೆದುಳು ಯಾವ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡುತ್ತದೆಯೋ ಅದು ಅದರ ಹಾಗೆಯೇ ಆಗುತ್ತದೆ, ಆದ್ದರಿಂದ ನೀವು ಯಾವುದರ ಮೇಲೆ ಗಮನ ಕೇಂದ್ರೀಕರಿಸುತ್ತೀರೋ ಅದು ಇನ್ನಷ್ಟು ಶಕ್ತಿಶಾಲಿಯಾಗುತ್ತದೆ.


ಸದಾ ಸಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುವುದು ದುಃಖದ ಭಾವನೆಗಳನ್ನು ಕಡಿಮೆ ಮಾಡಲು, ಸೃಜನಶೀಲತೆಯನ್ನು ಹೆಚ್ಚಿಸಲು ಮತ್ತು ನಿಮ್ಮ ಒಟ್ಟಾರೆ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


9. ನಿಮ್ಮ ಮನಸ್ಸಿನೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳಿ


ಪ್ರತಿದಿನ ನಾವು ನಮಗಾಗಿ ಅಂತ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು ಮತ್ತು ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಪ್ರತಿಬಿಂಬಿಸುವುದು ಅವುಗಳನ್ನು ನಿಯಂತ್ರಣದಲ್ಲಿಡಲು ಮತ್ತು ನಮ್ಮೊಂದಿಗೆ ಟ್ಯೂನ್ ಮಾಡಲು ಸಹಾಯ ಮಾಡುತ್ತದೆ.
ನಿಯಮಿತವಾದ "ಮೀ-ಟೈಮ್" ಮೆದುಳನ್ನು ಅನ್ ಪ್ಲಗ್ ಮಾಡಲು ಮತ್ತು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ, ಆರೋಗ್ಯಕರ ಮನಸ್ಸಿನ ಸ್ಥಿತಿಯನ್ನು ಹೆಚ್ಚಿಸುತ್ತದೆ, ದುಃಖವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತದೆ.


10. ಜನರೊಂದಿಗೆ ಹೆಚ್ಚು ಬೆರೆಯಿರಿ


ಕಚೇರಿಯಲ್ಲಿ ಸಹೋದ್ಯೋಗಿಗಳು ಅಥವಾ ಕಾಲೇಜಿನ ಸಹಪಾಠಿಗಳಿಗೆ ‘ಹಲೋ’ ಅಂತ ಹೇಳಿ ಕೈ ಬೀಸುವುದರಿಂದ ಹಿಡಿದು ಪಕ್ಕದ ಮನೆಯವರೊಂದಿಗೆ ಸಂಭಾಷಣೆ ನಡೆಸುವುದು, ಕೆಲಸದ ನಂತರ ಸ್ನೇಹಿತರೊಂದಿಗೆ ಕಾಫಿ ಕುಡಿಯುವುದು ಮತ್ತು ವಾರಾಂತ್ಯವನ್ನು ಕುಟುಂಬದೊಂದಿಗೆ ಕಳೆಯುವುದು ಇವೆಲ್ಲವೂ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸರಳ ವಿಷಯಗಳಾಗಿವೆ.


ನೀವು ನಿರ್ಮಿಸುವ ಸಂಪರ್ಕಗಳ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಅದು ನಿಮಗೆ ಹೆಚ್ಚು ಖುಷಿ ನೀಡಿದರೆ ಮತ್ತು ಉಪಯುಕ್ತವಾಗಿದ್ದರೆ ಅದನ್ನು ಹಾಗೆಯೇ ಮುಂದುವರಿಸಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು